ಮೃತ್ಯುಕೂಪವಾಗಿ ಬದಲಾದ ರಸ್ತೆ: ಕಾರಿನ ಸಮೇತ ಚಾಲಕರು ಪಾತಾಳಕ್ಕೆ; ಬೆಚ್ಚಿಬೀಳಿಸುವಂತಿದೆ ಈ ವೈರಲ್ ವಿಡಿಯೋ | Viral Video

ರಸ್ತೆ ಮಧ್ಯೆ ಕುಸಿದು ಬಿದ್ದ ಕಾರುಗಳು
ರಸ್ತೆ ಮಧ್ಯೆ ಕುಸಿದು ಬಿದ್ದ ಕಾರುಗಳು
Published on

ಪ್ರಮುಖ ಮುಖ್ಯಾಂಶಗಳು

  • ರಸ್ತೆ ಇಬ್ಬಾಗವಾಗಿ ಹೊಂಡಕ್ಕೆ ಬಿದ್ದ ಕಾರುಗಳು
  • ಅಮೆರಿಕಾದ ನೆಬ್ರಸ್ಕಾದಲ್ಲಿ ನಡೆದ ಘಟನೆ
  • ಈಆಘಾತಕಾರಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಫುಲ್​ ವೈರಲ್​
ಅಮೆರಿಕ: ಸುಮ್ಮನೆ ಯೋಚನೆ ಮಾಡಿ, ನೀವು ಸಿಗ್ನಲ್​ನಲ್ಲಿ ಹಸಿರು ಬಣ್ಣವನ್ನು ಕಾಯುತ್ತಾ ನಿಮ್ಮ ವಾಹನದಲ್ಲಿ ಕುಳಿತಿದ್ದಿರಿ. ಇದ್ದಕ್ಕಿದ್ದಂತೆ ನೀವಿರುವ ರಸ್ತೆಯೇ ಇಬ್ಬಾಗವಾಗಿ, ಕಾರಿನ ಸಮೇತ ನೀವು ಭೂಮಿಯ ಆಳಕ್ಕೆ ಕುಸಿದು ಬಿದ್ದರೆ ಹೇಗಿರಬೇಡ? ಇಂತಹದ್ದೇ ಒಂದು ಘಟನೆ ಅಮೆರಿಕದ ನೆಬ್ರಸ್ಕಾ ರಾಜ್ಯದ ಒಮಾಹಾದಲ್ಲಿ ನಡೆದಿದ್ದು, ಇದರ ವಿಡಿಯೋ (Viral Video) ನೋಡಿ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.

ಕ್ಷಣಾರ್ಧದಲ್ಲಿ ಮಾಯವಾದ ಕಾರುಗಳು!

ಮಂಗಳವಾರ (ಫೆ. 24) ಮಧ್ಯಾಹ್ನ ಸುಮಾರು 3:30ರ ಸಮಯ. ಪೆಸಿಫಿಕ್ ಸ್ಟ್ರೀಟ್‌ನ ಜನನಿಬಿಡ ಜಂಕ್ಷನ್‌ನಲ್ಲಿ ವಾಹನಗಳು ಎಂದಿನಂತೆ ಚಲಿಸುತ್ತಿದ್ದವು. ಅಷ್ಟರಲ್ಲಿ ಇದ್ದಕ್ಕಿದ್ದಂತೆ ರಸ್ತೆಯ ಮಧ್ಯಭಾಗದಲ್ಲಿ ಬೃಹತ್ ಗುಂಡಿ ನಿರ್ಮಾಣವಾಗಿದೆ. ನೋಡನೋಡುತ್ತಿದ್ದಂತೆ ಅಲ್ಲಿ ನಿಂತಿದ್ದ ಒಂದು ಸಿಲ್ವರ್ ಬಣ್ಣದ ಡಾಡ್ಜ್ ರಾಮ್ ಪಿಕಪ್ ಮತ್ತು ಮರೂನ್ ಬಣ್ಣದ ಜೀಪ್ ಎಸ್‌ಯುವಿ ಕಾರುಗಳು ರಸ್ತೆಯ ಸಮೇತ ಪಾತಾಳಕ್ಕೆ ಕುಸಿದವು. ಹತ್ತಿರದ ಪಾರ್ಕಿಂಗ್ ಗ್ಯಾರೇಜ್‌ನಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು ಈಗ ಸಾಮಾಜಿಕ ಮಾಧ್ಯಮದಲ್ಲಿ ಫುಲ್​ ವೈರಲ್​ ಆಗುತ್ತಿದೆ.
ನೆರವಿಗೆ ಧಾವಿಸಿದ ಸ್ಥಳೀಯರು
ಕಾರುಗಳು ಗುಂಡಿಗೆ ಬೀಳುತ್ತಿದ್ದಂತೆ ಅಲ್ಲಿದ್ದ ಸ್ಥಳೀಯರು ಗಾಬರಿಯಾಗುವ ಬದಲು, ತಕ್ಷಣವೇ ಓಡಿ ಹೋಗಿ ಗುಂಡಿಯೊಳಗೆ ಸಿಲುಕಿದ್ದ ಚಾಲಕರು ಹೊರಬರಲು ಸಹಾಯ ಮಾಡಿದರು. ಅಷ್ಟೇ ಅಲ್ಲ, ರಸ್ತೆಯ ಇನ್ನೊಂದು ಬದಿಯಿಂದ ಬರುತ್ತಿದ್ದ ವಾಹನಗಳಿಗೆ ಅಪಾಯದ ಮುನ್ಸೂಚನೆ ನೀಡಿ ಅವುಗಳನ್ನು ನಿಲ್ಲಿಸಿದರು. ಅದೃಷ್ಟವಶಾತ್ ಇಬ್ಬರೂ ಚಾಲಕರು ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಒಮಾಹಾ ಪೊಲೀಸ್ ಇಲಾಖೆಯು ಸ್ಥಳೀಯರ ಈ ಸಮಯಪ್ರಜ್ಞೆ ಮತ್ತು ಮಾನವೀಯತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದೆ.

ಇನ್ಶೂರೆನ್ಸ್ ಕಂಪನಿಗೆ ಏನು ಹೇಳ್ತಿರಾ?

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಒಬ್ಬ ಬಳಕೆದಾರರು, ಇನ್ಶೂರೆನ್ಸ್ ಕಂಪನಿಗೆ ಇದನ್ನು ಹೇಗೆ ವಿವರಿಸುತ್ತೀರಿ? ರಸ್ತೆ ನನ್ನನ್ನು ನುಂಗಿಬಿಟ್ಟಿತು ಎಂದು ಹೇಳೋದಾ? ಎಂದು ಹೇಳಿದರೆ, ಇನ್ನೊಬ್ಬರು, ನನಗೆ ಈಗ ಹೊಸದೊಂದು ಭಯ ಶುರುವಾಗಿದೆ (New fear unlocked) ಎಂದು ಬರೆದುಕೊಂಡಿದ್ದಾರೆ.

ಮುಂದುವರೆದ ದುರಸ್ಥಿ ಕಾರ್ಯ

ಪೊಲೀಸರ ಪ್ರಕಾರ, ಕಾರುಗಳು ಗುಂಡಿಗೆ ಬಿದ್ದ ನಂತರ ಅಲ್ಲಿನ ವಾಟರ್ ಪೈಪ್‌ಲೈನ್ ಒಡೆದಿದೆ. ಇದರಿಂದ ರಸ್ತೆ ಕುಸಿತದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ನಂತರ ದೊಡ್ಡ ಕ್ರೇನ್ ಮೂಲಕ ಎರಡೂ ವಾಹನಗಳನ್ನು ಹರಸಾಹಸ ಪಟ್ಟು ಮೇಲೆತ್ತಲಾಯಿತು. ಸದ್ಯಕ್ಕೆ ಈ ರಸ್ತೆಯನ್ನು ಬಂದ್ ಮಾಡಲಾಗಿದ್ದು, ಅಧಿಕಾರಿಗಳು ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net