

ಪಂಕಜ ಕೆ.ಎಂ.
ಬೆಂಗಳೂರು: ದುರ್ಬಲ ಸ್ಥಿತಿಯಲ್ಲಿ ರಕ್ಷಿಸಲಾದ ಮಕ್ಕಳು, ಮಹಿಳೆಯರು, ಅಂಗವಿಕಲರ ಸಂಕೀರ್ಣ ಆರೈಕೆ ಹಾಗೂ ಆರೋಗ್ಯಪೂರ್ಣ ಜೀವನಕ್ಕಾಗಿ ಬೆಂಗಳೂರಿನಲ್ಲಿ ಸಮನ್ವಯ ಸುಸ್ಥಿರ ತೋಟಗಾರಿಕೆ ಕೇಂದ್ರದ ಮೂಲಕ ‘ಪ್ರಕೃತಿ ಚಿಕಿತ್ಸೆ’ ಆರಂಭಿಸಲಾಗಿದೆ.
ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ರಾಬರ್ಟ್ ಬಾಷ್ ಕಂಪನಿ ಮತ್ತು ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ ಸಂಸ್ಥೆ (ಎಪಿಡಿ) ಸಹಯೋಗದಲ್ಲಿ ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಬಳಿಯ ಸುಧಾರಣಾ ಸಂಸ್ಥೆಗಳ ಸಂಕೀರ್ಣದಲ್ಲಿ 2023ರ ನವೆಂಬರ್‌ನಲ್ಲಿ ‘ಸಮನ್ವಯ ಸುಸ್ಥಿರ ತೋಟಗಾರಿಕೆ’ ಕೇಂದ್ರವನ್ನು ಆರಂಭಿಸಿತ್ತು. ಅದರಡಿ ತೋಟಗಾರಿಕೆ ಚಟುವಟಿಕೆಗಳ ಮೂಲಕ ಪ್ರಕೃತಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕೇಂದ್ರದಲ್ಲಿ ಅಂಗವಿಕಲರೂ ಸೇರಿ 18ರಿಂದ 60 ವರ್ಷ ವಯೋಮಾನದ ವಿವಿಧ ಸಮಸ್ಯೆಗಳಿಂದ ರಕ್ಷಿಸಲಾದ 515 ಮಂದಿ ಇದ್ದು, ಇವರಲ್ಲಿ ಇದುವರೆಗೂ 125 ಮಂದಿಗೆ ವಿವಿಧ ತೋಟಗಾರಿಕೆ ಚಟುವಟಿಕೆಗಳ ಮೂಲಕ ಪ್ರಕೃತಿ ಚಿಕಿತ್ಸೆ ನೀಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಂಗಳೂರು ನಗರ ಜಿಲ್ಲೆಯ ಉಪನಿರ್ದೇಶಕ ಎಸ್. ಸಿದ್ದರಾಮಣ್ಣ ತಿಳಿಸಿದ್ದಾರೆ.
ಮುಕ್ಕಾಲು ಎಕರೆ ಜಮೀನು: ಎಪಿಡಿ ಸಂಸ್ಥೆ ಅನುಷ್ಠಾನಗೊಳಿಸಿರುವ ಈ ಯೋಜನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮುಕ್ಕಾಲು ಎಕರೆ ಜಮೀನು ನೀಡಿ ಉಸ್ತುವಾರಿ ವಹಿಸಿಕೊಂಡಿದ್ದು, ರಾಬರ್ಟ್ ಬಾಷ್ ಕಂಪನಿ ಆರ್ಥಿಕ ನೆರವು ನೀಡಿದೆ. ಪ್ರಾಯೋಗಿಕವಾಗಿ ಆರಂಭಿಸಲಾಗಿರುವ ಈ ಯೋಜನೆಯ ಲಿತಾಂಶ ಆಧರಿಸಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರಕೃತಿ ಚಿಕಿತ್ಸೆ ಸೇವೆ ವಿಸ್ತರಿಸಲು ಇಲಾಖೆ ನಿರ್ಧರಿಸಿದೆ.
70 ಬಗೆಯ ಸಸ್ಯಗಳಿರುವ ಕೈದೋಟ: ಹಲವು ರೀತಿಯ ಅಸ್ವಸ್ಥತೆಯಿಂದ ಬಳಲುತ್ತಿರುವವರಿಗೆ ಪ್ರಕೃತಿ ಚಿಕಿತ್ಸೆ ಪರಿಣಾಮಕಾರಿಯಾಗಲಿದೆ. ತೋಟಗಾರಿಕೆ ಚಟುವಟಿಕೆಗಳಲ್ಲಿ ಮಣ್ಣು, ನೀರು, ಗಾಳಿ ಸೇರಿ ಪ್ರಕೃತಿಯೊಂದಿಗೆ ಬೆರೆಯುವುದರಿಂದ ಮಾನಸಿಕ ಅಸ್ವಸ್ಥತೆ, ಒತ್ತಡ, ಖಿನ್ನತೆಯಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ. ಇಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಸಲು ಒತ್ತು ನೀಡಲಾಗಿದ್ದು, ಸಸ್ಯಗಳ ಸ್ಪರ್ಶ, ಸುವಾಸನೆ ಆಘ್ರಾಣಿಸುವುದರಿಂದ ಮಾನಸಿಕ ಆರೋಗ್ಯದಲ್ಲಿ ಸುಧಾರಣೆಯಾಗುವ ಸಾಧ್ಯತೆಗಳಿವೆ. ಈಗಾಗಲೇ ಈ 125 ಮಂದಿಯ ಶ್ರಮದಿಂದ ಕೇಂದ್ರದಲ್ಲಿ ಹೂವಿನ ಗಿಡಗಳು, ಔಷಧೀಯ ಸಸ್ಯಗಳು, ತರಕಾರಿ, ಸೊಪ್ಪು ಸೇರಿ 70 ಬಗೆಯ ಸಸ್ಯಗಳಿಂದ ಕೂಡಿರುವ ಸುಂದರ ಕೈದೋಟ ನಿರ್ಮಾಣವಾಗಿದ್ದು, ಅವುಗಳ ಮಾರಾಟದಿಂದ ಸಾವಿರಾರು ರೂ. ಆದಾಯ ಪಡೆಯಲಾಗಿದೆ.
ಕೋಟ್:
ಸುಸ್ಥಿರ ತೋಟಗಾರಿಕಾ ಚಿಕಿತ್ಸೆ ಹಾಗೂ ತರಬೇತಿ ಕೇಂದ್ರವು ನೀಡುತ್ತಿರುವ ಪ್ರಕೃತಿ ಚಿಕಿತ್ಸೆ ಪರಿಣಾಮಕಾರಿಯಾಗಿದ್ದು, ಮಾನಸಿಕ ಅಸ್ವಸ್ಥರ ಆರೋಗ್ಯ ಸುಧಾರಿಸುವ ಜತೆಗೆ ಸ್ವಯಂಉದ್ಯೋಗಕ್ಕೆ ಉತ್ತೇಜನ ಸಿಗಲಿದೆ.
-ಡಾ. ಎಸ್. ಸಿದ್ದರಾಮಣ್ಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (ಬೆಂ. ನಗರ ಜಿಲ್ಲೆ) ಉಪ ನಿರ್ದೇಶಕ