ವಾರಣಾಸಿ: ಹತ್ತು ಸಾವಿರ ಮೌಲ್ಯದ ಒಳ ಉಡುಪುಗಳನ್ನ ಕದ್ದ ಕಳ್ಳಿಯರು; ಸಿಸಿಟಿವಿಯಲ್ಲಿ ಸೆರೆಯಾದ ಮಹಿಳೆಯರ ಕೈಚಳಕ | Undergarments

ಹತ್ತು ಸಾವಿರ ಮೌಲ್ಯದ ಒಳ ಉಡುಪುಗಳನ್ನು ಕದ್ದ ಕಳ್ಳಿಯರು
ಹತ್ತು ಸಾವಿರ ಮೌಲ್ಯದ ಒಳ ಉಡುಪುಗಳನ್ನು ಕದ್ದ ಕಳ್ಳಿಯರು
Published on

ಪ್ರಮುಖ ಮುಖ್ಯಾಂಶಗಳು

  • ವಾರಾಣಾಸಿಯಲ್ಲಿ ನಡೆದ ವಿಚಿತ್ರ ಕಳ್ಳತನ
  • ಹತ್ತು ಸಾವಿರ ಮೌಲ್ಯದ ಒಳ ಉಡುಪುಗಳನ್ನು ಕದ್ದ ಕಳ್ಳಿಯರು
  • ಸಿಸಿಟಿವಿಯಲ್ಲಿ ಸೆರೆಯಾದ ವಿಡಿಯೋ ವೈರಲ್​
ವಾರಣಾಸಿ: ಸಾಮಾನ್ಯವಾಗಿ ಅಂಗಡಿಗಳಲ್ಲಿ ಸೀರೆ, ಒಡವೆ ಅಥವಾ ಹಣ ಕಳ್ಳತನವಾಗುವುದನ್ನು ಕೇಳಿದ್ದೇವೆ. ಆದರೆ ವಾರಣಾಸಿಯ ಬಟ್ಟೆ ಅಂಗಡಿಯೊಂದರಲ್ಲಿ ನಡೆದ ಈ ಕಳ್ಳತನ ಮಾತ್ರ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಮೂವರು ಮಹಿಳೆಯರು ಸೇರಿಕೊಂಡು ಬರೋಬ್ಬರಿ 10,000 ರೂಪಾಯಿ ಮೌಲ್ಯದ ಒಳ ಉಡುಪುಗಳನ್ನು(Undergarments) ಕದ್ದಿರುವ ದೃಶ್ಯ ಈಗ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ.

ಸಿನಿಮೀಯ ಶೈಲಿಯ ಕಳ್ಳತನ!

ಫೆಬ್ರವರಿ 24ರ ಸಂಜೆ 7 ಗಂಟೆ ಸುಮಾರಿಗೆ ಲಹುರಾಬೀರ್ ಪ್ರದೇಶದ ಪ್ರಸಿದ್ಧ ಬಟ್ಟೆ ಅಂಗಡಿಯೊಂದಕ್ಕೆ ಮೂವರು ಮಹಿಳೆಯರು ಗ್ರಾಹಕರಂತೆ ಎಂಟ್ರಿ ಕೊಟ್ಟಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಒಬ್ಬ ಮಹಿಳೆ ಬ್ರಾ ಸೆಕ್ಷನ್ ಬಳಿ ನಿಂತು ಒಂದೊಂದನ್ನೇ ಪರೀಕ್ಷಿಸುವಂತೆ ನಟಿಸುತ್ತಾ ಮೆಲ್ಲನೆ ತನ್ನ ಬ್ಯಾಗ್‌ನೊಳಗೆ ಹಾಕಿಕೊಳ್ಳುತ್ತಾಳೆ.
ಇನ್ನೊಬ್ಬ ಮಹಿಳೆ ಕೂಡ ಅದೇ ರೀತಿ ಮಾಡುತ್ತಾ ಸಿಬ್ಬಂದಿಯ ಕಣ್ಣು ತಪ್ಪಿಸಿ ಬೆಲೆಬಾಳುವ ಉಡುಪುಗಳನ್ನು ಬ್ಯಾಗ್ ಸೇರಿಸುತ್ತಾಳೆ. ಈ ನಡುವೆ ಮೂರನೇ ಮಹಿಳೆ ಅಂಗಡಿಯ ಸಿಬ್ಬಂದಿಯ ಗಮನ ಬೇರೆಡೆ ಸೆಳೆಯಲು ಅವರೊಂದಿಗೆ ಮಾತಿನಲ್ಲಿ ತೊಡಗುತ್ತಾಳೆ. ಇದು ಯಾವುದೇ ಪ್ರೊಫೆಷನಲ್ ಕಳ್ಳರಿಗಿಂತ ಕಡಿಮೆ ಇಲ್ಲದಂತೆ ಪ್ಲಾನ್ ಮಾಡಿ ಕಳ್ಳತನ ಮಾಡಿದ್ದಾರೆ.

ಬಯಲಾಗಿದ್ದು ಹೇಗೆ?

ದಿನದ ವ್ಯಾಪಾರ ಮುಗಿದ ನಂತರ ಸ್ಟಾಕ್ ಚೆಕ್ ಮಾಡುವಾಗ ಕೆಲವು ಬೆಲೆಬಾಳುವ ಒಳ ಉಡುಪುಗಳು ನಾಪತ್ತೆಯಾಗಿರುವುದು ಮಾಲೀಕರ ಗಮನಕ್ಕೆ ಬಂದಿದೆ. ಅನುಮಾನಗೊಂಡು ಸಿಸಿಟಿವಿ ಫೂಟೇಜ್ ಪರಿಶೀಲಿಸಿದಾಗ ಈ ಮಹಿಳಾ ಗ್ಯಾಂಗ್​ನ ಕೈಚಳಕ ಬಯಲಾಗಿದೆ. ಕಳ್ಳತನವಾದ ವಸ್ತುಗಳ ಒಟ್ಟು ಮೌಲ್ಯ ಅಂದಾಜು 10,000 ರೂಪಾಯಿ ಎಂದು ಹೇಳಲಾಗುತ್ತಿದೆ.

ಆರೋಪಿಗಳಲ್ಲಿ ಒಬ್ಬರು ಮಹಿಳಾ ಸಂಘಟನೆಯ ಅಧ್ಯಕ್ಷೆ?

ಈ ಪ್ರಕರಣಕ್ಕೆ ಈಗ ದೊಡ್ಡ ಟ್ವಿಸ್ಟ್ ಸಿಕ್ಕಿದ್ದು, ವಿಡಿಯೋದಲ್ಲಿರುವ ಮಹಿಳೆಯರಲ್ಲಿ ಒಬ್ಬರು ಮಹಿಳಾ ವ್ಯಾಪಾರ ಮಂಡಳಿಯ ಅಧ್ಯಕ್ಷೆ ಸುನೀತಾ ಸೋನಿ ಎಂದು ಗುರುತಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಆದರೆ ಈ ಆರೋಪವನ್ನು ಸುನೀತಾ ಸೋನಿ ನಿರಾಕರಿಸಿದ್ದಾರೆ. ದಾರಿಯಲ್ಲಿ ಸಿಕ್ಕ ಆ ಇಬ್ಬರು ಮಹಿಳೆಯರ ಜೊತೆ ನಾನು ಅಂಗಡಿಗೆ ಹೋಗಿದ್ದೆ ಅಷ್ಟೇ, ಕಳ್ಳತನ ಮಾಡಿದ್ದು ಅವರು. ನಾನು ಆ ವಸ್ತುಗಳನ್ನು ವಾಪಸ್ ಕೊಡಿಸುತ್ತೇನೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ನೆಟ್ಟಿಗರ ಕಿಡಿ ಮತ್ತು ಕಾಲೆಳೆತ

ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಒಬ್ಬರು ಇದು ಅತ್ಯಂತ ನಾಚಿಕೆಗೇಡಿನ ಕೆಲಸ ಎಂದರೆ, ಇನ್ನೊಬ್ಬರು ತಮಾಷೆಯಾಗಿ ದೇಶದಲ್ಲಿ ಹಣದುಬ್ಬರ ಎಷ್ಟಾಗಿದೆ ಅಂದ್ರೆ ಈಗ ಒಳ ಉಡುಪುಗಳನ್ನೂ ಕದಿಯುವ ಕಾಲ ಬಂದಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಈ ಚಡ್ಡಿ ಕಳ್ಳತನವು ಯಾವ ಬಾಲಿವುಡ್​ ಸಿನಿಮಾಗೂ ಕಮ್ಮಿಇಲ್ಲ ಎಂದು ಕಾಲೆಳೆದಿದ್ದಾರೆ.

ಪೊಲೀಸ್ ಕ್ರಮ

ಅಂಗಡಿ ಮಾಲೀಕರ ದೂರಿನ ಮೇರೆಗೆ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 379ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಸಿಸಿಟಿವಿ ಆಧಾರದ ಮೇಲೆ ತನಿಖೆ ಮುಂದುವರಿದಿದ್ದು, ಶೀಘ್ರದಲ್ಲೇ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net