ವಿಡಿಯೋ: ಮೂರು ವರ್ಷದ ಮಗುವನ್ನು 100 ಅಡಿ ಎತ್ತರಕ್ಕೆ ಕೊಂಡೊಯ್ದ ಗಾಳಿಪಟ...!

kite girl2
Published on

ನವದೆಹಲಿ: ಗಾಳಿಪಟ ಉತ್ಸವವೊಂದರಲ್ಲಿ ಬೃಹತ್​ ಗಾಳಿಪಟವೊಂದು ಮೂರು ವರ್ಷದ ಹೆಣ್ಣುಮಗುವನ್ನು ನೂರಡಿಗೂ ಅಧಿಕ ಎತ್ತರಕ್ಕೆ ಹಾರಿಸಿದೆ. ಅದೃಷ್ಟವಶಾತ್​ ಸಣ್ಣಪುಟ್ಟ ಗಾಯಗಳೊಂದಿಗೆ ಮಗು ಪಾರಾಗಿದೆ.

ಈ ಘಟನೆ ನಡೆದಿದ್ದು ತೈವಾನ್​ನ ಸಿಂಚು ನಗರದಲ್ಲಿ. ಸ್ಥಳೀಯರು ಆಯೋಜಿಸಿದ್ದ ಗಾಳಿಪಟ ಉತ್ಸವದಲ್ಲಿ ಬೃಹತ್​ ಗಾಳಿಪಟವೊಂದನ್ನು ಹಾರಿಸಲು ಸಿದ್ಧತೆ ನಡೆದಿತ್ತು. ಹತ್ತಾರು ಜನರು ಅದನ್ನು ಹಿಡಿದು ಹಾರಿಸಲು ಮುಂದಾಗಿದ್ದರು. ಅಷ್ಟರಲ್ಲಿ ಬೀಸಿದ ಗಾಳಿಯಿಂದಾಗಿ ಗಾಳಿಪಟದ ಬಾಲ ಮಗುವಿನ ಸೊಂಟಕ್ಕೆ ಸುತ್ತಿಕೊಂಡಿದೆ. ಗಾಳಿಯೊಂದಿಗೆ ಗಾಳಿಪಟವೂ ಹಾರಾಡ ತೊಡಗಿ ಮಗು ಕೂಡ ನೂರಡಿಗೂ ಹೆಚ್ಚು ಎತ್ತರಕ್ಕೆ ಹಾರಿದ್ದಾಳೆ.

ಅಂದಾಜು 30 ಸೆಕೆಂಡ್​ಗೂ ಹೆಚ್ಚು ಕಾಲ ಈ ದೃಶ್ಯ ನೋಡುಗರ ಎದೆಯನ್ನು ಝಲ್ಲೆನಿಸಿತ್ತು. ಗಾಳಿಪಟವನ್ನು ನಿಯಂತ್ರಿಸಿದ ಜನರ ಮಗುವನ್ನು ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಪ್ರದೇಶದಲ್ಲಿ ಗಾಳಿ ರಭಸವಾಗಿ ಬೀಸುತ್ತದೆ. ಈ ಕಾರಣಕ್ಕೆ ಉತ್ಸವಕ್ಕಾಗಿ ಈ ಜಾಗವನ್ನೇ ಆಯ್ದುಕೊಳ್ಳಲಾಗಿತ್ತು. ಏಕಾಏಕಿ ಗಾಳಿ ತೀವ್ರತೆ ಪಡೆದುಕೊಂಡಿದ್ದರಿಂದ ಗಾಳಿಪಟದ ಬಾಲ ಮಗುವಿಗೆ ಸುತ್ತಿಕೊಂಡು ಆಗಸಕ್ಕೆ ಹಾರಿಸಿತ್ತು ಎಂದು ಸ್ಥಳೀಯಾಡಳಿತದ ಅಧಿಕಾರಿಗಳು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net