ಭಾರತದ ಮೇಲೆ ಜೈವಿಕಾಸ್ತ್ರ: ಪಾಕ್-ಚೀನಾ ನಡುವೆ ಮೂರು ವರ್ಷದ ರಹಸ್ಯ ಒಪ್ಪಂದ

China Pak
Published on

ಬೀಜಿಂಗ್: ಕರೊನಾ ಮಹಾಮಾರಿಯ ಜನಕ ಎಂಬ ಹಣೆಪಟ್ಟಿ ಅಂಟಿಸಿಕೊಂಡು ವಿಶ್ವರಾಷ್ಟ್ರಗಳ ಆಕ್ರೋಶಕ್ಕೆ ಗುರಿಯಾಗಿರುವ ಚೀನಾ ಇದೀಗ ಮನುಕುಲಕ್ಕೆ ಮಾರಕವಾದ ಮತ್ತಷ್ಟು ಕ್ರಮಗಳಿಗೆ ಮುಂದಾಗಿರುವ ಮಾಹಿತಿ ಬಹಿರಂಗವಾಗಿದೆ. ಭಾರತ ಹಾಗೂ ಕೆಲ ಪಾಶ್ಚಿಮಾತ್ಯ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಜೈವಿಕ ಯುದ್ಧದ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ತನ್ನ ಮಿತ್ರರಾಷ್ಟ್ರ ಪಾಕಿಸ್ತಾನದ ಜತೆ ಚೀನಾ ಕೈಜೋಡಿಸಿದೆ.

ಪೂರ್ವ ಲಡಾಖ್​ನಲ್ಲಿ ಕ್ಯಾತೆ ತೆಗೆದು ಗಡಿ ಬಿಕ್ಕಟ್ಟಿಗೆ ಕಾರಣವಾಗಿದ್ದ ಚೀನಾವನ್ನು ಭಾರತ ಹಿಮ್ಮೆಟ್ಟಿಸಿದ ಬೆನ್ನಲ್ಲೇ ಬೆಳಕಿಗೆ ಬಂದಿರುವ ಈ ವಿದ್ಯಮಾನ ಆತಂಕ ಹೆಚ್ಚಿಸಿದೆ. ಮೂರು ವರ್ಷಗಳ ಚೀನಾ-ಪಾಕ್ ಒಪ್ಪಂದದಲ್ಲಿ ಹಲವು ಸಂಶೋಧನೆಗಳು ಸೇರಿವೆ. ಮಾರಣಾಂತಿಕ ಆಂಥ್ರಾಕ್ಸ್ ಮಾದರಿಯ ವೈರಸ್ ಅಭಿವೃದ್ಧಿ ಕೂಡ ಜೈವಿಕ ಯುದ್ಧದ ಭಾಗವಾಗಿದೆ ಎಂದು ಅನೇಕ ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ಆನ್​ಲೈನ್ ಸುದ್ದಿ ಸಂಸ್ಥೆ ‘ಕ್ಲಾಕ್ಸನ್’ ವರದಿ ಮಾಡಿದೆ.

ಪಾಕ್​ನ ರಕ್ಷಣಾ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (ಡಿಇಎಸ್​ಟಿಒ) ಜತೆ ಸೇರಿ ಜೈವಿಕ ಅಸ್ತ್ರಗಳ ಬಗ್ಗೆ ಚೀನಾ ರಹಸ್ಯ ಅಧ್ಯಯನ ನಡೆಸುತ್ತಿದೆ. ಆದರೆ ಇದಕ್ಕೆ ‘ಉದಯೋನ್ಮುಖ ಸಾಂಕ್ರಾಮಿಕ ರೋಗ ಮತ್ತು ಅದರ ಪ್ರಸರಣ ನಿಯಂತ್ರಣದ ಜೈವಿಕ ಅಧ್ಯಯನ’ ಎಂಬ ಶೀರ್ಷಿಕೆಯನ್ನು ನೀಡಿದೆ. ಚೀನಾವೇ ಈ ಅಧ್ಯಯನದ ಸಂಪೂರ್ಣ ಆರ್ಥಿಕ ಅನುದಾನ ಭರಿಸಲಿದೆ ಎಂದು ಬೇಹುಗಾರಿಕಾ ವರದಿ ತಿಳಿಸಿದೆ. ಈ ರಹಸ್ಯ ಯೋಜನೆಯನ್ನು ಪಾಕ್​ನ ಆರೋಗ್ಯ ಇಲಾಖೆ ಮತ್ತು ವಿಶ್ವವಿದ್ಯಾಲಯಗಳ ಮೇಲ್ವಿಚಾರಣೆಯಿಂದ ಹೊರಗಿರಿಸಲಾಗಿದ್ದು, ಕೆಲವೇ ಮಂದಿಗೆ ಈ ಸಂಶೋಧನೆಯ ಉದ್ದೇಶ ಗೊತ್ತಿದೆ ಎನ್ನಲಾಗಿದೆ.

ಆಂಥ್ರಾಕ್ಸ್ ಮಾದರಿ ಸೋಂಕು: ಬ್ಯಾಸಿಲಸ್ ಆಂಥ್ರಾಕ್ಸ್ ಅಥವಾ ಆಂಥ್ರಾಕ್ಸ್ ಮಾದರಿಯ ವೈರಸ್ ಆಗಿರುವ ಬ್ಯಾಸಿಲಸ್ ಥುರಿಂಜಿಯೆನ್ಸಿಸ್ (ಬಿಟಿ) ಕುರಿತು ಹೆಚ್ಚಿನ ಅಧ್ಯಯನಕ್ಕೂ ಚೀನಾ ಮುಂದಾಗಿದೆೆ. ಇದಕ್ಕಾಗಿ ನಡೆಸಲಾದ ಮಣ್ಣು ಪರೀಕ್ಷೆ ಯಶಸ್ವಿಯಾಗಿದೆ ಎಂದು ಈ ಬೇಹುಗಾರಿಕಾ ವರದಿ ತಿಳಿಸಿದೆ. ಬಿಟಿ ಮತ್ತು ಬ್ಯಾಸಿಲಸ್ ಆಂಥ್ರಾಕ್ಸ್ ನಡುವಿನ ಸಮಾನ ಅಂಶವನ್ನು ಜೈವಿಕ ಯುದ್ಧದ ಏಜೆಂಟ್ ಎಂದು ವರ್ಗೀಕರಿಸಲಾಗಿದ್ದು, ಈ ಬ್ಯಾಕ್ಟೀರಿಯಾವನ್ನು ಜೈವಿಕ ಅಸ್ತ್ರವನ್ನಾಗಿ ಅಭಿವೃದ್ಧಿ ಪಡಿಸಿ ನಿರ್ವಹಿಸಬೇಕು ಎಂಬುದರ ಸಂಶೋಧನೆಯನ್ನು ಪಾಕ್​ನ ಡಿಇಎಸ್​ಟಿಒ ಮಾಡುತ್ತಿದೆ ಎನ್ನಲಾಗಿದೆ. ವೈರಾಣುಗಳ ಸಂಗ್ರಹವನ್ನು ಉತ್ತಮಪಡಿಸುವಿಕೆ ಮತ್ತು ರೋಗಕಾರಕಗಳ ಬಗ್ಗೆ ಪಾಕ್ ವಿಜ್ಞಾನಿಗಳಿಗೆ ಅಗತ್ಯ ತರಬೇತಿಯನ್ನೂ ನೀಡಲಾಗುತ್ತಿದೆ. ಇದರಿಂದ ಪಾಕ್ ತನ್ನದೇ ಆದ ವೈರಾಣುಗಳ ಸಂಗ್ರಹ ಹೊಂದಲು ಸಾಧ್ಯವಾಗುತ್ತದೆ ಎಂದು ವರದಿ ತಿಳಿಸಿದೆ.

ಬೇಹುಬಲೆಗೆ ರಹಸ್ಯ

ಚೀನಾ ಮತ್ತು ಪಾಕಿಸ್ತಾನ ಎಷ್ಟೇ ರಹ್ಯಸವಾಗಿ ಈ ಅಧ್ಯಯನಕ್ಕೆ ಮುಂದಾಗಿದ್ದರೂ ಇದರ ಜಾಡನ್ನು ಭಾರತ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ಬೇಹುಗಾರಿಕಾ ಸಂಸ್ಥೆಗಳು ಹಿಡಿದಿವೆ. ಭಾರತದ ಶತ್ರುದೇಶವಾದ ಪಾಕಿಸ್ತಾನವನ್ನೇ ಇದಕ್ಕೆ ಬಳಸಿಕೊಂಡಿರುವುದು ಚೀನಾ ಕುಟಿಲೋಪಾಯದ ಭಾಗ ಎಂದು ಬೇಹುಗಾರಿಕಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಎಬೋಲಾ ಮಾದರಿ

ಚೀನಾ ಮತ್ತು ಪಾಕಿಸ್ತಾನಗಳು ಮಾರಣಾಂತಿಕವಾದ ಎಬೋಲಾ ಮಾದರಿಯ ಮತ್ತೊಂದು ಸೋಂಕನ್ನು ಅಭಿವೃದ್ಧಿ ಪಡಿಸುತ್ತಿವೆ ಎನ್ನಲಾಗಿದೆ. ‘ಕ್ರಿಮಿಯನ್-ಕಾಂಗೊ ಹೆಮರಾಜಿಕ್ ಫೀವರ್ ವೈರಸ್’ (ಸಿಸಿಎಚ್​ಎಫ್​ವಿ) ಹೆಸರಿನ ಈ ವೈರಾಣು ತಗುಲಿದರೆ ಮರಣ ಪ್ರಮಾಣ ಶೇ. 25 ಇರುತ್ತದೆ ಎನ್ನಲಾಗಿದೆ. 4ನೇ ಹಂತ ಸಾಂಕ್ರಾಮಿಕ ರೋಗವಾಗಿರುವ ಇದನ್ನು ನಿರ್ವಹಿಸಲು ಅಗತ್ಯ ಸುರಕ್ಷತಾ ಕ್ರಮ ಪಾಕ್ ಬಳಿ ಇಲ್ಲ. ಆದರೂ ಇಂಥ ಅಪಾಯಕಾರಿ ಸಂಶೋಧನೆಯನ್ನು ನಡೆಸುತ್ತಿದೆ ಎಂದು ಮೂಲಗಳು ಹೇಳಿವೆ.

ಪಾಕ್​ನಲ್ಲೇ ಏಕೆ?

ಕರೊನಾ ವಿಶ್ವಾದ್ಯಂತ ವ್ಯಾಪಿಸಿದ ಬಳಿಕ ಚೀನಾದ ಜಾಗತಿಕ ಸ್ನೇಹ, ಸಂಬಂಧದ ಕೊಂಡಿ ಕಳಚಿದೆ. ಅದರ ಮಿತ್ರರಾಷ್ಟ್ರಗಳು ಸಹ ಸ್ನೇಹ ಕಡಿದುಕೊಂಡಿವೆ. ಹೀಗಾಗಿ ತನ್ನ ನೆಲದಲ್ಲಿ ಸಂಶೋಧನೆ ನಡೆಸಿದರೆ ಅನುಮಾನ ಬರಬಹುದೆಂದು ಪಾಕ್​ನಲ್ಲಿ ಪ್ರಯೋಗಕ್ಕೆ ಮುಂದಾಗಿದೆ.

ಉದ್ದೇಶವೇನು?

ಕರೊನಾ, ಗಡಿ ತಂಟೆ ಸೇರಿದಂತೆ ವಿವಿಧ ಕಾರಣಕ್ಕಾಗಿ ಚೀನಾ ವಿರುದ್ಧ ಹಲವು ದೇಶಗಳು ಸಿಡಿದೆದ್ದಿವೆ. ಹೀಗಾಗಿ ಚೀನಾ ವಿರೋಧಿ ಪಾಶ್ಚಿಮಾತ್ಯ ರಾಷ್ಟ್ರಗಳು ಹಾಗೂ ಭಾರತದ ವಿರುದ್ಧ ಪ್ರಾಬಲ್ಯ ಸಾಧಿಸಲು ಜೈವಿಕ ಯುದ್ಧ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಮುಂದಾಗಿದೆ.

ಮನುಕುಲಕ್ಕೆ ಮಾರಕ

ಕರೊನಾ ಸೋಂಕಿನ ವಿಷಯದಲ್ಲಿ ಜಾಗತಿಕ ದೂಷಣೆಗೆ ಗುರಿಯಾಗಿರುವ ಚೀನಾ, ಜಗತ್ತಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಈ ಕಾರಣದಿಂದ ಚೀನಾವನ್ನು ಮಣಿಸುವ ಅಭಿಯಾನ ನಡೆಯುತ್ತಿರುವ ಸಮಯದಲ್ಲೇ, ಮನುಕುಲಕ್ಕೆ ಗಂಡಾಂತರ ಕಾರಿಯಾದ ಅಪಾಯಕಾರಿ ಸಂಶೋಧನೆಗಳನ್ನು ನಡೆಸುತ್ತಿದೆ. ಈ ಸಂಶೋಧನೆಗೆ ಪಾಕಿಸ್ತಾನವನ್ನೂ ಸೇರಿಸಿಕೊಂಡಿದೆ.

ವುಹಾನ್ ಲ್ಯಾಬ್ ನೆರವು

ಕರೊನಾ ಸೋಂಕಿಗೆ ಮೂಲವೆಂದು ಹೇಳಲಾಗಿರುವ ಚೀನಾದ ವುಹಾನ್ ಲ್ಯಾಬ್​ನಿಂದಲೇ ಜೈವಿಕ ವೈರಾಣು ಸಂಶೋಧನೆಗೆ ಅಗತ್ಯ ಹಣಕಾಸು ನೆರವು ನೀಡಲಾಗುತ್ತಿದೆ ಮತ್ತು ವೈಜ್ಞಾನಿಕ ಬೆಂಬಲ ಒದಗಿಸಲಾಗುತ್ತಿದೆ ಎನ್ನಲಾಗಿದೆ. ವಿಶ್ವ ಸಮುದಾಯದ ಟೀಕೆಯಿಂದ ತಪ್ಪಿಸಿಕೊಳ್ಳಲು ಈ ಸಂಶೋಧನೆಗಳು ಚೀನಾ ಗಡಿಯಾಚೆಗೆ ನಡೆಯುತ್ತಿದೆ ಎಂದು ಹೇಳಲಾಗಿದೆ. ವೈರಸ್​ಗಳ ಆನುವಂಶೀಯತೆ ಗುರುತಿಸುವಿಕೆ, ಸೂಕ್ಷಾ್ಮಣುಜೀವಿಗಳನ್ನು ಹೊಂದುವಿಕೆ ಮತ್ತು ಸಾಂಕ್ರಾಮಿಕ ರೋಗಗಳಿಗೆ ಮತ್ತು ಸಂಶೋಧನೆಗೆ ಜಿನೋಮಿಕ್ ಸಾಧನವಾಗಿ ಬಳಸುವಿಕೆ ಬಗ್ಗೆಯೂ ಚೀನಾ ಸಹಾಯ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net