ದುಷ್ಕರ್ಮಿಗಳ ಗುಂಡಿನ ದಾಳಿಗೆ ಮಹಾರಾಷ್ಟ್ರದ ಮಾಜಿ ಸಚಿವ, NCP ನಾಯಕ ಬಾಬಾ ಸಿದ್ದಿಕ್ ದುರ್ಮರಣ! Baba Siddique

Baba Siddique
Published on

ಮುಂಬೈ: ಮಹಾರಾಷ್ಟ್ರದ ಮಾಜಿ ಸಚಿವ ಹಾಗೂ ಅಜಿತ್​ ಪವಾರ್​ ನೇತೃತ್ವದ ಎನ್​ಸಿಪಿ ಬಣದ ನಾಯಕ ( NCP leader ) ಬಾಬಾ ಸಿದ್ದಿಕ್ ( Baba Siddique )​ ಅವರು ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿರುವ ಘಟನೆ ಶನಿವಾರ ರಾತ್ರಿ ಮುಂಬೈನಲ್ಲಿ ನಡೆದಿದೆ.

66 ವರ್ಷದ ಬಾಬಾ ಸಿದ್ದಿಕ್​ ಅವರ ಹೊಟ್ಟೆ ಮತ್ತು ಎದೆಗೆ ಗುಂಡು ಹಾರಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಬಾಬಾ ಸಿದ್ದಿಕ್​ ಕೊನೆಯುಸಿರೆಳೆದಿದ್ದಾರೆ. ಈ ಪ್ರಕರಣ ಸಂಬಂಧ ಕರ್ನೈಲ್​ ಸಿಂಗ್​ ಮತ್ತು ಧರ್ಮರಾಜ್​ ಕಶ್ಯಪ್​ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಆರೋಪಿಗಳು ನಟೋರಿಯಸ್​ ಲಾರೆನ್ಸ್​ ಬಿಷ್ಣೋಯ್​ ಗ್ಯಾಂಗ್​ನ ಸದಸ್ಯರು ಎಂದು ವಿಚಾರಣೆ ವೇಳೆ ಹೇಳಿದ್ದಾರೆ.

ಈ ಘಟನೆ ಬಾಂದ್ರಾದಲ್ಲಿರುವ ಬಾಬಾ ಸಿದ್ದಿಕ್​ ಅವರ ಪುತ್ರ ಹಾಗೂ ಮಹಾರಾಷ್ಟ್ರ ಶಾಸಕ ಜೀಶನ್​ ಸಿದ್ದಿಕ್ ಅವರ ಕಚೇರಿಯ ಹೊರಗಡೆ ಶನಿವಾರ ರಾತ್ರಿ 9.30ರ ಸುಮಾರಿಗೆ ನಡೆದಿದೆ. ದಸರಾ ಹಿನ್ನೆಲೆಯಲ್ಲಿ ಸಿದ್ದಿಕ್ ಅವರು ಪಟಾಕಿ ಸಿಡಿಸುತ್ತಿದ್ದರು. ಈ ವೇಳೆ ವಾಹನದಲ್ಲಿ ಬಂದ ಮೂವರು ಮುಸುಕುಧಾರಿಗಳು 9.9 ಎಂಎಂ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾರೆ. ಮೂರು ಸುತ್ತು ಗುಂಡು ಹಾರಿಸಿದ್ದು, ಅದರಲ್ಲಿ ಒಂದು ಗುಂಡು ಸಿದ್ದಿಕಿಯ ಎದೆಗೆ ಬಡಿದು ಸ್ಥಳದಲ್ಲೇ ಕುಸಿದು ಬಿದ್ದರು. ಒಂದು ಗುಂಡು ಬಾಬಾ ಸಿದ್ದಿಕ್ ಅವರ ವಾಹನದ ವಿಂಡ್ ಶೀಲ್ಡ್ ಅನ್ನು ಸೀಳಿದೆ.

ಘಟನೆ ನಡೆದ ಬಳಿಕ ಇಬ್ಬರನ್ನು ಬಂಧಿಸಲಾಗಿದೆ. ಇಬ್ಬರಲ್ಲಿ ಓರ್ವ ಉತ್ತರ ಪ್ರದೇಶದ ನಿವಾಸಿ ಮತ್ತು ಇನ್ನೊಬ್ಬ ಹರಿಯಾಣದ ನಿವಾಸಿ. ಮೂರನೇ ಆರೋಪಿ ಪರಾರಿಯಾಗಿದ್ದು, ಆತನನ್ನು ಹಿಡಿಯುವ ಪ್ರಯತ್ನ ನಡೆಯುತ್ತಿದೆ. ಗುಂಡಿನ ದಾಳಿಯ ಬಳಿಕ ಸಿದ್ದಿಕ್ ಅವರ ದೇಹದಿಂದ ಸಾಕಷ್ಟು ರಕ್ತಸ್ರಾವವಾಗಿತ್ತು. ಹೀಗಾಗಿ ಅವರನ್ನು ಬದುಕಿಸುವ ಎಲ್ಲ ಪ್ರಯತ್ನಗಳು ವಿಫಲವಾದವು ಮತ್ತು ಶನಿವಾರ ರಾತ್ರಿ 11.27 ಕ್ಕೆ ನಿಧನರಾದರು. ಇದಾದ ನಂತರ ಅವರ ದೇಹವನ್ನು ಶವಪರೀಕ್ಷೆಗಾಗಿ ಕೂಪರ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ಲೀಲಾವತಿ ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ತಿಳಿಸಿದ್ದಾರೆ.

ಎನ್‌ಸಿಪಿ ನಾಯಕನ ಮೇಲಿನ ದಾಳಿಯನ್ನು ಖಂಡಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಈ ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಯಾರೂ ಕೂಡ ಕಾನೂನು ಮತ್ತು ಸುವ್ಯವಸ್ಥೆಯನ್ನು ತಮ್ಮ ಕೈಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಕಠಿಣ ಕ್ರಮ ಜರುಗಿಸಲಾಗುವುದು ಎಂದು ಶಿಂಧೆ ಹೇಳಿದರು. ಅಲ್ಲದೆ, ಶೀಘ್ರ ಕ್ರಮ ಕೈಗೊಳ್ಳುವಂತೆ ಮುಂಬೈ ಪೊಲೀಸರಿಗೆ ನಿರ್ದೇಶನ ನೀಡಿರುವುದಾಗಿ ತಿಳಿಸಿದರು.

ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಭಾನುವಾರದಂದು ನಿಗದಿಯಾಗಿದ್ದ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದು, ಶೀಘ್ರದಲ್ಲೇ ಮುಂಬೈಗೆ ಮರಳುವ ನಿರೀಕ್ಷೆಯಿದೆ. ಇದೇ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಲೀಲಾವತಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಾಬಾ ಸಿದ್ದಿಕ್ ( Baba Siddique ) ಯಾರು?

1958, ಸೆಪ್ಟೆಂಬರ್ 13 ರಂದು ಬಿಹಾರದ ಪಟನಾದಲ್ಲಿ ಜನಿಸಿದ ಬಾಬಾ ಸಿದ್ದಿಕ್, ಮುಂಬೈನಲ್ಲಿ ಬೆಳೆದರು. 1977ರಲ್ಲಿ ಹದಿಹರೆಯದವರಾಗಿದ್ದಾಗ ಕಾಂಗ್ರೆಸ್ ಸೇರಿದರು. ಸ್ಥಳೀಯ ಮತದಾರರೊಂದಿಗೆ ಬಲವಾದ ಸಂಪರ್ಕದಿಂದಾಗಿ ಅವರು ಶೀಘ್ರವಾಗಿ ಉನ್ನತ ಸ್ಥಾನಕ್ಕೇರಿದರು. ಬಾಬಾ ಸಿದ್ದಿಕ್ 1980ರಲ್ಲಿ ಬಾಂದ್ರಾ ಯೂತ್ ಕಾಂಗ್ರೆಸ್‌ನ ಬಾಂದ್ರಾ ತಾಲೂಕಿನ ಪ್ರಧಾನ ಕಾರ್ಯದರ್ಶಿಯಾದರು ಮತ್ತು ಮುಂದಿನ ಎರಡು ವರ್ಷಗಳಲ್ಲಿ ಅದರ ಮುಖ್ಯಸ್ಥರಾಗಿ ಆಯ್ಕೆಯಾದರು. 1988ರಲ್ಲಿ ಮುಂಬೈ ಯುವ ಕಾಂಗ್ರೆಸ್ ಅಧ್ಯಕ್ಷರಾದರು ಮತ್ತು 1992ರಲ್ಲಿ ಮುನ್ಸಿಪಲ್ ಕೌನ್ಸಿಲರ್ ಆಗಿ ಆಯ್ಕೆಯಾದರು. 1999 ರಲ್ಲಿ ಸಿದ್ದಿಕ್, ಬಾಂದ್ರಾ ಪಶ್ಚಿಮ ಕ್ಷೇತ್ರದಿಂದ ವಿಧಾನಸಭೆಯ ಸದಸ್ಯರಾಗಿ (MLA) ಮೊದಲ ಚುನಾವಣೆಯಲ್ಲಿ ಗೆದ್ದರು. ತಳಮಟ್ಟದ ಬೆಂಬಲ ಮತ್ತು ವೈವಿಧ್ಯಮಯ ಸಮುದಾಯಗಳ ಮತದಾರರನ್ನು ಒಟ್ಟುಗೂಡಿಸುವ ಸಾಮರ್ಥ್ಯದ ಪರಿಣಾಮವಾಗಿ ಸಿದ್ದಿಕ್​ ಸುಲಭವಾಗಿ ಗೆಲುವು ಕಂಡರು. ಸತತ ಮೂರು ಅವಧಿಗೆ ಬಾಂದ್ರಾ ಪಶ್ಚಿಮವನ್ನು ಪ್ರತಿನಿಧಿಸಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net