ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಏಕಚಕ್ರಾದಿಪತ್ಯದ ಆರೋಪ!...ಆಂತರಿಕ ಬಿಕ್ಕಟ್ಟಿನ ಬಗ್ಗೆ ಸ್ಪಷ್ಟನೆ ನೀಡಿದ ಚುನಾವಣಾ ಆಯೋಗದ ಮೂಲಗಳು! | Election Commission

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್​ಐಆರ್​) ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗದೊಳಗೆ (Election Commission) ಆಂತರಿಕ ಭಿನ್ನಾಭಿಪ್ರಾಯ ಮೂಡಿದೆ ಎಂಬ ಮಾಧ್ಯಮ ವರದಿಯನ್ನು ಬುಧವಾರ ತಳ್ಳಿಹಾಕಿರುವ ಚುನಾವಣಾ ಆಯೋಗದ ಮೂಲಗಳು,
ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಏಕಚಕ್ರಾದಿಪತ್ಯದ ಆರೋಪ!
ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಏಕಚಕ್ರಾದಿಪತ್ಯದ ಆರೋಪ!
Published on

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್​ಐಆರ್​) ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗದೊಳಗೆ (Election Commission) ಆಂತರಿಕ ಭಿನ್ನಾಭಿಪ್ರಾಯ ಮೂಡಿದೆ ಎಂಬ ಮಾಧ್ಯಮ ವರದಿಯನ್ನು ಬುಧವಾರ ತಳ್ಳಿಹಾಕಿರುವ ಚುನಾವಣಾ ಆಯೋಗದ ಮೂಲಗಳು, ಎಸ್​​ಐಆರ್​ ಸೇರಿದಂತೆ ಎಲ್ಲಾ ನಿರ್ಧಾರಗಳನ್ನು ಮೂವರೂ ಚುನಾವಣಾ ಆಯುಕ್ತರ ಒಪ್ಪಿಗೆಯೊಂದಿಗೆ ಸರ್ವಾನುಮತದಿಂದ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿವೆ.

ಯಾವುದೇ ವಿಷಯದ ಬಗ್ಗೆ ಚುನಾವಣಾ ಆಯುಕ್ತರು ಮತ್ತು ಮುಖ್ಯ ಚುನಾವಣಾ ಆಯುಕ್ತರು ತಮ್ಮದೇ ಆದ ವ್ಯಕ್ತಿಗತ ಅಭಿಪ್ರಾಯಗಳನ್ನು ಹೊಂದಿರಬಹುದಾದರೂ, ಆಯೋಗದ ಪ್ರತಿಯೊಂದು ನಿರ್ಧಾರವನ್ನು ಸರ್ವಾನುಮತದಿಂದಲೇ ಅಂತಿಮಗೊಳಿಸಲಾಗಿದೆ ಎಂದು ಮೂಲಗಳು ವಿವರಿಸಿವೆ.

ಮಾಧ್ಯಮ ವರದಿಯಲ್ಲೇನಿದೆ..?

ಎಸ್​​ಐಆರ್​ ಪ್ರಕ್ರಿಯೆಯ ಕುರಿತು ಕೈಗೊಳ್ಳಲಾದ ನಿರ್ಧಾರಗಳಿಗೆ ಮೂವರು ಚುನಾವಣಾ ಆಯುಕ್ತರಲ್ಲಿ ಇಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಪತ್ರಿಕೆಯೊಂದು ವರದಿ ಪ್ರಕಟಿಸಿದ ನಂತರ ಈ ಚರ್ಚೆ ಆರಂಭವಾಗಿದ್ದು, ಕಳೆದ 10 ತಿಂಗಳುಗಳಲ್ಲಿ ತಮ್ಮ ಗಮನಕ್ಕೆ ತರದೆ ಅಥವಾ ತಮ್ಮ ಅರಿವಿಲ್ಲದೆ ತೆಗೆದುಕೊಳ್ಳಲಾದ ನಿರ್ಧಾರಗಳು ಮತ್ತು ಹೊರಡಿಸಲಾದ ಆದೇಶಗಳ ವಿರುದ್ಧ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕನಿಷ್ಠ 14 ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಎಸ್​​ಐಆರ್​, ಫಾರ್ಮ್ 6ನಲ್ಲಿ ಮಾಡಲಾದ ಬದಲಾವಣೆಗಳು, ಹೊಸ ಮತದಾರರ ಸೇರ್ಪಡೆ ಮತ್ತು ತೆಗೆದುಹಾಕುವಿಕೆ, ಮತದಾರರ ಪಟ್ಟಿಗೆ ಸಂಬಂಧಿಸಿದ ಆದೇಶಗಳ ಮೇಲಿನ ಮೇಲ್ಮನವಿಗಳು ಹಾಗೂ ಮತದಾರರ ಪಟ್ಟಿಯ ಡೇಟಾ ನಮೂದಿಸುವ ಹಕ್ಕುಗಳನ್ನೊಳಗೊಂಡಿವೆ. ಹೊಸ ಮತದಾರರನ್ನು ಸೇರಿಸುವುದು, ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡುವುದು, ಮತದಾರರ ಡೇಟಾಬೇಸ್ ನಿರ್ವಹಣೆ ಮತ್ತು ಮತದಾರರಿಗೆ ಸಂಬಂಧಿಸಿದ ನಿರ್ಧಾರಗಳ ವಿರುದ್ಧದ ಮೇಲ್ಮನವಿಗಳನ್ನು ನಿರ್ವಹಿಸುವುದು ಸೇರಿದಂತೆ ಮತದಾರರ ನೋಂದಣಿ ಪ್ರಕ್ರಿಯೆಯ ಪ್ರಮುಖ ಅಂಶಗಳನ್ನು ಈ ಆಕ್ಷೇಪಣೆಗಳು ಒಳಗೊಂಡಿದ್ದವು.

ಕೆಲವು ನಿರ್ಧಾರಗಳು ಮತ್ತು ಆದೇಶಗಳನ್ನು ತಮ್ಮ ಗಮನಕ್ಕೆ ತರದೆ ಹೊರಡಿಸಲಾಗಿದೆಯೇ ಎಂದು ಇಬ್ಬರೂ ಆಯುಕ್ತರು ಪ್ರಶ್ನಿಸಿದ್ದು, ಈ ಆಕ್ಷೇಪಣೆಗಳನ್ನು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಗಮನಕ್ಕೂ ತರಲಾಗಿತ್ತು ಎಂದು ವರದಿಯಲ್ಲಿ ಉಲ್ಲೇಖವಾಗಿತ್ತು.

ಇದನ್ನೂ ಓದಿ:2047ರ ಅಭಿವೃದ್ಧಿ ಮಂತ್ರ!...ಇಂದಿನಿಂದ ಪ್ರಧಾನಿ ಮೋದಿ ನೇತೃತ್ವದಲ್ಲಿ ಎರಡು ದಿನಗಳ ಚಿಂತನಾ ಶಿಬಿರ: ಇದರ ಅಜೆಂಡಾ ಏನು...? | Chintan Shivir

ಜ್ಞಾನೇಶ್ ಕುಮಾರ್ ರಾಜೀನಾಮೆಗೆ ವಿರೋಧ ಪಕ್ಷಗಳ ಆಗ್ರಹ

ಈ ಮಾಧ್ಯಮ ವರದಿಯು ರಾಜಕೀಯ ಸಂಚಲನ ಮೂಡಿಸಿದ್ದು, ವಿರೋಧ ಪಕ್ಷಗಳು ಚುನಾವಣಾ ಆಯೋಗದ ಕಾರ್ಯಾಚರಣೆಯ ಬಗ್ಗೆ ಪ್ರಶ್ನೆ ಎತ್ತಿದ್ದಾರೆ ಮತ್ತು ಸಿಇಸಿ ಜ್ಞಾನೇಶ್ ಕುಮಾರ್ ಅವರ ಹೊಣೆಗಾರಿಕೆಯನ್ನು ಪ್ರಶ್ನಿಸಿ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ ಕಾಂಗ್ರೆಸ್, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ತಮ್ಮಿಷ್ಟದಂತೆ ಚುನಾವಣಾ ಆಯೋಗವನ್ನು ನಡೆಸುತ್ತಿದ್ದಾರೆ, ಮೂವರು ಸದಸ್ಯರ ಆಯೋಗದಲ್ಲಿ ಕೇವಲ ಮುಖ್ಯ ಚುನಾವಣಾ ಆಯುಕ್ತರ ಅವರ ಆಜ್ಞೆ ಮಾತ್ರ ನಡೆಯುತ್ತಿದೆ ಎಂಬುದು ಈ ದೂರುಗಳಿಂದ ಸ್ಪಷ್ಟವಾಗುತ್ತದೆ ಎಂದು ಕೈ ನಾಯಕರು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಪ್ಪಣೆಯಂತೆ ಜ್ಞಾನೇಶ್ ಕುಮಾರ್ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಚುನಾವಣಾ ಆಯೋಗದಲ್ಲಿ ಮತ ಕಳವು ಮತ್ತು ರಾಜಕೀಯ ಹಸ್ತಕ್ಷೇಪ ನಡೆಯುತ್ತಿದೆ ಎಂಬ ತನ್ನ ಹಳೆಯ ಆರೋಪಗಳನ್ನು ಪುನರುಚ್ಚರಿಸಿದೆ. ಸಿಇಸಿ ಅವರು ತಮ್ಮ ಮಾಲೀಕರಾದ ಮೋದಿಯಂತೆ ಸರ್ವಾಧಿಕಾರಿಯಂತೆ ಆಡಳಿತ ನಡೆಸುತ್ತಿದ್ದಾರೆ ಮತ್ತು ಮೋದಿಯವರನ್ನು ಮೆಚ್ಚಿಸಲು ಮತ ಕಳವು ಕೆಲಸದಲ್ಲಿ ತೊಡಗಿದ್ದಾರೆ.

ಜ್ಞಾನೇಶ್ ಕುಮಾರ್ ಅವರು ಮೋದಿಯವರ ಕೈಗೊಂಬೆ ಎಂದು ನಾವು ಅನೇಕ ಬಾರಿ ಆರೋಪಿಸಿದ್ದೇವು, ಮಾಧ್ಯಮದ ವರದಿಯಿಂದ ಈ ಸತ್ಯ ಸಾಬೀತಾಗಿದೆ. ಮೋದಿ ಮತ್ತು ಜ್ಞಾನೇಶ್ ಕುಮಾರ್ ಇಬ್ಬರೂ ಸೇರಿ ದೇಶದ ಪ್ರಜಾಪ್ರಭುತ್ವಕ್ಕೆ ಭಾರಿ ಹಾನಿ ಉಂಟುಮಾಡಿದ್ದಾರೆ. ಸಮಯ ಬಂದಾಗ ಪ್ರತಿಯೊಬ್ಬರೂ ಉತ್ತರದಾಯಿಗಳಾಗಬೇಕಾಗುತ್ತದೆ. ಈ ಅಪರಾಧಕ್ಕೆ ಖಂಡಿತ ಶಿಕ್ಷೆ ಆಗುತ್ತದೆ ಎಂದು ಕೈ ನಾಯಕರು ಆರೋಪಿಸಿದ್ದಾರೆ.

Also Read
ಮೋದಿ ಸ್ವಾಗತಕ್ಕೆ ಎದುರುನೋಡುತ್ತಿದ್ದೇವೆ!...G20 ಶೃಂಗಸಭೆಯ ವೇಳೆಗೆ ವಾಣಿಜ್ಯ ಮಾತುಕತೆ ಪೂರ್ಣಗೊಳಿಸಲು ಕೆನಡಾ ಪ್ರಧಾನಿ ನಿರ್ಧಾರ! | Canada-IndiaTrade
ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಏಕಚಕ್ರಾದಿಪತ್ಯದ ಆರೋಪ!

ಅಖಿಲೇಶ್, ಅಭಿಷೇಕ್​, ಭಾರದ್ವಾಜ್ ಹೇಳಿದ್ದು ಹೀಗಿದೆ!

ಈ ವಿಚಾರವನ್ನು ಅತ್ಯಂತ ಗಂಭೀರ ಪ್ರಕರಣ ಎಂದು ಕರೆದಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಸಾಂವಿಧಾನಿಕ ಸಂಸ್ಥೆಯ ಆಯುಕ್ತರಿಗೇ ಸ್ವತಂತ್ರವಾಗಿ ಕೆಲಸ ಮಾಡಲು ಬಿಡದಿರುವುದು ಪ್ರಜಾಪ್ರಭುತ್ವಕ್ಕೆ ಅತ್ಯಂತ ಅಪಾಯಕಾರಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈ ಕೂಡಲೇ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಸಂಸದ ಅಭಿಷೇಕ್ ಬ್ಯಾನರ್ಜಿ ಅವರು ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣವೇ ಹುದ್ದೆಯಿಂದ ವಜಾಗೊಳಿಸಿ, ನ್ಯಾಯಾಲಯದ ಉಸ್ತುವಾರಿಯಲ್ಲಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಲಕ್ಷಾಂತರ ಮತದಾರರ ಹಕ್ಕನ್ನು ಕಸಿದುಕೊಳ್ಳುವುದು ಪ್ರಜಾಪ್ರಭುತ್ವದ ಅಡಿಪಾಯಕ್ಕೇ ಧಕ್ಕೆ ತರುತ್ತದೆ ಎಂದು ಅವರು ಆರೋಪಿಸಿದ್ದು, ಡಿಎಂಕೆ ವಕ್ತಾರ ಟಿಕೆಎಸ್ ಇಲಾಂಗೋವನ್ ಅವರು ಕೇಂದ್ರದ ಬಿಜೆಪಿ ಸರ್ಕಾರವು ಆಟವಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಆಪ್​​​​ ನಾಯಕ ಸೌರಭ್ ಭಾರದ್ವಾಜ್ ಅವರು ಸಹ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಎಲ್ಲಾ ವಿಪಕ್ಷಗಳು ಒಗ್ಗಟ್ಟಾಗಿ ಹೋರಾಡಬೇಕು ಎಂದು ಕರೆ ನೀಡಿದ್ದರೆ, ಯುಬಿಟಿ ಶಿವಸೇನೆ ಸಂಸದ ಸಂಜಯ್ ರಾವತ್ ಅವರು ಜ್ಞಾನೇಶ್ ಕುಮಾರ್ ಶೀಘ್ರದಲ್ಲೇ ಜೈಲು ಸೇರಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಸಿಪಿಐ(ಎಂ) ಸಂಸದ ಜಾನ್ ಬ್ರಿಟ್ಟಾಸ್ ಅವರು ಚುನಾವಣಾ ಆಯೋಗವು ಈಗ ಒಬ್ಬ ವ್ಯಕ್ತಿಯ ಸರ್ವಾಧಿಕಾರವಾಗಿ ಬದಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ, ವಿರೋಧ ಪಕ್ಷಗಳ ಎಲ್ಲಾ ನಾಯಕರು ಒಟ್ಟಾಗಿ ಚುನಾವಣಾ ಆಯೋಗದ ನಿಷ್ಪಕ್ಷಪಾತತೆಯನ್ನು ಪ್ರಶ್ನಿಸಿದ್ದು, ಸುಪ್ರೀಂ ಕೋರ್ಟ್ ಈ ವಿಷಯದಲ್ಲಿ ತಕ್ಷಣ ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿದ್ದಾರೆ(ಏಜೆನ್ಸೀಸ್​).

Related Stories

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net