ಪ್ರೇಯಸಿಗೆ ಮನೆ ಕಟ್ಟಿಸಿಕೊಡಲು 21 ಕೋಟಿ ರೂ. ಮೌಲ್ಯದ ಚಿನ್ನ ದೋಚಿದ ಯೂಟ್ಯೂಬರ್: ಗಣೇಶನ ಟ್ಯಾಟೂವಿನಿಂದ ಸಿಕ್ಕಿಬಿದ್ದ ಖದೀಮ! Tanishq Jewellery robbery

Tanishq Jewellery robbery
ಪ್ರೇಯಸಿಗೆ ಮನೆ ಕಟ್ಟಿಸಿಕೊಡಲು 21 ಕೋಟಿ ರೂ. ಮೌಲ್ಯದ ಚಿನ್ನ ದೋಚಿದ ಯೂಟ್ಯೂಬರ್: ಗಣೇಶನ ಟ್ಯಾಟೂವಿನಿಂದ ಸಿಕ್ಕಿಬಿದ್ದ ಖದೀಮ!
Published on: 

ಚೆನ್ನೈ: ತಮಿಳುನಾಡಿನ ಮದುರೈನಲ್ಲಿರುವ ಪ್ರತಿಷ್ಠಿತ 'ತನಿಷ್ಕ್' ( Tanishq Jewellery robbery ) ಚಿನ್ನಾಭರಣ ಮಳಿಗೆಯಲ್ಲಿ ನಡೆದಿದ್ದ 21 ಕೋಟಿ ರೂಪಾಯಿ ಮೌಲ್ಯದ ಭಾರಿ ಚಿನ್ನ ದರೋಡೆ ಪ್ರಕರಣದಲ್ಲಿ ಇದೀಗ ಮತ್ತಷ್ಟು ಸ್ಫೋಟಕ ಸಂಗತಿಗಳು ಬಯಲಾಗಿವೆ.

ಪ್ರಕರಣದ ಪ್ರಮುಖ ಆರೋಪಿಯಾದ ಯೂಟ್ಯೂಬರ್ ನಿಶಾಂತ್, ತನ್ನ ಪ್ರೇಯಸಿ ಹಾಗೂ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಮೀನಾಕ್ಷಿಯ ಮನೆ ನಿರ್ಮಾಣವನ್ನು ಪೂರ್ಣಗೊಳಿಸಲು ಮತ್ತು ಆಕೆಯ ಸಾಲಗಳನ್ನು ತೀರಿಸಲು ಹಣ ಹೊಂದಿಸುವ ಸಲುವಾಗಿ ಈ ಬೃಹತ್ ದರೋಡೆಗೆ ಸಂಚು ರೂಪಿಸಿದ್ದ ಎಂಬುದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ. ಸದ್ಯ ತಲೆಮರೆಸಿಕೊಂಡಿರುವ ನಿಶಾಂತ್‌ನನ್ನು ಬಂಧಿಸಿ ವಿಚಾರಣೆ ನಡೆಸಿದರೆ ಇನ್ನಷ್ಟು ಮಹತ್ವದ ಮಾಹಿತಿಗಳು ಹೊರಬರಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Also Read
ಸಿನಿಮಾ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ: ಒಂದೇ ಒಂದು ಟೋಪಿಯಿಂದ ಸಿಕ್ಕಿಬಿದ್ದ ಸೋಷಿಯಲ್ ಮೀಡಿಯಾ ಸ್ಟಾರ್ಸ್! Madurai Gold Heist
Tanishq Jewellery robbery

ದರೋಡೆಯಾದ ಮಳಿಗೆಯಿಂದ ಬರೋಬ್ಬರಿ 21 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಲಾಗಿತ್ತು. ಈ ಪೈಕಿ ಒಂದಷ್ಟು ಚಿನ್ನವನ್ನು ಪೊಲೀಸರು ಈಗಾಗಲೇ ಮಾದಕುಲಂ ಕೆರೆಯ ಸಮೀಪವಿರುವ ಜಮೀನೊಂದರಿಂದ ವಶಪಡಿಸಿಕೊಂಡಿದ್ದಾರೆ. ಕದ್ದ ಚಿನ್ನವನ್ನು ಮೀನಾಕ್ಷಿಯೊಂದಿಗೆ ಸೇರಿ ಮಾದಕುಲಂ ಕೆರೆ ಬಳಿಯ ತನ್ನ ಜಮೀನಿನಲ್ಲಿ ಬಚ್ಚಿಡುವುದು ನಿಶಾಂತ್‌ನ ಪ್ಲಾನ್ ಆಗಿತ್ತು. ಇದಕ್ಕಾಗಿ ಆತ ತನ್ನ ತಂದೆ ಸುರೇಶ್‌ನನ್ನು ತಿರುಪ್ಪರಂಕುಂದ್ರಂ ಸೇತುವೆ ಬಳಿ ಕರೆಸಿಕೊಂಡು ಚಿನ್ನದ ಚೀಲವನ್ನು ಹಸ್ತಾಂತರಿಸಿದ್ದನು.

ಮರುದಿನ ತಂದೆಯೊಂದಿಗೆ ಆಟೋದಲ್ಲಿ ಜಮೀನಿಗೆ ತೆರಳಿದ ನಿಶಾಂತ್, ಕದ್ದ ಮಾಲಿನ ಒಂದು ಭಾಗವನ್ನು ಮಣ್ಣಿನಲ್ಲಿ ಹೂತುಹಾಕಿದ್ದನು. ಅಲ್ಲದೆ, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಕಳ್ಳತನದ ವೇಳೆ ತಾನು ಧರಿಸಿದ್ದ ಬಟ್ಟೆಗಳಿಗೆ ಬೆಂಕಿ ಹಚ್ಚಿ ಸುಟ್ಟುಹಾಕಿ, ಉಳಿದ ಚಿನ್ನದೊಂದಿಗೆ ಪರಾರಿಯಾಗಿದ್ದನು.

ಸಿಸಿಟಿವಿ ದೃಶ್ಯಾವಳಿಗಳು ಹಾಗೂ ನಿಶಾಂತ್ ಮತ್ತು ಆತನ ತಂದೆ ಸುರೇಶ್ ಬಟ್ಟೆಗಳನ್ನು ಸುಡುತ್ತಿದ್ದುದನ್ನು ಕಣ್ಣಾರೆ ಕಂಡ ಪ್ರತ್ಯಕ್ಷದರ್ಶಿಯೊಬ್ಬರ ಹೇಳಿಕೆ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ನಿರ್ಣಾಯಕವಾಯಿತು. ದರೋಡೆ ಮಾಡಲು ನಿಶಾಂತ್ ತನ್ನ ಪ್ರೇಯಸಿ ಮೀನಾಕ್ಷಿಯ ಸ್ಕೂಟರ್‌ನಲ್ಲಿಯೇ ಚಿನ್ನದಂಗಡಿಗೆ ಬಂದಿದ್ದನು. ಅಷ್ಟೇ ಅಲ್ಲದೆ, ಸಿಸಿಟಿವಿ ಕ್ಯಾಮೆರಾದಲ್ಲಿ ನಿಶಾಂತ್‌ನ ಕೈಮೇಲಿದ್ದ ವಿನಾಯಕನ ಟ್ಯಾಟೂ ಸ್ಪಷ್ಟವಾಗಿ ಸೆರೆಯಾಗಿತ್ತು. ಈ ಒಂದು ಸುಳಿವು ಪೊಲೀಸರ ತನಿಖೆಯನ್ನು ಮತ್ತಷ್ಟು ಸುಲಭಗೊಳಿಸಿತು.

ಶೋರೂಂ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯ ಚಿತ್ರಗಳನ್ನು ಮಳಿಗೆಯ ಸಿಬ್ಬಂದಿಯೂ ಗುರುತಿಸಿದ್ದು, ಈ ಎಲ್ಲಾ ಸಾಕ್ಷ್ಯಗಳ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ನೇರವಾಗಿ ನಿಶಾಂತ್, ಆತನ ತಂದೆ ಸುರೇಶ್ ಮತ್ತು ಪ್ರೇಯಸಿ ಮೀನಾಕ್ಷಿಯ ಜಾಡು ಹಿಡಿದಿದ್ದಾರೆ.

ದರೋಡೆಯನ್ನು ಯಶಸ್ವಿಯಾಗಿ ಮುಗಿಸಿದ ತಕ್ಷಣ ನಿಶಾಂತ್ ತನ್ನ ಪ್ರೇಯಸಿ ಮೀನಾಕ್ಷಿಗೆ ಫೋನ್ ಕರೆ ಮಾಡಿ ವಿಷಯ ತಿಳಿಸಿದ್ದನು. ಅಷ್ಟೇ ಅಲ್ಲದೆ, ಇಬ್ಬರೂ ಈ ಕುರಿತು ಮೊಬೈಲ್‌ನಲ್ಲಿ ಚಾಟ್ ಕೂಡ ಮಾಡಿದ್ದರು. ಈ ಫೋನ್ ಕರೆ ಮತ್ತು ಚಾಟ್ ವಿವರಗಳೇ ಪ್ರಕರಣದಲ್ಲಿ ಮೀನಾಕ್ಷಿಯ ಪಾತ್ರವನ್ನು ಬಯಲಿಗೆಳೆಯಲು ಕಾರಣವಾಯಿತು.

Also Read
ಡೇಟಿಂಗ್ ಆ್ಯಪ್ ಪ್ರಿಯಕರನನ್ನು ಮದ್ವೆಯಾಗಲು ಕೆನಡಾದಿಂದ ಭಾರತಕ್ಕೆ ಬಂದ ಮಹಿಳೆಗೆ ಕಾದಿತ್ತು ಬಿಗ್​ ಶಾಕ್​...! Canadian Woman
Tanishq Jewellery robbery

ಆನ್‌ಲೈನ್‌ನಲ್ಲಿ ಆಭರಣಗಳು ಮತ್ತು ಇತರ ವಸ್ತುಗಳನ್ನು ಮಾರಾಟ ಮಾಡುವ ವೃತ್ತಿಯಲ್ಲೂ ತೊಡಗಿಸಿಕೊಂಡಿರುವ ಮೀನಾಕ್ಷಿ ಹಾಗೂ ನಿಶಾಂತ್‌ನ ತಂದೆ ಸುರೇಶ್‌ನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ಇಬ್ಬರ ವಿಚಾರಣೆಯನ್ನು ಮುಂದುವರಿಸಿದ್ದಾರೆ.

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ತನಿಷ್ಕ್ ಮಳಿಗೆಯು ಅಕ್ಟೋಬರ್ 14ರಂದು ತರಾತುರಿಯಲ್ಲಿ ತನ್ನ ಕಾರ್ಯಾಚರಣೆಯನ್ನು ಆರಂಭಿಸಿತ್ತು. ಹೀಗಾಗಿ ಶೋರೂಂನ ಒಳಾಂಗಣ ಮತ್ತು ಭದ್ರತಾ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ನಿಶಾಂತ್, ಕಳ್ಳತನಕ್ಕೂ ಮುನ್ನ ಚಿನ್ನ ಖರೀದಿಸುವ ನೆಪದಲ್ಲಿ ಮೂರು ಬಾರಿ ಮಳಿಗೆಗೆ ಭೇಟಿ ನೀಡಿದ್ದನು. ಪ್ರತಿ ಬಾರಿ ಬಂದಾಗಲೂ ಬೇರೆ ಬೇರೆ ಶರ್ಟ್‌ಗಳನ್ನು ಧರಿಸಿದ್ದನಾದರೂ, ಮೂರೂ ಬಾರಿ ಒಂದೇ ಟೋಪಿಯನ್ನು ಧರಿಸಿದ್ದನು ಮತ್ತು ಕೈಗೆ ಬ್ಯಾಂಡೇಜ್ ಸುತ್ತಿಕೊಂಡಿದ್ದನು. ಮಳಿಗೆಯ ಒಳವಿನ್ಯಾಸ ಮತ್ತು ಚಿನ್ನಾಭರಣಗಳನ್ನು ಹೇಗೆ ಜೋಡಿಸಲಾಗಿದೆ ಎಂಬುದನ್ನು ಅರಿಯಲು ಆತ ಈ ರೀತಿ ಭೇಟಿ ಮಾಡಿದ್ದನು ಎಂಬುದು ಸಿಸಿಟಿವಿಯಿಂದ ತಿಳಿದುಬಂದಿದೆ.

ನವೆಂಬರ್ 5ರ ಬೆಳಗ್ಗೆಯೇ ಶೋರೂಂ ಒಳನುಗ್ಗಲು ನಿಶಾಂತ್ ಪ್ರಯತ್ನಿಸಿದ್ದನಾದರೂ ಅದು ವಿಫಲವಾಗಿತ್ತು. ಬಳಿಕ ನವೆಂಬರ್ 12ರ ಮುಂಜಾನೆ 3:34ರ ಸುಮಾರಿಗೆ ಮತ್ತೆ ಬಂದ ಆತ, ಕಟ್ಟಡದ ಹೊರಭಾಗದಲ್ಲಿದ್ದ ಕಬ್ಬಿಣದ ಮೆಟ್ಟಿಲುಗಳ ಮೂಲಕ ಮೂರನೇ ಮಹಡಿಯ ಟೆರೇಸ್‌ಗೆ ಹತ್ತಿದ್ದನು. ಅಲ್ಲಿ ಅಪೂರ್ಣಗೊಂಡಿದ್ದ ಲಿಫ್ಟ್ ಶಾಫ್ಟ್‌ಗೆ (Lift shaft) ಹಗ್ಗ ಕಟ್ಟಿ ಅದರ ಮೂಲಕ ಕೆಳಗಿಳಿದು ಶೋರೂಂ ಪ್ರವೇಶಿಸಿದ್ದನು. ಮಳಿಗೆಯಲ್ಲಿ ಹೆಚ್ಚಿನ ಚಿನ್ನಾಭರಣಗಳನ್ನು ಪ್ರದರ್ಶನಕ್ಕೆ ಇಡಲಾಗಿದ್ದದ್ದು ಹಾಗೂ ಸೆಕ್ಯುರಿಟಿ ಅಲಾರಾಂ ಆಫ್ ಆಗಿದ್ದದ್ದು ಕಳ್ಳನಿಗೆ ವರದಾನವಾಯಿತು. ಸುಮಾರು ಒಂದು ಗಂಟೆ ಕಾಲ ಬ್ಯಾಗ್‌ಗಳಲ್ಲಿ ಚಿನ್ನ ತುಂಬಿಕೊಂಡ ನಿಶಾಂತ್, ಬಳಿಕ ಸ್ಕೂಟರ್ ಏರಿ ಪರಾರಿಯಾಗಿದ್ದನು, (ಏಜೆನ್ಸೀಸ್​).