

ನವದೆಹಲಿ: ರಾಷ್ಟ್ರೀಯ ಸೈಬರ್ ಸುರಕ್ಷತೆಗೆ ಧಕ್ಕೆ ತರುವ ವಿದ್ಯಮಾನಗಳು ದಿನೇದಿನೆ ಹೆಚ್ಚಾಗುತ್ತಿದ್ದು, ಅದಕ್ಕೆ ತಡೆಯೊಡ್ಡುವ ನ್ಯಾಷನಲ್ ಸೈಬರ್ ಸೆಕ್ಯೂರಿಟಿ ಸ್ಟ್ರಾಟಜಿ (ಎನ್ಸಿಎಸ್ಎಸ್) ಶೀಘ್ರವೇ ಜಾರಿಯಾಗಲಿದೆ ಎಂಬ ಸುಳಿವನ್ನು ನ್ಯಾಷನಲ್ ಸೈಬರ್ ಸೆಕ್ಯೂರಿಟಿ ಕೋ ಆರ್ಡಿನೇಟರ್ ಲೆಫ್ಟಿನೆಂಟ್ ಜನರಲ್ ಡಾ. ರಾಜೇಶ್ ಪಂತ್ ಮಂಗಳವಾರ ನೀಡಿದ್ದಾರೆ.
ದೇಶವು ಹಲವು ರೀತಿಯಲ್ಲಿ ಸೈಬರ್ ಸ್ಪೇಸ್ ಮೇಲಿನ ಅವಲಂಬನೆ ಹೆಚ್ಚಿಸಿಕೊಳ್ಳುತ್ತಿರುವ ಕಾರಣ ಹೊಸ ಸೈಬರ್ ಸೆಕ್ಯೂರಿಟಿ ಸ್ಟ್ರಾಟಜಿಯನ್ನು ದೇಶಕ್ಕೆ ಶೀಘ್ರವೇ ಅರ್ಪಿಸಲಾಗುವುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸ್ವಾತಂತ್ರ್ಯ ದಿನಾಚರಣೆ ಭಾಷಣದ ಸಂದರ್ಭದಲ್ಲಿ ಹೇಳಿದ್ದರು.
ಪಂತ್ ಅವರು ಹೇಳಿರುವ ಪ್ರಕಾರ, ದೇಶಕ್ಕಾಗಿ ವೈಬ್ರಂಟ್ ಆಗಿರುವ ಸೈಬರ್ ಸ್ಪೇಸ್ ಒದಗಿಸಲು ಅದರ ಸುರಕ್ಷತೆ, ಸುಭದ್ರತೆ, ವಿಶ್ವಾಸಾರ್ಹತೆ, ನಂಬಿಕೆಯನ್ನು ಉಳಿಸುವುದಕ್ಕಾಗಿ ಎನ್ಸಿಎಸ್ಎಸ್ ರೂಪಿಸಲಾಗುತ್ತಿದೆ. ಇದು ಅಂತಿಮಗೊಂಡಿದ್ದು, ಉನ್ನತಾಧಿಕಾರಿಗಳ ಅಂಕಿತಕ್ಕಾಗಿ ಕಾಯುತ್ತಿವೆ.
ಇದು ಜಾರಿಗೊಳ್ಳುತ್ತಲೇ ಸರ್ಕಾರವು ಇದರ ಅಧೀನದಲ್ಲಿ ಸ್ವದೇಶಿ ಸಾಮರ್ಥ್ಯವನ್ನು ಹೆಚ್ಚಿಸುವ ಕೆಲಸಕ್ಕೆ ಮುಂದಾಗಲಿದೆ. ಸಂಸತ್ತು, ಶಾಸನಾತ್ಮಕ ಚೌಕಟ್ಟು, ಸೈಬರ್ ಸೆಕ್ಯೂರಿಟಿ ಇವೆಲ್ಲವೂ ಎಲ್ಲ ಹಂತಗಳಲ್ಲೂ ಅನುಷ್ಠಾನಗೊಳ್ಳಲಿವೆ ಎಂದು ಪಂತ್ ಹೇಳಿದ್ದಾರೆ. (ಏಜೆನ್ಸೀಸ್)