

ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟದ ಹಾವಳಿ ವಿಪರೀತವಾಗಿದೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಕಿರಾಣಿ ಅಂಗಡಿ, ಗೂಡಂಗಡಿಗಳಲ್ಲಿಯೂ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಕುಡುಕರ ಹಾವಳಿಯಿಂದ ಹಳ್ಳಿಗಳ ನೆಮ್ಮದಿಗೆ ಭಂಗವುಂಟಾಗುತ್ತಿದೆ. ಅದರಲ್ಲೂ, ಮಹಿಳೆಯರು ಹಲವು ಬಗೆಯ ತೊಂದರೆ ಎದುರಿಸುತ್ತಿದ್ದಾರೆ. ಅಂಗಡಿಗಳಲ್ಲದೆ ಕಾರ್ವಿುಕರು ದೊಡ್ಡ ಗುಂಪುಗಳಲ್ಲಿ ಕೆಲಸ ಮಾಡುವ ಸ್ಥಳಗಳಲ್ಲಿ, ರಸ್ತೆ ಬದಿಯಲ್ಲಿ, ಮಾಂಸಾಹಾರಿ ಹೋಟೆಲ್ಗಳಲ್ಲೂ ಕೂಡ ಅಕ್ರಮ ಮದ್ಯ ಮಾರಾಟದ ನಿದರ್ಶನಗಳು ಕಂಡುಬಂದಿವೆ. ಈ ಸಮಸ್ಯೆ ಉತ್ತರ ಕರ್ನಾಟಕದ ಹುಬ್ಬಳ್ಳಿ-ಧಾರವಾಡ, ಗದಗ, ಹಾವೇರಿ, ಕೊಪ್ಪಳ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಹೆಚ್ಚು.
ಶಿವಮೊಗ್ಗದ ಕೆಲ ಪ್ರದೇಶಗಳಲ್ಲೂ, ಉಡುಪಿ ಜಿಲ್ಲೆಯ ಕುಂದಾಪುರ, ಬ್ರಹ್ಮಾವರ, ಬೈಂದೂರು, ಕಾರ್ಕಳದ ಗ್ರಾಮೀಣ ಭಾಗಗಳಲ್ಲೂ ಇದು ವ್ಯಾಪಿಸಿಕೊಂಡಿದೆ. ಅಕ್ರಮ ಮದ್ಯ ಮಾರಾಟ ಜಾಲದಲ್ಲಿ ಅಬಕಾರಿ ಇಲಾಖೆಯ ಕೆಲ ಅಧಿಕಾರಿಗಳೇ ಶಾಮೀಲಾಗಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ. ಧಾರವಾಡದ ಹೊಲ್ತಿಕೋಟೆ ಗ್ರಾಮದಲ್ಲಿ ಮಂಗಳವಾರ ಮಹಿಳೆಯರು ಮದ್ಯ ಮಾರುವ ಅಂಗಡಿಗಳಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ, ‘ಅಕ್ರಮ ಮದ್ಯ ಮಾರಾಟ ತಡೆಯ ದಿದ್ದರೆ ಉಗ್ರ ಹೋರಾಟ ನಡೆಸಲಾ ಗುವುದು’ ಎಂದು ಎಚ್ಚರಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಬೆಳ್ಳೂರು ಗ್ರಾಮದ ಮಹಿಳೆಯರು ಕೂಡ ಇತ್ತೀಚೆಗೆ ಇದೇ ರೀತಿಯ ಹೋರಾಟ ನಡೆಸಿದ್ದರು. ದಿನಸಿ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವುದರಿಂದ ಮಹಿಳೆಯರಿಗೆ, ಮಕ್ಕಳಿಗೆ ಸಮಸ್ಯೆಯಾಗುತ್ತಿದೆ, ರಸ್ತೆಯಲ್ಲಿ ಓಡಾಡುವುದು ಕಷ್ಟವಾಗುತ್ತಿದೆ, ಕೌಟುಂಬಿಕ ದೌರ್ಜನ್ಯ ಹೆಚ್ಚಿದೆ ಎಂದು ಪ್ರತಿಭಟನೆ ವೇಳೆ ಆಕ್ರೋಶ ವ್ಯಕ್ತಪಡಿಸಿದ್ದರು. ಇದು ಕೆಲವೇ ಗ್ರಾಮಗಳ ವ್ಯಥೆಯಲ್ಲ. ಬಹುತೇಕ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಜಾಲ ಸಕ್ರಿಯವಾಗಿದ್ದು, ಪುರುಷರು ದುಡಿಮೆಯ ಹಣವೆಲ್ಲ ಕುಡಿತಕ್ಕೆ ಸುರಿದು, ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಮಹಿಳೆಯರ ಮೇಲೆ ಹಲ್ಲೆ, ಕಿರುಕುಳದಂಥ ಘಟನೆಗಳು ಹೆಚ್ಚುತ್ತಿವೆ. ಮಾತ್ರವಲ್ಲ, ಮದ್ಯ ಸೇವಿಸಿ ವಾಹನ ಚಲಾಯಿಸುವುದರಿಂದ ರಸ್ತೆ ಅಪಘಾತದ ಪ್ರಕರಣಗಳು ಗಣನೀಯವಾಗಿ ಏರಿಕೆ ಕಂಡಿವೆ.
ಸರ್ಕಾರವು ಅಬಕಾರಿ ಇಲಾಖೆಗೆ ನಿಗದಿಪಡಿಸಿರುವ ಅಸಹಜ ಹೆಚ್ಚಿನ ಗುರಿಗಳು ಅಕ್ರಮ ಮದ್ಯ ಮಾರಾಟವನ್ನು ಪ್ರೋತ್ಸಾಹಿಸುತ್ತಿವೆ ಎಂಬ ಆರೋಪಗಳೂ ಕೇಳಿಬಂದಿವೆ. ಕಳೆದ ತಿಂಗಳು ವಿಧಾನಸಭೆಯಲ್ಲೂ ಈ ವಿಷಯ ಪ್ರತಿಧ್ವನಿಸಿತ್ತು ಮತ್ತು ಗೂಡಂಗಡಿ ಹಾಗೂ ದಿನಸಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದನ್ನು ಸದಸ್ಯರು ಪಕ್ಷಾತೀತವಾಗಿ ವಿರೋಧಿಸಿದ್ದರು. ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರು ಕೆಲ ಗ್ರಾಮಗಳಲ್ಲಿ ಈ ಸಮಸ್ಯೆ ಇರುವುದನ್ನು ಒಪ್ಪಿಕೊಂಡಿದ್ದರು. ಅಬಕಾರಿ ಇಲಾಖೆಯ ಅಧಿಕಾರಿಗಳ ತಂಡ ಹಲವೆಡೆ ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡಿರುವುದು ಹೌದಾದರೂ, ಅಧಿಕಾರಿಗಳು ಮರಳಿದ ಮೇಲೆ ಮತ್ತೆ ಅನಧಿಕೃತ ಮದ್ಯ ಮಾರಾಟ ಎಂದಿನಂತೆ ಸಾಗುತ್ತದೆ.
ಸರ್ಕಾರ ಈ ಸಮಸ್ಯೆಯ ಗಂಭೀರತೆಯನ್ನು ಅರಿತು ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು. ಹೀಗೆ ಎಲ್ಲೆಂದರಲ್ಲಿ, ಸುಲಭವಾಗಿ ಮದ್ಯ ಸಿಗುತ್ತಿರುವುದರಿಂದ ಯುವಕರು ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಮಹಿಳೆಯರು ಕಣ್ಣೀರು ಹಾಕಿದ್ದು ಸಾಕು ಅಂತ ಈಗ ಪ್ರತಿಭಟನೆಯ ದಾರಿ ತುಳಿದಿದ್ದಾರೆ. ಸಮಾಜದ ಸ್ವಾಸ್ಥ್ಯ ಕಾಪಾಡಲು, ಮಹಿಳೆಯರು ಮತ್ತು ಮಕ್ಕಳು ನೆಮ್ಮದಿಯಿಂದ ಬದುಕುವಂತಾಗಲು ಅಕ್ರಮ ಮದ್ಯ ಮಾರಾಟವನ್ನು ಮುಲಾಜಿಲ್ಲದೆ ತಡೆಯಲೇಬೇಕು.