ಸಿಇಸಿ ನಿರ್ಧಾರಗಳು ಅಕ್ರಮವಾಗಿದ್ದರೆ ರಾಷ್ಟ್ರಪತಿಯನ್ನೇಕೆ ಭೇಟಿಯಾಗಲಿಲ್ಲ...? ಚುನಾವಣಾ ಆಯುಕ್ತರ ನಡೆ ಪ್ರಶ್ನಿಸಿದ ರಾಜಕೀಯ ವಿಶ್ಲೇಷಕರು! |Election Commission

Election Commission: ಚುನಾವಣಾ ಆಯೋಗದ ಎಸ್​​ಐಆರ್​ ವಿವಾದ ಮತ್ತು ಅದರ ನಿರ್ಧಾರಗಳು ಅಕ್ರಮ ಎಂದಾಗಿದ್ದರೆ ಇಬ್ಬರು ಕಮಿಷನರ್‌ಗಳು ರಾಷ್ಟ್ರಪತಿಗಳನ್ನೇಕೆ ಸಂಪರ್ಕಿಸಲಿಲ್ಲ..? ಎಂದು ರಾಜಕೀಯ ವಿಶ್ಲೇಷಕರಾದ ಯೋಗೇಂದ್ರ ಯಾದವ್ ಮತ್ತು ರಜತ್ ಸೇಥಿ ಪ್ರಶ್ನಿಸಿದ್ದಾರೆ.
ಚುನಾವಣಾ ಆಯೋಗದ ಮುಖ್ಯ ಆಯುಕ್ತರು ಮತ್ತು ಆಯುಕ್ತರು
ಚುನಾವಣಾ ಆಯೋಗದ ಮುಖ್ಯ ಆಯುಕ್ತರು ಮತ್ತು ಆಯುಕ್ತರು
Published on

Election Commission: ಚುನಾವಣಾ ಆಯೋಗದ ಎಸ್​​ಐಆರ್​ ವಿವಾದ ಮತ್ತು ಅದರ ನಿರ್ಧಾರಗಳು ಅಕ್ರಮ ಎಂದಾಗಿದ್ದರೆ ಇಬ್ಬರು ಕಮಿಷನರ್‌ಗಳು ರಾಷ್ಟ್ರಪತಿಗಳನ್ನೇಕೆ ಸಂಪರ್ಕಿಸಲಿಲ್ಲ..? ಎಂದು ರಾಜಕೀಯ ವಿಶ್ಲೇಷಕರಾದ ಯೋಗೇಂದ್ರ ಯಾದವ್ ಮತ್ತು ರಜತ್ ಸೇಥಿ ಪ್ರಶ್ನಿಸಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ನಿರ್ವಹಿಸಿದ ರೀತಿಯ ಬಗ್ಗೆ ಪ್ರಶ್ನೆಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಈ ಇಬ್ಬರು, ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರ ನಿಲುವಿನ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.

ಇಂಡಿಯಾ ಟುಡೇ ಟಿವಿ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಯಾದವ್​ ಅವರು, ಆಯೋಗದ ನಿರ್ಧಾರಗಳು ಅಕ್ರಮ ಎಂದು ಅವರು ಭಾವಿಸಿದ್ದರೆ, ಅವರು ಪೂರ್ಣ ಸಭೆಯನ್ನು ಏಕೆ ಕರೆಯಲಿಲ್ಲ ಅಥವಾ ರಾಷ್ಟ್ರಪತಿಗಳನ್ನು ಏಕೆ ಸಂಪರ್ಕಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಅಕ್ರಮವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿದ ಮೇಲೆಯೂ ಅದನ್ನು ಸಾರ್ವಜನಿಕರ ಗಮನಕ್ಕೆ ತರದಿದ್ದರೆ, ಅವರು ಹುದ್ದೆಯಲ್ಲಿ ಮುಂದುವರಿಯುವುದು ಸಮಂಜಸವಲ್ಲ ಎಂದಿದ್ದಾರೆ.

ಇದನ್ನೂ ಓದಿ:ಒಬ್ಬರಿಗೆ 10 ಮತ, ಇನ್ನಿಬ್ಬರಿಗೆ ಸೊನ್ನೆ!....ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಕಾಂಗ್ರೆಸ್ ನಾಯಕ ಅಭಿಷೇಕ್ ಸಿಂಘ್ವಿ ಕಿಡಿ | Election Commission

ಸಂಪುಟ ಕಾರ್ಯದರ್ಶಿ ಚುನಾವಣಾ ಆಯೋಗದ ಮೇಲಧಿಕಾರಿಯೇ..?

ಮುಂದುವರೆದು ಮಾತನಾಡಿದ ಯಾದವ್, ಆ ಇಬ್ಬರು ಆಯುಕ್ತರು ಈ ವಿಷಯದ ಬಗ್ಗೆ ಸಚಿವ ಸಂಪುಟ ಕಾರ್ಯದರ್ಶಿಗೆ ಪತ್ರ ಬರೆದಿರುವುದನ್ನು ಪ್ರಶ್ನಿಸಿದ್ದು, ಸಚಿವ ಸಂಪುಟ ಕಾರ್ಯದರ್ಶಿಯು ಭಾರತದ ಚುನಾವಣಾ ಆಯೋಗದ ಮೇಲಧಿಕಾರಿಯೇ..? ಇದಕ್ಕಾಗಿ ಇಡೀ ಚುನಾವಣಾ ಆಯೋಗವನ್ನೇ ಹೊಣೆಗಾರರನ್ನಾಗಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಮಾಧ್ಯಮವೊಂದರ ವರದಿಯನ್ನು ಉಲ್ಲೇಖಿಸಿ ಮಾತನಾಡಿದ ಯೋಗೇಂದ್ರ ಯಾದವ್, ಇಬ್ಬರು ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಮತದಾರರ ಪಟ್ಟಿಯ ಡೇಟಾಬೇಸ್ ಅನ್ನು ಹಂತ-ಹಂತವಾಗಿ ಕೇಂದ್ರೀಕರಿಸುವುದನ್ನು ತೀವ್ರವಾಗಿ ವಿರೋಧಿಸಿದ್ದರು ಎಂದು ತಿಳಿಸಿದ್ದಾರೆ. ಅಲ್ಲದೆ, ಜನೆವರಿಯಲ್ಲಿ ಪ್ರಾರಂಭಿಸಲಾದ ಇಸಿಐನೆಟ್ (ECINet) ವ್ಯವಸ್ಥೆಯು ಮತದಾರರ ಪಟ್ಟಿಯನ್ನು ತಯಾರಿಸುವ ಮತ್ತು ಅಂತಿಮಗೊಳಿಸುವ ಅಧಿಕಾರಿಗಳ ಹಕ್ಕುಗಳನ್ನು ಹಾಗೂ ಪ್ರವೇಶವನ್ನು ನಿರ್ಬಂಧಿಸುತ್ತಿದೆ ಎಂದು ಅವರು ಆಕ್ಷೇಪಿಸಿದ್ದರು.

ಚುನಾವಣಾ ಆಯೋಗದ ಐಟಿ ವಿಭಾಗದ ಮೇಲಿದ್ದ ಉಸ್ತುವಾರಿಯ ಸ್ತರವನ್ನು ಹೊಸ ಕೆಲಸದ ಹಂಚಿಕೆ ಆದೇಶದ ಮೂಲಕ ತೆಗೆದುಹಾಕಿದ ನಂತರ, ಸಂಧು ಮತ್ತು ಜೋಶಿ ಅವರು ಜುಲೈ 29 ರಂದು ಹಿರಿಯ ಐಎಎಸ್ ಅಧಿಕಾರಿ ಹಾಗೂ ಸಚಿವ ಸಂಪುಟ ಕಾರ್ಯದರ್ಶಿ ಟಿ ವಿ ಸೋಮನಾಥನ್ ಅವರಿಗೆ ಪ್ರತ್ಯೇಕವಾಗಿ ಪತ್ರ ಬರೆದಿದ್ದರು ಎಂದು ವರದಿ ತಿಳಿಸಿದೆ. ಜೊತೆಗೆ ಅವರು ತಮ್ಮ ಆಕ್ಷೇಪಣೆಗಳನ್ನು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಗಮನಕ್ಕೂ ತಂದಿದ್ದರು.

ರಾಷ್ಟ್ರಮಟ್ಟದಲ್ಲಿ ವಿಶೇಷ ತೀವ್ರ ಪರಿಷ್ಕರಣೆ ಜಾರಿಯಾಗುತ್ತಿದ್ದಾಗ, ತಮ್ಮ ಭಾಗವಹಿಸುವಿಕೆ ಇಲ್ಲದೆ ತೆಗೆದುಕೊಂಡ ನಿರ್ಧಾರಗಳ ವಿರುದ್ಧ ಸಂಧು ಮತ್ತು ಜೋಶಿ ಕಳೆದ 10 ತಿಂಗಳುಗಳಲ್ಲಿ ಕನಿಷ್ಠ 14 ಬಾರಿ ಅಧಿಕೃತವಾಗಿ ಪ್ರತಿಭಟಿಸಿದ್ದರು (ಒಂದೇ ದಿನದಲ್ಲಿ ನಾಲ್ಕು ಬಾರಿ ಸೇರಿದಂತೆ) ಎಂದು ತಿಳಿದುಬಂದಿದೆ.

Also Read
ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಏಕಚಕ್ರಾದಿಪತ್ಯದ ಆರೋಪ!...ಆಂತರಿಕ ಬಿಕ್ಕಟ್ಟಿನ ಬಗ್ಗೆ ಸ್ಪಷ್ಟನೆ ನೀಡಿದ ಚುನಾವಣಾ ಆಯೋಗದ ಮೂಲಗಳು! | Election Commission
ಚುನಾವಣಾ ಆಯೋಗದ ಮುಖ್ಯ ಆಯುಕ್ತರು ಮತ್ತು ಆಯುಕ್ತರು

ರಜತ್ ಸೇಥಿ ವಾದ ಹೀಗಿದೆ!...

ಹಿಂದೆ ಬಿಜೆಪಿ ಚುನಾವಣಾ ಪ್ರಚಾರದಲ್ಲಿ ಕೆಲಸ ಮಾಡಿದ್ದ ರಾಜಕೀಯ ವಿಶ್ಲೇಷಕ ರಜತ್ ಸೇಥಿ ಕೂಡ ಇಬ್ಬರು ಆಯುಕ್ತರ ನಡವಳಿಕೆಯನ್ನು ಪ್ರಶ್ನಿಸಿದ್ದಾರೆ. ಆದರೆ ಅವರನ್ನು ಹುದ್ದೆಯಿಂದ ತೆಗೆದುಹಾಕಬೇಕೆಂದು ಅವರು ಹೇಳಿಲ್ಲ. ಬದಲಾಗಿ, ಆಂತರಿಕ ಸಂವಹನದಲ್ಲಿ ಎದ್ದಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮೂವರೂ ಚುನಾವಣಾ ಆಯುಕ್ತರು ಒಟ್ಟಿಗೆ ಕುಳಿತು ಆಲೋಚಿಸಬೇಕಾಗಿತ್ತು ಎಂದು ಸೇಥಿ ಅಭಿಪ್ರಾಯಪಟ್ಟಿದ್ದಾರೆ.

ಒಂದು ನಿರ್ಧಾರದ ವಿಚಾರದಲ್ಲಿ ಇಬ್ಬರು ಆಯುಕ್ತರು ಒಂದೇ ಕಡೆಯಿದ್ದರೆ, ಅವರು ತಮ್ಮದೇ ಆದ ಅಧಿಕಾರದಲ್ಲಿ ಚುನಾವಣಾ ಆಯೋಗದ ಪೂರ್ಣ ಪ್ರಮಾಣದ ಸಭೆಯನ್ನು ಕರೆಯಬಹುದಿತ್ತು ಎಂದು ಸೇಥಿ ಹೇಳಿದ್ದಾರೆ. ಅಲ್ಲದೆ, ಚುನಾವಣಾ ಆಯೋಗವು ಸಂವಿಧಾನಾತ್ಮಕವಾಗಿ ಸ್ವತಂತ್ರ ಸಂಸ್ಥೆಯಾಗಿದ್ದರೂ, ಇಬ್ಬರು ಆಯುಕ್ತರು ಸಚಿವ ಸಂಪುಟ ಕಾರ್ಯದರ್ಶಿಯನ್ನು ಏಕೆ ಸಂಪರ್ಕಿಸಿದರು ಎಂಬುದನ್ನೂ ಸೇಥಿ ಪ್ರಶ್ನಿಸಿದ್ದಾರೆ. ಚುನಾವಣಾ ಆಯೋಗವು ಸ್ವತಂತ್ರ ಸಂಸ್ಥೆಯಾಗಿದ್ದು, ಇಬ್ಬರು ಆಯುಕ್ತರು ಸಚಿವ ಸಂಪುಟ ಕಾರ್ಯದರ್ಶಿಗೆ ಏಕೆ ಅಷ್ಟೊಂದು ಗೌರವ ಅಥವಾ ಆದ್ಯತೆ ತೋರಿದರು ಎಂಬುದು ತಮಗೆ ಅರ್ಥವಾಗುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂಧು ಮತ್ತು ಜೋಶಿ ಜಂಟಿಯಾಗಿ ನಿರ್ದಿಷ್ಟ ನಿರ್ಧಾರಗಳನ್ನು ವಿರೋಧಿಸಿ ಅವರ ವಿರುದ್ಧ ಬಹುಮತ ರೂಪಿಸಿದ್ದರೇ, ಅಥವಾ ಇಬ್ಬರೂ ಬೇರೆ ಬೇರೆ ವಿಷಯಗಳ ಮೇಲೆ ಆಕ್ಷೇಪಣೆಗಳನ್ನು ಎತ್ತಿ ಇನ್ನೂ ಬಹುಮತವು ನಿರ್ಧಾರಗಳ ಪರವಾಗಿದೆಯೇ ಎಂಬುದು ಇಲ್ಲಿನ ಮುಖ್ಯ ವಿಷಯವಾಗಿದೆ ಎಂದು ಸೇಥಿ ಹೇಳಿದ್ದಾರೆ. ಇಬ್ಬರು ಆಯುಕ್ತರು ಒಂದು ನಿರ್ದಿಷ್ಟ ವಿಷಯದ ಬಗ್ಗೆ ಒಟ್ಟಾಗಿ ಅಸಮ್ಮತಿ ಸೂಚಿಸಿ, ಇಡೀ ನಿರ್ಧಾರವನ್ನು ಆರಂಭದಿಂದಲೇ ಅಕ್ರಮಗೊಳಿಸಿದರೇ..? ಅಥವಾ ಇಬ್ಬರೂ ವಿಭಿನ್ನ ವಿಷಯಗಳ ಬಗ್ಗೆ ಅಸಮ್ಮತಿ ವ್ಯಕ್ತಪಡಿಸಿದರೇ ಮತ್ತು ತೆಗೆದುಕೊಂಡ ನಿರ್ಧಾರದ ಪರವಾಗಿ ಬಹುಮತವಿತ್ತೇ..? ಈ ವಿವರಗಳು ನಮಗೆ ತಿಳಿದಿಲ್ಲ ಎಂದು ಹೇಳಿದ ಸೇಥಿ, ಚುನಾವಣಾ ಆಯೋಗ ಮತ್ತು ಮೂವರು ಆಯುಕ್ತರು ಒಟ್ಟಾಗಿ ಮಾತ್ರ ಏನಾಯಿತು ಎಂಬುದನ್ನು ಸ್ಪಷ್ಟಪಡಿಸಲು ಸಾಧ್ಯ ಎಂದಿದ್ದಾರೆ.

ಇದು ಭಿನ್ನಾಭಿಪ್ರಾಯವಷ್ಟೆ ಅಲ್ಲ ಎಂದ ಯೋಗೆಂದ್ರ ಯಾದವ್!

ಎಸ್​ಐಆರ್​ ಪ್ರಕ್ರಿಯೆಯ ಅಂಶಗಳ ಬಗ್ಗೆ (ಮತದಾರರ ನಮೂನೆಗಳಲ್ಲಿನ ಬದಲಾವಣೆಗಳು ಮತ್ತು ಕೇಂದ್ರೀಕೃತ ತಂತ್ರಾಂಶದ ಬಳಕೆ ಸೇರಿದಂತೆ) ಇಬ್ಬರು ಆಯುಕ್ತರು ಕಳವಳ ವ್ಯಕ್ತಪಡಿಸಿದ ಆಂತರಿಕ ಪತ್ರವ್ಯವಹಾರಗಳ ವರದಿಗಳ ನಂತರ ಈ ಚರ್ಚೆ ನಡೆದಿದೆ. ಈ ವಿಷಯವು ಚುನಾವಣಾ ಸಮಿತಿಯೊಳಗಿನ ಸಾಮಾನ್ಯ ಭಿನ್ನಾಭಿಪ್ರಾಯಕ್ಕಿಂತ ಮೀರಿದ್ದಾಗಿದೆ ಎಂದಿರುವ ಯೋಗೇಂದ್ರ ಯಾದವ್, ಮತದಾರರ ನೋಂದಣಿ ಅಧಿಕಾರಿಗಳ ಹಕ್ಕಾಗಿದ್ದ ಕ್ರಮಗಳನ್ನು ತೆಗೆದುಕೊಳ್ಳಲು ಚುನಾವಣಾ ಆಯೋಗವು ತನ್ನ ಸಿಬ್ಬಂದಿಗೆ ಅಧಿಕಾರ ನೀಡಿದೆ ಎಂದು ಆರೋಪಿಸಿದ್ದಾರೆ.

ಮತದಾರರ ಪಟ್ಟಿಗೆ ಹೆಸರು ಸೇರಿಸಲು ಇರುವ ಶಾಸನಬದ್ಧ ಅರ್ಜಿ ಫಾರ್ಮ್ 6 ರಲ್ಲಿ ಮಾಡಿದ ಬದಲಾವಣೆಗಳ ವಿವಾದವನ್ನು ಉಲ್ಲೇಖಿಸಿದ ಯಾದವ್, ಈ ವಿಷಯದಲ್ಲಿ ಹೆಚ್ಚಿನ ಪಾರದರ್ಶಕತೆಯ ಅಗತ್ಯವಿದೆ ಎಂದಿದ್ದಾರೆ.

ರಜತ್ ಸೇಥಿ ಅವರು ಚುನಾವಣಾ ಆಯೋಗ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರಾವಧಿ) ಕಾಯಿದೆ, 2023 ರ ಅಡಿಯಲ್ಲಿ ಪ್ರಶ್ನಾರ್ಹ ನಿರ್ಧಾರಗಳಿಗೆ ಅಗತ್ಯವಿರುವ ಬಹುಮತವಿದೆಯೇ ಎಂಬುದು ಪ್ರಮುಖ ಕಾನೂನು ಪ್ರಶ್ನೆಯಾಗಿದೆ ಎಂದು ಹೇಳಿದ್ದಾರೆ. ಇಬ್ಬರು ಚುನಾವಣಾ ಆಯುಕ್ತರು ಜಂಟಿಯಾಗಿ ನಿರ್ಧಾರವನ್ನು ವಿರೋಧಿಸಿ ಅದರ ವಿರುದ್ಧ ಬಹುಮತವನ್ನು ಹೊಂದಿದ್ದರೆ, ಆ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಿರಲಿಲ್ಲ. ಆದರೆ ಪ್ರಸ್ತುತ ಲಭ್ಯವಿರುವ ಮಾಹಿತಿಯು ಅವರ ಆಕ್ಷೇಪಣೆಗಳು ನಿರ್ದಿಷ್ಟ ನಿರ್ಧಾರಗಳಿಗೆ ಸಾಮೂಹಿಕ ವಿರೋಧವಾಗಿದೆಯೇ ಎಂಬುದನ್ನು ಸ್ಥಾಪಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಈ ಪ್ರಮುಖ ಕಾನೂನು ಪ್ರಶ್ನೆಗೆ ಚುನಾವಣಾ ಆಯೋಗವೇ ಉತ್ತರ ನೀಡಬೇಕಾಗಿದೆ ಎಂದು ಸೇಥಿ ಹೇಳಿದ್ದಾರೆ.

ಬಿಜೆಪಿ ವಕ್ತಾರರು ಹೇಳಿದ್ದೇನು..?

ಚರ್ಚೆಯಲ್ಲಿ ಭಾಗವಹಿಸಿದ್ದ ಬಿಜೆಪಿ ವಕ್ತಾರ ಸಿದ್ಧಾರ್ಥ್ ಯಾದವ್, ಚುನಾವಣಾ ಆಯೋಗದ ಸಮಾಲೋಚನೆಗಳ ಸಮಯದಲ್ಲಿ ಭಿನ್ನಾಪ್ರಾಯಕ್ಕೆ 2023 ರ ಕಾನೂನಿನಲ್ಲಿ ಅವಕಾಶವಿದೆ ಮತ್ತು ಆಯೋಗವು ಅಂತಿಮವಾಗಿ ತೆಗೆದುಕೊಂಡ ನಿರ್ಧಾರಗಳು ಸರ್ವಾನುಮತದಿಂದ ಕೂಡಿದ್ದವು ಎಂದು ವಾದಿಸಿದ್ದಾರೆ. ಅಂತಿಮ ನಿರ್ಧಾರದ ವಿರುದ್ಧ ಯಾವುದೇ ಅಧಿಕೃತ ಭಿನ್ನಾಭಿಪ್ರಾಯ ದಾಖಲಾಗಿಲ್ಲ ಎಂದು ಹೇಳಿದ ಅವರು, ಸಿಇಸಿ ಅವರಿಂದ ಆಯುಕ್ತರು ಮೂಲೆಗುಂಪಾಗಿದ್ದಾರೆ ಎಂಬುದನ್ನು ಪ್ರಶ್ನಿಸಿದ್ದಾರೆ(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net