ದಶರಥನ ಪಾತ್ರ ಮಾಡಲು ನಿರಾಕರಿಸಿದ್ದ ಅರುಣ್ ಗೋವಿಲ್! 'ರಾಮಾಯಣ' ಸಿನಿಮಾದ ರೋಚಕ ಕಥೆ ಬಿಚ್ಚಿಟ್ಟ ನಟ | Arun Govil Ramayana

Arun Govil
ಹೊಸ ರಾಮಾಯಣದಲ್ಲಿ ದಶರಥನ ಪಾತ್ರ ಮಾಡಲು ನಿರಾಕರಿಸಿದ್ದ ಅರುಣ್ ಗೋವಿಲ್
Published on: 

Ramayana Movie: ರಾಮಾನಂದ್ ಸಾಗರ್ ಅವರ ‘ರಾಮಾಯಣ’ ಧಾರಾವಾಹಿಯಲ್ಲಿ ಶ್ರೀರಾಮನಾಗಿ ಜನರ ಮನಗೆದ್ದಿದ್ದ ನಟ ಅರುಣ್ ಗೋವಿಲ್, ಈಗ ನಿತೇಶ್ ತಿವಾರಿ ನಿರ್ದೇಶನದ ಹೊಸ ‘ರಾಮಾಯಣ’ ಸಿನಿಮಾದಲ್ಲಿ ದಶರಥ ಮಹಾರಾಜನಾಗಿ ಕಾಣಿಸಿಕೊಂಡಿದ್ದಾರೆ. ಆದರೆ, ಆರಂಭದಲ್ಲಿ ಅವರಿಗೆ ಈ ಪಾತ್ರ ಮಾಡಲು ಅಷ್ಟಾಗಿ ಇಷ್ಟವಿರಲಿಲ್ಲವಂತೆ.

ಈ ಬಗ್ಗೆ ಮಾತನಾಡಿದ ಅರುಣ್ ಗೋವಿಲ್, ‘ನನಗೆ ಮೊದಲಿಗೆ ಈ ರೋಲ್ ಮಾಡೋಕೆ ಮನಸ್ಸಿರಲಿಲ್ಲ. ಆದರೆ ನಿರ್ದೇಶಕ ನಿತೇಶ್ ತಿವಾರಿ ತುಂಬಾ ಹಠ ಹಿಡಿದರು. ಹಳೆಯ ರಾಮಾಯಣಕ್ಕೂ ಹೊಸ ರಾಮಾಯಣಕ್ಕೂ ಒಂದು ಕನೆಕ್ಷನ್ ಇರಲಿ ಅನ್ನೋ ಕಾರಣಕ್ಕೆ ನನ್ನನ್ನೇ ಆಯ್ಕೆ ಮಾಡಿದರು’ ಎಂದು ಹೇಳಿದ್ದಾರೆ.

ಈ ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ ನಟಿಸಿದ್ದು, ಅರುಣ್ ಗೋವಿಲ್ ಅವರ ತಂದೆಯಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾ 5 ದಿನಗಳಲ್ಲಿ ಭರ್ಜರಿ 660 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದರೂ, ಕೆಲವರು ರಣಬೀರ್ ಅವರ ನಟನೆಯನ್ನು ಹಳೆಯ ರಾಮನ ಪಾತ್ರಕ್ಕೆ ಹೋಲಿಸಿ ಮಾತನಾಡುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಗೋವಿಲ್, ‘ಜನರ ಮನಸ್ಸಿನಲ್ಲಿ ನಾನು ಮಾಡಿದ ರಾಮನ ಪಾತ್ರವೇ ಅಚ್ಚೊತ್ತಿ ಉಳ್ಕೊಂಡಿದೆ. ಇಂದಿಗೂ ಜಾತ್ರೆಗಳಲ್ಲಿ ಸಿಗೋ ರಾಮನ ಫೋಟೋಗಳಲ್ಲಿ ನನ್ನ ಮುಖವೇ ಇರುತ್ತೆ. ಹೀಗಾಗಿ ಜನರು ಇನ್ನೊಬ್ಬರನ್ನು ರಾಮನಾಗಿ ಒಪ್ಪಿಕೊಳ್ಳುವುದು ಸ್ವಲ್ಪ ಕಷ್ಟ. ಹಾಗಾಗಿ ರಣಬೀರ್ ನಟನೆಯ ಬಗ್ಗೆ ನಾನು ಕಾಮೆಂಟ್ ಮಾಡಲ್ಲ’ ಎಂದು ಸೌಮ್ಯವಾಗಿ ಹೇಳಿದ್ದಾರೆ.

ಇದನ್ನೂ ಓದಿ: ಪಾಕ್​ನಲ್ಲಿ ಚೀನಾ ನಿರ್ಮಿತ ಯೋಜನೆಯಲ್ಲಿ ಮತ್ತೆ ದುರಂತ: ಬಂಡೆ ಕುಸಿದು ಜಲವಿದ್ಯುತ್ ಕೇಂದ್ರಕ್ಕೆ ನುಗ್ಗಿದ ನೀರು! | Tarbela Dam Collapse

ಪ್ರೈಮ್ ಫೋಕಸ್ ಸ್ಟುಡಿಯೋಸ್, ಡಬಲ್ ನೆಗೆಟಿವ್ ಮತ್ತು ನಟ ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಸೇರಿ ನಿರ್ಮಿಸಿರುವ ಈ ಚಿತ್ರದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ, ರಾಕಿಂಗ್ ಸ್ಟಾರ್ ಯಶ್ ಹಾಗೂ ರವಿ ದುಬೆ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. 2 ಭಾಗಗಳಲ್ಲಿ ಮೂಡಿಬರುತ್ತಿರುವ ಈ ಸಿನಿಮಾದ ಮೊದಲ ಭಾಗ ಥಿಯೇಟರ್‌ನಲ್ಲಿದ್ದರೆ, ಎರಡನೇ ಭಾಗ 2028ರಲ್ಲಿ ರಿಲೀಸ್ ಆಗಲಿದೆ.