

ನಾನು ನಿಮ್ಮ ಹೃದಯದಲ್ಲಿ ಎಷ್ಟು ಆಳವಾಗಿ ಇರಿದಿದ್ದೇನೆ..ನನ್ನ ವಿಚಾರ ಇನ್ನೂ ಸಂಭ್ರಮಿಸುತ್ತಿದ್ದೀರಿ ಎಂದು ಕನ್ನಡಿಗರ ಬಗ್ಗೆ ರಶ್ಮಿಕಾ ಮಾತು
ನಾನು ನನ್ನ ಹುಡುಗನನ್ನು ಹೆಚ್ಚು ಪ್ರೀತಿಸುತ್ತೇನೆ..ತಪ್ಪೇನಿದೆ?
ಫೆಮಿನಿಸಂ ಮುಖವಾಡ ಧರಿಸಿ ಗೂಂಡಾಗಿರಿ ಮಾಡಬೇಡಿ ಎಂದು ಕಿಡಿಕಾರಿ ರಶ್ಮಿಕಾ
'ಜೀವನದಲ್ಲಿ ನನಗೆ ಬೇಕಾದದ್ದು ಏನು ಎಂಬುದು ಗೊತ್ತಿತ್ತು. ವಿಜಯ್ ದೇವರಕೊಂಡ ಸಮಯ ತೆಗೆದುಕೊಂಡರು. ನಮಗೆ ಲಕ್ಷ್ಯುರಿ ಪ್ರಪೋಸಲ್ ಅಗತ್ಯವಿರಲಿಲ್ಲ. ನಾವೀಗ ಸುಂದರ ಬದುಕು ಕಟ್ಟಿಕೊಂಡಿದ್ದೇವೆ. ಸಾವಿರ ಸಲ ಮದುವೆಯಾಗು ಅಂತ ಕೇಳ್ತೇನೆ ತಪ್ಪೇನಿದೆ?. ಸುಳ್ಳು ಸುದ್ದಿಗಳನ್ನು ನಂಬೋದನ್ನು ದಯವಿಟ್ಟು ಬಿಟ್ಟುಬಿಡಿ' ಹೀಗೆ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು ನಟಿ ರಶ್ಮಿಕಾ ಮಂದಣ್ಣ.
ಕಾಫಿ ವಿತ್ ಕರಣ್ ಜೋಹರ್ ಟಾಕ್ ಶೋ ನಂತರ ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ದಾಂಪತ್ಯ ಜೀವನದ ಬಗ್ಗೆ ಹರಿದಾಡುತ್ತಿರುವ ನಾನಾ ವದಂತಿಗಳು ಹರಿದಾಡಿತ್ತು. ನೂರು ಬಾರಿ ಮದುವೆ ಪ್ರಪೋಸಲ್ ವಿಚಾರ ಟ್ರೋಲ್ಗೆ ಗುರಿಯಾಗಿತ್ತು. ಸದ್ಯ ಎಲ್ಲದರ ಬಗ್ಗೆ ಮಾತನಾಡಿದ್ದು, ವದಂತಿಗಳಿಗೆ ನಟಿ ರಶ್ಮಿಕಾ ಮಂದಣ್ಣ ಬ್ರೇಕ್ ಹಾಕಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಗಳು, ರೀಲ್ಸ್ ವೈರಲ್ ಆಗುತ್ತಲೇ ಮಾತನಾಡಿದ ರಶ್ಮಿಕಾ, ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದು ಹೀಗೆ, ನನ್ನ ಮತ್ತು ವಿಜಯ್ ಬಗ್ಗೆ ಹುಟ್ಟಿಕೊಳ್ಳುತ್ತಿರುವ ವದಂತಿಗಳ ಬಗ್ಗೆ ಗಾಬರಿಯಾಗಿ ನನ್ನ ತಂಗಿ ನನಗೆ ಮಾಹಿತಿ ಕೊಟ್ಟಳು. ನಾನು ಸಾಮಾನ್ಯವಾಗಿ ಎಲ್ಲ ವಿಚಾರಕ್ಕೂ ಪ್ರತಿಕ್ರಿಯೆ ಕೊಡೋದಿಲ್ಲ.ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕಿದೆ. ಕೆಲವೊಮ್ಮೆ, ಅವುಗಳನ್ನು ಓದಿ ಬೇರೆ ದೃಷ್ಟಿಕೋನವನ್ನು ಪಡೆದುಕೊಳ್ಳುವುದನ್ನು ನಾನು ಆನಂದಿಸುತ್ತೇನೆ ಕೂಡ. ಆದರೆ ನಮ್ಮ ಸಂದರ್ಶನದ ಬಗ್ಗೆ ಈಗ ನಡೆಯುತ್ತಿರುವ ಗದ್ದಲವು ಜನರು ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುವಂತೆ ಕಾಣುತ್ತಿಲ್ಲ, ಬದಲಿಗೆ ಒಬ್ಬರ ಮೇಲಿನ ಆಕ್ರೋಶ ತೀರಿಸಿಕೊಳ್ಳುವಂತೆ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
ಇಂಟರ್ನೆಟ್ನಲ್ಲಿ ಹೀಗೆ ಹರಿದಾಡುತ್ತಿರುವ ವಿಡಿಯೋ, ಕಾಮೆಂಟ್ಗಳ ಸುರಿಮಳೆ ನಮ್ಮಿಬ್ಬರಿಗೂ ಅಘಾತವನ್ನುಂಟು ಮಾಡಿತು. ಅರೇ ಇಲ್ಲೇನಾಗ್ತಿದೆ? ಎಂದನಿಸಿತು. ನನ್ನನ್ನು ಪ್ರೀತಿಸುವವರಿಗಾಗಿ, ನನ್ನ ಮೇಲೆ ನಂಬಿಕೆ ಇಟ್ಟವರಿಗಾಗಿ ಇದನ್ನು ಸ್ಪಷ್ಟಪಡಿಸುತ್ತಿದ್ದೇನೆ. ಅವರಿಗಾಗಿ ನಾನಿಂದು ಪೋಸ್ಟ್ ಹಂಚಿಕೊಳ್ಳುತ್ತಿದ್ದೇನೆ ಎಂದು ತಮ್ಮ ಮತ್ತು ವಿಜಯ್ ಮಧ್ಯೆ ಇರುವ ಅಪಾರ ಬಾಂಧವ್ಯದ ಬಗ್ಗೆ ಅನಾವರಣಗೊಳಿಸಿದ್ದಾರೆ.
'ಹೌದು, ನಾವು ಪರಸ್ಪರ ಅರ್ಥಮಾಡಿಕೊಳ್ಳಲು ಸಮಯ ಮತ್ತು ಅವಕಾಶವನ್ನು ತೆಗೆದುಕೊಳ್ಳಬೇಕು, ಜೀವನದ ಎಲ್ಲಾ ಏಳು-ಬೀಳುಗಳು, ಸಂತೋಷಗಳು ಮತ್ತು ಒತ್ತಡಗಳ ನಡುವೆಯೂ ನಾವಿಬ್ಬರೂ ಒಟ್ಟಾಗಿ ಬದುಕುವುದು ಸರಿಯೇ, ಎನ್ನುವ ಖಚಿತತೆ ಬೇಕಾಗಿತ್ತು. ಈ ವಿಚಾರವನ್ನು ಮುನ್ನೆಲೆಗೆ ತರುವ ಉದ್ದೇಶದಿಂದಾಗಿ ನೂರು ಬಾರಿ ಮದುವೆಗೆ ಪ್ರಸ್ತಾಪವಿಟ್ಟ ವಿಚಾರದ ಬಗ್ಗೆ ಮಾತನಾಡಿದ್ದು.'
'ನನಗೆ ಏನು ಬೇಕು ಎಂಬುದು ನನಗೆ ಸ್ಪಷ್ಟವಾಗಿ ತಿಳಿದಿತ್ತು. ವಿಜಯ್ಗೆ ಏನು ಬೇಕು..ಯಾವುದು ಸರಿ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಅವನು ಸಮಯ ಬಯಸಿದ್ದು, ಕೂಡ ಅಷ್ಟೇ ಸರಿಯಾಗಿದೆ. ಅದು ನಮ್ಮ ಪ್ರೀತಿಯನ್ನು ಬದಲಾಯಿಸಲ್ಲ. ನಾನು ನನ್ನ ಮನಸ್ಸಿನಿಂದ ಮಾತ್ರ ಯೋಚಿಸುತ್ತೇನೆ. ಆದರೆ ವಿಜಯ್ ಹಾಗಿಲ್ಲ ಕ್ರಿಟಿಕಲ್ ತಿಂಕರ್. ದಾಂಪತ್ಯ ಜೀವನದಲ್ಲಿ ಸಮತೋಲನ ಇರಬೇಕು'.
'ಪ್ರಪೋಸ್ ಮಾಡುವುದು, ರಿಂಗ್ ತೊಡಿಸುವುದು ಒಂದು ಕೈಂಡ್ ಆಫ್ ಫ್ಯಾಷನ್ ಅಷ್ಟೇ. ಆದರೆ, ನಮಗೆ ಇದು ಒಟ್ಟಾಗಿ ಬದುಕುವುದು..ಉತ್ತಮ ಭವಿಷ್ಯ ಕಟ್ಟಿಕೊಳ್ಳುವ ಬಗ್ಗೆ ಯೋಚನೆಯಿತ್ತು. ಇಲ್ಲಿಯವರೆಗೆ ನಾವು ಸುಂದರವಾಗಿ ನಮ್ಮ ಜೀವನವನ್ನು ಕಟ್ಟಿಕೊಂಡಿದ್ದೇವೆ ಎಂದು ನಾನು ಭಾವಿಸಿದ್ದೇನೆ' ಎಂದರು.
'ಹೌದು, ನನಗೆ ನನ್ನ ಹುಡುಗನ ಬಗ್ಗೆ ಹೆಚ್ಚು ಪ್ರೀತಿಯಿದೆ ಅದ್ರಲ್ಲಿ ತಪ್ಪೇನು. ನಾನು ಮದುವೆಯಾಗುತ್ತಿರುವ ಪುರುಷನನ್ನು ನಾನು ಪ್ರೀತಿಸದಿದ್ದರೆ, ಜಗತ್ತಿನಲ್ಲಿ ಬೇರೆ ಯಾರನ್ನು ಪ್ರೀತಿಸಲಿ. ಯಾವ ಕಾರಣಕ್ಕಾಗಿ ನಾನು ಅವನನ್ನು ಮದುವೆಯಾಗಲಿ?. ಅವನು ನನ್ನ ಜೀವನದ ಸಂಗಾತಿಯಾಗಿ, ತಂದೆಯಾಗಿ, ಸ್ನೇಹಿತನಾಗಿ, ನನ್ನ ಜೀವನ ಕೊನೇ ಕ್ಷಣದವರೆಗೂ ನನ್ನ ಜೊತೆಗಿರುತ್ತಾನೆ. ಇದಕ್ಕಾಗಿ ನಾನು ನೂರು ಬಾರಿ ಅಲ್ಲ, ಸಾವಿರ ಬಾರಿ ಮದುವೆಯಾಗು ಎಂದು ಕೇಳುತ್ತೇನೆ. ಇದ್ರಲ್ಲಿ ಕಳೆದುಕೊಳ್ಳೋದೇನಿದೆ' ಎಂದಿದ್ದಾರೆ ರಶ್ಮಿಕಾ.
'ಚಂದದ ಬಟ್ಟೆ ಧರಿಸಿ ರೀಲ್ಸ್ ಮಾಡುತ್ತಾ ನನಗೆ ಉಚಿತ ಸಲಹೆ ನೀಡುತ್ತಿರುವ ನನ್ನ ಮುದ್ದಾದ ಹುಡುಗಿಯರಿಗೆ.. ತುಂಬ ಧನ್ಯವಾದ. ಕೆಲವು ವರ್ಷಗಳ ಹಿಂದೆ ನನ್ನ ಜೀವನದಲ್ಲಿ ತುಂಬಾ ಕಷ್ಟಕರವಾಗಿದ್ದ ಘಟನೆ ಎದುರಿಸಿದ್ದೇನೆ. ನಿಮ್ಮಲ್ಲಿ ಕೆಲವರು ಅಲ್ಲಿ ಇರಬೇಕಿತ್ತು ಆದರೆ ನೀವಿರಲಿಲ್ಲ. ಆಗ ನನ್ನ ಜೊತೆ ಇದ್ದದ್ದು, ಬೆಂಬಲ ಕೊಟ್ಟಿದ್ದು, ಸಲುಹಿದ್ದು ವಿಜಯ್. ಈಗಲೂ ಸಹ ನನ್ನ ಪಕ್ಕದಲ್ಲೇ ಇದ್ದಾನೆ' ಎಂದು ವಿಜಯ್ ಮೇಲಿನ ಪ್ರೀತಿ ವ್ಯಕ್ತಪಡಿಸಿದರು.
'ಸದ್ಯಕ್ಕೆ, ನಾನು ಎಂದಿಗೂ ಇಲ್ಲದಷ್ಟು ಸಂತೋಷವಾಗಿದ್ದೇನೆ. ಮದುವೆಯಾದಾಗಿನಿಂದ ನಾನು ಎಷ್ಟು ಸಂತೋಷವಾಗಿದ್ದೇನೆ ಎನ್ನುವುದನ್ನು ನೀವು ಸಂದರ್ಶನದಲ್ಲಿ, ಸಿನಿಮಾ ಸೆಟ್ನಲ್ಲಿ ಹಾಗೂ ನಾನು ಜೀವನವನ್ನು ನಡೆಸುವ ರೀತಿಯಲ್ಲಿ ನೋಡಬಹುದು'.
'ನನ್ನ ಮೂಳೆ ಮುರಿದಾಗ ನೀವು ನನ್ನೊಟ್ಟಿಗೆ ಇರಲಿಲ್ಲ, ನನ್ನ ಮುಟ್ಟಿನ ಸಮಯದಲ್ಲಿ ನನ್ನೊಟ್ಟಿಗೆ ಇರಲಿಲ್ಲ. ನಡುರಾತ್ರಿಯಲ್ಲಿ ನನಗೆ ಆತಂಕದಿಂದ ಎಚ್ಚರವಾದಾಗ ನೀವು ಅಲ್ಲಿರುವುದಿಲ್ಲ.ನ ನಗೆ ಬೇಸರವಾದಾಗ ಸಲಹೆ ನೀಡಲು, ರಕ್ಷಣೆ ಬೇಕಾದಾಗ, ಸಾಂತ್ವಾನ ಬೇಕಾದಾಗ, ಬೆಂಬಲ ನೀಡಲು ನಿಮ್ಮ ಬದಲಾಗಿ ವಿಜಯ್ ಇರುತ್ತಾನೆ...ಎಂದೆಂದಿಗೂ ಇರುತ್ತಾನೆ ಎಂದು ಪ್ರೀತಿ ವ್ಯಕ್ತಪಡಿಸಿದ್ದಾರೆ.
ಬೆಂಬಲಿಸುವ, ನಿಮ್ಮ ಮೇಲೆ ಪ್ರೀತಿಯ ಸುರಿಮಳೆಗರೆಯುವ, ನಿಮ್ಮನ್ನು ರಕ್ಷಿಸುವ, ನಿಮ್ಮನ್ನು ನೋಡಿಕೊಳ್ಳುವ, ಪ್ರತಿಯೊಂದು ಗೆಲುವನ್ನು ಆಚರಿಸುವ ವ್ಯಕ್ತಿಯನ್ನು ನಮ್ಮ ಬದುಕಿನಲ್ಲಿ ಪಡೆದುಕೊಳ್ಳುವುದನ್ನು ನಾನು ಪ್ರೀತಿ ಎನ್ನುತ್ತೇನೆ. ಆ ವ್ಯಕ್ತಿ ಇಂದು ನನ್ನ ಜೊತೆಗಿದ್ದಾನೆ.
ನನ್ನ ಬಗ್ಗೆ ನಿಮಗೆ ಸಮಸ್ಯೆ ಇದ್ದರೆ ಬೇಕಾದಷ್ಟು ಬೈಕೊಳ್ಳಿ ನಾನು ಅದನ್ನು ಸ್ವೀಕರಿಸಬಲ್ಲೆ. ಆದರೆ ನನ್ನ ಕುಟುಂಬದ ಬಗ್ಗೆ ತಿಳಿಯದೇ ಮಾತನಾಡಬೇಡಿ. ಇದನ್ನು ಫೆಮಿನಿಸಮ್ ಅನ್ನೋದಿಲ್ಲ. ಅದರ ವೇಷದಲ್ಲಿ ಗೂಂಡಾಗಿರಿ ಮಾಡ್ತಿದ್ದೀರಿ ಎನಿಸುತ್ತದೆ.
ಆಹಾ, 10 ವರ್ಷಗಳ ನಂತರವೂ ನಾನು ನಿಮ್ಮ ಹೃದಯವನ್ನು ಎಷ್ಟು ಆಳವಾಗಿ ಇರಿದುಬಿಟ್ಟಿದ್ದೇನೆ ಎನ್ನುವುದು ಗೊತ್ತಾಗುತ್ತಿದೆ. ನಿಮ್ಮ ಹೃದಯದಲ್ಲಿ ಇರುವ ಆಳವಾದ ನೋವಿನ ವಿಚಾರ ತಿಳಿದುಕೊಳ್ಳಲು ನಿಜಕ್ಕೂ ಚೆನ್ನಾಗಿದ್ದೇನೆ. ಇಷ್ಟು ಸಮಯದ ನಂತರವೂ ನೀವು ನನ್ನ ವಿಚಾರಗಳನ್ನು ಸಂಭ್ರಮಿಸುತ್ತಿದ್ದೀರಿ ಎಂದರೆ ನಿಜಕ್ಕೂ ನಾನು ಧನ್ಯ. ಥ್ಯಾಂಕ್ಯು ನಿಮ್ಮ ಪ್ರೀತಿಗೆ ಎಂದು ಕನ್ನಡಿಗರಿಗೆ ಪ್ರತ್ಯೇಕವಾಗಿ ಬರೆದುಕೊಂಡಿದ್ದಾರೆ,(ಏಜೆನ್ಸೀಸ್).