

ಹೈದರಾಬಾದ್: ಬಾಲಿವುಡ್ ನಿರ್ದೇಶಕ, ನಿರ್ಮಾಪಕ ಹಾಗೂ ನಿರೂಪಕ ಕರಣ್ ಜೋಹರ್ ನಡೆಸಿಕೊಡುವ ಪ್ರಸಿದ್ಧ ‘ಕಾಫಿ ವಿತ್ ಕರಣ್ 9' (Koffee With Karan 9) ಶೋನಲ್ಲಿ ಕಾಣಿಸಿಕೊಂಡ ಬೆನ್ನಲ್ಲೇ ದಕ್ಷಿಣ ಭಾರತದ ಜನಪ್ರಿಯ ತಾರಾ ದಂಪತಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗುರಿಯಾಗಿದ್ದಾರೆ. ಏಕೆಂದರೆ, ಶೋನಲ್ಲಿ ವಿಜಯ್ ಆಡಿದ ಕೆಲವು ಮಾತುಗಳನ್ನು ಇಟ್ಟುಕೊಂಡು ಅವರಿಗೆ 'ರೆಡ್ ಫ್ಲ್ಯಾಗ್' (ಕೆಟ್ಟ ನಡವಳಿಕೆ) ಎಂಬ ಪಟ್ಟ ಕಟ್ಟಿ, ಕಟುವಾಗಿ ಟೀಕಿಸಲಾಗುತ್ತಿದೆ. ಇದೀಗ ತಮ್ಮ ವಿರುದ್ಧದ ಎಲ್ಲ ಟ್ರೋಲ್ಗಳಿಗೂ ನಟ ವಿಜಯ್ ದೇವರಕೊಂಡ ಅತ್ಯಂತ ಕಟು ಹಾಗೂ ಖಾರವಾದ ಭಾಷೆಯಲ್ಲೇ ಪ್ರತ್ಯುತ್ತರ ನೀಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪತ್ನಿ ರಶ್ಮಿಕಾ ಜತೆಗಿನ ಸುಂದರ ಫೋಟೋ ಮತ್ತು ವಿಡಿಯೋ ಹಂಚಿಕೊಂಡಿರುವ ವಿಜಯ್, ತಮ್ಮ ಸಂಬಂಧವನ್ನು ಟೀಕಿಸುತ್ತಿರುವ ನೆಟ್ಟಿಗರ ಬಾಯಿ ಮುಚ್ಚಿಸುವಂತಹ ಖಡಕ್ ಸಂದೇಶವೊಂದನ್ನು ಬರೆದುಕೊಂಡಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ವಿಜಯ್ ದೇವರಕೊಂಡ, "ನನ್ನ ಆತ್ಮೀಯ ಗೆಳತಿ, ನನ್ನ ಪತ್ನಿ, ನನ್ನ ಹೆಣ್ಣು. ನನ್ನ ಜೀವನದಲ್ಲಿ ನಾನು ಸರಿಯಾಗಿ ಆಯ್ಕೆ ಮಾಡಿಕೊಂಡ ಅತ್ಯಂತ ಸುಂದರ ಭಾಗ ಎಂದರೆ ಅದು ರಶ್ಮಿಕಾ. ನಮ್ಮಿಬ್ಬರ ಬಗ್ಗೆ ಅತಿಯಾದ ಕಾಳಜಿ ವಹಿಸುತ್ತಿರುವ ಎಲ್ಲರಿಗೂ ನಾನು ಹೇಳುವುದೇನೆಂದರೆ, ನಾವಿಬ್ಬರೂ ಅತ್ಯಂತ ಸಂತೋಷವಾಗಿದ್ದೇವೆ ಮತ್ತು ನಾನು ನಿಜಕ್ಕೂ ಧನ್ಯ. ನಾವಿಬ್ಬರೂ ಪ್ರಪಂಚದ ವಿರುದ್ಧ ನಿಲ್ಲಬೇಕಾಗಿ ಬಂದರೂ ನಮಗೆ ಯಾವುದೇ ಅಭ್ಯಂತರವಿಲ್ಲ. ಪ್ರೀತಿಯನ್ನು ಮತ್ತು ಸರಳವಾಗಿ ಬದುಕುವುದನ್ನು ಸಂಭ್ರಮಿಸುವ ಎಲ್ಲರಿಗೂ ನನ್ನ ಕಡೆಯಿಂದ ಬಿಗ್ ಲವ್, ಎಂದು ಬರೆಯುವ ಮೂಲಕ ತಮ್ಮ ಮದುವೆಯ ಬಗ್ಗೆ ತಮಗಿರುವ ಹೆಮ್ಮೆಯನ್ನು ವ್ಯಕ್ತಪಡಿಸಿದ್ದಾರೆ.
ವಿಜಯ್ ದೇವರಕೊಂಡ ತಮ್ಮ ಪೋಸ್ಟ್‌ನ ಕೊನೆಯಲ್ಲಿ ಟ್ರೋಲರ್‌ಗಳು ಹಾಗೂ ವಿನಾಕಾರಣ ಸಲಹೆ ನೀಡುವ ನೆಟ್ಟಿಗರಿಗೆ ಯಾವುದೇ ಮುಲಾಜಿಲ್ಲದೆ ನೇರ ಸಾಲುಗಳಲ್ಲಿ ತಿರುಗೇಟು ನೀಡಿದ್ದಾರೆ. ಇನ್ನು ಉಳಿದಂತೆ ನಮ್ಮಿಬ್ಬರ ನಡುವೆ ಬೆಂಕಿ ಹಚ್ಚಲು ಪ್ರಯತ್ನಿಸುತ್ತಿರುವ ಮತ್ತು ಟೀಕಿಸುತ್ತಿರುವ ಪ್ರತಿಯೊಬ್ಬರಿಗೂ ಯಾವುದೇ ಆದರ ಅಥವಾ ಗೌರವವಿಲ್ಲದೆ ಹೇಳುತ್ತಿದ್ದೇನೆ, ಉಳಿದವರೆಲ್ಲರೂ ಹಾಳಾಗಿ ಹೋಗಿ ಎಂದು ಅತ್ಯಂತ ಕಟುವಾದ ಪದಗಳನ್ನು ಬಳಸಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ವಿಜಯ್ ಅವರ ಈ ಪೋಸ್ಟ್‌ಗೂ ಮುನ್ನ ನಟಿ ರಶ್ಮಿಕಾ ಮಂದಣ್ಣ ಅವರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಸುದೀರ್ಘ ಪತ್ರ ಬರೆದು ತಮ್ಮ ಪತಿಯ ಪರವಾಗಿ ಬಲವಾಗಿ ನಿಂತರು.
ಇದಕ್ಕೂ ಮುನ್ನ ಇನ್ಸ್ಟಾಗ್ರಾಮ್ನಲ್ಲಿ ಸುದೀರ್ಘ ಪತ್ರ ಬರೆದಿರುವ ರಶ್ಮಿಕಾ ಮಂದಣ್ಣ, ತಮ್ಮ ಮತ್ತು ವಿಜಯ್ ಸಂಬಂಧದ ಬಗ್ಗೆ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಗಳು ಹಾಗೂ 'ಉಚಿತ ಸಲಹೆಗಳಿಗೆ' ತೆರೆ ಎಳೆಯಲು ಪ್ರಯತ್ನಿಸಿದ್ದಾರೆ. ಸಾಮಾನ್ಯವಾಗಿ ನಾನು ಇಂತಹ ವಿಚಾರಗಳಿಗೆ ಸ್ಪಂದಿಸುವುದಿಲ್ಲ. ಪ್ರತಿಯೊಬ್ಬರಿಗೂ ತಮ್ಮದೇ ಅಭಿಪ್ರಾಯ ಹೊಂದುವ ಹಕ್ಕಿದೆ. ಆದರೆ, ನಮ್ಮ ಇಂಟರ್ವ್ಯೂ ಪ್ರಸಾರವಾದ ನಂತರ ಜನರು ವ್ಯಕ್ತಪಡಿಸುತ್ತಿರುವ ರೀತಿ ಅಭಿಪ್ರಾಯದಂತೆ ಕಾಣುತ್ತಿಲ್ಲ, ಬದಲಿಗೆ ಸಿಟ್ಟಿನಿಂದ ಕುದಿಯುತ್ತಿರುವ ಗುಂಪೊಂದು ಯಾರ ಮೇಲೋ ತಮ್ಮ ಆಕ್ರೋಶ ತೀರಿಸಿಕೊಳ್ಳಲು ಕಾಯುತ್ತಿರುವಂತೆ ಕಾಣುತ್ತಿದೆ. ನಮ್ಮ ಮಾತಿನ ಮೂಲ ಉದ್ದೇಶವೇ ಎಲ್ಲೋ ಕಳೆದುಹೋಗಿದೆ ಎಂದು ರಶ್ಮಿಕಾ ಬೇಸರ ವ್ಯಕ್ತಪಡಿಸಿದ್ದರು.
ಶೋನಲ್ಲಿ ರಶ್ಮಿಕಾ ಅವರು ಮದುವೆಯಾಗಲು ವಿಜಯ್ ಅವರನ್ನು '100 ಬಾರಿ' ಕೇಳಿಕೊಳ್ಳಬೇಕಾಯಿತು ಎಂಬ ವಿಚಾರ ದೊಡ್ಡ ಚರ್ಚೆಯಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ರಶ್ಮಿಕಾ, "ನಾವಿಬ್ಬರೂ ಯಾವುದೇ ಅದ್ಧೂರಿ ಪ್ರಪೋಸಲ್ ನಿರೀಕ್ಷಿಸಿರಲಿಲ್ಲ. ಮದುವೆಯಂತಹ ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಮುನ್ನ ನಾವಿಬ್ಬರೂ ಪರಸ್ಪರ ಅರ್ಥೈಸಿಕೊಳ್ಳಲು, ಜೀವನದ ಏಳು-ಬೀಳುಗಳನ್ನು ಎದುರಿಸಲು ಸಿದ್ಧರಿದ್ದೇವೆಯೇ ಎಂದು ಖಚಿತಪಡಿಸಿಕೊಳ್ಳಲು ವಿಜಯ್ ಸಮಯ ಕೇಳಿದ್ದರು. ನಾನು ಪೂರ್ಣ ಹೃದಯದಿಂದ ನಿರ್ಧಾರ ತೆಗೆದುಕೊಳ್ಳುವವಳಾದರೆ, ವಿಜಯ್ ಪ್ರಾಯೋಗಿಕವಾಗಿ ಯೋಚಿಸುವ ವ್ಯಕ್ತಿ. ನಮಗೆ ಇಬ್ಬರ ಸ್ವಭಾವವೂ ಅಗತ್ಯವಿತ್ತು. ನಾವಿಬ್ಬರೂ ಪರಸ್ಪರರನ್ನು ಆಯ್ಕೆ ಮಾಡಿಕೊಂಡಿದ್ದೇವೆ. 2026ರ ಫೆಬ್ರವರಿಯಲ್ಲಿ ಮದುವೆಯಾದ ನಾವು ಅತ್ಯಂತ ಸಂತೋಷವಾಗಿದ್ದೇವೆ ಎಂದು ತಿಳಿಸಿದ್ದಾರೆ.
ರಶ್ಮಿಕಾ ತಮ್ಮ ಸುದೀರ್ಘ ಲೇಖನದಲ್ಲಿ ಮದುವೆ ಹಾಗೂ ಪ್ರೀತಿಯ ಅಸಲಿ ಅರ್ಥವನ್ನು ವಿವರಿಸಿದ್ದಾರೆ. ನಮಗೆ ಮದುವೆ ಎಂದರೆ ಕೇವಲ ಮೊಣಕಾಲೂರಿ ನಿಂತು ಉಂಗುರ ತೊಡಿಸುವುದಲ್ಲ, ಅದು ಅಲಂಕಾರಿಕ ಭಾಗವಷ್ಟೇ. ಒಟ್ಟಿಗೆ ಸುಂದರ ಭವಿಷ್ಯವನ್ನು ಕಟ್ಟುವುದು ನಮಗೆ ಮುಖ್ಯವಾಗಿತ್ತು. ನನ್ನ ಗಂಡನ ಮೇಲೆ ನನಗೆ ಅತಿಯಾದ ವ್ಯಾಮೋಹವಿದೆ, ಅದರಲ್ಲಿ ತಪ್ಪೇನಿದೆ? ನಾನು ಮದುವೆಯಾಗುವ ವ್ಯಕ್ತಿಯನ್ನು ಪ್ರೀತಿಸದಿದ್ದರೆ ಮತ್ತೆ ಯಾರನ್ನು ಪ್ರೀತಿಸಲಿ? ಅವರು ನನ್ನ ಜೀವನಪರ್ಯಂತದ ಸಂಗಾತಿ, ನನ್ನ ಮಕ್ಕಳ ತಂದೆ ಮತ್ತು ನಾನು ಒಟ್ಟಿಗೆ ಮುಪ್ಪಾಗುವ ವ್ಯಕ್ತಿ. ಮದುವೆಯಾದ ಮೇಲೆಯೂ 'ನನ್ನನ್ನು ಮದುವೆಯಾಗು' ಎಂದು ಕೇಳುವಷ್ಟು ಪ್ರೀತಿಸುವ ಗಂಡ ಸಿಗಬೇಕು ಎಂದು ರಶ್ಮಿಕಾ ಮಾರ್ಮಿಕವಾಗಿ ಬರೆದುಕೊಂಡಿದ್ದಾರೆ.
ತಮ್ಮಿಬ್ಬರ ವೈಯಕ್ತಿಕ ನಿರ್ಧಾರಗಳ ಬಗ್ಗೆ ಮಾತನಾಡುತ್ತಾ, ನಾವಿಬ್ಬರೂ ನಮ್ಮದೇ ಆದ ಶ್ರಮದಿಂದ, ಸ್ವಂತ ಕಾಲಿನ ಮೇಲೆ ನಿಂತು ಸ್ವತಂತ್ರವಾಗಿ ಜೀವನ ರೂಪಿಸಿಕೊಂಡಿದ್ದೇವೆ. ಯಾರ ಜತೆ ಬದುಕಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳುವಷ್ಟು ಬುದ್ಧಿವಂತಿಕೆ ಮತ್ತು ಸ್ವಾತಂತ್ರ್ಯ ನಮಗಿದೆ. ನಮ್ಮಿಬ್ಬರ ಪ್ರೀತಿ ನಿಮ್ಮ ಕಲ್ಪನೆಗೆ ಹೊಂದಿಕೆಯಾಗದಿದ್ದರೆ ತೊಂದರೆಯಿಲ್ಲ, ನೀವು ನಿಮ್ಮದೇ ಸುಂದರ ಕಲ್ಪನೆಯಲ್ಲಿ ಬದುಕಿ. ಆದರೆ, ನಮಗೆ ಕಾಳಜಿಯ ನೆಪದಲ್ಲಿ 'ಓಡಿಹೋಗು', 'ಸಂಬಂಧದಿಂದ ಆಚೆಗೆ ಬಾ' ಎಂದು ಉಚಿತ ಸಲಹೆ ನೀಡುತ್ತಿರುವ ಹುಡುಗಿಯರಿಗೆ ನನ್ನದೊಂದು ವಿನಂತಿ, ಧನ್ಯವಾದಗಳು, ಆದರೆ ಕೆಲವು ವರ್ಷಗಳ ಹಿಂದೆ ನನ್ನ ಜೀವನದಲ್ಲಿ ಅತ್ಯಂತ ಕಷ್ಟದ ಸಮಯ ಬಂದಾಗ ನೀವಾರೂ ಇರಲಿಲ್ಲ ಎಂದು ಟ್ರೋಲರ್‌ಗಳ ಪೊಳ್ಳು ಕಾಳಜಿಯನ್ನು ರಶ್ಮಿಕಾ ಬಯಲು ಮಾಡಿದ್ದಾರೆ.
ತಮ್ಮ ಕಷ್ಟದ ದಿನಗಳಲ್ಲಿ ವಿಜಯ್ ತೋರಿದ ಬೆಂಬಲವನ್ನು ಸ್ಮರಿಸಿದ ರಶ್ಮಿಕಾ, "ನನ್ನ ಕಷ್ಟದ ದಿನಗಳಲ್ಲಿ ನೀವ್ಯಾರೂ ಇರಲಿಲ್ಲ, ಆದರೆ ವಿಜಯ್ ನನ್ನ ಜತೆಗಿದ್ದರು ಮತ್ತು ಈಗಲೂ ಇದ್ದಾರೆ. ನನ್ನ ಮೂಳೆ ಮುರಿದಾಗ, ಪ್ರತಿ ತಿಂಗಳು ಹೊಟ್ಟೆನೋವಿನಿಂದ ನರಳುವಾಗ, ಅರ್ಧರಾತ್ರಿಯಲ್ಲಿ ಭಯದಿಂದ ಎಚ್ಚರವಾದಾಗ ನೀವ್ಯಾರೂ ಬರುವುದಿಲ್ಲ, ವಿಜಯ್ ನನ್ನ ಜತೆಗಿರುತ್ತಾರೆ. ಇಂಟರ್ನೆಟ್‌ನಲ್ಲಿ ಸಿಗುವ ಎಡಿಟ್ ಮಾಡಿದ ವಿಡಿಯೋಗಳು ಮತ್ತು ಸುಳ್ಳುಗಳನ್ನು ನಂಬುವುದಕ್ಕಿಂತ, ನನ್ನ ಸ್ವಂತ ಜೀವನದ ಬಗ್ಗೆ ನಾನು ಹೇಳುವುದನ್ನು ನಂಬದಿರುವುದು ನಿಜಕ್ಕೂ ವಿಚಿತ್ರವಾಗಿದೆ. ನನ್ನನ್ನು ಪ್ರೀತಿಸುವ, ರಕ್ಷಿಸುವ, ಪ್ರತಿಯೊಂದು ಗೆಲುವನ್ನು ಸಂಭ್ರಮಿಸುವ ಗಂಡ ನನಗೆ ಸಿಕ್ಕಿದ್ದಾರೆ ಎಂದು ರಶ್ಮಿಕಾ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಇದೇ ವೇಳೆ ತಮ್ಮ ಕುಟುಂಬದ ವಿರುದ್ಧ ಮಾತನಾಡುತ್ತಿರುವವರಿಗೂ ರಶ್ಮಿಕಾ ಖಡಕ್ ಎಚ್ಚರಿಕೆ ನೀಡಿದ್ದಾರೆ. ನನ್ನ ಬಗ್ಗೆ ಎಷ್ಟು ಬೇಕಾದರೂ ಚಡಪಡಿಸಿ ಅಥವಾ ಬೈಯಿರಿ, ನಾನು ತಡೆದುಕೊಳ್ಳುತ್ತೇನೆ. ಆದರೆ ನಮ್ಮ ಕುಟುಂಬದ ಬಗ್ಗೆ ಏನೂ ತಿಳಿಯದೆ ಮಾತನಾಡುವುದು ಫೆಮಿನಿಸಂ ಅಲ್ಲ, ಅದು ಫೆಮಿನಿಸಂ ಮುಸುಕಿನಲ್ಲಿ ಮಾಡುವ ಬುಲ್ಲಿಯಿಂಗ್! ಫೆಮಿನಿಸಂ ಎಂದರೆ ಇನ್ನೊಬ್ಬರನ್ನು ತಗ್ಗಿಸುವುದಲ್ಲ, ಸ್ವಂತ ಜೀವನದ ನಿರ್ಧಾರವನ್ನು ತಾವೇ ತೆಗೆದುಕೊಳ್ಳುವುದು. ನಾನು ನನ್ನ ಜೀವನದ ನಿರ್ಧಾರವನ್ನು ನಾನೇ ತೆಗೆದುಕೊಂಡಿದ್ದೇನೆ ಮತ್ತು ಅದು ನನಗೆ ಅಪಾರ ಪ್ರೀತಿಯನ್ನು ತಂದುಕೊಟ್ಟಿದೆ ಎಂದು ಅವರು ಮಹಿಳಾವಾದದ ಹೆಸರಿನಲ್ಲಿ ಟ್ರೋಲ್ ಮಾಡುವವರಿಗೆ ತಿರುಗೇಟು ನೀಡಿದ್ದಾರೆ.
ಅಂತಿಮವಾಗಿ ತಮ್ಮ ಕನ್ನಡಿಗ ಅಭಿಮಾನಿಗಳನ್ನೂ ನೆನಪಿಸಿಕೊಂಡಿರುವ ರಶ್ಮಿಕಾ, "ನನ್ನ ಕೆಲವು ಕನ್ನಡಿಗ ಸ್ನೇಹಿತರಿಗೆ... ಅಬ್ಬಾ, 10 ವರ್ಷಗಳ ನಂತರವೂ ನಾನು ನಿಮ್ಮ ಹೃದಯದಲ್ಲಿ ಇಷ್ಟೊಂದು ಆಳವಾಗಿ ಅಚ್ಚೊತ್ತಿದ್ದೇನೆ ಎಂದು ತಿಳಿಯಲು ತುಂಬಾ ಸಂತೋಷವಾಗುತ್ತದೆ. ಇಷ್ಟೆಲ್ಲಾ ಸಮಯದ ನಂತರವೂ ನನ್ನನ್ನು ಸಂಭ್ರಮಿಸುತ್ತಿರುವುದಕ್ಕೆ ನಾನು ನಿಜಕ್ಕೂ ಧನ್ಯೆ! ಪ್ರೀತಿ ಮತ್ತು ಸಂತೋಷವನ್ನು ಹಂಚುವ ಎಲ್ಲರಿಗೂ ನನ್ನ ಪ್ರೀತಿ. ಇನ್ನುಳಿದವರು ನಿಮಗೂ ಸಂತೋಷ ಕೊಡುವ ಕೆಲಸವನ್ನು ಹುಡುಕಿಕೊಳ್ಳಿ ಎಂದು ವ್ಯಂಗ್ಯವಾಗಿ ಪತ್ರವನ್ನು ಮುಗಿಸಿದ್ದಾರೆ, (ಏಜೆನ್ಸೀಸ್).