ನವದೆಹಲಿ: ಚುನಾವಣೆ ಆಯೋಗದ (Election Commission) ಕಾರ್ಯಾಚರಣೆಯಲ್ಲಿನ ದೋಷಗಳು ಮತ್ತು ಪಾರದರ್ಶಕತೆಯ ಕೊರತೆಯನ್ನು ಎತ್ತಿಹಿಡಿದಿರುವ ವರದಿಯೊಂದರ ಆಧಾರದ ಮೇಲೆ, ಕಾಂಗ್ರೆಸ್ ಹಿರಿಯ ನಾಯಕ ಅಭಿಷೇಕ್ ಮನು ಸಿಂಘ್ವಿ ಅವರು ಮುಖ್ಯ ಚುನಾವಣೆ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರಜಾಪ್ರಭುತ್ವದ ಮೂಲಭೂತ ತತ್ವವಾದ ಒಬ್ಬ ವ್ಯಕ್ತಿಗೆ ಒಂದು ಮತ ಎಂಬ ನಿಯಮವನ್ನು ಸ್ವತಃ ಚುನಾವಣೆ ಆಯೋಗವೇ ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಎನ್ಡಿಟಿವಿ ಜೊತೆ ಮಾತನಾಡಿದ ಸಿಂಘ್ವಿ, ದೇಶದ ಚುನಾವಣಾ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಒಂದೇ ಮತ ಚಲಾಯಿಸುವ ಹಕ್ಕಿದೆ. ಆದರೆ, ಆಯೋಗದ ಒಳಗೆ ಮುಖ್ಯ ಚುನಾವಣೆ ಆಯುಕ್ತರಿಗೆ 10 ಮತಗಳ ಅಧಿಕಾರವಿದ್ದರೆ, ಉಳಿದ ಇಬ್ಬರು ಚುನಾವಣೆ ಆಯುಕ್ತರಿಗೆ (ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ) ಯಾವುದೇ ಅಧಿಕಾರವಿಲ್ಲದಂತೆ (ಸೊನ್ನೆ ಮತ) ನಡೆಸಿಕೊಳ್ಳಲಾಗುತ್ತಿದೆ ಎಂದು ಸಿಂಘ್ವಿ ವ್ಯಂಗ್ಯವಾಡಿದ್ದಾರೆ. ತಮ್ಮನ್ನು ತಿಳಿಸದೆ ಆಯೋಗವು ಹಲವು ಪ್ರಮುಖ ನಿರ್ಧಾರಗಳನ್ನು ಏಕಪಕ್ಷೀಯವಾಗಿ ತೆಗೆದುಕೊಂಡಿದೆ ಎಂದು ಇಬ್ಬರು ಆಯುಕ್ತರು ಕನಿಷ್ಠ 14 ಬಾರಿ ಅಧಿಕೃತವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂಬ ಮಾಧ್ಯಮವೊಂದರ ವರದಿಯನ್ನು ಅವರು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ:ಚುನಾವಣಾ ಆಯೋಗದಲ್ಲಿನ ಆಂತರಿಕ ಬಿಕ್ಕಟ್ಟು: ಸಿಇಸಿ ಜ್ಞಾನೇಶ್ ಕುಮಾರ್ ವಜಾಗೆ ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹ!
ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಬಯಸುವ 18 ವರ್ಷ ತುಂಬಿದ ಯುವಕರು ಫಾರ್ಮ್ 6 ಭರ್ತಿ ಮಾಡಬೇಕಾಗುತ್ತದೆ. ಆದರೆ ಈ ಫಾರ್ಮ್‌ನಲ್ಲಿ, ಅರ್ಜಿದಾರರ ಪೋಷಕರು ಅಥವಾ ಅಜ್ಜ-ಅಜ್ಜಿಯರು ಹಿಂದಿನ ಎಸ್‌ಐಆರ್ ಚುನಾವಣಾ ಪಟ್ಟಿಯಲ್ಲಿದ್ದರೆ ಮಾತ್ರ ಅವರ ವಿವರಗಳನ್ನು ನೀಡಬೇಕು ಎಂಬ ಹೊಸ ಪ್ರಶ್ನೆಯನ್ನು ಸೇರಿಸಲಾಗಿದೆ. ಇದರಿಂದಾಗಿ ಈಗಾಗಲೇ ಪಟ್ಟಿಯಿಂದ ಹೊರಗುಳಿದಿರುವ ಸುಮಾರು 13 ಕೋಟಿ ಜನರ ಮಕ್ಕಳಿಗೆ ಮತ್ತು ಮೊಮ್ಮಕ್ಕಳಿಗೆ ಹೊಸದಾಗಿ ಮತದಾರರಾಗುವ ಹಕ್ಕು ಕಸಿದುಕೊಂಡಂತಾಗುತ್ತದೆ ಎಂದು ಸಿಂಘ್ವಿ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಚುನಾವಣಾ ಪಟ್ಟಿಯ ದತ್ತಾಂಶವನ್ನು ಕೇಂದ್ರೀಕರಿಸುತ್ತಿರುವುದಕ್ಕೆ ಆಯುಕ್ತರು ಆಕ್ಷೇಪ ವ್ಯಕ್ತಪಡಿಸಿರುವುದನ್ನೂ ಅವರು ಪ್ರಸ್ತಾಪಿಸಿದರು.
ಈ ಆರೋಪಗಳನ್ನು ತಳ್ಳಿಹಾಕಿರುವ ಚುನಾವಣೆ ಆಯೋಗ, ಯಾವುದೇ ಸಂಸ್ಥೆಯಲ್ಲಿ ಚರ್ಚೆಗಳು ಮತ್ತು ವಿಭಿನ್ನ ಅಭಿಪ್ರಾಯಗಳು ಸಹಜ ಎಂದು ಹೇಳಿದೆ. ಆಂತರಿಕ ಟಿಪ್ಪಣಿಗಳನ್ನು ಮಾತ್ರ ವರದಿ ಎತ್ತಿಹಿಡಿದಿದೆ ಹೊರತು, ಆಯೋಗದ ನಿರ್ಧಾರಗಳು ಹಾಗೂ ಕಾರ್ಯಕ್ರಮಗಳನ್ನು ಪರಿಗಣಿಸಿಲ್ಲ ಎಂದು ಸ್ಪಷ್ಟನೆ ನೀಡಿದೆ. ಆದರೆ ಈ ಸ್ಪಷ್ಟನೆಯನ್ನು ಅಸ್ಪಷ್ಟ ಮತ್ತು ಬೇಜವಾಬ್ದಾರಿಯುತ ಎಂದು ಕರೆದಿರುವ ಸಿಂಘ್ವಿ, ಇದು ರಾಜನೊಬ್ಬ ತನ್ನ ಪ್ರಜೆಗಳಿಗೆ ನೀಡಿದ ಆದೇಶದಂತಿದೆ ಎಂದು ಟೀಕಿಸಿದ್ದಾರೆ. ಇಷ್ಟೊಂದು ಪ್ರಮುಖ ಪ್ರಶ್ನೆಗಳಿಗೆ ಆಯೋಗ ನೇರ ಉತ್ತರ ನೀಡುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಮುಖ್ಯ ಚುನಾವಣೆ ಆಯುಕ್ತ ಜ್ಞಾನೇಶ್ ಕುಮಾರ್ ಅವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಹಾಗೂ ಅವರ ವಿರುದ್ಧ ಕ್ರಮಕ್ಕೆ ಮತ್ತೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದು ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ತಿಳಿಸಿದ್ದಾರೆ(ಏಜೆನ್ಸೀಸ್).