

Success Story : ಕೃಷಿ ಕ್ಷೇತ್ರ ಇಂದು ಕೇವಲ ಉಳುಮೆಗೆ ಮಾತ್ರ ಸೀಮಿತವಾಗಿರದೆ, ಲಕ್ಷಾಂತರ ಮಹಿಳೆಯರ ಬದುಕಿಗೆ ಆಸರೆಯಾಗುವ ಉದ್ಯಮವಾಗಿ ರೂಪುಗೊಳ್ಳುತ್ತಿದೆ. ಮನೆಗೆಲಸಕ್ಕಷ್ಟೇ ಸೀಮಿತವಾಗಿದ್ದ ಸಾಮಾನ್ಯ ಗೃಹಿಣಿಯೊಬ್ಬರು ತಮ್ಮ ದಿಟ್ಟ ಆಲೋಚನೆಯಿಂದ ನೂರಾರು ಮಹಿಳೆಯರ ಜೀವನವನ್ನೇ ಬದಲಾಯಿಸಿ, ಕೋಟ್ಯಂತರ ರೂಪಾಯಿ ವಹಿವಾಟು ನಡೆಸುವ ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದ ರೋಚಕ ಕಥೆಯಿದು. ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯ ಭಗವತಿ ದೇವಿ ಎಂಬ 10ನೇ ತರಗತಿಯವರೆಗೆ ಮಾತ್ರ ಓದಿದ 43 ವರ್ಷದ ಗೃಹಿಣಿ, ಇಂದು ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸೃಷ್ಟಿಸಿದ್ದಾರೆ. ರಾಗಿ ಬೆಳೆಯುವ ಮೂಲಕ ತಮ್ಮ ಜಿಲ್ಲೆಯನ್ನೇ "ರಾಗಿ ಸಿಟಿ"ಯನ್ನಾಗಿ ಪರಿವರ್ತಿಸಿರುವ ಇವರ ಸಾಧನೆ, ಕೇಂದ್ರ ಸರ್ಕಾರದ ಯೋಜನೆಯ ನೆರವಿನೊಂದಿಗೆ ಬೆಳೆದು ನಿಂತು ಕೋಟಿ ಕೋಟಿ ಆದಾಯ ಗಳಿಸುವ ಹಂತಕ್ಕೆ ತಲುಪಿದೆ.
ಭಗವತಿ ದೇವಿ ಕೇವಲ 10ನೇ ತರಗತಿಯವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿದ್ದರೂ, ಅವರಲ್ಲಿ ಪ್ರಾಯೋಗಿಕ ಜ್ಞಾನ ಹಾಗೂ ಉದ್ಯಮಶೀಲತೆಯ ಕಲ್ಪನೆ ಅದ್ಭುತವಾಗಿತ್ತು. ಸಾಮಾನ್ಯ ಗ್ರಾಮೀಣ ಗೃಹಿಣಿಯಾಗಿದ್ದ ಇವರು ಕೃಷಿ ಕೆಲಸಗಳಲ್ಲಿ ತೊಡಗಿಸಿಕೊಂಡಾಗ, ಕೃಷಿಯನ್ನು ವ್ಯವಹಾರಿಕವಾಗಿ ಹೇಗೆ ಲಾಭದಾಯಕವಾಗಿಸಬಹುದು ಎಂಬ ಆಲೋಚನೆ ಮೂಡಿತು. ಪ್ರಾರಂಭದಲ್ಲಿ ಅತ್ಯಂತ ಆರ್ಥಿಕ ಸಂಕಷ್ಟದ ವಾತಾವರಣದಲ್ಲಿದ್ದ ಇವರು, "ರೈತರಿಗೆ ಕೃಷಿ ಲಾಭದಾಯಕವಲ್ಲ" ಎಂಬ ಕಲ್ಪನೆಯಲ್ಲಿದ್ದ ಜನರ ನಡುವೆಯೇ ಬೆಳೆದುಬಂದವರು. ಆದರೆ ಕೃಷಿಯನ್ನು ಸೂಕ್ತವಾಗಿ ನಿರ್ವಹಿಸಿದರೆ ಉತ್ತಮ ಆದಾಯ ಗಳಿಸಬಹುದು ಎಂಬುದನ್ನು ನಂಬಿದ ಇವರು, ತಮ್ಮ ಯೋಚನೆಗೆ ಕಾಂಕ್ರೀಟ್ ರೂಪ ನೀಡಲು ನಿರ್ಧರಿಸಿದರು.
ಇವರ ಜೀವನದಲ್ಲಿ ಅತಿದೊಡ್ಡ ತಿರುವು ಎಂದರೆ ಅದು 'ರೈತ ಉತ್ಪಾದಕರ ಕಂಪನಿ' (FPO) ಸ್ಥಾಪನೆಯಾಗಿದ್ದು. ಭಗವತಿ ದೇವಿ ಅವರೇ ಖುದ್ದಾಗಿ ಮುಂಚೂಣಿಯಲ್ಲಿದ್ದು ಈ ಎಫ್‌ಪಿಒ ಸ್ಥಾಪನೆಯ ಕಲ್ಪನೆಯನ್ನು ಮುಂದಿಟ್ಟರು. ಈ ಸಂಸ್ಥೆಯ ಸಂಪೂರ್ಣ ಸದಸ್ಯತ್ವವನ್ನು ಮಹಿಳೆಯರಿಗೇ ನೀಡಲಾಯಿತು. ಕೇಂದ್ರ ಸರ್ಕಾರದ '10,000 ಎಫ್‌ಪಿಒ ಯೋಜನೆ'ಯ ಅಡಿಯಲ್ಲಿ ಗುಮ್ಲಾ ಜಿಲ್ಲೆಯಲ್ಲಿ 2022ರಲ್ಲಿ ಈ ಸಂಸ್ಥೆಯನ್ನು ನೋಂದಾಯಿಸಿ ಆರಂಭಿಸಲಾಯಿತು. ಕೃಷಿಯಲ್ಲಿ ಎದುರಾಗುವ ನಷ್ಟಕ್ಕೆ ಹೆದರುವ ಬದಲು, ಉತ್ಪಾದನೆ, ಮಾರುಕಟ್ಟೆ ಮತ್ತು ಹೆಚ್ಚುವರಿ ಆದಾಯದ ಸೂತ್ರಗಳ ಆಧಾರದ ಮೇಲೆ ಕೃಷಿಯನ್ನು ಹೇಗೆ ಯಶಸ್ವಿಗೊಳಿಸಬಹುದು ಎಂಬುದರ ಬಗ್ಗೆ ಎಫ್‌ಪಿಒ ಮೂಲಕ ಮಹಿಳೆಯರಿಗೆ ವ್ಯವಹಾರಿಕ ತರಬೇತಿ ಹಾಗೂ ಪಾಠಗಳನ್ನು ನೀಡಲಾಯಿತು. ಪ್ರಸ್ತುತ ಭಗವತಿ ದೇವಿ ಈ ಕಂಪನಿಯ ಅಧ್ಯಕ್ಷೆಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
2022ರಲ್ಲಿ ಕಾರ್ಯಾಚರಣೆ ಆರಂಭಿಸಿದ ಈ ಎಫ್‌ಪಿಒ ಪ್ರಮುಖವಾಗಿ ರಾಗಿ ಬೆಳೆಯನ್ನು ತನ್ನ ಮುಖ್ಯ ಕೃಷಿಯನ್ನಾಗಿ ಆಯ್ಕೆ ಮಾಡಿಕೊಂಡಿತು. ಸ್ಥಳೀಯ ರೈತರಿಗೆ ಉಚಿತವಾಗಿ ರಾಗಿ ಬಿತ್ತನೆ ಬೀಜಗಳನ್ನು ವಿತರಿಸುವ ಮೂಲಕ ಕೃಷಿಗೆ ಪ್ರೋತ್ಸಾಹ ನೀಡಲಾಯಿತು. ಬಿತ್ತನೆಯಿಂದ ಹಿಡಿದು ಕೊಯ್ಲಿನವರೆಗಿನ ಎಲ್ಲಾ ಹಂತಗಳಲ್ಲೂ ಭಗವತಿ ದೇವಿ ಮತ್ತು ಅವರ ತಂಡದ ಸದಸ್ಯರು ರೈತರಿಗೆ ಸಂಪೂರ್ಣ ನೆರವು ನೀಡಿದರು. ಕೇವಲ ರಾಗಿ ಬೆಳೆಯುವುದಷ್ಟೇ ಅಲ್ಲದೆ, ಅದನ್ನು ಸಾಂಸ್ಥಿಕವಾಗಿ ಸಂಗ್ರಹಿಸಿ, ಸಂಸ್ಕರಿಸಿ, ವಿವಿಧ ಉತ್ಪನ್ನಗಳನ್ನಾಗಿ ಪರಿವರ್ತಿಸಿ ಮಾರಾಟ ಮಾಡುವ ಮೂಲಕ ವಿಶಾಲವಾದ ಮಾರುಕಟ್ಟೆ ಸಾಮರ್ಥ್ಯವನ್ನು ಕಂಡುಕೊಳ್ಳಲಾಯಿತು. ರೈತರನ್ನು ಭಾಗಿದಾರರನ್ನಾಗಿ ಮಾಡಿಕೊಂಡು ಪ್ರತಿಯೊಬ್ಬರಿಗೂ ಉತ್ತಮ ಆದಾಯ ಸಿಗುವಂತೆ ಮಾಡಿದ ಈ ಮಾದರಿಯು ಎಲ್ಲೆಡೆ ವ್ಯಾಪಕ ಮೆಚ್ಚುಗೆ ಗಳಿಸಿತು.
ಈ ಸಂಸ್ಥೆಯು ಗುಮ್ಲಾ ಜಿಲ್ಲೆಯ ಗ್ರಾಮೀಣ ಮಹಿಳೆಯರ ಬದುಕಿಗೆ ದೊಡ್ಡ ಆಸರೆಯಾಗಿದೆ. ದಿನನಿತ್ಯದ ಸಣ್ಣಪುಟ್ಟ ವೆಚ್ಚಗಳಿಗೂ ಹಣವಿಲ್ಲದೆ ಪರದಾಡುತ್ತಿದ್ದ ನೂರಾರು ಕುಟುಂಬಗಳಿಗೆ ಈ ಎಫ್‌ಪಿಒ ಹೊಸ ಜೀವನೋಪಾಯವನ್ನು ಒದಗಿಸಿಕೊಟ್ಟಿದೆ. ಭಗವತಿ ದೇವಿ ಅವರ ನೇತೃತ್ವದಲ್ಲಿ ಆರಂಭವಾದ ಈ ಸಂಸ್ಥೆಯ ಮೂಲಕ ಇಂದು 200ಕ್ಕೂ ಹೆಚ್ಚು ಮಹಿಳೆಯರು ನೇರ ಆದಾಯದ ಮೂಲವನ್ನು ಕಂಡುಕೊಂಡಿದ್ದಾರೆ. ರಾಗಿ ಸಂಸ್ಕರಣೆ, ಮೌಲ್ಯವರ್ಧಿತ ರಾಗಿ ಉತ್ಪನ್ನಗಳ ತಯಾರಿಕೆ, ಪ್ಯಾಕಿಂಗ್ ಹಾಗೂ ಮಾರುಕಟ್ಟೆ ವಿಭಾಗಗಳಲ್ಲಿ ಈ ಮಹಿಳೆಯರಿಗೆ ಉದ್ಯೋಗಾವಕಾಶ ನೀಡಲಾಗಿದ್ದು, ಅವರು ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗಿದೆ.
ಒಬ್ಬ ಸಾಮಾನ್ಯ ಗೃಹಿಣಿಯ ಮನಸ್ಸಿನಲ್ಲಿ ಮೂಡಿದ ಸಣ್ಣ ಆಲೋಚನೆ ಇಂದು ವಾರ್ಷಿಕ ಸುಮಾರು 5.5 ಕೋಟಿ ರೂಪಾಯಿಗಳ ಭಾರಿ ಆದಾಯ ಗಳಿಸುವ ಬೃಹತ್ ಉದ್ಯಮವಾಗಿ ಬೆಳೆದು ನಿಂತಿದೆ. ಪ್ರಸ್ತುತ ಕಂಪನಿಯು ಎಲ್ಲ ನೌಕರರ ವೇತನ ಮತ್ತು ಇತರ ನಿರ್ವಹಣಾ ವೆಚ್ಚಗಳನ್ನು ಕಳೆದ ನಂತರವೂ ಬರುವ ಉಳಿದ ಲಾಭದ ಪಾಲನ್ನು ಎಲ್ಲಾ ಮಹಿಳಾ ಸದಸ್ಯರಿಗೆ ಸಮಾನವಾಗಿ ಹಂಚುತ್ತಿದೆ. ಭಗವತಿ ದೇವಿ ಮತ್ತು ಅವರ ತಂಡದ ಶ್ರಮದ ಫಲವಾಗಿ ಗುಮ್ಲಾ ಜಿಲ್ಲೆ ಲಕ್ಷಾಂತರ ಟನ್ ರಾಗಿ ಉತ್ಪಾದಿಸಿ 'ರಾಗಿ ಸಿಟಿ' ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸಾಮಾನ್ಯ ಗೃಹಿಣಿಯಾಗಿದ್ದರೂ ಛಲ, ದೃಢಸಂಕಲ್ಪ ಮತ್ತು ಕೇಂದ್ರ ಸರ್ಕಾರದ ಸೂಕ್ತ ಯೋಜನೆಯ ಬೆಂಬಲವಿದ್ದರೆ ಸಮಾಜದಲ್ಲಿ ಎಂತಹ ದೊಡ್ಡ ಬದಲಾವಣೆಯನ್ನು ತರಬಹುದು ಎಂಬುದಕ್ಕೆ ಭಗವತಿ ದೇವಿ ಜೀವಂತ ಉದಾಹರಣೆಯಾಗಿದ್ದಾರೆ. ಪ್ರಸ್ತುತ ಇವರು ಮತ್ತು ಇವರ ತಂಡವು ಮತ್ತಷ್ಟು ಹೊಸ ರಾಗಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಮತ್ತು ಹೆಚ್ಚಿನ ಸಂಖ್ಯೆಯ ಮಹಿಳೆಯರಿಗೆ ಉದ್ಯೋಗ ನೀಡುವ ಮಹತ್ವಾಕಾಂಕ್ಷೆಯೊಂದಿಗೆ ಮುನ್ನಡೆಯುತ್ತಿದೆ, (ಏಜೆನ್ಸೀಸ್).