ಕುಡಿದ ಅಮಲಿನಲ್ಲಿ ವಾಹನ ಚಾಲನೆ; ರಸ್ತೆ ಬದಿ ನಿಂತಿದ್ದ ಪೊಲೀಸ್​ ಪೇದೆ ದುರ್ಮರಣ

drink and drive
Published on

ಬೆಂಗಳೂರು: ಏರ್ಪೋಟ್ ರಸ್ತೆಯ ಚಿಕ್ಕಜಾಲ ಬಳಿ ನಿನ್ನೆ ರಾತ್ರಿ ಗಂಭೀರ ಅಪಘಾತ ನಡೆದಿದ್ದು ಕುಡಿದು ವಾಹನ ಚಾಲನೆ ಮಾಡಿದ್ದ ಯುವಕ-ಯುವತಿಯರಿದ್ದ ಕಾರು, ಪೊಲೀಸ್​ ಪೇದೆಯೊಬ್ಬರು ಜೀವವನ್ನು ಕಳೆದುಕೊಳ್ಳುವಂತೆ ಮಾಡಿದೆ.

ದೇವನಹಳ್ಳಿ ಬಳಿ ಇನ್ಸ್​ಪೆಕ್ಟರ್ ಧರ್ಮೆಗೌಡ ಮತ್ತು ಜೀಪ್ ಡ್ರೈವರ್ ಸುರೇಶ್ ಕಳೆದ ರಾತ್ರಿ ನೈಟ್ ರೌಂಡ್ಸ್ ಮಾಡುತ್ತಿದ್ದರು. ಈ ವೇಳೆ ಅವರು ಹೆದ್ದಾರಿ ಬಳಿಯಲ್ಲಿ ಕೆಟ್ಟು ನಿಂತಿದ್ದ ಕಾರೊಂದನ್ನು ಕಂಡಿದ್ದಾರೆ. ಏನಾಗಿದೆ ಎಂದು ಪರಿಶೀಲಿಸಲು ಇಬ್ಬರೂ ಕಾರಿನ ಬಳಿ ತೆರಳಿದ್ದಾರೆ. ಕೆಟ್ಟು ನಿಂತಿದ್ದ ಕಾರಿನ ಚಾಲಕನಿಗೆ ಏನಾದರೂ ತೊಂದರೆ ಆಗಿದೆಯೇ ಎಂದು ಪರಿಶೀಲಿಸಿ ಸಹಾಯ ಮಾಡಲು ತೆರಳಿದ್ದ ಸಂದರ್ಭದಲ್ಲಿ ಯಮರಾಯ ಜೀಪ್ ಡ್ರೈವರ್ ಕೆಲಸ ಮಾಡುತ್ತಿದ್ದ ಪೊಲೀಸ್​ ಪೇದೆ ಸುರೇಶ್​ರ ಪ್ರಾಣ ಹೊತ್ತಿಯ್ದಿದ್ದಾನೆ.

ಕೆಟ್ಟು ನಿಂತ ವಾಹನದ ಬಳಿ ತೆರಳಿದ್ದ ಇನ್ಸ್​ಪೆಕ್ಟರ್​ ಧರ್ಮೇಗೌಡ ಕರೆ ಮಾಡಲು ಬದಿಗೆ ಹೋಗಿದ್ದಾರೆ. ಇದೇ ವೇಳೆಯಲ್ಲಿ ಕೆಟ್ಟು ನಿಂತಿದ್ದ ವಾಹನಕ್ಕೆ ಹಿಂದಿನಿಂದ ಕುಡಿದ ಅಮಲಿನಲ್ಲಿ ಅಸೆಂಟ್​ ಕಾರು ಚಾಲನೆ ಮಾಡುತ್ತಿದ್ದವರು ಕೆಟ್ಟು ನಿಂತಿದ್ದ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದಾಗಿ ಪರಿಶೀಲನೆ ಮಾಡಲು ಬಂದಿದ್ದ ಕಾನ್ಸಟೇಬಲ್ ಸುರೇಶ್​ ಸಾವಿಗೀಡಾಗಿದ್ದಾರೆ. ಈ ವೇಳೆ ಇನ್ಸ್​ಪೆಕ್ಟರ್ ಧರ್ಮೆಗೌಡ ಕೂದಲಳತೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಡಿಕ್ಕಿ ಹೊಡೆದ ಅಸೆಂಟ್​ ಕಾರಿನಲ್ಲಿ ಮೂವರು ಯುವಕರು ಹಾಗೂ ಮೂವರು ಯುವತಿಯರು ಇದ್ದರು ಎನ್ನಲಾಗಿದೆ. ಇವರು ರಾತ್ರಿಯೆಲ್ಲ ಪಾರ್ಟಿ ಮಾಡಿಕೊಂಡು ಮುಂಜಾನೆ ನಂದಿಬೆಟ್ಟಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಅಪಘಾತದ ರಬಸಕ್ಕೆ ಪಿಸಿ ದುರ್ಮರಣ ಹೊಂದಿದ್ದು ಒಂದು ಕಡೆಯಾದರೆ ಕೆಟ್ಟು ನಿಂತಿದ್ದ ಕಾರು ಚಾಲಕ ಕೂಡ ಕೈ ಕಾಲು ಮುರಿತಕ್ಕೆ ಒಳಗಾಗಿದ್ದಾರೆ. ಈ ಅಪಘಾತದಲ್ಲಿ ಕುಡಿದ ಮತ್ತಿನಲ್ಲಿದ್ದ ಯುವಕ ಯುವತಿಯರಿಗೂ ಗಂಭೀರ ಗಾಯಗಳಾಗಿವೆ. ಪೊಲೀಸ್ ಪೇದೆ ಸುರೇಶ್ ದುರ್ಮರಣಕ್ಕೆ ಪೊಲೀಸರು ಕಂಬನಿ ಮಿಡಿದಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net