ಸಂಪಾದಕೀಯ: ಆರ್ಥಿಕ ಚೇತರಿಕೆ ಅಗತ್ಯ

Edit-2
Published on

ನಿರೀಕ್ಷೆಯಂತೆಯೇ ಕರೊನಾಘಾತ ಆರ್ಥಿಕತೆಗೆ ದೊಡ್ಡ ಪೆಟ್ಟು ನೀಡಿದೆ. ಸೋಂಕು ಪ್ರಸರಣದ ನಿಯಂತ್ರಣಕ್ಕಾಗಿ ಮಾರ್ಚ್ 25ರಿಂದ ತಿಂಗಳ ಕಾಲ ಲಾಕ್​ಡೌನ್ ವಿಧಿಸಿದ ಪರಿಣಾಮ ಆರ್ಥಿಕ ಚಟುವಟಿಕೆಗಳು ಸಂಪೂರ್ಣ ಸ್ತಬ್ಧವಾಗಿದ್ದವು. ಕೈಗಾರಿಕೋದ್ಯಮಗಳು ಈ ಅವಧಿಯಲ್ಲಿ ಬಾಗಿಲು ಹಾಕಿದರೆ, ಚಿಲ್ಲರೆ ವಹಿವಾಟು ಕೂಡ ನಿಂತುಹೋಗಿತ್ತು. ಇದರಿಂದ ಆರ್ಥಿಕತೆಗೆ ಹೊಡೆತ ಬೀಳಲಿದೆ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದರು. ಅದರ ಸ್ಪಷ್ಟ ಚಿತ್ರಣ ಈಗ ಕಾಣುತ್ತಿದೆ. ಏಪ್ರಿಲ್-ಜೂನ್ ಅವಧಿಯ ಮೊದಲ ತ್ರೖೆಮಾಸಿಕದ ಜಿಡಿಪಿ ಶೇಕಡ -23.9ರಷ್ಟು ಕುಸಿತ ಕಂಡಿದೆ. 2019-20ರ ಇದೇ ಅವಧಿಯಲ್ಲಿ ಜಿಡಿಪಿ ಶೇಕಡ 5.2ರಷ್ಟು ಬೆಳವಣಿಗೆ ಕಂಡಿತ್ತು ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್​ಎಸ್​ಒ) ಸೋಮವಾರ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಿದೆ.

ಕೃಷಿ ಹೊರತು ಪಡಿಸಿ ಮೂಲಸೌಕರ್ಯ, ನಿರ್ಮಾಣ ಮತ್ತು ಸೇವಾವಲಯಗಳು ಕುಸಿತ ಕಂಡಿವೆ. ನಿರ್ಮಾಣ ವಲಯ ಶೇಕಡ 50.3, ಗಣಿಗಾರಿಕೆ ಶೇ.23.3, ವಿದ್ಯುತ್ ಶೇ.7, ರಿಯಲ್ ಎಸ್ಟೇಟ್ ಮತ್ತು ವೃತ್ತಿಪರ ಸೇವೆಗಳು ಶೇ.5.3ರಷ್ಟು ಇಳಿಕೆ ಕಂಡಿವೆ. ಕಳೆದ ನಾಲ್ಕು ದಶಕಗಳಲ್ಲಿ ಇದೇ ಮೊದಲ ಬಾರಿ ಜಿಡಿಪಿ ಇಷ್ಟೊಂದು ಕುಸಿತ ಕಂಡಿದೆ. ಚೇತರಿಕೆಗೆ ಒಂದಿಷ್ಟು ಅವಧಿ (ಅಂದಾಜು ಇನ್ನೆರಡು ತ್ರೖೆಮಾಸಿಕಗಳು) ಬೇಕಾಗಲಿದೆ ಎಂಬುದು ವಿತ್ತೀಯ ತಜ್ಞರ ಅಂಬೋಣ. ಜಿಡಿಪಿ ಭಾರಿ ಕುಸಿತ ಕಂಡಿರುವುದರಿಂದ ಬಡ್ಡಿದರಗಳ ಕಡಿತದ ನಿರ್ಧಾರವನ್ನು ಆರ್​ಬಿಐ ಡಿಸೆಂಬರ್​ವರೆಗೆ ಮುಂದೂಡುವ ಸಾಧ್ಯತೆ ಇದೆ. ಆರ್​ಬಿಐ ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ಮೊದಲ ತ್ರೖೆಮಾಸಿಕದಲ್ಲಿ ಜಿಡಿಪಿ -ಶೇ.21.5ರಷ್ಟು ಕುಸಿತ ಕಾಣಲಿದೆ ಎಂದು ಅಂದಾಜಿಸಿತ್ತು. ಪ್ರಸಕ್ತ ಶೇ.-23.9ರಷ್ಟು ಕುಸಿತ ದಾಖಲಾಗುವುದರಿಂದ, ಆರ್ಥಿಕತೆ ಚೇತರಿಕೆಯ ಕ್ರಮಗಳನ್ನು ಇನ್ನಷ್ಟು ತೀವ್ರಗೊಳಿಸಬೇಕಾದ ಅಗತ್ಯವಿದೆ.

ಲಾಕ್​ಡೌನ್ ಘೋಷಣೆಯ ಬೆನ್ನಲ್ಲೇ ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್​ನ್ನು ಪ್ರಕಟಿಸಿ, ವಲಯವಾರು ಹಂಚಿಕೆ ಮಾಡಿತ್ತು. ವಿವಿಧ ಬಗೆಯ ನೆರವನ್ನೂ ಪ್ರಕಟಿಸಿತು. ಆರ್​ಬಿಐ ಕೂಡ ಸಾಲದ ಕಂತು ಪಾವತಿಗೆ ಕೆಲ ತಿಂಗಳ ವಿನಾಯ್ತಿ ಘೋಷಿಸಿತು. ಅಲ್ಲದೆ, ಈ ಭಾರಿ ಸವಾಲನ್ನೇ ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳುವ ಬಗ್ಗೆ ಆತ್ಮವಿಶ್ವಾಸದಿಂದ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಆತ್ಮನಿರ್ಭರ ಭಾರತದ ಪರಿಕಲ್ಪನೆಯನ್ನು ದೇಶದ ಮುಂದೆ ಇಟ್ಟಿದ್ದಾರೆ. ಮಾತ್ರವಲ್ಲ, ಹಲವು ರಂಗಗಳನ್ನು ಸ್ವಾವಲಂಬಿಗೊಳಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದ್ದು, ಮೊನ್ನೆಯಷ್ಟೇ ಪ್ರಧಾನಿ ಆಟಿಕೆ ಉದ್ಯಮಕ್ಕೂ ಹೊಸ ಸ್ವರೂಪ ಕೊಡುವ ಬಗ್ಗೆ ಮಾತನಾಡಿ, ಅದಕ್ಕೆ ಚನ್ನಪಟ್ಟಣದ ಗೊಂಬೆ ಉದ್ಯಮವನ್ನು ಉದಾಹರಣೆಯಾಗಿ ನೀಡಿದ್ದು ಗಮನಾರ್ಹ. ಕರೊನಾದ ಬಿಕ್ಕಟ್ಟು ಜಾಗತಿಕವಾಗಿ ಕಾಡುತ್ತಿದ್ದು, ಭಾರತದಲ್ಲೂ ಅದು ತೀವ್ರ ಸ್ವರೂಪ ಪಡೆದುಕೊಂಡಿದೆ. ಸಮಾಧಾನದ ಸಂಗತಿ ಎಂದರೆ, ಆರ್ಥಿಕ ಚಟುವಟಿಕೆಗಳು ಕ್ರಮೇಣ ಗರಿಗೆದರುತ್ತಿದ್ದು, ಹೊಸ ಅವಕಾಶಗಳನ್ನು, ಅಭಿವೃದ್ಧಿಯ ಹಾದಿಗಳನ್ನು ಶೋಧಿಸಿ ಮುಂದಡಿ ಇಡಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರವೂ ದಿಟ್ಟ ಕ್ರಮಗಳನ್ನು ಕೈಗೊಳ್ಳಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net