ಜೀವಾವಧಿ ಶಿಕ್ಷೆಯಿಂದ ಪಾರಾಗಲು ಮೇಕೆ ಕಳೇಬರ ಸುಟ್ಟು ತಾನೇ ಸತ್ತಂತೆ AI ಫೋಟೋ ರಚಿಸಿದ್ದ ಭೂಪ ಸಿಕ್ಕಿಬಿದ್ದಿದ್ದೇ ರೋಚಕ! Fakes Death

Fakes Death
ಜೀವಾವಧಿ ಶಿಕ್ಷೆಯಿಂದ ಪಾರಾಗಲು ಮೇಕೆ ಕಳೇಬರ ಸುಟ್ಟು ತಾನೇ ಸತ್ತಂತೆ AI ಫೋಟೋ ರಚಿಸಿದ್ದ ಭೂಪ ಸಿಕ್ಕಿಬಿದ್ದಿದ್ದೇ ರೋಚಕ!
Published on: 

ಲಖನೌ: ಸಿನಿಮಾ ಕಥೆಯನ್ನೂ ಮೀರಿಸುವಂತಹ ವಿಚಿತ್ರ ಹಾಗೂ ರೋಚಕ ಅಪರಾಧ ಪ್ರಕರಣವೊಂದು ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಕೊಲೆ ಪ್ರಕರಣದ ಜೀವಾವಧಿ ಶಿಕ್ಷೆಯಿಂದ ಪಾರಾಗಲು ಆರೋಪಿಯೊಬ್ಬ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿ ತಾನೇ ಸತ್ತಂತೆ ಫೋಟೋ ಸೃಷ್ಟಿಸಿ, ಚಿತಾಭಸ್ಮದ ಜಾಗದಲ್ಲಿ ಮೇಕೆಯೊಂದನ್ನು ಸುಟ್ಟು ಶವಸಂಸ್ಕಾರದ ( Fakes Death ) ನಾಟಕವಾಡಿದ್ದ! ಸತತ 18 ತಿಂಗಳುಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿ ತಲೆಮರೆಸಿಕೊಂಡಿದ್ದ ಕಿಲಾಡಿಯನ್ನು ಕೊನೆಗೂ ಮೌ ಜಿಲ್ಲೆಯ ಪೊಲೀಸರು ಬಂಧಿಸುವ ಮೂಲಕ ಆತನ ಬಣ್ಣ ಬಯಲು ಮಾಡಿದ್ದಾರೆ.

ಬಂಧಿತ ಆರೋಪಿಯನ್ನು 38 ವರ್ಷದ ರಾಜಕುಮಾರ್ ರಾಜ್‌ಭರ್ ಅಲಿಯಾಸ್ ರಾಜು ಎಂದು ಗುರುತಿಸಲಾಗಿದೆ. 2016 ರಲ್ಲಿ ಯೋಗೇಶ್ ಸಿಂಗ್ ಎಂಬವರ ಮೇಲೆ ನಡೆದ ಭೀಕರ ಗುಂಡಿನ ದಾಳಿ ಮತ್ತು ಕೊಲೆ ಪ್ರಕರಣದಲ್ಲಿ ರಾಜಕುಮಾರ್ ಹಾಗೂ ಆತನ ಸಹಚರ ಸುದರ್ಶನ್ ರಾಜ್‌ಭರ್ ಪ್ರಮುಖ ಆರೋಪಿಗಳಾಗಿದ್ದರು. ಮೌ ನ್ಯಾಯಾಲಯದಲ್ಲಿ ಈ ಕೊಲೆ ಪ್ರಕರಣದ ವಿಚಾರಣೆ ಅಂತಿಮ ಹಂತ ತಲುಪಿತ್ತು. ಸಾಕ್ಷಿದಾರರ ವಿಚಾರಣೆ ಮತ್ತು ಸಾಕ್ಷ್ಯಾಧಾರಗಳ ಸಲ್ಲಿಕೆ ಪೂರ್ಣಗೊಂಡಿದ್ದು, ತನಗೆ ಕೋರ್ಟ್‌ನಿಂದ ಖಂಡಿತವಾಗಿಯೂ ಜೀವಾವಧಿ ಶಿಕ್ಷೆಯಾಗಲಿದೆ ಎಂಬ ಭೀತಿಯಲ್ಲಿದ್ದ ರಾಜಕುಮಾರ್, ಈ ಕೊಲೆಯಿಂದ ತಪ್ಪಿಸಿಕೊಳ್ಳಲು ಮಾಸ್ಟರ್ ಪ್ಲಾನ್ ಹೆಣೆದಿದ್ದ.

Also Read
ಗುಟ್ಕಾ ಉಗುಳಿದ್ದೇ ತಪ್ಪಾಯ್ತು! ಹೈಟೆನ್ಷನ್ ವೈರ್‌ಗೆ ತಗುಲಿದ ಎಂಜಲು; ಗಾರೆ ಕೆಲಸದವ ಸ್ಥಳದಲ್ಲೇ ಸಾವು! Gutkha Tragedy
Fakes Death

ಆರೋಪಿ ರಾಜಕುಮಾರ್ ಸಾಮಾನ್ಯದವನಲ್ಲ, ಆತ ಕ್ರಿಪ್ಟೋಕರೆನ್ಸಿ ಮತ್ತು ಟ್ರೇಡಿಂಗ್ ವ್ಯವಹಾರದಲ್ಲೂ ತೊಡಗಿಸಿಕೊಂಡಿದ್ದ. ಹಲವರಿಂದ ಹೂಡಿಕೆಗಾಗಿ ಕೋಟ್ಯಂತರ ರೂಪಾಯಿ ಹಣ ಸಂಗ್ರಹಿಸಿದ್ದ ಈತನಿಗೆ, ಹಣ ಹೂಡಿಕೆ ಮಾಡಿದ್ದ ಇಬ್ಬರು ಹೋಮಿಯೋಪತಿ ವೈದ್ಯರು ಈ 'ನಕಲಿ ಸಾವು' ಹೆಣೆಯುವ ಕುತಂತ್ರದ ಆಲೋಚನೆ ನೀಡಿದ್ದರು ಎನ್ನಲಾಗಿದೆ. ರಾಜಕುಮಾರ್ ಕೊಲೆ ಕೇಸ್‌ನಿಂದ ಪಾರಾಗಿ ಟ್ರೇಡಿಂಗ್ ಮುಂದುವರಿಸಿದರೆ ಮಾತ್ರ ತಮ್ಮ ಹಣ ವಾಪಸ್ ಸಿಗುತ್ತದೆ ಎಂದು ನಂಬಿದ್ದ ವೈದ್ಯರು, ಆತನಿಗೆ ಸಾವು ನಕಲು ಮಾಡಲು ಸಂಪೂರ್ಣ ಬೆಂಬಲ ನೀಡಿದ್ದರು.

ಯೋಜನೆಯಂತೆ ರಾಜಕುಮಾರ್‌ಗೆ ಪ್ರಜ್ಞೆ ತಪ್ಪಿದಂತೆ ನಾಟಕವಾಡಿಸಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ನಂತರ ಗಾಜಿಪುರ ಜಿಲ್ಲೆಯ ಸ್ಮಶಾನದಲ್ಲಿ ಆತನನ್ನು ಚಿತೆಯ ಮೇಲೆ ಮಲಗಿಸಿ, AI ಮತ್ತು ಎಡಿಟಿಂಗ್ ತಂತ್ರಜ್ಞಾನ ಬಳಸಿ ಆತ ಸತ್ತು ಚಿತೆಯ ಮೇಲಿದ್ದಾನೆ ಎಂಬಂತಹ ಫೋಟೋಗಳನ್ನು ಸೃಷ್ಟಿಸಲಾಯಿತು. ಫೋಟೋ ತೆಗೆದ ತಕ್ಷಣ ರಾಜಕುಮಾರ್‌ನನ್ನು ಚಿತೆಯಿಂದ ಎಬ್ಬಿಸಿ ಸುರಕ್ಷಿತ ಜಾಗಕ್ಕೆ ಕಳುಹಿಸಿ, ಆತನ ಜಾಗದಲ್ಲಿ ಮೇಕೆಯೊಂದನ್ನು ಇಟ್ಟು ಬೆಂಕಿ ಕೊಟ್ಟು ದಹನ ಮಾಡಲಾಗಿತ್ತು! ತದನಂತರ ಈ ನಕಲಿ ಫೋಟೋ ಮತ್ತು ದಾಖಲೆಗಳನ್ನು ಬಳಸಿ ಗಾಜಿಪುರ ಜಿಲ್ಲೆಯಿಂದ ಅಧಿಕೃತ ಮರಣ ಪ್ರಮಾಣಪತ್ರವನ್ನೂ ಪಡೆದುಕೊಂಡಿದ್ದ.

Also Read
ಉಳಿದವರೆಲ್ಲರೂ ಹಾಳಾಗಿ ಹೋಗಿ: ರಶ್ಮಿಕಾ ಬೆನ್ನಲ್ಲೇ ಟ್ರೋಲಿಗರಿಗೆ ಖಡಕ್​ ತಿರುಗೇಟು ಕೊಟ್ಟ ವಿಜಯ್! Vijay Deverakonda
Fakes Death

ನ್ಯಾಯಾಲಯಕ್ಕೆ ತಾನು ಸತ್ತು ಹೋಗಿರುವುದಾಗಿ ನಂಬಿಸಿ ಸತತ 18 ತಿಂಗಳುಗಳಿಂದ ಆರಾಮಾಗಿ ತಲೆಮರೆಸಿಕೊಂಡಿದ್ದ ರಾಜಕುಮಾರ್‌ನನ್ನು ಮೌ ಜಿಲ್ಲೆಯ ಕೊತ್ವಾಲಿ ನಗರ ಪೊಲೀಸ್ ಹಾಗೂ ಸರ್ವೇಲೆನ್ಸ್ ತಂಡದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಈ ಮೂಲಕ ಆತನ ಮಹಾ ವಂಚನೆ ಬಯಲಾಗಿದೆ. ಆರೋಪಿಯ ವಿರುದ್ಧ ಈಗ ಕೊಲೆ ಕೇಸ್ ಜೊತೆಗೆ ವಂಚನೆ, ನಕಲಿ ದಾಖಲೆ ಸೃಷ್ಟಿ ಮತ್ತು ಹಾದಿ ತಪ್ಪಿಸಿದ ಹೊಸ ಪ್ರಕರಣ ದಾಖಲಿಸಲಾಗಿದ್ದು, ಆತನನ್ನು ಜೈಲಿಗೆ ಅಟ್ಟಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅನೂಪ್ ಕುಮಾರ್ ತಿಳಿಸಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net