

ಬೆಂಗಳೂರು: ಬಳಕೆಗೆ ಯೋಗ್ಯವಿಲ್ಲದೆ ಗುಜರಿಯಾಗಿರುವ ಹಾಗೂ ಕಳುವಾಗಿರುವ ಲಾರಿ, ಬಸ್ಸುಗಳಿಗೆ ಆರ್ಟಿಒ ಕಚೇರಿಗಳಲ್ಲಿ ನೋಂದಣಿ ಮಾಡಿಕೊಡುತ್ತಿರುವ ಅಂತಾರಾಜ್ಯ ಬೃಹತ್ ದಂಧೆಯ ಬಗ್ಗೆ ‘ವಿಜಯವಾಣಿ’ ಪ್ರಕಟಿಸಿದ ವಿಶೇಷ ವರದಿ ಆಧರಿಸಿ ಬೆಂಗಳೂರು ಗ್ರಾಮಾಂತರದ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ತಪ್ಪಿತಸ್ಥ ಅಧಿಕಾರಿಗಳು ಹಾಗೂ ಖಾಸಗಿ ವ್ಯಕ್ತಿಗಳಿಗೆ ಬಂಧನ ಭೀತಿ ಶುರುವಾಗಿದೆ.
ಬೆಂಗಳೂರು ಪೂರ್ವ ತಾಲೂಕಿನ ಕಾಟಂನಲ್ಲೂರು ಬಳಿಯ ಗ್ಯಾರೇಜ್ ಇಟ್ಟುಕೊಂಡು, ಅಕ್ರಮವಾಗಿ ಬಸ್ಗಳ ನೋಂದಣಿ ದಂಧೆ ನಡೆಸುತ್ತಿದ್ದ ಎಸ್ಎಸ್ಪಿ ಮೋಟಾರ್ಸ್ನ ಮಾಲೀಕ, ಆಂಧ್ರಪ್ರದೇಶದ ವೇಣುಗೋಪಾಲರೆಡ್ಡಿ, ಮ್ಯಾನೇಜರ್, ಸೂಪರ್ವೈಸರ್ ಹಾಗೂ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಬೆಂಗಳೂರು ಹಾಗೂ ಕೋಲಾರ ಆರ್ಟಿಒದ ಕೆಲ ಅಧಿಕಾರಿ ಮತ್ತು ಸಿಬ್ಬಂದಿಯೂ ದಂಧೆಯಲ್ಲಿ ಭಾಗಿಯಾಗಿದ್ದು, ಸಾಕ್ಷ್ಯ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಎಫ್ಐಆರ್ನಲ್ಲಿ ಏನಿದೆ?: ಕಾಟಂನಲ್ಲೂರು ಗ್ರಾಮದ ಸರ್ವೆ ನಂ.3ರಲ್ಲಿ ತಿರುಪತಿಯ ವೇಣುಗೋಪಾಲ ರೆಡ್ಡಿ ಎಸ್ಎಸ್ಪಿ ಗ್ಯಾರೇಜ್ ಇಟ್ಟುಕೊಂಡಿದ್ದಾರೆ. ಹಳೆಯ ಲೇಲ್ಯಾಂಡ್ ಕಂಪನಿಯ ಚಾಸ್ಸಿಗಳನ್ನು ತಂದು ಯಾವುದೇ ಅನುಮತಿ ಇಲ್ಲದೆ ಅದೇ ಚಾಸ್ಸಿಗಳನ್ನು ಆಧರಿಸಿ ಬಸ್ಗಳ ವಿನ್ಯಾಸ ಮಾಡಿದ್ದಾರೆ. ಅರುಣಾಚಲ ಪ್ರದೇಶದ ಆರ್ಟಿಒ ಕಚೇರಿಯಲ್ಲಿ 2-3 ವರ್ಷಗಳ ಹಿಂದೆ ನೋಂದಣಿ ಮಾಡಿಸಿದಂತೆ ರಿಜಿಸ್ಟ್ರೇಷನ್ ಮಾಡಿಸಿ, ನಂತರ ಕೋಲಾರ ಆರ್ಟಿಒ ಕಚೇರಿಗೆ ಎನ್ಒಸಿ ಪಡೆದುಕೊಂಡಿದ್ದಾರೆ. ಬಳಿಕ ಅಗತ್ಯ ದಾಖಲಾತಿಗಳನ್ನು ಸೃಷ್ಟಿಸಿಕೊಂಡು ಮುಳಬಾಗಿಲು ತಾಲೂಕಿನ ನಂಗಲಿಯಲ್ಲಿರುವ ಎಸ್ಸಿಟಿ ಡಿಗ್ರಿ ಕಾಲೇಜು ಹಾಗೂ ಇತರ ಶಾಲಾ-ಕಾಲೇಜುಗಳ ಹೆಸರಿನಲ್ಲಿ ಕಡಿಮೆ ತೆರಿಗೆ ಪಾವತಿಸಿ ನೋಂದಣಿ ಮಾಡಿಸಿದ್ದಾರೆ. ಈ ದಂಧೆಯಿಂದ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂ. ನಷ್ಟ ಉಂಟು ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ಶಾಲೆಗಳ ಹೆಸರಲ್ಲಿ ನೋಂದಣಿ: ಬೆಂಗಳೂರು ಗ್ರಾಮಾಂತರ ಪೊಲೀಸರು ಬಸ್ಗಳಿದ್ದ ಯಾರ್ಡ್ಗೆ ಹೋಗಿ ಪರಿಶೀಲನೆ ನಡೆಸಿದ್ದಾರೆ. 95ಕ್ಕೂ ಹೆಚ್ಚು ಬಸ್ಗಳನ್ನು ಅರುಣಾಚಲ ಪ್ರದೇಶ ಆರ್ಟಿಒದಲ್ಲಿ ನೋಂದಣಿ ಮಾಡಿಸಿದಂತೆ ಎನ್ಒಸಿ ಪಡೆದು ಎಸ್ಸಿಟಿ ಡ್ರಿಗ್ರಿ ಕಾಲೇಜು ಹಾಗೂ ಇನ್ನಿತರ ಶಾಲಾ-ಕಾಲೇಜುಗಳ ಹೆಸರಲ್ಲಿ ಮರು ನೋಂದಣಿ ಮಾಡಿಸಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗಿದೆ.
ತಪ್ಪು ಸಾಬೀತಾದರೂ ಶಿಕ್ಷೆ ಏಕಿಲ್ಲ?: ಬೆಂಗಳೂರಿನ ಕೆಲ ಕಚೇರಿಗಳಲ್ಲೂ ಈ ದಂಧೆ ನಡೆದಿರುವುದಕ್ಕೆ ದಾಖಲಾತಿಗಳಿವೆ. ಕೋಲಾರ ಆರ್ಟಿಒ ಕಚೇರಿಯಲ್ಲಿ ಅಕ್ರಮ ನಡೆದಿರುವುದು ಸಾಬೀತಾದರೂ ಸಾರಿಗೆ ಸಚಿವರು ಹಾಗೂ ಸಾರಿಗೆ ಆಯುಕ್ತರು ಅಲ್ಲಿನ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳದಿರುವುದು ಅನುಮಾನಕ್ಕೆ ಕಾರಣವಾಗಿದೆ. ಇಲ್ಲಿನ ಕೇಸ್ ವರ್ಕರ್ ಒಬ್ಬರು ಕಳೆದ 20 ವರ್ಷದಿಂದ ಇದೇ ಕಚೇರಿಯಲ್ಲಿದ್ದಾರೆ. ಇಬ್ಬರು ಖಾಸಗಿ ವ್ಯಕ್ತಿಗಳಿಗೆ ಕಚೇರಿಯಲ್ಲೇ ಕ್ಯಾಬಿನ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ. ಆರ್ಟಿಒ ಹುದ್ದೆ ಜವಾಬ್ದಾರಿಯನ್ನು ಎಆರ್ಟಿಒಗೆ ನೀಡಲಾಗಿದೆ. ಕಚೇರಿಗೆ ಮುಖ್ಯಸ್ಥರಿಗೆ ಗೊತ್ತಿಲ್ಲದೆ ಏನೂ ನಡೆಯಲ್ಲ. ದಂಧೆಯಲ್ಲಿ ಅವರೇ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಸಿಬ್ಬಂದಿಯೇ ಆರೋಪಿಸಿದ್ದಾರೆ.
ನಾಗಾಲೆಂಡ್ ಹಾಗೂ ಅರುಣಾಚಲ ಪ್ರದೇಶ ಆರ್ಟಿಒ ಕಚೇರಿಯಿಂದ ವಾಹನ ವರ್ಗಾವಣೆಗೆ ವಿತರಣೆಯಾಗಿರುವ ನಕಲಿ ನಿರಾಕ್ಷೇಪಣಾ ಪತ್ರ (ಎನ್ಒಸಿ)ಗಳನ್ನು ಆಧರಿಸಿ ಬೆಂಗಳೂರು ಹಾಗೂ ಕೋಲಾರ ಆರ್ಟಿಒ ಕಚೇರಿಗಳಲ್ಲಿ ಲಾರಿ ಹಾಗೂ ಬಸ್ಗಳನ್ನು ನೋಂದಣಿ ಮಾಡಿರುವ ಕುರಿತು ‘ಕದ್ದ ವಾಹನಕ್ಕೂ ನೋಂದಣಿ!’ ಶೀರ್ಷಿಕೆಯಡಿ ಜೂ.30ರಂದು ವಿಜಯವಾಣಿ ಮುಖಪುಟದಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಇದನ್ನು ಆಧರಿಸಿ ಪೊಲೀಸರು ಯಾರ್ಡ್ ಮೇಲೆ ದಾಳಿ ನಡೆಸಿ, ಈಗ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.