

ಪಟನಾ: ಮೈತುಂಬಾ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ, ಕಣ್ಣು ಕುಕ್ಕುವ ಆಭರಣಗಳ ಹೊಳಪು... ಇದು ಯಾವುದೋ ರಾಜಮನೆತನದ ವೈಭವವಲ್ಲ, ಬದಲಿಗೆ ಉತ್ತರ ಪ್ರದೇಶದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಕಂಡುಬಂದ ಬಿಹಾರದ 'ಗೋಲ್ಡ್ ಮ್ಯಾನ್' ಖ್ಯಾತಿಯ ಪ್ರೇಮ್ ಕುಮಾರ್ ಸಿಂಗ್ ( Gold Man ) ಅವರ ಅಸಾಮಾನ್ಯ ದೃಶ್ಯ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಹುಬ್ಬೇರಿಸಿದೆ.
ಉತ್ತರ ಪ್ರದೇಶದ ರಾಜಕಾರಣಿ ರಾಜಾ ಭೈಯಾ ಅವರು ಪ್ರತಾಪ್‌ಗಢ ಜಿಲ್ಲೆಯ ಕುಂಡಾದಲ್ಲಿ ಆಯೋಜಿಸಿದ್ದ 'ಶ್ರೀ ರಾಮ ಕಥಾ' ಧಾರ್ಮಿಕ ಕಾರ್ಯಕ್ರಮದಲ್ಲಿ ಬಿಹಾರದ 'ಗೋಲ್ಡ್ ಮ್ಯಾನ್' ಎಂದೇ ಖ್ಯಾತರಾಗಿರುವ ಪ್ರೇಮ್ ಕುಮಾರ್ ಸಿಂಗ್ ವಿಶೇಷ ಆಕರ್ಷಣೆಯ ಕೇಂದ್ರಬಿಂದುವಾದರು.
ಸುಮಾರು 10 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ, ಬರೋಬ್ಬರಿ 6.3 ಕೆ.ಜಿ ತೂಕದ ಚಿನ್ನಾಭರಣಗಳನ್ನು ಧರಿಸಿ ಕಾರ್ಯಕ್ರಮಕ್ಕೆ ಆಗಮಿಸಿದ ಸಿಂಗ್ ಅವರು ಎಲ್ಲರ ಹುಬ್ಬೇರುವಂತೆ ಮಾಡಿದರು. ಕುತ್ತಿಗೆಯ ತುಂಬಾ ದಪ್ಪನೆಯ ಚಿನ್ನದ ಸರಗಳು, ಕೈಗಳಿಗೆ ಭಾರವಾದ ಬ್ರೇಸ್‌ಲೆಟ್‌ಗಳು ಹಾಗೂ ವಿವಿಧ ಬಗೆಯ ಸ್ವರ್ಣಾಭರಣಗಳಿಂದ ಅಲಂಕೃತರಾಗಿದ್ದ ಸಿಂಗ್ ಅವರ ಈ ವಿಶಿಷ್ಟ ಶೈಲಿಯನ್ನು ಕಂಡು ಅಲ್ಲಿ ನೆರೆದಿದ್ದ ಭಕ್ತರು ಒಂದು ಕ್ಷಣ ದಂಗಾದರು.
ಪ್ರೇಮ್ ಕುಮಾರ್ ಸಿಂಗ್ ಅವರು ಕಾರ್ಯಕ್ರಮದ ಆವರಣಕ್ಕೆ ಕಾಲಿಡುತ್ತಿದ್ದಂತೆಯೇ ಜನಸಾಗರವೇ ಅವರತ್ತ ಹರಿದುಬಂತು. ಧಾರ್ಮಿಕ ಪ್ರವಚನ ಕೇಳಲು ಬಂದಿದ್ದ ಅನೇಕರು ತಮ್ಮ ಗಮನವನ್ನು ಸಿಂಗ್ ಅವರತ್ತ ಹರಿಸಿ, ಅವರನ್ನು ಹತ್ತಿರದಿಂದ ನೋಡಲು ಮುಗಿಬಿದ್ದರು. ಅಷ್ಟೇ ಅಲ್ಲದೆ, ಮೈತುಂಬಾ ಚಿನ್ನ ಹೊದ್ದು ನಿಂತಿದ್ದ ಸಿಂಗ್ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮತ್ತು ಫೋಟೋ ತೆಗೆಸಿಕೊಳ್ಳಲು ಜನರು ಸಾಲುಗಟ್ಟಿ ನಿಂತಿದ್ದರು. ಇಡೀ ಧಾರ್ಮಿಕ ಸಮಾವೇಶದಲ್ಲಿ ಇವರ ಉಪಸ್ಥಿತಿಯೇ ದೊಡ್ಡ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದ್ದು, ನೆರೆದಿದ್ದವರ ಕುತೂಹಲವನ್ನು ಇಮ್ಮಡಿಗೊಳಿಸಿತು.
ರಾಜಾ ಭೈಯಾ ಅವರ ನೇತೃತ್ವದಲ್ಲಿ ಕುಂಡಾದಲ್ಲಿ ಆಯೋಜಿಸಲಾಗಿದ್ದ ಈ ಭವ್ಯ ರಾಮ ಕಥಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದೇ ಪ್ರೇಮ್ ಕುಮಾರ್ ಸಿಂಗ್ ಅವರು ಬಿಹಾರದಿಂದ ಪ್ರಯಾಣ ಬೆಳೆಸಿ ಬಂದಿದ್ದರು. ತಮ್ಮ ವಿಶಿಷ್ಟ ಉಡುಗೆ-ತೊಡುಗೆ ಹಾಗೂ ಮೈಮೇಲಿದ್ದ ಅಪಾರ ಪ್ರಮಾಣದ ಚಿನ್ನಾಭರಣಗಳಿಂದಾಗಿ ಅವರು ಕಾರ್ಯಕ್ರಮಕ್ಕೆ ಒಂದು ಅನಿರೀಕ್ಷಿತ ಮೆರುಗು ನೀಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಂಗ್, ರಾಜಾ ಭೈಯಾ ಅವರು ಆಯೋಜಿಸಿದ್ದ ಈ ಧಾರ್ಮಿಕ ಸಮಾವೇಶ ಮತ್ತು ಶ್ರೀ ರಾಮ ಕಥಾ ಕಾರ್ಯಕ್ರಮದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಅಪಾರ ಪ್ರಮಾಣದ ಚಿನ್ನಾಭರಣಗಳನ್ನು ಧರಿಸುವ ತಮ್ಮ ವಿಭಿನ್ನ ಹವ್ಯಾಸದಿಂದಲೇ ಪ್ರೇಮ್ ಕುಮಾರ್ ಸಿಂಗ್ ಅವರು ಬಿಹಾರದಲ್ಲಿ ಮನೆಮಾತಾಗಿದ್ದು, ಜನರಿಂದ 'ಗೋಲ್ಡ್ ಮ್ಯಾನ್' ಎಂಬ ಬಿರುದನ್ನು ಪಡೆದುಕೊಂಡಿದ್ದಾರೆ. ನಿತ್ಯವೂ ಕೆ.ಜಿ ಗಟ್ಟಲೆ ಚಿನ್ನವನ್ನು ಧರಿಸಿ ಓಡಾಡುವ ಇವರ ಈ ವಿಶಿಷ್ಟ ವ್ಯಕ್ತಿತ್ವವು ಹೋದಲ್ಲೆಲ್ಲ ಜನರ ಗಮನ ಸೆಳೆಯುತ್ತದೆ. ಅದೇ ರೀತಿ ಪ್ರತಾಪ್‌ಗಢದ ಈ ಧಾರ್ಮಿಕ ಕಾರ್ಯಕ್ರಮದಲ್ಲೂ ಇವರ ಚಿನ್ನದ ಪ್ರೀತಿಯು ಭಕ್ತರಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ಇಡೀ ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿ ಗಮನ ಸೆಳೆಯಿತು, (ಏಜೆನ್ಸೀಸ್).