More

  ಮೋದಿ ನಿಂದಿಸಿದವರಿಗೆ ಜನರಿಂದಲೇ ಪ್ರತೀಕಾರ, ಭವಿಷ್ಯದಲ್ಲಿ ಕಾಂಗ್ರೆಸ್ ಸಂಸತ್ ಸ್ಥಾನ 4ಕ್ಕೆ ಇಳಿಕೆ- ಮಹಾರಾಷ್ಟ್ರ ಸಿಎಂ ಶಿಂಧೆ ಹೇಳಿಕೆ

  ಮಂಗಳೂರು: ರಾಷ್ಟ್ರ ರಾಜಕಾರಣದಲ್ಲಿ ಈ ಹಿಂದೆ 400 ಸಂಸತ್ ಸದಸ್ಯರನ್ನು ಹೊಂದಿದ್ದ ಕಾಂಗ್ರೆಸ್ ಈಗ 40ಕ್ಕೆ ಬಂದು ಮುಟ್ಟಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಮತ್ತಷ್ಟು ನಿಂದಿಸುವ ಕಾರ್ಯವಾದರೆ ಈ ಸಂಖ್ಯೆ 4ಕ್ಕೆ ಇಳಿಯುವುದು ಗ್ಯಾರಂಟಿ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ ಹೇಳಿದರು.

  ನಗರದದಲ್ಲಿ ಭಾನುವಾರ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಮರಾಠ ಅಸೋಸಿಯೇಶನ್ ವತಿಯಿಂದ ಆಯೋಜಿಸಿದ್ದ ಸತ್ಯನಾರಾಯಣ ಪೂಜೆಯ ಸಮಾರಂಭದಲ್ಲಿ ಮಾತನಾಡಿದರು.

  ಪ್ರಧಾನಿ ಮೋದಿ ಅವರಿಗೆ ಪ್ರತಿಪಕ್ಷಗಳು ಇಲ್ಲಸಲ್ಲದ ಆರೋಪ ಮಾಡುವುದು ರೂಢಿಯಾಗಿದೆ. ಆದರೆ ಮೋದಿ ಅದಕ್ಕೆ ಪ್ರತೀಕಾರ ತೋರುವ ಕಾರ್ಯ ಮಾಡಿಲ್ಲ. ದೇಶದ ಜನತೆ ಇಂತಹ ಪಕ್ಷಗಳ ವಿರುದ್ಧ ಪ್ರತೀಕಾರ ತೀರಿಸಿಕೊಂಡು ಮೋದಿ ಅವರನ್ನು ಮತ್ತೊಂದು ಬಾರಿ ಪ್ರಧಾನಿ ಹುದ್ದೆಗೆ ಏರಿಸಿದರು. ಮೋದಿ ಅವರನ್ನು ನಿಂದಿಸಿದವರು ಜನರಿಂದಲೇ ದೂರವಾಗುತ್ತಿದ್ದಾರೆ. ಕಾಂಗ್ರೆಸ್ ಹಾಗೂ ವಿರೋಧಿಗಳು ಸ್ವಾತಂತ್ರ್ಯ ಹೋರಾಟಗಾರ ವೀರ ಸಾರ್ವಕರ್ ಅವರನ್ನು ಅವಮಾನ ಮಾಡಿದರು, ಈಗ ಬಜರಂಗ ದಳವನ್ನು ಅಪಮಾನ ಮಾಡುತ್ತಿದ್ದಾರೆ. ಪಿಎಫ್‌ಐ ಸಂಘಟನೆ ದೇಶದ್ರೋಹಿ, ದೇಶ ವಿರೋಧಿ ಸಂಘಟನೆಯಾದರೆ ಬಜರಂಗ ದಳ ದೇಶಭಕ್ತರು ಕಟ್ಟಿದ ಸಂಘಟನೆಯಾಗಿದೆ ಎಂದರು.

  ಕರಾವಳಿಯಲ್ಲಿರುವ ಮರಾಠಿ ಜನರ ಪರವಾಗಿ ತುಳುನಾಡಿನ ಬಂಟ, ಬಿಲ್ಲವ ಸಮುದಾಯದ ಜನರು ಮುಂಬೈಯಲ್ಲಿ ಮೆಚ್ಚುಗೆ ಮಾತುಗಳನ್ನು ನನ್ನಲ್ಲಿ ಹೇಳುತ್ತಿರುವಾಗ ಬಹಳಷ್ಟು ಖುಷಿಯಾಗುತ್ತದೆ. ಮಹಾರಾಷ್ಟ್ರದ ಮರಾಠಿಗಳು ಕರ್ನಾಟಕದ ಕರಾವಳಿ ಭಾಗದಲ್ಲಿ ಸುಮಾರು 50 ವರ್ಷಗಳಿಂದ ನೆಲೆಸಿದ್ದಾರೆ. ಕಳೆದ ಮೂರು ಪೀಳಿಗೆಯ ಮರಾಠಿಗಳು ಕರಾವಳಿ ಜಿಲ್ಲೆಗಳಲ್ಲಿ ಇದ್ದಾರೆ. ಮರಾಠಿ ಸಮುದಾಯದವರು ಪ್ರಾಮಾಣಿಕರು, ಯಾವುದಾದರೂ ವಿಚಾರದಲ್ಲಿ ಬದ್ಧತೆಯನ್ನು ಇಟ್ಟುಕೊಂಡವರು ಎಂದರು.

  ಮಹಾರಾಷ್ಟ್ರ ಕೈಗಾರಿಕಾ ಸಚಿವ ಉದಯ್ ಸಾಮಂತ್, ಮುಂಬೈ ಸಂಸದ ರಾಹುಲ್ ಶೆಹುಲೆ, ಬಿಜೆಪಿ ರಾಜ್ಯ ವಕ್ತಾರ ಗಣೇಶ್ ಕಾರ್ಣಿಕ್ ಹಾಗೂ ಮರಾಠಿ ಸಮುದಾಯದ ನಾನಾ ಗಣ್ಯರು ಉಪಸ್ಥಿತರಿದ್ದರು.

  —————————

  ಡಬಲ್ ಇಂಜಿನ್ ಸರ್ಕಾರದಿಂದ ಮಾತ್ರ ಪ್ರಗತಿ ಸಾಧ್ಯ

  ಕಳೆದ 8-9 ತಿಂಗಳಲ್ಲಿ ನನ್ನ ಅಧಿಕಾರ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ ಸಾಕಷ್ಟು ಪ್ರಗತಿಯಾಗಿದ್ದು, ಅಲ್ಲೂ ಡಬ್ಬಲ್ ಇಂಜಿನ್ ಸರ್ಕಾರ ಇದೆ. ಇದರಿಂದ ಡಬಲ್ ಇಂಜಿನ್ ಸರ್ಕಾರದ ಕೆಲಸ ಕಾರ್ಯಗಳಿಗೆ ಬುಲೆಟ್ ಟ್ರೈನ್ ವೇಗ ಬಂದಿದೆ. ಕೇಂದ್ರದಲ್ಲಿ ಒಂದು ಸರ್ಕಾರವಿದ್ದು, ರಾಜ್ಯದಲ್ಲಿ ಮತ್ತೊಂದು ಸರ್ಕಾರ ಇದ್ದರೆ ರಾಜ್ಯದ ವಿಕಾಸ ಸಾಧ್ಯವಾಗುವುದಿಲ್ಲ. ಕರ್ನಾಟಕದಲ್ಲೂ ಡಬಲ್ ಇಂಜಿನ್ ಸರ್ಕಾರವಿದ್ದು, ಡಬ್ಬಲ್ ಇಂಜಿನ್ ಸರ್ಕಾರದಿಂದ ಮಾತ್ರ ಪ್ರಗತಿ ಕಾಣಲು ಸಾಧ್ಯ ಎಂದು ಶಿಂಧೆ ಹೇಳಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts