ಎಂಬಿಬಿಎಸ್​ ನಂತರದ ಡಿಪ್ಲೊಮಾ ಕೋರ್ಸ್ ಆರಂಭಿಸಿದ ಎನ್​ಬಿಇ; ನೀಟ್ ಪಿಜಿ ಮೂಲಕ ಪ್ರವೇಶ

Doctors 26 april 20
Published on

ನವದೆಹಲಿ: ಆರೋಗ್ಯ ಸಚಿವಾಲಯದ ಅಧೀನದಲ್ಲಿರುವ ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್‌ಬಿಇ) ಎಂಬಿಬಿಎಸ್ ನಂತರದ ಎರಡು ವರ್ಷದ ಡಿಪ್ಲೊಮಾ ಕೋರ್ಸ್‌ಗಳನ್ನು ಪ್ರಾರಂಭಿಸಿದೆ.

ಈ ಕೋರ್ಸ್‌ಗಳು ಅರಿವಳಿಕೆಶಾಸ್ತ್ರ, ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ, ಪೀಡಿಯಾಟ್ರಿಕ್ಸ್, ಕುಟುಂಬ ಆರೋಗ್ಯ, ನೇತ್ರವಿಜ್ಞಾನ, ರೇಡಿಯೊ ಡಯಾಗ್ನೋಸಿಸ್, ಇಎನ್‌ಟಿ ಮತ್ತು ಕ್ಷಯ, ಎದೆ ಕಾಯಿಲೆ ಸೇರಿದಂತೆ ಎಂಟು ವಿಶೇಷತೆಗಳನ್ನು ಕೇಂದ್ರೀಕರಿಸುತ್ತದೆ.

ನೀಟ್ ಪಿಜಿ ಪರೀಕ್ಷೆಗಳು ಮುಗಿಸಿದ ನಂತರ ಈ ಪಿಜಿ ಡಿಪ್ಲೊಮಾ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಈ ಡಿಪ್ಲೊಮಾ ಕೋರ್ಸ್​​ಗಳನ್ನು ಪದವಿ ಕೋರ್ಸ್​ಗಳಾಗಿ ಪರಿವರ್ತಿಸುವ ಮೂಲಕ ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) 2019ರಲ್ಲಿ ಈ ಡಿಪ್ಲೊಮಾ ಕೋರ್ಸ್​​ಗಳನ್ನು ನಿಲ್ಲಿಸಿತು. ಈಗ ದೇಶದಲ್ಲಿ ವೈದ್ಯರ ಕೊರತೆ ನಿವಾರಿಸಲು ಎನ್​ಬಿಇ ಕೋರ್ಸ್​​ಗಳನ್ನು ಆರಂಭಿಸಿದೆ.

ಎಂಸಿಐ ಡಿಪ್ಲೊಮಾ ಕೋರ್ಸ್‌ಗಳನ್ನು ಸ್ಥಗಿತಗೊಳಿಸುವುದರಿಂದ ಉಂಟಾಗುವ ನಷ್ಟವನ್ನು ಭರಿಸಲು, ತನ್ನ ಆಶ್ರಯದಲ್ಲಿ ಡಿಪ್ಲೊಮಾ ಕೋರ್ಸ್‌ಗಳನ್ನು ಪ್ರಾರಂಭಿಸುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಆರೋಗ್ಯ ಸಚಿವಾಲಯ ರಾಷ್ಟ್ರೀಯ ಪರೀಕ್ಷಾ ಮಂಡಳಿಯನ್ನು ಕೇಳಿದೆ ಎಂದು ಎನ್‌ಬಿಇ ಅಧಿಕಾರಿ ಮಾಹಿತಿ ನೀಡಿದರು.

ಎಂಸಿಐ ಸೂಚಿತ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ನಿಯಮಾವಳಿಗಳ ಅಡಿ ನೀಟ್ ಪಿಜಿ ಪರೀಕ್ಷೆ ಮೂಲಕ ಈ ಡಿಪ್ಲೊಮಾ ಕೋರ್ಸ್‌ಗಳಿಗೆ ಪ್ರವೇಶ ಪ್ರಕ್ರಿಯೆ ನಡೆಸಲಾಗುವುದು, ರಾಜ್ಯಗಳ ಅಗತ್ಯಕ್ಕೆ ಅನುಗುಣವಾಗಿ, ಪ್ರತಿ ರಾಜ್ಯದ ಜಿಲ್ಲಾ ಆಸ್ಪತ್ರೆಗಳಲ್ಲಿ ಶೇ .50 ರಷ್ಟು ಎನ್‌ಬಿಇ ಡಿಪ್ಲೊಮಾ ಸೀಟುಗಳನ್ನು ಅಲ್ಲಿನ ಸೇವೆಯಲ್ಲಿರುವ ಅಭ್ಯರ್ಥಿಗಳಿಗೆ ಮೀಸಲಿಡಲಾಗುತ್ತದೆ. ಆರೋಗ್ಯ ಸೇವೆ ಒದಗಿಸಲು ಶ್ರೇಣಿ -1 ನಗರಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಇದನ್ನು ಮಾಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net