

ಬೆಂಗಳೂರು: ದೇಶದ ಏಕಮಾತ್ರ ಸಂಸ್ಕೃತ ಪತ್ರಿಕೆ ಎನ್ನಲಾದ 'ಸುಧರ್ಮಾ' ಪತ್ರಿಕೆಯ ಸಂಪಾದಕ ಕೆ.ವಿ. ಸಂಪತ್ಕುಮಾರ್ (64) ಅವರು ಇಂದು ನಿಧನರಾದರು. ಮೈಸೂರಿನಲ್ಲಿರುವ ಕಚೇರಿಯಲ್ಲಿ ಇಂದು ಇವರು ಬರೆಯುತ್ತಿರುವಾಗಲೇ ಹೃದಯಾಘಾತಕ್ಕೀಡಾಗಿ ಕೊನೆಯುಸಿರೆಳೆದರು.
ಸುಧರ್ಮಾ ಪತ್ರಿಕೆ ಮೂಲಕ ದೇಶ-ವಿದೇಶಗಳಲ್ಲಿ ಸಂಸ್ಕೃತವನ್ನು ಪಸರಿಸಿ, ಜನಪ್ರಿಯಗೊಳಿಸುವಲ್ಲಿ ಇವರು ಶ್ರಮಿಸಿದ್ದರು. ಇವರು ತಮ್ಮ ಪತ್ನಿ ಕೆ.ಎಸ್. ಜಯಲಕ್ಷ್ಮೀ ಅವರ ಸಹಕಾರದಿಂದ ಪತ್ರಿಕೆಯನ್ನು ರೂಪಿಸಿ ಹೊರತರುತ್ತಿದ್ದರು. ಸಂಪತ್ಕುಮಾರ್ ಅವರ ತಂದೆ ಪಂಡಿತ್ ವರದರಾಜ ಅಯ್ಯಂಗಾರ್ ಅವರು 1970ರಲ್ಲಿ ಸುಧರ್ಮಾ ಸಂಸ್ಕೃತ ಪತ್ರಿಕೆಯನ್ನು ಆರಂಭಿಸಿದ್ದರು. ಅವರು ಆಕಾಶವಾಣಿಯಲ್ಲಿ ಸಂಸ್ಕೃತ ವಾರ್ತೆಯನ್ನೂ ಓದುತ್ತಿದ್ದರು.
ಏಕೈಕ ಸಂಸ್ಕೃತ ಪತ್ರಿಕೆಯ ಮೂಲಕ ಸಂಸ್ಕೃತಕ್ಕೆ ಪೂರಕವಾದ ಹಲವಾರು ಕೆಲಸಗಳನ್ನು ಮಾಡುತ್ತಿರುವ ಜತೆಗೆ ಐದು ದಶಕಗಳ ಹಿಂದಿನ ಪತ್ರಿಕೆಯನ್ನು ಅಚ್ಚುಕಟ್ಟಾಗಿ ರೂಪಿಸಿಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ಸಂಪತ್ಕುಮಾರ್ ಹಾಗೂ ಜಯಲಕ್ಷ್ಮೀ ದಂಪತಿಯನ್ನು ಕೇಂದ್ರ ಸರ್ಕಾರ 2 ವರ್ಷಗಳ ಹಿಂದೆ ಪದ್ಮಶ್ರೀ ಪ್ರಶಸ್ತಿಯನ್ನು ಪ್ರಕಟಿಸಿತ್ತು. ಆದರೆ ಪ್ರಶಸ್ತಿ ಸ್ವೀಕಾರಕ್ಕೂ ಮುನ್ನವೇ ಸಂಪತ್ಕುಮಾರ್ ಇಹಲೋಕ ತ್ಯಜಿಸಿದ್ದಾರೆ.