20 ಲಕ್ಷ ಫಾಲೋವರ್ಸ್​ ಹೊಂದಿರೋ ಇನ್ಫ್ಲುಯೆನ್ಸರ್​ಗೆ ಚುನಾವಣೆಯಲ್ಲಿ ಸಿಕ್ಕ ಮತಗಳು ಇಷ್ಟೇನಾ? ಅಳಲು ತೋಡಿಕೊಂಡ ಸ್ಪರ್ಧಿ! Social Media Influencer

Social Media Influencer
ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್​, ಜ್ಯೋತಿಷಿ ಹಾಗೂ ಯೂಟ್ಯೂಬರ್ ಆಗಿರುವ ಓಂಪ್ರಕಾಶ್ ಬಿಷ್ಣೋಯಿ
Published on: 

ಜೈಪುರ: ಸಾಮಾಜಿಕ ಜಾಲತಾಣದಲ್ಲಿ ಮಿಲಿಯನ್‌ಗಟ್ಟಲೆ ಫಾಲೋವರ್ಸ್‌ ಹಾಗೂ ಲೈಕ್ಸ್ ಇದ್ದರೆ ಸಾಕು, ಸಮಾಜದಲ್ಲಿ ನನಗೆ ದೊಡ್ಡ ಮಟ್ಟದ ಜನಪ್ರಿಯತೆ ಮತ್ತು ಭಾರಿ ಪ್ರಭಾವವಿದೆ ಎಂದು ಭಾವಿಸುವುದು ಸಹಜ. ಈ ಜನಪ್ರಿಯತೆಯಿಂದ ನಾವು ಯಾವುದೇ ಕೆಲಸ ಮಾಡಿದರೂ ಜನ ಬೆಂಬಲಿಸುತ್ತಾರೆ ಅಂತ ಕೆಲವರು ಭಾವಿಸುತ್ತಾರೆ. ಅದರಲ್ಲೂ ಚುನಾವಣೆಗೆ ನಿಂತರೆ ಗೆಲುತ್ತೇವೆ ಅಂದುಕೊಳ್ಳುತ್ತಾರೆ. ಆದರೆ, ಡಿಜಿಟಲ್ ಲೋಕದ ಈ ಫಾಲೋವರ್ಸ್ ಸಂಖ್ಯೆ ಅನ್ನೋದು ವಾಸ್ತವದಲ್ಲಿ ಮತಗಳಾಗಿ ಪರಿವರ್ತನೆಯಾಗುವುದಿಲ್ಲ. ಇದಕ್ಕೆ ತಾಜಾ ಸಾಕ್ಷಿಯೇ ರಾಜಸ್ಥಾನದಲ್ಲಿ ನಡೆದ ಗ್ರಾಮ ಪಂಚಾಯತಿ ಚುನಾವಣೆಯ ಫಲಿತಾಂಶ. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದ ಇನ್ಫ್ಲುಯೆನ್ಸರ್ ( Social Media Influencer )​ ಒಬ್ಬರು ಚುನಾವಣಾ ಕಣಕ್ಕಿಳಿದು, ಕೊನೆಗೆ ಬೆರಳೆಣಿಕೆಯಷ್ಟು ಮತಗಳನ್ನು ಪಡೆದು ಹೀನಾಯವಾಗಿ ಸೋಲು ಕಂಡಿರುವ ಘಟನೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Also Read
ಜೀವಾವಧಿ ಶಿಕ್ಷೆಯಿಂದ ಪಾರಾಗಲು ಮೇಕೆ ಕಳೇಬರ ಸುಟ್ಟು ತಾನೇ ಸತ್ತಂತೆ AI ಫೋಟೋ ರಚಿಸಿದ್ದ ಭೂಪ ಸಿಕ್ಕಿಬಿದ್ದಿದ್ದೇ ರೋಚಕ! Fakes Death
Social Media Influencer

ರಾಜಸ್ಥಾನದ ಜೋಧ್‌ಪುರ ಜಿಲ್ಲೆಯ ಒಸಿಯಾ ತಾಲೂಕಿನ 'ಇಂದೋನ್ ಕಿ ಧಾನಿ-2' ಗ್ರಾಮ ಪಂಚಾಯತಿಯಲ್ಲಿ ಇತ್ತೀಚೆಗೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್​, ಜ್ಯೋತಿಷಿ ಹಾಗೂ ಯೂಟ್ಯೂಬರ್ ಆಗಿರುವ ಓಂಪ್ರಕಾಶ್ ಬಿಷ್ಣೋಯಿ ಎಂಬುವವರು ಸ್ಪರ್ಧಿಸಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ 14 ಲಕ್ಷ (1.4 Million), ಯೂಟ್ಯೂಬ್‌ನಲ್ಲಿ 5 ಲಕ್ಷ ಹಾಗೂ ಫೇಸ್‌ಬುಕ್‌ನಲ್ಲಿ 2.32 ಲಕ್ಷ ಸೇರಿ ವಿವಿಧ ವೇದಿಕೆಗಳಲ್ಲಿ ಒಟ್ಟು 21 ಲಕ್ಷಕ್ಕೂ ಅಧಿಕ (2.1 Million) ಫಾಲೋವರ್ಸ್‌ ಹೊಂದಿರುವ ಬಿಷ್ಣೋಯಿ, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿ ಪ್ರಚಾರ ನಡೆಸಿದ್ದರು. ಆದರೆ, ಒಟ್ಟು 1,600 ಅರ್ಹ ಮತದಾರರಿದ್ದ ಈ ಗ್ರಾಮದಲ್ಲಿ ಅವರ ಪೆಟ್ಟಿಗೆಯಿಂದ ಬಂದದ್ದು ಕೇವಲ 33 ಮತಗಳು!

ತಮ್ಮ ಬೃಹತ್ ಡಿಜಿಟಲ್ ಜನಪ್ರಿಯತೆಯನ್ನು ನೆಚ್ಚಿಕೊಂಡು ಚುನಾವಣಾ ಕಣಕ್ಕಿಳಿದಿದ್ದ ಓಂಪ್ರಕಾಶ್ ಬಿಷ್ಣೋಯಿ ಅವರಿಗೆ ಈ ಫಲಿತಾಂಶ ದೊಡ್ಡ ಆಘಾತ ಹಾಗೂ ಅಚ್ಚರಿಯನ್ನು ತಂದೊಡ್ಡಿದೆ. ಪಂಚಾಯಿತಿ ರೇಸ್‌ನಲ್ಲಿ ಬಿಷ್ಣೋಯಿ ಸೇರಿ ಒಟ್ಟು ಮೂವರು ಅಭ್ಯರ್ಥಿಗಳಿದ್ದರು. ಈ ಪೈಕಿ ಶಿಕ್ಷಕರೊಬ್ಬರು 527 ಮತಗಳನ್ನು ಪಡೆದರೆ, ಕಾರು ಉದ್ಯಮ ನಡೆಸುವ ಮತ್ತೊಬ್ಬ ಅಭ್ಯರ್ಥಿ ಚುನಾವಣೆಯಲ್ಲಿ ಜಯಗಳಿಸಿದರು. ವಿಶೇಷವೆಂದರೆ, 21 ಲಕ್ಷ ಫಾಲೋವರ್ಸ್ ಹೊಂದಿದ್ದ ಈ ಜನಪ್ರಿಯ ಇನ್ಫ್ಲುಯೆನ್ಸರ್ ಪಡೆದ 33 ಮತಗಳ ಪೈಕಿ 10 ಮತಗಳು ನೋಟಾಗೆ (NOTA) ಬಿದ್ದಿರುವುದು ಈ ಸೋಲಿನ ಪರಿಯನ್ನು ಮತ್ತಷ್ಟು ರೋಚಕಗೊಳಿಸಿದೆ.

ತಮ್ಮ ಸ್ಪರ್ಧೆಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಬಿಷ್ಣೋಯಿ, ಗ್ರಾಮದ ಪ್ರತಿಯೊಬ್ಬ ಮಗುವಿಗೂ ಉತ್ತಮ ಶಿಕ್ಷಣ ನೀಡುವುದು, ಆಶ್ರಯವಿಲ್ಲದ ಜಾನುವಾರುಗಳ ಪಾಲನೆ ಹಾಗೂ ಸರ್ಕಾರದ ಯೋಜನೆಗಳನ್ನು ತಳಮಟ್ಟದ ಜನರಿಗೆ ತಲುಪಿಸುವುದು ತಮ್ಮ ಚುನಾವಣಾ ಆದ್ಯತೆಯಾಗಿತ್ತು ಎಂದು ಹೇಳಿದ್ದಾರೆ.

ತಾವು ಸುಮಾರು 1,500 ಹಸುಗಳನ್ನು ಹೊಂದಿರುವ ಗೋಶಾಲೆಯನ್ನು ನಡೆಸುತ್ತಿದ್ದು, ಅದಕ್ಕಾಗಿ ತಮ್ಮ 30 ಬಿಘಾ ಸ್ವಂತ ಜಮೀನನ್ನೇ ದಾನ ಮಾಡಿರುವುದಾಗಿ ತಿಳಿಸಿದ್ದಾರೆ. ಗ್ರಾಮಸ್ಥರೇ ತಮ್ಮನ್ನು ಪ್ರೋತ್ಸಾಹಿಸಿ "ನೀವು ಸ್ಪರ್ಧಿಸಿ, ದೊಡ್ಡ ಅಂತರದಿಂದ ಗೆಲ್ಲಿಸುತ್ತೇವೆ" ಎಂದು ಭರವಸೆ ನೀಡಿದ್ದರು, ಆದರೆ ಮತಪೆಟ್ಟಿಗೆ ತೆಗೆದಾಗ ಕೇವಲ 33 ಮತಗಳು ಬಂದಿದ್ದವು ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

Also Read
ಹೋಟೆಲ್ ರೂಮ್​ ಬಾಗಿಲಿಗೆ ಎಂಟ್ರಿಯಾಗ್ತಿದ್ದಂತೆ ಕುಸಿದುಬಿದ್ದು ಯುವತಿ ದುರ್ಮರಣ: ಸಿಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ! Newlywed Death
Social Media Influencer

ಇದೇ ವೇಳೆ, ತಾವು ಚುನಾವಣೆಯಲ್ಲಿ ಗೆಲ್ಲಲು ಯಾವುದೇ ಹಣ, ಮದ್ಯ ಅಥವಾ ದುಬಾರಿ ವಾಹನಗಳ ಮೆರವಣಿಗೆಯನ್ನು ಬಳಸಲಿಲ್ಲ ಎಂದು ಬಿಷ್ಣೋಯಿ ಸ್ಪಷ್ಟಪಡಿಸಿದ್ದಾರೆ. ಚುನಾವಣಾ ಫಲಿತಾಂಶದ ಕುರಿತು ಆತ್ಮಾವಲೋಕನ ಮಾಡಿಕೊಂಡ ಅವರು, "ಸೋಷಿಯಲ್ ಮೀಡಿಯಾ ಜನಪ್ರಿಯತೆಯೇ ಬೇರೆ, ವಾಸ್ತವದ ನೆಲದ ಪರಿಸ್ಥಿತಿಯೇ ಬೇರೆ ಎಂಬುದನ್ನು ಈ ಚುನಾವಣೆ ನನಗೆ ಕಲಿಸಿದೆ ಎಂದಿದ್ದಾರೆ.

ನನಗೆ ಬಿದ್ದ 33 ಮತಗಳಲ್ಲಿ 11 ಮತಗಳು ನನ್ನ ಸ್ವಂತ ಕುಟುಂಬದವರಿಂದಲೇ ಬಂದಿವೆ! ಇನ್ನುಳಿದ ಮತಗಳು ನನ್ನ ಜತೆ ಓದಿದ ಸ್ನೇಹಿತರು ಮತ್ತು ಆಪ್ತರಿಂದ ಬಂದಿವೆ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ. ಈ ಮೊದಲ ಚುನಾವಣಾ ಸೋಲಿನಿಂದ ಧೃತಿಗೆಡದ ಅವರು, ಜನರೊಂದಿಗೆ ನಿರಂತರ ಸಂಪರ್ಕ ಕಾಯ್ದುಕೊಳ್ಳುವ ಪಾಠ ಕಲಿತಿದ್ದು, ಗ್ರಾಮಸ್ಥರ ಒಳಿತಿಗಾಗಿ ಸೇವೆಯನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net