ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ಗೆ ಮಾತೃವಿಯೋಗ: ಸಭೆಯಲ್ಲಿ ಮಾತನಾಡುವಾಗಲೇ ಬಂತು ನಿಧನದ ಸುದ್ದಿ! Yogi Adityanath

ಸಾವಿತ್ರಿ ದೇವಿ ಅವರು ಇಂದು ಬೆಳಗ್ಗೆ ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯ ಪಂಚೂರ್ ಗ್ರಾಮದಲ್ಲಿರುವ ತಮ್ಮ ಪೂರ್ವಿಕರ ಮನೆಯಲ್ಲಿ ನಿಧನರಾಗಿದ್ದಾರೆ. ಪೌರಿ ಜಿಲ್ಲೆಯ ಎಸ್‌ಎಸ್‌ಪಿ ಸರ್ವೇಶ್ ಕುಮಾರ್ ಹಾಗೂ ಯೋಗಿ ಅವರ ಸಹೋದರ ಮಹೇಂದ್ರ ಅವರು ಈ ದುಃಖದ ಸುದ್ದಿಯನ್ನು ಖಚಿತಪಡಿಸಿದ್ದಾರೆ.
Yogi Adityanath
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ಗೆ ಮಾತೃವಿಯೋಗ
Published on: 

ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ( Yogi Adityanath ) ಅವರಿಗೆ ಮಾತೃವಿಯೋಗ ಆಗಿದೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರ ತಾಯಿ ಸಾವಿತ್ರಿ ದೇವಿ ಅವರು 91ನೇ ವಯಸ್ಸಿನಲ್ಲಿ ತಮ್ಮ ಹುಟ್ಟೂರಿನಲ್ಲಿ ಇಂದು (ನ.20) ಕೊನೆಯುಸಿರೆಳೆದಿದ್ದಾರೆ.

ಸಾವಿತ್ರಿ ದೇವಿ ಅವರು ಇಂದು ಬೆಳಗ್ಗೆ ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯ ಪಂಚೂರ್ ಗ್ರಾಮದಲ್ಲಿರುವ ತಮ್ಮ ಪೂರ್ವಿಕರ ಮನೆಯಲ್ಲಿ ನಿಧನರಾಗಿದ್ದಾರೆ. ಪೌರಿ ಜಿಲ್ಲೆಯ ಎಸ್‌ಎಸ್‌ಪಿ ಸರ್ವೇಶ್ ಕುಮಾರ್ ಹಾಗೂ ಯೋಗಿ ಅವರ ಸಹೋದರ ಮಹೇಂದ್ರ ಅವರು ಈ ದುಃಖದ ಸುದ್ದಿಯನ್ನು ಖಚಿತಪಡಿಸಿದ್ದಾರೆ.

ಇದೇ ಪಂಚೂರ್ ಗ್ರಾಮದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಜನಿಸಿದರು. ಯೋಗಿ ಅವರ ತಂದೆ ಹಾಗೂ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ಆನಂದ್ ಸಿಂಗ್ ಬಿಷ್ಟ್ ಅವರು ಈ ಹಿಂದೆ ಅಂದರೆ 2020ರ ಏಪ್ರಿಲ್ ತಿಂಗಳಲ್ಲಿ ತಮ್ಮ 89ನೇ ವಯಸ್ಸಿನಲ್ಲಿ ನಿಧನರಾದರು.

Also Read
ಒಂದಲ್ಲ ಎರಡಲ್ಲ ಬರೋಬ್ಬರಿ 6 KG ಚಿನ್ನ ಧರಿಸಿ ಬಂದ ಬಂಗಾರದ ಮನುಷ್ಯ: ಒಟ್ಟು ಬೆಲೆ ಕೇಳಿದ್ರೆ ಬೆರಗಾಗೋದು ಖಚಿತ..! Gold Man
Yogi Adityanath

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ತವರು ಕ್ಷೇತ್ರವಾದ ಗೋರಖ್‌ಪುರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಂದರ್ಭದಲ್ಲೇ ತಾಯಿಯ ನಿಧನದ ಆಘಾತಕಾರಿ ಸುದ್ದಿ ಬಂದಿದೆ. ಸದ್ಯಕ್ಕೆ ಯೋಗಿ ಆದಿತ್ಯನಾಥ್ ಅವರಿಂದ ಯಾವುದೇ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ, ಅಲ್ಲದೆ ಅವರು ಅಂತಿಮ ದರ್ಶನಕ್ಕಾಗಿ ಪೌರಿ ಗರ್ವಾಲ್‌ಗೆ ಪ್ರಯಾಣ ಬೆಳೆಸಲಿದ್ದಾರೆಯೇ ಎಂಬುದು ಇನ್ನೂ ಖಚಿತವಾಗಿಲ್ಲ.

2020ರಲ್ಲಿ ತಂದೆ ನಿಧನರಾದಾಗ ಉತ್ತರ ಪ್ರದೇಶದಲ್ಲಿ ಕೋವಿಡ್-19 ಬಿಕ್ಕಟ್ಟು ಮತ್ತು ಲಾಕ್‌ಡೌನ್ ಜಾರಿಯಲ್ಲಿದ್ದ ಕಾರಣ ಆಡಳಿತಾತ್ಮಕ ಜವಾಬ್ದಾರಿಗಳಿಂದಾಗಿ ಯೋಗಿ ಅವರಿಗೆ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಮೃತ ಸಾವಿತ್ರಿ ದೇವಿ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ನಾಲ್ವರು ಪುತ್ರರು ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ. ಮಾನೇಂದ್ರ ಸಿಂಗ್, ಮಹೇಂದ್ರ ಸಿಂಗ್ ಮತ್ತು ಶೈಲೇಂದ್ರ ಮೋಹನ್ ಯೋಗಿ ಅವರ ಸಹೋದರರಾಗಿದ್ದರೆ, ಪುಷ್ಪಾ ದೇವಿ, ಕೌಶಲ್ಯ ಮತ್ತು ಶಶಿ ದೇವಿ ಸಹೋದರಿಯರಾಗಿದ್ದಾರೆ. ಸದ್ಯ ಸಾವಿತ್ರಿ ದೇವಿ ಅವರ ಪಾರ್ಥಿವ ಶರೀರವನ್ನು ಪಂಚೂರ್ ಗ್ರಾಮದಲ್ಲಿರುವ ಅವರ ಪೂರ್ವಿಕರ ಮನೆಯಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಇರಿಸಲಾಗಿದ್ದು, ನಾಳೆ ಹರಿದ್ವಾರದಲ್ಲಿ ಅಂತ್ಯಕ್ರಿಯೆ ನಡೆಯುವ ಸಾಧ್ಯತೆಯಿದೆ.

ಅಂದಹಾಗೆ, ಯೋಗಿ ಆದಿತ್ಯನಾಥ್ ಅವರ ಪೂರ್ವಾಶ್ರಮದ ಹೆಸರು ಅಜಯ್ ಸಿಂಗ್ ಬಿಷ್ಟ್. 1972ರ ಜೂನ್ 5ರಂದು ಉತ್ತರಾಖಂಡದ ಪಂಚೂರ್ ಗ್ರಾಮದಲ್ಲಿ ಜನಿಸಿದ ಅವರು, 1994ರಲ್ಲಿ ಲೌಕಿಕ ಜೀವನವನ್ನು ತ್ಯಜಿಸಿ ಸನ್ಯಾಸ ದೀಕ್ಷೆ ಸ್ವೀಕರಿಸಿದರು. ಬಳಿಕ ಗೋರಖ್‌ಪುರದ ಗೋರಖ್‌ಪೀಠವನ್ನು ಸೇರಿ ಮಹಂತ್ ಅವೈದ್ಯನಾಥ್ ಅವರ ಶಿಷ್ಯರಾದರು. ಸನ್ಯಾಸ ಸ್ವೀಕರಿಸಿದ ನಂತರ ಕುಟುಂಬದೊಂದಿಗಿನ ಒಡನಾಟ ಕಡಿಮೆಯಾದರೂ, ತಾಯಿ ಸಾವಿತ್ರಿ ದೇವಿ ಅವರೊಂದಿಗಿನ ಪ್ರೀತಿ ಮತ್ತು ಬಾಂಧವ್ಯ ಮಾತ್ರ ಹಾಗೆಯೇ ಉಳಿದಿತ್ತು. ಮುಖ್ಯಮಂತ್ರಿಯಾದ ಬಳಿಕವೂ ಅವರು ಬಿಡುವು ಮಾಡಿಕೊಂಡು ಆಗಾಗ ತಮ್ಮ ಹುಟ್ಟೂರಿಗೆ ಭೇಟಿ ನೀಡಿ ತಾಯಿಯ ಯೋಗಕ್ಷೇಮ ವಿಚಾರಿಸುತ್ತಿದ್ದರು.

Also Read
ರಾಮಾಯಣ ರಿಲೀಸ್ ಬಳಿಕ ಕೇರಳಂನ ಜಟಾಯು ಅರ್ಥ್ ಸೆಂಟರ್‌ಗೆ ಪ್ರಧಾನಿ ಭೇಟಿ?; ಈ ಸ್ಥಳದ ಮಹತ್ವವೇನು ಗೊತ್ತಾ?..Modi
Yogi Adityanath

2022ರ ಮೇ ತಿಂಗಳಲ್ಲಿ ಯೋಗಿ ಆದಿತ್ಯನಾಥ್ ಅವರು ಸುಮಾರು ಐದು ವರ್ಷಗಳ ಸುದೀರ್ಘ ವಿರಾಮದ ನಂತರ ತಮ್ಮ ಹುಟ್ಟೂರು ಪಂಚೂರ್ ಗ್ರಾಮಕ್ಕೆ ಭೇಟಿ ನೀಡಿ, ತಾಯಿ ಸಾವಿತ್ರಿ ದೇವಿ ಮತ್ತು ಕುಟುಂಬ ಸದಸ್ಯರೊಂದಿಗೆ ಒಂದು ರಾತ್ರಿ ಕಳೆದಿದ್ದರು. ತದನಂತರ 2024ರ ಜೂನ್‌ನಲ್ಲಿ ವಯೋಸಹಜ ಅನಾರೋಗ್ಯದ ಹಿನ್ನೆಲೆಯಲ್ಲಿ ಸಾವಿತ್ರಿ ದೇವಿ ಅವರು ರಿಷಿಕೇಶದ ಏಮ್ಸ್ (AIIMS) ಆಸ್ಪತ್ರೆಗೆ ದಾಖಲಾಗಿದ್ದಾಗಲೂ ಯೋಗಿ ಅವರು ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಂದ ಮಾಹಿತಿ ಪಡೆದಿದ್ದರು.

ಅಂದು ಉತ್ತರಾಖಂಡದ ಅಂದಿನ ಆರೋಗ್ಯ ಸಚಿವ ಧನ್ ಸಿಂಗ್ ರಾವತ್ ಮತ್ತು ಮಾಜಿ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಅವರ ಸಮ್ಮುಖದಲ್ಲಿ ತಾಯಿಯೊಂದಿಗೆ ಸುಮಾರು 20 ನಿಮಿಷಗಳ ಕಾಲ ಆತ್ಮೀಯವಾಗಿ ಮಾತನಾಡಿದ್ದ ಯೋಗಿ ಅವರು, ಇಂದು ತಮ್ಮ ಜೀವನದ ಅತ್ಯಂತ ಆಪ್ತ ಜೀವವಾದ ತಾಯಿಯನ್ನು ಕಳೆದುಕೊಂಡು ಶೋಕಸಾಗರದಲ್ಲಿ ಮುಳುಗಿದ್ದಾರೆ, (ಏಜೆನ್ಸೀಸ್​).