ಡೇಟಿಂಗ್ ಆ್ಯಪ್ ಪ್ರಿಯಕರನನ್ನು ಮದ್ವೆಯಾಗಲು ಕೆನಡಾದಿಂದ ಭಾರತಕ್ಕೆ ಬಂದ ಮಹಿಳೆಗೆ ಕಾದಿತ್ತು ಬಿಗ್​ ಶಾಕ್​...! Canadian Woman

ಮಹಿಳೆಯ ಅಸಲಿ ವಯಸ್ಸು ತಿಳಿಯುತ್ತಿದ್ದಂತೆಯೇ ಯುವಕ ಮದುವೆಯಾಗಲು ನಿರಾಕರಿಸಿದ್ದು, ಇದರಿಂದ ಮನನೊಂದ ಮಹಿಳೆ ನೇರವಾಗಿ ಕೆನಡಾ ರಾಯಭಾರ ಕಚೇರಿಯ ಮೊರೆ ಹೋಗಿರುವ ಘಟನೆ ರಾಜಸ್ಥಾನದ ಕೋಟ್‌ಪುಟ್ಲಿ-ಬೆಹ್ರೋರ್ ಜಿಲ್ಲೆಯ ನೀಮ್ರಾನಾದಲ್ಲಿ ಬೆಳಕಿಗೆ ಬಂದಿದೆ.
Canadian Woman
ಡೇಟಿಂಗ್ ಆ್ಯಪ್ ಪ್ರಿಯಕರನನ್ನು ಮದ್ವೆಯಾಗಲು ಕೆನಡಾದಿಂದ ಭಾರತಕ್ಕೆ ಬಂದ ಮಹಿಳೆಗೆ ಕಾದಿತ್ತು ಬಿಗ್​ ಶಾಕ್​...!
Published on: 

ಜೈಪುರ: ಆನ್‌ಲೈನ್‌ನಲ್ಲಿ ಶುರುವಾದ ಎಲ್ಲಾ ಪ್ರೇಮಕಥೆಗಳಿಗೂ ಸುಖಾಂತ್ಯ ಸಿಗುವುದಿಲ್ಲ ಎಂಬುದಕ್ಕೆ ರಾಜಸ್ಥಾನದಲ್ಲಿ ನಡೆದಿರುವ ಈ ವಿಚಿತ್ರ ಘಟನೆಯೇ ಸಾಕ್ಷಿಯಾಗಿದೆ. ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ಭಾರತೀಯ ಯುವಕನನ್ನು ಮದುವೆಯಾಗುವ ಕನಸು ಹೊತ್ತು ಸಾವಿರಾರು ಕಿಲೋಮೀಟರ್ ದೂರದ ಕೆನಡಾದಿಂದ ಭಾರತಕ್ಕೆ ಬಂದ ಮಹಿಳೆಯೊಬ್ಬರಿಗೆ ( Canadian Woman ) ತೀವ್ರ ನಿರಾಸೆಯಾಗಿದೆ.

ಮಹಿಳೆಯ ಅಸಲಿ ವಯಸ್ಸು ತಿಳಿಯುತ್ತಿದ್ದಂತೆಯೇ ಯುವಕ ಮದುವೆಯಾಗಲು ನಿರಾಕರಿಸಿದ್ದು, ಇದರಿಂದ ಮನನೊಂದ ಮಹಿಳೆ ನೇರವಾಗಿ ಕೆನಡಾ ರಾಯಭಾರ ಕಚೇರಿಯ ಮೊರೆ ಹೋಗಿರುವ ಘಟನೆ ರಾಜಸ್ಥಾನದ ಕೋಟ್‌ಪುಟ್ಲಿ-ಬೆಹ್ರೋರ್ ಜಿಲ್ಲೆಯ ನೀಮ್ರಾನಾದಲ್ಲಿ ಬೆಳಕಿಗೆ ಬಂದಿದೆ.

Also Read
ಪೊಲೀಸ್ ಅಧಿಕಾರಿಗೇ ಬ್ಲ್ಯಾಕ್‌ಮೇಲ್ ಕಾಟ: ಮದುವೆ ಒತ್ತಡ ತಾಳಲಾರದೆ ರೈಲಿಗೆ ತಲೆಕೊಟ್ಟ ಸಬ್‌ ಇನ್ಸ್‌ಪೆಕ್ಟರ್! UttarPradesh Crime
Canadian Woman

ನೀಮ್ರಾನಾ ಪೊಲೀಸ್ ಠಾಣೆಯ ಅಧಿಕಾರಿ ಸುರೇಂದ್ರ ಯಾದವ್ ಅವರು ನೀಡಿರುವ ಮಾಹಿತಿಯ ಪ್ರಕಾರ, ಕೆನಡಾದ ಮಹಿಳೆ ಮತ್ತು ಹರಿಯಾಣದ ಪಾಣಿಪತ್ ಮೂಲದ ನಿತಿನ್ ಎಂಬುವವರು ಸುಮಾರು ಒಂದು ವರ್ಷದ ಹಿಂದೆ ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿದ್ದರು. ಆರಂಭದಲ್ಲಿ ಸ್ನೇಹದಿಂದ ಶುರುವಾದ ಇವರ ಮಾತುಕತೆ ಕ್ರಮೇಣ ಗಾಢ ಪ್ರೇಮಕ್ಕೆ ತಿರುಗಿ, ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ಮದುವೆಯ ಸಿದ್ಧತೆಯೊಂದಿಗೆ ಪ್ರವಾಸಿ ವೀಸಾ (Tourist visa) ಪಡೆದ ಮಹಿಳೆ, ನವೆಂಬರ್ 11ರಂದು ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಖುದ್ದು ನಿತಿನ್ ದೆಹಲಿ ಏರ್‌ಪೋರ್ಟ್‌ಗೆ ಹೋಗಿ ಆಕೆಯನ್ನು ಬರಮಾಡಿಕೊಂಡು, ನೀಮ್ರಾನಾದಲ್ಲಿರುವ ತನ್ನ ಚಿಕ್ಕಪ್ಪ ಮತ್ತು ಚಿಕ್ಕಮ್ಮನ ಫ್ಲ್ಯಾಟ್‌ಗೆ ಕರೆದುಕೊಂಡು ಹೋಗಿದ್ದನು.

ಹೌಸಿಂಗ್ ಸೊಸೈಟಿಯ ಫ್ಲ್ಯಾಟ್‌ನಲ್ಲಿ ಇಬ್ಬರೂ ಎರಡು ದಿನಗಳ ಕಾಲ ಒಟ್ಟಿಗೆ ತಂಗಿದ್ದರು. ಈ ವೇಳೆ ಮದುವೆಯ ವಿಚಾರವಾಗಿ ಇಬ್ಬರ ನಡುವೆ ಮಾತುಕತೆ ನಡೆದಿದೆ. ಆದರೆ, ಮಹಿಳೆಗೆ ಸುಮಾರು 61 ವರ್ಷ ವಯಸ್ಸಾಗಿದೆ ಎಂಬ ಸತ್ಯ ನಿತಿನ್‌ಗೆ ತಿಳಿಯುತ್ತಿದ್ದಂತೆಯೇ ಇಡೀ ಕಥೆಗೆ ಅನಿರೀಕ್ಷಿತ ತಿರುವು ಸಿಕ್ಕಿದೆ. ಮಹಿಳೆಯ ವಯಸ್ಸಿನ ವಿಚಾರ ತಿಳಿದು ಆಘಾತಕ್ಕೆ ಒಳಗಾದ ನಿತಿನ್, ಮದುವೆಯಾಗಲು ಸಾಧ್ಯವಿಲ್ಲ ಎಂದು ನಿರಾಕರಿಸಿದ್ದಾನೆ. ಇದರಿಂದಾಗಿ ಇಬ್ಬರ ನಡುವೆ ತೀವ್ರ ವಾಗ್ವಾದ ಮತ್ತು ಮನಸ್ತಾಪ ಉಂಟಾಗಿದೆ.

ವಿದೇಶಿ ನೆಲದಲ್ಲಿ ಪ್ರಿಯಕರನಿಂದ ಮೋಸ ಹೋದಂತಾದ ಕೆನಡಾ ಮಹಿಳೆ, ತಕ್ಷಣವೇ ನವೆಂಬರ್ 13ರಂದು ಕೆನಡಾ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ತನಗಾದ ಅನ್ಯಾಯ ಮತ್ತು ನಡೆದ ಎಲ್ಲಾ ಬೆಳವಣಿಗೆಗಳ ಬಗ್ಗೆ ವಿವರಿಸಿದ್ದಾರೆ. ರಾಯಭಾರ ಕಚೇರಿಯಿಂದ ಮಾಹಿತಿ ಬರುತ್ತಿದ್ದಂತೆಯೇ ಎಚ್ಚೆತ್ತುಕೊಂಡ ನೀಮ್ರಾನಾ ಪೊಲೀಸರು, ತಕ್ಷಣವೇ ನಿತಿನ್ ಇದ್ದ ಫ್ಲ್ಯಾಟ್‌ಗೆ ತೆರಳಿ ಯುವಕ ಮತ್ತು ಕೆನಡಾ ಮಹಿಳೆ ಇಬ್ಬರನ್ನೂ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ.

Also Read
ಸೋನಿಯಾ ಗಾಂಧಿ ಆತ್ಮಕಥೆ ಬಿಲಾಂಗಿಂಗ್ ಎ ಜರ್ನಿ ಆಫ್ ಲವ್ ಪುಸ್ತಕ ಬಿಡುಗಡೆ ಕಾರ್ಯಕ್ರಮ: ಸಿಎಂ ವಿಜಯ್ ಭಾಗಿ ಸಾಧ್ಯತೆ | CM Vijay
Canadian Woman

ಸದ್ಯ ಪೊಲೀಸರು ಆರೋಪಿ ನಿತಿನ್‌ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಕೆನಡಾ ಮಹಿಳೆಗೆ ಕೋಟ್‌ಪುಟ್ಲಿಯ 'ಕೋರ್ ಸೆಂಟರ್‌'ನಲ್ಲಿ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಹರಿಯಾಣದ ಪಾಣಿಪತ್ ಮೂಲದ ನಿತಿನ್ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಯುತ್ತಿದ್ದು, ಯುವಕನ ವಿಚಾರಣೆ ಹಾಗೂ ತನಿಖೆಯ ವರದಿಯನ್ನು ಆಧರಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ, (ಏಜೆನ್ಸೀಸ್​).