ನವದೆಹಲಿ: ಆ ಮಗು ಹುಟ್ಟಿ ಕೆಲವೇ ಕ್ಷಣಗಳಾಗಿತ್ತು. ಹೊಕ್ಕುಳಬಳ್ಳಿಯ ಮೇಲಿನ ಗಾಯವು ಕೂಡ ಇನ್ನೂ ಮಾಸಿರಲಿಲ್ಲ. ಮಾನವೀಯತೆಯನ್ನೇ ಮರೆತ ಜನ್ಮ ಕೊಟ್ಟವರು ಆ ಮಗುವನ್ನು ಪೊದೆಯಲ್ಲಿ ಎಸೆದು ಹೋಗಿದ್ದರು. ಇದೇ ವೇಳೆ ಆ ಮಗುವನ್ನು ರಕ್ಷಣೆ ಮಾಡಿದ ಪೊಲೀಸ್ ಸಬ್ ಇನ್ಸ್ಪೆಕ್ಟರ್, ದತ್ತು ( Baby Adopts ) ಪಡೆಯುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಈ ಘಟನೆ ನಡೆದಿದೆ. ಪೊದೆಯಲ್ಲಿ ಎಸೆದು ಹೋಗಿದ್ದ ನವಜಾತ ಹೆಣ್ಣು ಮಗು ಅಳುವ ಶಬ್ಧವನ್ನು ಕೇಳಿ ಸಮೀಪದ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದರು. ಸಬ್ ಇನ್ಸ್ಪೆಕ್ಟರ್ ಪುಷ್ಪೇಂದ್ರ ಸಿಂಗ್ ನೇತೃತ್ವದಲ್ಲಿ ದುಧಿಯಾ ಪೀಪಲ್ ಪೊಲೀಸ್ ಔಟ್‌ಪೋಸ್ಟ್‌ನ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಮಗುವನ್ನು ರಕ್ಷಿಸಿದರು.
ಇದನ್ನೂ ಓದಿ: ಬಾಂಗ್ಲಾ ಬೌಲರ್ಗಳ ಬೆಂಡೆತ್ತಿದ ಬ್ಯಾಟ್ಸ್ಮನ್ಗಳು; Sanju Samson ಸಿಡಿಲಬ್ಬರಕ್ಕೆ ದಾಖಲೆಗಳು ಉಡೀಸ್
ವೈದ್ಯಕೀಯ ತಪಾಸಣೆ ಮತ್ತು ಆರೈಕೆಗಾಗಿ ಮಗುವನ್ನು ದಾಸ್ನಾ ಆಸ್ಪತ್ರೆಗೆ ತಕ್ಷಣ ಕರೆದೊಯ್ಯಲಾಯಿತು. ಇದಾದ ಬಳಿಕ ಮಗುವಿನ ಪಾಲಕರನ್ನು ಪತ್ತೆಹಚ್ಚಲು ಸಾಕಷ್ಟು ಪ್ರಯತ್ನಿಸಿದರೂ ಯಾರೂ ಕೂಡ ಮಗು ತಮ್ಮದೆಂದು ಹೇಳಿಕೊಂಡು ಮುಂದೆ ಬರಲಿಲ್ಲ.
ನವಜಾತ ಮಗುವಿನ ಪರಿಸ್ಥಿತಿ ನೋಡಿ ಎಸ್ಐ ಪುಷ್ಪೇಂದ್ರ ಸಿಂಗ್ ಮತ್ತು ಅವರ ಪತ್ನಿ ರಾಶಿ ಅವರ ಮನ ಕರಗಿತು. ಮಗುವನ್ನು ದತ್ತು ತೆಗೆದುಕೊಳ್ಳಲು ದಂಪತಿ ನಿರ್ಧರಿಸಿದರು. ಮಗುವನ್ನು ತಮ್ಮ ಕುಟುಂಬಕ್ಕೆ ಸ್ವಾಗತಿಸಲು ದಂಪತಿ ಕಾನೂನು ಪ್ರಕ್ರಿಯೆಯನ್ನು ಸಹ ಪ್ರಾರಂಭಿಸಿದರು.
2018ರಲ್ಲೇ ವಿವಾಹವಾಗಿ, ಮಕ್ಕಳಿಲ್ಲದೇ ನೊಂದಿದ್ದ ದಂಪತಿಗೆ ನವರಾತ್ರಿ ಹಬ್ಬದ ಸಮಯದಲ್ಲೇ ಮನೆಗೆ ಮಗುವಿನ ಆಗಮನವಾಗಿದೆ. ಇದನ್ನು ನೋಡಿ ದೈವಿಕ ಆಶೀರ್ವಾದವೆಂದು ದಂಪತಿ ಭಾವಿಸಿದ್ದಾರೆ. (ಏಜೆನ್ಸೀಸ್)
ಹಳೆ ದಾಖಲೆ ಕೆದಕಲು 30 ಶಾಸಕರಿಗೆ ಕೈ ಟಾಸ್ಕ್; ಮುಡಾ, ವಾಲ್ಮೀಕಿ ಆರೋಪಕ್ಕೆ ಪ್ರತ್ಯಾಸ್ತ್ರ