ಚೆನ್ನೈ: ತಮಿಳುನಾಡಿನ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರೊಂದಿಗೆ ಕೈಜೋಡಿಸಿ ಹೆಜ್ಜೆಹಾಕಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ತಿಳಿಸಿದ್ದಾರೆ. ಚೆನ್ನೈನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಮೋ, ರಾಜ್ಯಗಳ ನಿರೀಕ್ಷೆ ಮತ್ತು ಆಕಾಂಕ್ಷೆಗಳನ್ನು ಮುಖ್ಯಮಂತ್ರಿಯಾಗಿದ್ದಾಗ ತಾವು ಹತ್ತಿರದಿಂದ ಅರಿತಿರುವುದಾಗಿ ತಿಳಿಸುತ್ತಾ, ಪ್ರತಿಯೊಂದು ರಾಜ್ಯವೂ ತನ್ನದೇ ಆದ ಪ್ರಗತಿಯ ಗುರಿಗಳನ್ನು ತಲುಪಲು ಕೇಂದ್ರದಿಂದ ಸಂಪೂರ್ಣ ನೆರವು ನೀಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ದೇಶದ ಉತ್ಪಾದನಾ ವಲಯದ ಬೆಳವಣಿಗೆಗೆ ತಮಿಳುನಾಡು ನೀಡುತ್ತಿರುವ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಕೊಡುಗೆಯನ್ನು ಕೊಂಡಾಡಿರುವ ಪ್ರಧಾನಿ ಮೋದಿ, 2014ರಿಂದ ನಮ್ಮ ಎಲೆಕ್ಟ್ರಾನಿಕ್ಸ್ ರಫ್ತು 11 ಪಟ್ಟು ಹೆಚ್ಚಾಗಿದೆ ಮತ್ತು ಇಂದು ವಿಶ್ವದ ಎರಡನೇ ಅತಿ ದೊಡ್ಡ ಮೊಬೈಲ್ ತಯಾರಕರಾಗಿದ್ದೇವೆ, ರಕ್ಷಣಾ ರಫ್ತು 50 ಪಟ್ಟು ಹೆಚ್ಚಾಗಿದೆ. ನಮ್ಮ ಎಂಜಿನಿಯರಿಂಗ್ ರಫ್ತು ಕೂಡ ಹೊಸ ದಾಖಲೆ ಸೃಷ್ಟಿಸಿದ್ದು, ಇದರಿಂದಾಗಿ ದೇಶದ ಯುವಕರಿಗೆ ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ ಎಂದಿದ್ದಾರೆ.
ರಾಜ್ಯದ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾತನಾಡಿದ ಪ್ರಧಾನಿ, ಸುಮಾರು 17,000 ಕೋಟಿ ರೂ. ಹೂಡಿಕೆಯೊಂದಿಗೆ ತೂತ್ತುಕುಡಿಯಲ್ಲಿರುವ ಚಿದಂಬರನಾರ್ ಬಂದರನ್ನು ವಿಶ್ವದರ್ಜೆಯ ಮೆಗಾ ಕಂಟೈನರ್ ಮತ್ತು ಹಸಿರು ಇಂಧನ ಹಬ್ ಆಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು. ಇದು ಪೂರ್ಣಗೊಂಡ ನಂತರ ವಿಶ್ವದ ಅತಿ ದೊಡ್ಡ ಕಂಟೈನರ್ ನೌಕೆಗಳಿಗೆ ಅವಕಾಶ ಕಲ್ಪಿಸಲಿದ್ದು, ತಮಿಳುನಾಡನ್ನು ಕೈಗಾರಿಕೆ ಮತ್ತು ಸಾರಿಗೆಯ ಜಾಗತಿಕ ಕೇಂದ್ರವಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ ಎಂದರು.
ಪ್ರಧಾನಿ ಮೋದಿ ಭಾನುವಾರ ಚೆನ್ನೈ ಮೆಟ್ರೋ ರೈಲು ಯೋಜನೆಯ ಹಂತ-2 ರ ಪೂನಮಲ್ಲೆ-ವಡಪಳನಿ ಮಾರ್ಗವನ್ನು ಉದ್ಘಾಟಿಸಿದರು. ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರೊಂದಿಗೆ ಟಿಕೆಟ್ ಪಡೆದು ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದರು. ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಹಂತ-2 ರ ಕಾರಿಡಾರ್ ನಾಲ್ಕರಡಿಯಲ್ಲಿ ಬರುವ ಈ ಪೂನಮಲ್ಲೆ-ವಡಪಳನಿ ಮಾರ್ಗವು ಸುಮಾರು 15 ಕಿ.ಮೀ ದೂರವಿರುವ 11 ಎಲಿವೇಟೆಡ್ ಮೆಟ್ರೋ ನಿಲ್ದಾಣಗಳನ್ನು ಹೊಂದಿದೆ.
ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್, ಚೆನ್ನೈ ಮೆಟ್ರೋ ರೈಲು ಹಂತ-3 ಕ್ಕೆ ಶೀಘ್ರ ಅನುಮೋದನೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದರು. ಇದು ವಿಮಾನ ನಿಲ್ದಾಣ-ಕಿಲಂಬಾಕ್ಕಮ್ ಮತ್ತು ಪೂನಮಲ್ಲೆ-ಸುಂಗುವರ್ಚತ್ಸರಂ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲಿದ್ದು, ಈ ವರ್ಷದ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ ಹೈ-ಸ್ಪೀಡ್ ರೈಲು ಕಾರಿಡಾರ್‌ಗಳನ್ನು ಉಲ್ಲೇಖಿಸಿದ ವಿಜಯ್, ಚೆನ್ನೈನಿಂದ ಕನ್ಯಾಕುಮಾರಿ ಮತ್ತು ಚೆನ್ನೈನಿಂದ ಕೊಯಮತ್ತೂರುವರೆಗೆ ಹೊಸ ಕಾರಿಡಾರ್‌ಗಳನ್ನು ವಿಸ್ತರಿಸುವಂತೆ ವಿನಂತಿಸಿದ್ದಾರೆ(ಏಜೆನ್ಸೀಸ್).