

ನವದೆಹಲಿ: ಬಿಹಾರದಲ್ಲಿ ಎನ್ಡಿಎ ಮಿತ್ರ ಪಕ್ಷಗಳ ನಾಯಕರು ಪರಸ್ಪರ ದೋಷಾರೋಪಣೆ, ಭಿನ್ನಮತಗಳನ್ನು ವ್ಯಕ್ತಪಡಿಸುತ್ತಿದ್ದಾಗ್ಯೂ, ಎನ್ಡಿಎ ನೇತೃತ್ವವಹಿಸಿಕೊಂಡಿರುವ ಬಿಜೆಪಿ ಭಿನ್ನಮತ ಶಮನಗೊಳಿಸುವ ವಿಶ್ವಾಸದಲ್ಲಿದೆ. ಬಿಹಾರದಲ್ಲಿ ಸಮೀಪಿಸುತ್ತಿರುವ ವಿಧಾನ ಸಭಾ ಚುನಾವಣೆಯಲ್ಲಿ ಆಡಳಿತಾರೂಢ ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್ಡಿಎ)ನ ಎಲ್ಲ ಪಕ್ಷಗಳೂ ಒಗ್ಗಟ್ಟಾಗಿ ಸ್ಪರ್ಧಿಸಲಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸ್ಪಷ್ಟಪಡಿಸಿದ್ದಾರೆ.
ಬಿಹಾರದ ಬಿಜೆಪಿ ನಾಯಕರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ನಡ್ಡಾ, ಭಿನ್ನಮತಗಳು ಇರುವುದು ಸಹಜ. ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ. ಎನ್ಡಿಎ ಮಿತ್ರಪಕ್ಷಗಳೆಲ್ಲವೂ ಒಟ್ಟಾಗಿಯೆ ಚುನಾವಣೆ ಎದುರಿಸೋಣ. ಚುನಾವಣಾ ಆಯೋಗ ಚುನಾವಣೆ ಯಾವಾಗ ನಡೆಸಬೇಕು ಎಂಬುದನ್ನು ತೀರ್ಮಾನಿಸುತ್ತದೆ. ಅದಕ್ಕೂ ಮೊದಲು ಸದ್ಯದ ಪರಿಸ್ಥಿತಿಯಲ್ಲಿ ಎಲ್ಲರೂ ಕರೊನಾ ವೈರಸ್ ಸಂಕಷ್ಟದಲ್ಲಿ ಜನರಿಗೆ ಸ್ಪಂದಿಸುವ ಕೆಲಸವನ್ನು ಮುಂದುವರಿಸಬೇಕು ಎಂದರು.
ರಾಜ್ಯ ಸರ್ಕಾರದ ಆಡಳಿತಾವಧಿ ಅಕ್ಟೋಬರ್-ನವೆಂಬರ್ಗೆ ಮುಗಿಯಲಿದ್ದು, ಕೋವಿಡ್ -19 ಸೋಂಕು ದಿನೇದಿನೆ ಹೆಚ್ಚುತ್ತಿರುವ ಕಾರಣ ಚುನಾವಣೆ ಮುಂದೂಡಬೇಕು ಎಂಬ ಬೇಡಿಕೆ ರಾಜಕೀಯ ಪಕ್ಷಗಳ ನಾಯಕರು ಮುಂದಿಟ್ಟಿದ್ದಾರೆ. ವಿಪಕ್ಷ ಸ್ಥಾನದಲ್ಲಿರುವ ಆರ್ಜೆಡಿ ಮತ್ತು ಬಿಜೆಪಿಯ ಮಿತ್ರ ಪಕ್ಷಗಳಲ್ಲಿ ಒಂದಾದ ಲೋಕ ಜನಶಕ್ತಿ ಪಕ್ಷಗಳ ನಾಯಕರು ಚುನಾವಣೆ ಮುಂದೂಡಬೇಕೆಂಬ ಬೇಡಿಕೆ ಇಟ್ಟವರು. ಈ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಜೆ.ಪಿ.ನಡ್ಡಾ ಅವರು ಚುನಾವಣೆ ಯಾವಾಗ ನಡೆಸಬೇಕು ಎಂಬ ನಿರ್ಣಯವನ್ನು ಚುನಾವಣಾ ಆಯೋಗ ತೆಗೆದುಕೊಳ್ಳುತ್ತದೆ. ಅದು ಆಯೋಗದ ವಿವೇಚನೆಗೆ ಬಿಟ್ಟ ವಿಚಾರ ಎಂದರು. (ಏಜೆನ್ಸೀಸ್)