ಅಜಿತ್​ ಪವಾರ್​ ವಿರುದ್ಧ ಅನರ್ಹತೆ ಅರ್ಜಿ ಸಲ್ಲಿಸಿದ ಎನ್​ಸಿಪಿ

ajith pawar
Published on

ಮುಂಬೈ: ಏಕನಾಥ್ ಶಿಂಧೆ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಅಜಿತ್ ಪವಾರ್ ಮತ್ತು ಇತರ ಎಂಟು ಮಂದಿ ಶಾಸಕರ ವಿರುದ್ಧ ಎನ್‌ಸಿಪಿ ಪಕ್ಷ ಅನರ್ಹತೆಯ ಅರ್ಜಿ ಸಲ್ಲಿಸಿದೆ ಎಂದು ಜಯಂತ್ ಪಾಟೀಲ್ ಹೇಳಿದರು.

ಮಹಾರಾಷ್ಟ್ರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಯಂತ್ ಪಾಟೀಲ್, ಮಹಾ ವಿಕಾಸ್ ಅಘಾಡಿ (ಎಂವಿಎ) ಅನ್ನು ತೊರೆದು ಎನ್‌ಡಿಎ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಅಜಿತ್ ಪವಾರ್ ಮತ್ತು ಇತರ ಎಂಟು ಜನರ ವಿರುದ್ಧ ಪಕ್ಷವು ಅನರ್ಹತೆ ಅರ್ಜಿಗಳನ್ನು ಸಲ್ಲಿಸಿದೆ ಎಂದು ಭಾನುವಾರ ಪ್ರಕಟಿಸಿದ್ದಾರೆ.

“ಅವರ ಈ ನಡೆ ಕಾನೂನುಬಾಹಿರವಾಗಿದ್ದು ಅವರು ಶರದ್ ಪವಾರ್ ಮತ್ತು ಪಕ್ಷವನ್ನು ಕತ್ತಲೆಯಲ್ಲಿಟ್ಟಿದ್ದರಿಂದ ಜಯಪ್ರಕಾಶ್ ದಂಡೆಗಾಂವ್ಕರ್ ನೇತೃತ್ವದ ಪಕ್ಷದ ಶಿಸ್ತು ಸಮಿತಿಗೆ ದೂರು ನೀಡಲಾಗಿದೆ. ಶಿಸ್ತು ಸಮಿತಿಯ ಶಿಫಾರಸಿನ ನಂತರ, ಎನ್‌ಸಿಪಿ ಅಜಿತ್​ ಪವಾರ್​ ಸೇರಿದಂತೆ ಒಂಬತ್ತು ಶಾಸಕರ ವಿರುದ್ಧ ಅನರ್ಹತೆ ಅರ್ಜಿಯನ್ನು ರಾಜ್ಯ ಶಾಸಕಾಂಗಕ್ಕೆ ಮೇಲ್ ಮೂಲಕ ಸಲ್ಲಿಸಿದೆ”ಎಂದು ಭಾನುವಾರ ತಡರಾತ್ರಿ ಪತ್ರಿಕಾಗೋಷ್ಠಿಯಲ್ಲಿ ಪಾಟೀಲ್ ಹೇಳಿದರು.

"ಭೌತಿಕ ಪ್ರತಿಯನ್ನು ಶೀಘ್ರದಲ್ಲೇ ಸಲ್ಲಿಸಲಾಗುವುದು. ನಾವು ಸ್ಪೀಕರ್ ರಾಹುಲ್ ನಾರ್ವೇಕರ್​ರಲ್ಲಿ ಶೀಘ್ರವಾಗಿ ವಿಚಾರಣೆಗೆ ಮಾಡುವಂತೆ ಮನವಿ ಮಾಡಿದ್ದೇವೆ" ಎಂದು ಪಾಟೀಲ್ ಹೇಳಿದರು. ಇದೇ ವಿಚಾರವಾಗಿ ಪಕ್ಷವು ಚುನಾವಣಾ ಆಯೋಗವನ್ನು ಸಂಪರ್ಕಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ."ಪಕ್ಷದ ನೀತಿಗೆ ವಿರುದ್ಧವಾಗಿ ಹೋದ ಕ್ಷಣ, ತಾಂತ್ರಿಕವಾಗಿ ಅವರನ್ನು ಅನರ್ಹಗೊಳಿಸಲಾಗುತ್ತದೆ" ಎಂದು ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.

“ಪಕ್ಷವು ನೇಮಿಸಿದ ವಿಪ್​ಅನ್ನು ಅಧಿಕೃತವೆಂದು ಪರಿಗಣಿಸಲಾಗುವುದು ಎಂದು ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪು ಸ್ಪಷ್ಟವಾಗಿ ಹೇಳಿದೆ. ಶಾಸಕರ ಸಂಖ್ಯೆ ಮುಖ್ಯವಲ್ಲ. ಹೀಗಾಗಿ, ಜಿತೇಂದ್ರ ಅವದ್ ಅವರನ್ನು ಪಕ್ಷದ ಅಧಿಕೃತ ವಿಪ್ ಎಂದು ಪರಿಗಣಿಸಲಾಗುವುದು ಮತ್ತು ಇದು ಎಲ್ಲಾ ಶಾಸಕರಿಗೂ ಅನ್ವಯಿಸುತ್ತದೆ ಎಂದು ರಾಜ್ಯ ಎನ್‌ಸಿಪಿ ಮುಖ್ಯಸ್ಥರು ತಿಳಿಸಿದ್ದಾರೆ.

82 ವರ್ಷದ ಶರದ್ ಪವಾರ್, ಕಾನೂನು ಹೋರಾಟ ನಡೆಸುವುದಿಲ್ಲ. ಅವರ 53 ಶಾಸಕರಲ್ಲಿ ಕನಿಷ್ಠ 37 ಶಾಸಕರು ಪಕ್ಷಾಂತರವಾಗಿ ಬಿಜೆಪಿ-ಶಿವಸೇನೆ ಸರ್ಕಾರದೊಂದಿಗೆ ಕೈಜೋಡಿಸಲು ನೇರವಾಗಿ ಜನರ ಬಳಿಗೆ ಹೋಗುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಹೊರಬಿದ್ದ ಕೆಲವೇ ಗಂಟೆಗಳ ನಂತರ ಪಟೇಲ್ ಅವರ ಹೇಳಿಕೆ ಬಂದಿದೆ. “ಈ ಯುದ್ಧವನ್ನು ಕಾನೂನುಬದ್ಧವಾಗಿ ಹೋರಾಡುವ ಅಗತ್ಯವಿಲ್ಲ. ಯಾರಾದರೂ ಎನ್‌ಸಿಪಿಯ ಮಾಲೀಕತ್ವವನ್ನು ಹೊಂದಿದ್ದರೆ ನನಗೆ ಯಾವುದೇ ಸಮಸ್ಯೆಗಳಿಲ್ಲ. ನಾವು ಜನರ ಬಳಿಗೆ ಹೋಗಿ ಬೆಂಬಲ ಕೇಳುತ್ತೇವೆ. ಅವರು ನಮ್ಮನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸ ನನಗಿದೆ" ಎಂದು ಶರದ್ ಪವಾರ್ ಹೇಳಿದ್ದಾರೆ.

ಈ ಹಿಂದೆ, ಸುಮಾರು ಒಂದು ವರ್ಷದ ಹಿಂದೆ ಶಿವಸೇನೆಯಲ್ಲಿನ ವಿಭಜನೆಯನ್ನು ಹೋಲುವ ಆಶ್ಚರ್ಯಕರ ಘಟನೆಗಳಲ್ಲಿ, ಶರದ್ ಪವಾರ್ ಅವರ ಸೋದರಳಿಯ ಅಜಿತ್ ಪವಾರ್ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಜತೆಗೆ ಎಂಟು ಇತರ ಪಕ್ಷದ ಶಾಸಕರು ರಾಜ್ಯದಲ್ಲಿ ಎನ್‌ಡಿಎ ಸರ್ಕಾರಕ್ಕೆ ಸೇರ್ಪಡೆಗೊಂಡರು. ಎಲ್ಲಾ ಶಾಸಕರು ತಮ್ಮೊಂದಿಗೆ ಇದ್ದು ಅವರು ಶಿವಸೇನೆ-ಬಿಜೆಪಿ ಸರ್ಕಾರವನ್ನು ಪಕ್ಷವಾಗಿ ಸೇರಿಕೊಂಡಿದ್ದಾರೆ ಎಂದು ಅಜಿತ್ ಪವಾರ್ ಹೇಳಿದರು.

ಅಜಿತ್ ಪವಾರ್ ಶಿಂಧೆ-ಫಡ್ನವೀಸ್ ಸರ್ಕಾರಕ್ಕೆ ಸೇರ್ಪಡೆಯಾಗುತ್ತಿರುವುದು ನೋವಿನ ಸಂಗತಿ. ಆದರೆ ಅವರೊಂದಿಗಿನ ಸಂಬಂಧ ಹಾಗೆಯೇ ಇರುತ್ತದೆ ಎಂದು ಎನ್‌ಸಿಪಿ ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಹೇಳಿದ್ದಾರೆ.

"ಅಜಿತ್ ಪವಾರ್ ಅವರೊಂದಿಗಿನ ನನ್ನ ಸಂಬಂಧವು ಬದಲಾಗುವುದಿಲ್ಲ, ಅವರು ಯಾವಾಗಲೂ ನನ್ನ ಹಿರಿಯ ಅಣ್ಣನಾಗಿಯೇ ಇರುತ್ತಾರೆ. ನಾವು ಪಕ್ಷವನ್ನು ಮರುನಿರ್ಮಾಣ ಮಾಡುತ್ತೇವೆ" ಎಂದು ಎನ್‌ಸಿಪಿ ಸಂಸದೆ ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net