ನಯಾಬ್ ಸೈನಿ 2ನೇ ಬಾರಿ ಸಿಎಂ; ಪ್ರಧಾನಿ ಸಮ್ಮುಖ ಪ್ರಮಾಣವಚನ ಸ್ವೀಕಾರ

Nayab Singh
Published on

ಪಂಚಕುಲ: ಬಿಜೆಪಿ ನೇತೃತ್ವದ ಹರಿಯಾಣ ನೂತನ ಸರ್ಕಾರದ ಮುಖ್ಯಮಂತ್ರಿ ಆಗಿ ನಯಾಬ್ ಸಿಂಗ್ ಸೈನಿ ಗುರುವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಮೂಲಕ ಹರಿಯಾಣದಲ್ಲಿ ಮೂರನೇ ಸಲ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರದಲ್ಲಿ ಸೈನಿ ಎರಡನೇ ಸಲ ಮತ್ತೆ ಸಿಎಂ ಗಾದಿಗೇರಿದಂತಾಗಿದೆ.

ಹರಿಯಾಣದ ಪಂಚಕುಲದ ಶಾಲಿಮಾರ್ ಮೈದಾನದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆದಿದ್ದು, ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ ಪ್ರಮಾಣವಚನ ಬೋಧಿಸಿದರು. ಸೈನಿ ಅವರ ಜತೆ ಶಾಸಕರಾದ ಅನಿಲ್ ವಿಜ್, ಕೃಷ್ಣನ್ ಲಾಲ್ ಪನ್ವಾರ್, ರಾವ್ ನರ್ಬೀರ್ ಸಿಂಗ್, ಮಹಿಪಾಲ್ ಧಂಡ, ವಿಪುಲ್ ಗೋಯೆಲ್, ಅರವಿಂದ್ ಕುಮಾರ್ ಶರ್ವ, ಶ್ಯಾಮ್ ಸಿಂಗ್ ರಾಣಾ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ವಾಲ್ಮೀಕಿ ಮಹರ್ಷಿ ಜಯಂತಿ ಹಿನ್ನೆಲೆಯಲ್ಲಿ ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಸೈನಿ ಪಂಚಕುಲದಲ್ಲಿನ ವಾಲ್ಮೀಕಿ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಜತೆಗೆ ಮಾನಸಾದೇವಿ ದೇವಸ್ಥಾನಕ್ಕೂ ಭೇಟಿ ನೀಡಿದರು. ‘ಸಮಾಜದಲ್ಲಿನ ದುಷ್ಟಶಕ್ತಿಗಳನ್ನು ಕೊನೆಗೊಳಿಸಿ ಸಮಾಜಕ್ಕೆ ಸಂದೇಶ ನೀಡಿದ್ದ ವಾಲ್ಮೀಕಿ ಜಯಂತಿ ದಿನದಂದೇ ಪ್ರಮಾಣವಚನ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ’ ಎಂದು ಸೈನಿ ಸುದ್ದಿಗಾರರಿಗೆ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಜೆ.ಪಿ.ನಡ್ಡಾ, ರಾಜನಾಥ್ ಸಿಂಗ್, ಅಮಿತ್ ಷಾ, ಬಿಜೆಪಿಯ ಇತರ ಹಿರಿಯ ನಾಯಕರು ಮತ್ತಿತರರು ಸೇರಿ ಸುಮಾರು 50 ಸಾವಿರ ಮಂದಿ ಈ ಪ್ರಮಾಣವಚನ ಸಮಾರಂಭದಲ್ಲಿ ಭಾಗಿಯಾದರು. ಪಶ್ಚಿಮಬಂಗಾಳದ ರಾಜ್ಯಪಾಲ ಸಿ.ವಿ.ಆನಂದಬೋಸ್ ಮಾತ್ರವಲ್ಲದೆ, ಬಿಜೆಪಿ ಅಧಿಕಾರಿದಲ್ಲಿರುವ ಇತರ ರಾಜ್ಯಗಳ ಮುಖ್ಯಮಂತ್ರಿಗಳೂ ಆಗಮಿಸಿದ್ದರು. ಹರಿಯಾಣದಲ್ಲಿ ಒಟ್ಟು 90 ವಿಧಾನಸಭಾ ಕ್ಷೇತ್ರಗಳಿದ್ದು, ಬಿಜೆಪಿ 48 ಹಾಗೂ ಕಾಂಗ್ರೆಸ್ 37 ಸ್ಥಾನಗಳಲ್ಲಿ ಜಯ ಗಳಿಸಿದ್ದವು.

NDA CM Meeting

ಪ್ರಧಾನಿ ನೇತೃತ್ವದಲ್ಲಿ ಎನ್​ಡಿಎ ಸಿಎಂಗಳ ಸಭೆ: ಮಹಾರಾಷ್ಟ್ರ ಹಾಗೂ ಜಾರ್ಖಂಡ್ ವಿಧಾನಸಭೆ ಚುನಾವಣೆಗಳ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್​ಡಿಎ ಮುಖ್ಯಮಂತ್ರಿಗಳ ಮಂಡಳಿಯ ಸಭೆ ಗುರುವಾರ ಚಂಡೀಗಢದಲ್ಲಿ ಆರಂಭಗೊಂಡಿದೆ. ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟದ ಸರ್ಕಾರದಲ್ಲಿನ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಅಭಿವೃದ್ಧಿ ವಿಷಯಗಳು, ಸಂವಿಧಾನದ ಅಮೃತ ಮಹೋತ್ಸವ, ತುರ್ತು ಪರಿಸ್ಥಿತಿಗೆ ಸಂಬಂಧಿತ ‘ಪ್ರಜಾಪ್ರಭುತ್ವದ ಕೊಲೆಯತ್ನ’ದ 50ನೇ ವಾರ್ಷಿಕೋತ್ಸವ ಇತ್ಯಾದಿ ಹಿನ್ನೆಲೆಯಲ್ಲಿ ಚರ್ಚೆಗಳು ನಡೆಯುತ್ತಿವೆ. ಪ್ರಧಾನಿ ಮೋದಿ ಮಾತ್ರವಲ್ಲದೆ, ಸಚಿವರಾದ ಅಮಿತ್ ಷಾ, ಜೆ.ಪಿ.ನಡ್ಡಾ, ರಾಜನಾಥ್ ಸಿಂಗ್ ಹಾಗೂ ಬಿಜೆಪಿಯ 13 ಸಿಎಂ, 16 ಡಿಸಿಎಂ ಮಾತ್ರವಲ್ಲದೆ ಎನ್​ಡಿಎನ ಇತರ ಪಕ್ಷಗಳ ಸಿಎಂ-ಡಿಸಿಎಂಗಳು ಈ ಸಭೆಗೆ ಹಾಜರಾಗಿದ್ದಾರೆ.

ಛತ್ರಪತಿ ಶಿವಾಜಿ ಪರಂಪರೆ ದುರ್ಬಲಗೊಳಿಸಿದ ಮಹಾಯುತಿ: ಛತ್ರಪತಿ ಶಿವಾಜಿ ಮಹಾರಾಜ್ ಅವರ ಪರಂಪರೆಯನ್ನು ಮಹಾಯುತಿ ಸರ್ಕಾರ ದುರ್ಬಲಗೊಳಿಸಿದೆ ಎಂದು ಗುರುವಾರ ಟೀಕಿಸಿರುವ ಕಾಂಗ್ರೆಸ್, ಮಹಾರಾಷ್ಟ್ರದ ಭವ್ಯ ಇತಿಹಾಸ ಹಾಗೂ ಸಂಸ್ಕೃತಿಯನ್ನು ನಿರ್ಲಕ್ಷಿಸಿದವರು ಮುಂದಿನ ಚುನಾವಣೆಯಲ್ಲೇ ಪರಿಣಾಮ ಎದುರಿಸಲಿದ್ದಾರೆ ಎಂದು ಹೇಳಿದೆ.ಸಿಂಧುದುರ್ಗದ ರಾಜ್​ಕೋಟ್ ಕೋಟೆಯಲ್ಲಿ 35 ಅಡಿ ಎತ್ತರದ ಶಿವಾಜಿ ಪ್ರತಿಮೆಯನ್ನು ಕಳಪೆಯಾಗಿ ನಿರ್ವಿುಸಿದ್ದನ್ನು ಉಲ್ಲೇಖಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ಮಹಾರಾಷ್ಟ್ರದ ಮಹಾಯುತಿ ಸರ್ಕಾರ ಹಾಗೂ ದೆಹಲಿಯಲ್ಲಿನ ಅದರ ಪೋಷಕರು ಭಾರತದ ಶ್ರೇಷ್ಠಪುತ್ರ ಶಿವಾಜಿಯ ಪರಂಪರೆ ದುರ್ಬಲಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಮಹಾರಾಷ್ಟ್ರದ 200 ಕ್ಷೇತ್ರಗಳ ಬಗ್ಗೆ ಎಂವಿಎನಲ್ಲಿ ಒಮ್ಮತ: ಮಹಾರಾಷ್ಟ್ರದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಒಟ್ಟು 288 ವಿಧಾನಸಭಾ ಕ್ಷೇತ್ರಗಳ ಪೈಕಿ 200ಕ್ಕೆ ಸಂಬಂಧಿಸಿದಂತೆ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಯ ಮೂರು ಪಕ್ಷಗಳಲ್ಲಿ ಒಮ್ಮತ ಮೂಡಿದೆ ಎಂದು ಎನ್​ಸಿಪಿ (ಎಸ್​ಪಿ) ಮುಖ್ಯಸ್ಥ ಶರದ್ ಪವಾರ್ ಗುರುವಾರ ತಿಳಿಸಿದ್ದಾರೆ. ಮಹಾರಾಷ್ಟ್ರದ ಸತಾರ ಜಿಲ್ಲೆಯ ಕರಾಡ್​ನಲ್ಲಿ ಸುದ್ದಿಗಾರರಿಗೆ ಅವರು ಈ ವಿಷಯ ತಿಳಿಸಿದರು. ಸೀಟು ಹಂಚಿಕೆ ಮಾತುಕತೆಯಲ್ಲಿ ನಾನು ನೇರವಾಗಿ ಪಾಲ್ಗೊಂಡಿಲ್ಲ. ನಮ್ಮ ಪಕ್ಷದ ರಾಜ್ಯ ಮುಖ್ಯಸ್ಥ ಜಯಂತ್ ಪಾಟೀಲ್ ಆ ಕುರಿತ ಚರ್ಚೆಯಲ್ಲಿದ್ದಾರೆ. ಅವರು ನೀಡಿದ ಮಾಹಿತಿ ಪ್ರಕಾರ 288 ಕ್ಷೇತ್ರಗಳ ಪೈಕಿ ಸುಮಾರು 200ರಲ್ಲಿ ಮೈತ್ರಿಪಕ್ಷಗಳ ಜತೆ ಒಮ್ಮತ ಮೂಡಿದೆ ಎಂದು ಶರದ್ ಪವಾರ್ ತಿಳಿಸಿದ್ದಾರೆ. ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್​ಗೆ ಸೋಲುಂಟಾಗಿರುವುದು ಮಹಾರಾಷ್ಟ್ರ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದೂ ಅವರು ಹೇಳಿದರು. ಕಾಂಗ್ರೆಸ್, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ), ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಶರದ್​ಚಂದ್ರ ಪವಾರ್) ಪಕ್ಷಗಳು ಮಹಾ ವಿಕಾಸ್ ಅಘಡಿ ಮೈತ್ರಿಕೂಟದಲ್ಲಿವೆ. ಮಹಾರಾಷ್ಟ್ರದಲ್ಲಿ ನ.20ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ನ. 23ರಂದು ಫಲಿತಾಂಶ ಪ್ರಕಟವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net