

flydubai Attack: ಒಮಾನ್ ಮೂಲದ ಕೋ-ಪೈಲಟ್‌ನಿಂದ ಫ್ಲೈ ದುಬೈ ವಿಮಾನದಲ್ಲಿದ್ದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಾಚ್ಚಾರ್ ಮೇಲೆ ನಡೆದ ದಾಳಿಯ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ಕೇಂದ್ರ ಸರ್ಕಾರವು ಸೂಚನೆ ನೀಡಿದೆ
ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ, ಭಾರತೀಯ ಪ್ರಜೆ ಕ್ಯಾಪ್ಟನ್ ಸ್ಮಿತ್ ಮಾಚ್ಚಾರ್ ಮತ್ತು ಒಮಾನ್ ಮೂಲದ ಸಹ-ಪೈಲಟ್ ಇದ್ದ ಫ್ಲೈ ದುಬೈ ವಿಮಾನ ಸಂಖ್ಯೆ 1073, ಸೆಪ್ಟೆಂಬರ್ 30 ರಂದು ಬೆಳಿಗ್ಗೆ 7:05 ಕ್ಕೆ (ಗಲ್ಫ್ ಪ್ರಮಾಣಿತ ಸಮಯ) 174 ಪ್ರಯಾಣಿಕರು ಮತ್ತು ಆರು ಸಿಬ್ಬಂದಿಯೊಂದಿಗೆ ದುಬೈನಿಂದ ಹೊರಟಿತ್ತು. ವಿಮಾನವು ಜೋರ್ಡಾನ್ ಮತ್ತು ಸೌದಿ ಅರೇಬಿಯಾ ಗಡಿಯ ಬಳಿ ಹಾರುತ್ತಿದ್ದಾಗ, ಹಠಾತ್ತನೆ ಕೆಳಗೆ ಧುಮುಕಿ ಸೌದಿ ವಾಯುಪ್ರದೇಶದ ಕಡೆಗೆ ವಾಪಸ್ ತಿರುಗಿತ್ತು.
ವಿಮಾನವನ್ನು ಅಪಹರಿಸುವ ಅಥವಾ ಪತನಗೊಳಿಸುವ ಉದ್ದೇಶದಿಂದಲೇ ಕ್ಯಾಪ್ಟನ್ ಮಾಚ್ಚಾರ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪ್ರಯಾಣಿಕರು ತಿಳಿಸಿರುವುದಾಗಿ ಸರ್ಕಾರ ಹೇಳಿದೆ. ಈ ದಾಳಿ ನಡೆದ ಕೂಡಲೇ ಎಚ್ಚೆತ್ತ ಪ್ರಯಾಣಿಕರು ಮತ್ತು ಸಿಬ್ಬಂದಿ ಒಟ್ಟಾಗಿ ಆ ಸಹ-ಪೈಲಟ್ ಅನ್ನು ಬಲವಾಗಿ ಹಿಡಿದು ನಿಯಂತ್ರಣಕ್ಕೆ ತಂದರು. ಸರ್ಕಾರದ ಅಧಿಕೃತ ಆದೇಶದ ಪ್ರಕಾರ, ಈ ಹಲ್ಲೆಯಿಂದಾಗಿ ಕ್ಯಾಪ್ಟನ್ ಮಚ್ಚಾರ್ ತಲೆ ಮತ್ತು ಕೈಗಳಿಗೆ ದೊಡ್ಡ ಮಟ್ಟದ ಗಾಯಗಳಾಗಿವೆ.
ಈ ಘಟನೆಯ ನಂತರ, ವಿಮಾನದಲ್ಲಿದ್ದ ಇತರ ಪೈಲಟ್‌ಗಳು ವಿಮಾನದ ನಿಯಂತ್ರಣವನ್ನು ತಮ್ಮ ಕೈಗೆ ತೆಗೆದುಕೊಂಡು, ವಾಯುವ್ಯ ಸೌದಿ ಅರೇಬಿಯಾದ ತಬುಕ್‌ನಲ್ಲಿರುವ ಪ್ರಿನ್ಸ್ ಸುಲ್ತಾನ್ ಬಿನ್ ಅಬ್ದುಲ್ ಅಜೀಜ್ ವಿಮಾನ ನಿಲ್ದಾಣದಲ್ಲಿ ಬೆಳಿಗ್ಗೆ ಸುಮಾರು 10:45 ರ ಸುಮಾರಿಗೆ ವಿಮಾನವನ್ನು ಸುರಕ್ಷಿತವಾಗಿ ಕೆಳಗಿಳಿಸಿದರು. ಸರ್ಕಾರದ ಪ್ರಕಾರ, ಈ ಹಲ್ಲೆಯ ಬಳಿಕ ಕೋ-ಪೈಲಟ್ನನ್ನು ಸೌದಿ ಅಧಿಕಾರಿಗಳು ಬಂಧಿಸಿದ್ದಾರೆ.
ಭಾರತೀಯ ಪ್ರಜೆಯ ಮೇಲಿನ ಈ ದಾಳಿಯು, 2016ರ ವಿಮಾನ ಅಪಹರಣ ಕಾಯ್ದೆಯ ಸೆಕ್ಷನ್ 3 ಮತ್ತು 1967ರ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ ಬರುವ ಗಂಭೀರ ಅಪರಾಧಗಳ ಅಡಿಯಲ್ಲಿ ಬರುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಆದೇಶದಲ್ಲಿ ಉಲ್ಲೇಖಿಸಲಾದ ಅಪರಾಧಗಳು 2008 ರ ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯ್ದೆಯ ಅಡಿಯಲ್ಲಿ ಬರುವ ಪರಿಶಿಷ್ಟ ಅಪರಾಧಗಳಾಗಿವೆ. ಸ್ಮಿತ್ ಮಚ್ಚಾರ್ ಮೇಲಿನ ದಾಳಿ ಮತ್ತು ಫ್ಲೈ ದುಬೈ ವಿಮಾನ 1073 ಅನ್ನು ಅಪಹರಿಸಲು ಅಥವಾ ಪತನಗೊಳಿಸುವ ಸ್ಪಷ್ಟ ಪ್ರಯತ್ನವನ್ನು ಈ ಪ್ರಕರಣ ಒಳಗೊಂಡಿದೆ ಎಂದು ಸರ್ಕಾರ ತಿಳಿಸಿದೆ. ಈ ಘಟನೆಯು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಂಭೀರ ಪರಿಣಾಮಗಳನ್ನು ಹೊಂದಿದ್ದು, ಯಾವುದೇ ದೊಡ್ಡ ಪಿತೂರಿಯ ಬಗ್ಗೆ ತಿಳಿದುಕೊಳ್ಲಲು ವಿವರವಾದ ತನಿಖೆಯ ಅಗತ್ಯವಿದೆ ಎಂದು ತಿಳಿಸಲಾಗಿದೆ.
ಆದ್ದರಿಂದ, 2008 ರ ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯ್ದೆಯ ಸೆಕ್ಷನ್ 8 ರೊಂದಿಗಿನ ಸೆಕ್ಷನ್ 6 ರ ಉಪ-ವಿಭಾಗಗಳು 5 ಮತ್ತು 8 ರ ನಿಬಂಧನೆಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುವಂತೆ ಕೇಂದ್ರ ಸರ್ಕಾರವು ಎನ್‌ಐಎಗೆ ನಿರ್ದೇಶನ ನೀಡಿದೆ. ಈ ದಾಳಿಯ ಸುತ್ತಲಿನ ಪರಿಸ್ಥಿತಿಗಳು, ವಿಮಾನದೊಳಗಿನ ಘಟನೆಗಳು ಮತ್ತು ಈ ಘಟನೆಯು ಯಾವುದೇ ವ್ಯಾಪಕ ಪಿತೂರಿಯ ಭಾಗವಾಗಿದೆಯೇ ಎಂಬುದನ್ನು ಎನ್‌ಐಎ ತನಿಖೆಯು ಪರಿಶೀಲಿಸುವ ನಿರೀಕ್ಷೆಯಿದೆ.
ಸೆಪ್ಟೆಂಬರ್ 30 ರಂದು ದುಬೈನಿಂದ ಟೆಲ್ ಅವೀವ್‌ಗೆ ಹೊರಟಿದ್ದ ಫ್ಲೈದುಬೈ ವಿಮಾನದಲ್ಲಿ ಈ ಭದ್ರತಾ ಬಿಕ್ಕಟ್ಟು ಸಂಭವಿಸಿತ್ತು. ಒಮಾನ್ ಮೂಲದ ಸಹ-ಪೈಲಟ್ ವಿಮಾನವನ್ನು ಕೆಳಗೆ ತರುವ ಉದ್ದೇಶದಿಂದ ಕಮಾಂಡರ್ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದರಿಂದ ವಿಮಾನವು ಕೇವಲ ಎರಡು ನಿಮಿಷಗಳಲ್ಲಿ ಸರಿಸುಮಾರು 16,000 ಅಡಿಗಳಷ್ಟು ಕೆಳಗೆ ಧುಮುಕಿತ್ತು. ತೀವ್ರ ಗಾಯಗಳಾಗಿದ್ದರೂ ಮಚ್ಚಾರ್ ದಾಳಿಕೋರನನ್ನು ಪ್ರತಿರೋಧಿಸಿದರು. ತಕ್ಷಣ ವಿಮಾನ ಸಿಬ್ಬಂದಿ ಮತ್ತು ಪ್ರಯಾಣಿಕರು ಕಾಕ್‌ಪಿಟ್‌ಗೆ ನುಗ್ಗಿ ದಾಳಿಕೋರನನ್ನು ನಿಯಂತ್ರಿಸಿದರು. ಬಳಿಕ ಕರ್ತವ್ಯದಲ್ಲಿಲ್ಲದ ಇಬ್ಬರು ವಾಯುಯಾನ ತಜ್ಞರ ಸಹಾಯದಿಂದ ವಿಮಾನವನ್ನು ಸೌದಿ ಅರೇಬಿಯಾದ ತಬುಕ್‌ನಲ್ಲಿ ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿಸಲಾಯಿತು. ಇದರಿಂದ ವಿಮಾನದಲ್ಲಿದ್ದ ಎಲ್ಲಾ 180 ಮಂದಿ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾದರು.
ಈ ಘಟನೆಯ ಕುರಿತು ಅಂತರರಾಷ್ಟ್ರೀಯ ತನಿಖೆ ಮುಂದುವರಿದಿದ್ದು, ದಾಳಿಕೋರನನ್ನು ಯುಎಇಗೆ ಕರೆತರಲಾಗಿದೆ. ಈ ದಾಳಿಯ ಹಿಂದೆ ಹೊರಗಿನವರ ಕೈವಾಡವಿದೆಯೇ ಎಂಬುದನ್ನು ಪತ್ತೆಹಚ್ಚಲು ಇಸ್ರೇಲಿ ತನಿಖಾ ಸಿಬ್ಬಂದಿಯನ್ನು ಸಹ ಯುಎಇಗೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ(ಏಜೆನ್ಸೀಸ್).