

ಹೈದರಾಬಾದ್: ದಕ್ಷಿಣ ಭಾರತದ ಜನಪ್ರಿಯ ತಾರಾದಂಪತಿಯಾದ ವಿಜಯ್ ದೇವರಕೊಂಡ ( Vijay Deverakonda ) ಮತ್ತು ರಶ್ಮಿಕಾ ಮಂದಣ್ಣ ( Rashmika Mandanna ) ಇತ್ತೀಚೆಗಷ್ಟೇ ಬಾಲಿವುಡ್ ನಿರ್ಮಾಪಕ ಹಾಗೂ ನಿರೂಪಕ ಕರಣ್ ಜೋಹರ್ ನಡೆಸಿಕೊಡುವ ಪ್ರಸಿದ್ಧ ‘ಕಾಫಿ ವಿತ್ ಕರಣ್ 9’ (Koffee With Karan 9) ಶೋನಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಶೋನಲ್ಲಿ ದಂಪತಿ ತಮ್ಮ ವೈಯಕ್ತಿಕ ಜೀವನ, ಮದುವೆ ಹಾಗೂ ಒಟ್ಟಿಗೆ ನಟಿಸಿದ ಸಿನಿಮಾಗಳ ಬಗ್ಗೆ ಮುಕ್ತವಾಗಿ ಮಾತನಾಡಿದರು. ಆದರೆ, ಕಾರ್ಯಕ್ರಮ ಪ್ರಸಾರವಾದ ಬೆನ್ನಲ್ಲೇ ನೆಟ್ಟಿಗರು ಹಾಗೂ ರಶ್ಮಿಕಾ ಅಭಿಮಾನಿಗಳು ವಿಜಯ್ ದೇವರಕೊಂಡ ನಡೆದುಕೊಂಡ ರೀತಿಯನ್ನು ಟ್ರೋಲ್ ಮಾಡುತ್ತಿದ್ದಾರೆ. ವಿಜಯ್ ಅವರಲ್ಲಿ 'ರೆಡ್ ಫ್ಲ್ಯಾಗ್' (ಕೆಟ್ಟ ನಡವಳಿಕೆ) ಲಕ್ಷಣಗಳಿವೆ, ಅವರು ಅಹಂಕಾರದಿಂದ ವರ್ತಿಸಿದ್ದಾರೆ ಮತ್ತು ಪತ್ನಿ ರಶ್ಮಿಕಾರನ್ನು ಗೌರವಯುತವಾಗಿ ನಡೆಸಿಕೊಂಡಿಲ್ಲ ಎಂದು ಜಾಲತಾಣ ವೇದಿಕೆಗಳಲ್ಲಿ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿದೆ. ಇದೀಗ ಈ ಚರ್ಚೆಗೆಲ್ಲ ವಿಜಯ್ ಸ್ಪಷ್ಟನೆ ನೀಡಿದ್ದು, ಟ್ರೋಲಿಗರಿಗೆ ತಿರುಗೇಟು ನೀಡಿದ್ದಾರೆ.
ಅಂದಹಾಗೆ, ಈ ಎಲ್ಲ ವಿವಾದ ಮತ್ತು ಟ್ರೋಲ್‌ಗಳಿಗೆ ಪ್ರಮುಖ ಕಾರಣವಾಗಿದ್ದು ವಿಜಯ್ ಶೋನಲ್ಲಿ ನೀಡಿದ ಒಂದು ಹೇಳಿಕೆ. ಅದೇನೆಂದರೆ, ತನ್ನನ್ನು ಮದುವೆಯಾಗುವಂತೆ ರಶ್ಮಿಕಾ ಬರೋಬ್ಬರಿ '100 ಬಾರಿ' ಕೇಳಿಕೊಂಡರು ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಅದು ಕೂಡ ಗರ್ವದಿಂದ ಅನ್ನೋದು ನೆಟ್ಟಿಗರ ವಾದ. ರಶ್ಮಿಕಾ ಕೂಡ ಈ ಬಗ್ಗೆ ಮಾತನಾಡಿದ್ದು, 100 ಬಾರಿಯಲ್ಲ ಇಡೀ ವರ್ಷ ಮದುವೆಯಾಗುವಂತೆ ವಿಜಯ್ ಹಿಂದೆ ಬಿದ್ದಿದ್ದಾಗಿ ಹೇಳಿಕೊಂಡಿದ್ದಾರೆ. ರಶ್ಮಿಕಾ ತುಂಬಾ ಪ್ರೀತಿಯಿಂದ ಹೇಳುವಾಗ ವಿಜಯ್ ತೋರಿದ ಹಾವಾಭಾವ ಸ್ವಲ್ಪವೂ ಇಷ್ಟವಾಗಲಿಲ್ಲ ಅನ್ನೋದು ನೆಟ್ಟಿಗರ ಅಭಿಪ್ರಾಯವಾಗಿದೆ. ರಶ್ಮಿಕಾರನ್ನು ವಿಜಯ್ ಕೀಳಾಗಿ ಕಂಡಿದ್ದಾರೆ ಎಂದು ಆರೋಪಿಸಿ ಸರಣಿ ವಿಡಿಯೋಗಳನ್ನು ಹಂಚಿಕೊಂಡು ವಿಜಯ್ರನ್ನು ಟ್ರೋಲ್ ಮಾಡುತ್ತಿದ್ದಾರೆ.
ಇನ್ನೂ ಈ ಎಲ್ಲ ಊಹಾಪೋಹಗಳಿಗೆ ಮತ್ತಷ್ಟು ಪುಷ್ಠಿ ನೀಡಿದ್ದು ವಿಜಯ್ ದೇವರಕೊಂಡ ಅವರ ಇನ್ಸ್ಟಾಗ್ರಾಂ ಖಾತೆ. ಅದೇನೆಂದರೆ, ವಿಜಯ್ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಯಾರನ್ನೂ ಫಾಲೋ ಮಾಡುತ್ತಿಲ್ಲ. ಕನಿಷ್ಠ ಪಕ್ಷ ತಮ್ಮ ಪತ್ನಿಯನ್ನಾದರೂ ಫಾಲೋ ಮಾಡಬೇಕಿತ್ತು. ಆದರೆ, ಅವರನ್ನು ಸಹ ಫಾಲೋ ಮಾಡುತ್ತಿಲ್ಲ. ಆದರೆ, ರಶ್ಮಿಕಾ ಮಾತ್ರ ವಿಜಯ್ ಅವರನ್ನು ಫಾಲೋ ಮಾಡುತ್ತಿದ್ದಾರೆ. ವಿಜಯ್ ಅವರ ಈ ಒಂದು ನಡೆಯ ಮೇಲೆ ಅನುಮಾನ ಮೂಡುತ್ತಿದೆ ಎಂದು ಅನೇಕ ನೆಟ್ಟಿಗರು ಕಿಡಿಕಾರುತ್ತಿದ್ದಾರೆ.
ಇದೀಗ ತಮ್ಮ ಮೇಲಿನ ಎಲ್ಲಾ 'ರೆಡ್ ಫ್ಲ್ಯಾಗ್' ಆರೋಪಗಳಿಗೆ ನಟ ವಿಜಯ್ ದೇವರಕೊಂಡ ಕೊನೆಗೂ ಅತ್ಯಂತ ಹಾಸ್ಯಾಸ್ಪದ ಹಾಗೂ ತೀಕ್ಷ್ಣ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇಬ್ಬರು ಕಂಟೆಂಟ್ ಕ್ರಿಯೇಟರ್‌ಗಳು ಮಾಡಿದ ವ್ಯಂಗ್ಯತ್ಮಕ ವಿಡಿಯೋವನ್ನು ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಪೋಸ್ಟ್ ಮಾಡುವ ಮೂಲಕ ಟ್ರೋಲರ್‌ಗಳ ಬಾಯಿ ಮುಚ್ಚಿಸಿದ್ದಾರೆ. ವಿಡಿಯೋವನ್ನು ಹಂಚಿಕೊಂಡಿರುವ ವಿಜಯ್, "ಇನ್ಸ್ಟಾಗ್ರಾಮ್ ಮನಶ್ಶಾಸ್ತ್ರಜ್ಞರಿಗೆ ಪ್ರಾದೇಶಿಕ ಭಾಷೆಗಳಲ್ಲಿ ಸಬ್‌ಟೈಟಲ್ಸ್ ಅಗತ್ಯವಿದೆ" (Needs subtitles. Regional languages lo) ಎಂದು ಬರೆದುಕೊಂಡು ತಮ್ಮನ್ನು ವಿನಾಕಾರಣ ಅತಿಯಾಗಿ ವಿಶ್ಲೇಷಣೆ ಮಾಡುತ್ತಿರುವ ನೆಟ್ಟಿಗರನ್ನು ಕಾಲೆಳೆದಿದ್ದಾರೆ.
ವಿಜಯ್ ಹಂಚಿಕೊಂಡ ಆ ವೈರಲ್ ವಿಡಿಯೋದಲ್ಲಿ ಒಬ್ಬ ಯುವಕ ಮತ್ತು ಯುವತಿ ‘ಕಾಫಿ ವಿತ್ ಕರಣ್’ ಶೋನ ಪ್ರತಿಯೊಂದು ಸಣ್ಣ ಸನ್ನಿವೇಶವನ್ನೂ ಅತಿಯಾಗಿ ವಿಶ್ಲೇಷಿಸುತ್ತಾ ತಮಾಷೆ ಮಾಡುವುದನ್ನು ಕಾಣಬಹುದು. ವಿಡಿಯೋದಲ್ಲಿನ ಯುವತಿ, "ವಿಜಯ್ ಸೋಫಾದ ಬಲಬದಿಯಲ್ಲಿ ಕುಳಿತಿದ್ದಾರೆ, ಅಂದರೆ ತಾವು ಹೇಳುವುದೇ ಸರಿ ಎಂದು ತೋರಿಸಿಕೊಳ್ಳುತ್ತಿದ್ದಾರೆ, ಹುಡುಗಿಯರೇ ಇದುವೇ ರೆಡ್ ಫ್ಲ್ಯಾಗ್!" ಎಂದು ವ್ಯಂಗ್ಯವಾಡುತ್ತಾಳೆ. ಮುಂದುವರಿದು, "ಕಾಫಿ ಕೇವಲ ವಿಜಯ್ ಪಕ್ಕದಲ್ಲಿದೆ, ರಶ್ಮಿಕಾಗೆ ಅವರು ಕಾಫಿ ಆಫರ್ ಮಾಡಲೇ ಇಲ್ಲ. ವಿಜಯ್ ಸಂಪೂರ್ಣವಾಗಿ ಸ್ವಾರ್ಥಿ ಹಾಗೂ ಪಿತೃಪ್ರಧಾನ ಮನಸ್ಥಿತಿಯವರು ಎಂದು ಹಾಸ್ಯಾಸ್ಪದವಾಗಿ ಆರೋಪಿಸುವುದು ವಿಡಿಯೋದಲ್ಲಿ ದಾಖಲಾಗಿದೆ. ಈ ಮೂಲಕ ನೆಟ್ಟಿಗರು ಸಣ್ಣ ಸಣ್ಣ ವಿಚಾರವನ್ನು ತಮಗೆ ಅನಿಸಿದಂತೆ ಜಡ್ಜ್ ಮಾಡುತ್ತಾರೆ ಅನ್ನೋದನ್ನು ಆ ಇಬ್ಬರು ಕಂಟೆಂಟ್ ಕ್ರಿಯೆಟರ್ಗಳು ಟೀಕಿಸಿ, ವಿಜಯ್ ಪರ ಬ್ಯಾಟ್ ಬೀಸಿದ್ದಾರೆ.
ಇಷ್ಟೇ ಅಲ್ಲದೆ, ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿರುವ "ವಿಜಯ್ ಇನ್ಸ್ಟಾಗ್ರಾಮ್ನಲ್ಲಿ ರಶ್ಮಿಕಾರನ್ನು ಫಾಲೋ ಮಾಡುತ್ತಿಲ್ಲ" ಎಂಬ ವಿಚಾರಕ್ಕೂ ಈ ವಿಡಿಯೋದಲ್ಲಿ ತಮಾಷೆಯಾಗಿ ಉತ್ತರಿಸಲಾಗಿದೆ. ವಿಡಿಯೋದಲ್ಲಿ ಯುವತಿ ವಿಜಯ್ ಫಾಲೋ ಮಾಡುತ್ತಿಲ್ಲ ಎಂದು ದೂಷಿಸಿದಾಗ, ಜತೆಗಿರುವ ಯುವಕ "ನೀನು ನನ್ನನ್ನು ಫಾಲೋ ಮಾಡುತ್ತಿದ್ದೀಯಾ ಪ್ರವೀಣಾ? ನಾನು ತುಂಬಾ ದಿನಗಳಿಂದ ನಿನ್ನನ್ನು ಬೇಡಿಕೊಳ್ಳುತ್ತಿದ್ದೇನೆ! ಎಂದು ತಮಾಷೆ ಮಾಡುತ್ತಾನೆ. ಶೋನಲ್ಲಿ ವಿಜಯ್ "ಮದುವೆಯ ನಿಯಮವೆಂದರೆ ಹೆಂಡತಿಯ ಮಾತಿಗೆ ಒಪ್ಪಿಕೊಳ್ಳುವುದು" ಎಂದು ಹೇಳಿದ್ದನ್ನೂ ಸಹ ಕಂಟೆಂಟ್ ಕ್ರಿಯೇಟರ್‌ಗಳು ತಮಾಷೆಯಾಗಿ ನಿರೂಪಿಸಿ ಟ್ರೋಲರ್‌ಗಳ ಅತಿಯಾದ ವಿಶ್ಲೇಷಣೆಯನ್ನು ಅಣಕಿಸಿದ್ದಾರೆ.
ಇದರ ನಡುವೆ, ಇತ್ತೀಚೆಗಷ್ಟೇ ತೆರೆಕಂಡ ರಾಹುಲ್ ಸಾಂಕ್ರಿತ್ಯನ್ ನಿರ್ದೇಶನದ ಐತಿಹಾಸಿಕ ಆಕ್ಷನ್ ಡ್ರಾಮಾ 'ರಣಬಾಲಿ' (Ranabaali) ಚಿತ್ರದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಒಟ್ಟಿಗೆ ನಟಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು. ಇಬ್ಬರ ವೃತ್ತಿಜೀವನ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಏನೇ ವದಂತಿಗಳು ಹರಿದಾಡುತ್ತಿದ್ದರೂ, ವಿಜಯ್ ತಮ್ಮದೇ ಆದ ತಮಾಷೆಯ ಶೈಲಿಯಲ್ಲಿ ಉತ್ತರ ನೀಡುವ ಮೂಲಕ ತಮಗೆ ಈ ಟ್ರೋಲ್‌ಗಳಿಂದ ಯಾವುದೇ ಪರಿಣಾಮ ಬೀರಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ, (ಏಜೆನ್ಸೀಸ್).