

ಮಧ್ಯಪ್ರದೇಶ: ನಿರ್ಮಾಣ ಹಂತದಲ್ಲಿದ್ದ ಮನೆಯ ಬಾಲ್ಕನಿಯಿಂದ ಗುಟ್ಕಾ ಉಗಳಲು ಹೋಗಿ ಹೈಟೆನ್ಷನ್ ವೈರ್ ಸ್ಪರ್ಶಿಸಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶ ರಾಜ್ಯದ ಗಂಜ್ಬಾಸೋಡ ಎಂಬಲ್ಲಿ ವರದಿಯಾಗಿದೆ.
ಮೃತ ದುರ್ದೈವಿಯನ್ನು ಪ್ರಭುಲಾಲ್ ಗುಪ್ತಾ (65) ಎಂದು ಗುರುತಿಸಲಾಗಿದ್ದು, ಹಲವು ವರ್ಷಗಳಿಂದ ಗಾರೆ ಕೆಲಸ ಮಾಡುತ್ತಿದ್ದ ಗುಪ್ತಾ, ಬಾಯಲ್ಲಿದ್ದ ಗುಟ್ಕಾವನ್ನು ಮೂರನೇ ಮಹಡಿಯಿಂದ ಉಗುಳಿದ್ದಾನೆ. ಆ ಎಂಜಲು ನೇರವಾಗಿ 11. ಕೆವಿ ಹೈಟೆನ್ಷನ್ ವೈರ್‌ಗೆ ತಗುಲಿ ಕರೆಂಟ್ ಶಾಕ್ ಹೊಡೆದಿದೆ. ಪರಿಣಾಮ ಪ್ರಭುಲಾಲ್ ಗುಪ್ತಾ ಬಾಲ್ಕನಿಯಲ್ಲಿ ನೇತಾಡುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಈ ಘಟನೆ ನಡೆಯುತ್ತಲೇ, ಸ್ಥಳೀಯರು ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು, ಪ್ರಭುಲಾಲ್ ಗುಪ್ತಾ ನನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆಸ್ಪತ್ರೆ ತಲುಪುವ ಮೊದಲೇ, ಪ್ರಾಣ ಕಳೆದುಕೊಂಡಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಈ ಘಟನೆ ನಡೆಯುತ್ತಿದ್ದಂತೆ ಗಂಜ್ಬಾಸೋಡ, ನಿವಾಸಿಗಳಲ್ಲಿ ಆತಂಕ ಮನೆಮಾಡಿದೆ. ಮನೆಗೆ ಅತ್ಯಂತ ಹತ್ತಿರದಲ್ಲಿಯೇ ಹೈಟೆನ್ಷನ್ ವೈರ್ ಹಾದು ಹೋಗಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ವಿದ್ಯುತ್ ಸರಬರಾಜು ಇಲಾಖೆಗೆ ಮಾಹಿತಿ ನೀಡಿದ್ದರೂ, ಏನೂ ಕ್ರಮ ತೆಗೆದುಕೊಂಡಿಲ್ಲ, ಈಗ ಒಂದು ಹೆಣವೇ ಬೀಳುವಂತಾಗಿದೆ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.
ಕೇವಲ ಗುಟ್ಕಾ ತಿಂದು ಉಗುಳುವವರ ಸಲುವಾಗಿ ಅಲ್ಲ, ಮನೆಯಲ್ಲಿ ಮಕ್ಕಳಿರುತ್ತಾರೆ, ಮಹಿಳೆಯರು ಬಟ್ಟೆಯನ್ನು ಬಿಸಲಿಗೆ ಒಣಗಿಸಲು ಹೋಗುತ್ತಾರೆ. ಈ ಸಂದರ್ಭದಲ್ಲಿ ಏನಾದರೂ ಹೆಚ್ಚು ಕಡಿಮೆ ಆದರೆ ಯಾರು ಹೊಣೆ? ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು, ಸ್ಥಳೀಯರು ಒತ್ತಾಯಿಸಿದ್ದಾರೆ. ಈ ಸಾವಿಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.
ವಿದ್ಯುತ್ ಕ್ಷೇತ್ರದ ತಜ್ಞರ ಪ್ರಕಾರ, ಕೆಲವು ಸಂದರ್ಭಗಳಲ್ಲಿ ಇಂತಹ ಅಪಘಾತ ಸಂಭವಿಸಬಹುದು. ಲಾಲಾರಸವು ನೀರು ಮತ್ತು ಕರಗಿದ ಲವಣಗಳನ್ನು ಹೊಂದಿರುವುದರಿಂದ, ಅದು ಸ್ವಲ್ಪ ಪ್ರಮಾಣದ ವಿದ್ಯುತ್ ಪ್ರವಾಹವನ್ನು ಸಾಗಿಸಬಹುದು. ಲಾಲಾರಸದ ನೇರವಾಗಿ ವಿದ್ಯುತ್ ತಂತಿಯನ್ನು ಸ್ಪರ್ಶಿಸಿದರೆ, ಅದು ವಿದ್ಯುತ್ ಪ್ರವಾಹಕ್ಕೆ ಅವಕಾಶ ನೀಡುತ್ತದೆ.
ಅಲ್ಲದೆ, 11 ಸಾವಿರ ವೋಲ್ಟ್‌ಗಳ ಹೈ-ವೋಲ್ಟೇಜ್ ವಿದ್ಯುತ್ ಮಾರ್ಗದ ಬಳಿ ಸಾಕಷ್ಟು ದೂರವಿಲ್ಲದಿದ್ದರೆ, ವಿದ್ಯುತ್ ಪ್ರವಾಹವು ಗಾಳಿಯ ಮೂಲಕವು ತಗಲುತ್ತದೆ ಎನ್ನುತ್ತಾರೆ. ಅಂತಹ ಸಂದರ್ಭದಲ್ಲಿ, ವಿದ್ಯುತ್ ಪ್ರವಾಹವು ದೇಹದ ಮೂಲಕ ಹಾದು ಹೋದರೆ, ಅದು ಗಂಭೀರವಾದ ಸುಟ್ಟಗಾಯಗಳು ಅಥವಾ ಸಾವಿಗೆ ಕಾರಣವಾಗಬಹುದು, (ಏಜೆನ್ಸೀಸ್).