

ಆಂಧ್ರಪ್ರದೇಶ: ಬಹುಭಾಷಾ ನಟಿ, ಲೇಡಿ ಸೂಪರ್ಸ್ಟಾರ್ ನಯನತಾರ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ. ಪತಿ ವಿಘ್ನೇಶ್ ಶಿವನ್ ಜತೆ ಸಂಸಾರ ಸಾಗಿಸಲು ನಟಿಗೆ ಇಷ್ಟವಿಲ್ಲ, ಶೀಘ್ರವೇ ಅವರು ವಿಚ್ಛೇದನ ನೀಡಲಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಈ ಕುರಿತಂತೆ ನಟಿ ಇಲ್ಲಿಯವರೆಗೂ ಯಾವುದೇ ರೀತಿಯ ಪ್ರತಿಕ್ರಿಯೂ ನೀಡಿರಲಿಲ್ಲ. ಆದ್ರೆ, ಇದೀಗ ಹೊಸ ಫೋಟೋವೊಂದನ್ನು ಪೋಸ್ಟ್ ಮಾಡುವ ಮೂಲಕ ವದಂತಿಗಳಿಗೆ ಸಂಪೂರ್ಣ ಬ್ರೇಕ್ ಹಾಕಿದ್ದಾರೆ.
ಪತಿ ವಿಘ್ನೇಶ್ಗೆ ನಯನತಾರ ವಿಚ್ಛೇದನ ಕೊಡುತ್ತಾರೆ ಎಂದೆಲ್ಲಾ ಹರಿದಾಡುತ್ತಿದ್ದ ವ್ಯಾಪಕ ಟ್ರೋಲ್ ಮತ್ತು ಮೀಮ್ಗಳನ್ನು ಗಮನಿಸಿದ ನಟಿ, ಇದಕ್ಕೆ ಬರಹ ಅಥವಾ ವಿಡಿಯೋ ಮೂಲಕ ಉತ್ತರಿಸದೆ, ತಮ್ಮ ಪತಿ ವಿಘ್ನೇಶ್ ಮತ್ತು ಮಕ್ಕಳೊಂದಿಗೆ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮುಖೇನ ವಿಚ್ಛೇದನದ ವದಂತಿಗಳನ್ನು ತಳ್ಳಿಹಾಕಿದ್ದಾರೆ. ಈ ಮೂಲಕ ಟ್ರೋಲಿಗರಿಗೆ ತಿರುಗೇಟು ನೀಡಿದ್ದಾರೆ.
ಈ ಹಿಂದೆ ನಯನತಾರಾ, ವಿಘ್ನೇಶ್ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ ಎಂಬ ಊಹಾಪೋಹಗಳು ಹುಟ್ಟಿಕೊಂಡವು, ಇದು ಅಭಿಮಾನಿಗಳ ತೀವ್ರ ಕಳವಳಕ್ಕೆ ಕಾರಣವಾಯಿತು. ಈ ಕುರಿತು ಸ್ವತಃ ನಟಿ ತಮ್ಮ ಅಭಿಮಾನಿಗಳು ಮತ್ತು ಫಾಲೋವರ್ಸ್ಗಳಿಗೆ ನಾನು ಪತಿಯನ್ನು ಅನ್‌ಫಾಲೋ ಮಾಡಿಲ್ಲ ಎಂಬುದನ್ನು ಖಚಿತಪಡಿಸಿದರು. ಇದೀಗ ಹಂಚಿಕೊಂಡಿರುವ ಫೋಟೋದಲ್ಲಿ ನಯನತಾರಾ ಪತಿ ವಿಘ್ನೇಶ್ ಮತ್ತು ಅವರ ಅವಳಿ ಮಕ್ಕಳೊಂದಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿರುವುದು ಕಂಡುಬಂದಿದೆ,(ಏಜೆನ್ಸೀಸ್).