2047ರ ಅಭಿವೃದ್ಧಿ ಮಂತ್ರ!...ಇಂದಿನಿಂದ ಪ್ರಧಾನಿ ಮೋದಿ ನೇತೃತ್ವದಲ್ಲಿ ಎರಡು ದಿನಗಳ ಚಿಂತನಾ ಶಿಬಿರ: ಇದರ ಅಜೆಂಡಾ ಏನು...? | Chintan Shivir

ನವದೆಹಲಿ: ವಿಕಸಿತ ಭಾರತ ಪರಿಕಲ್ಪನೆಯಡಿಯಲ್ಲಿ ವಿವಿಧ ಸಚಿವಾಲಯಗಳು ಮತ್ತು ಸರ್ಕಾರಿ ಇಲಾಖೆಗಳು ಕೈಗೊಂಡಿರುವ ಕೆಲಸಗಳು ಹಾಗೂ ರೂಪಿಸಿರುವ ಮಾರ್ಗಸೂಚಿಗಳನ್ನು ಪರಿಶೀಲಿಸಲು, ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ರಾಷ್ಟ್ರ ರಾಜಧಾನಿಯಲ್ಲಿ ಸಚಿವ ಸಂಪುಟದೊಂದಿಗೆ ಚಿಂತನಾ ಶಿಬಿರ (Chintan Shivir) ಎಂಬ ಎರಡು ದಿನಗಳ ಸಭೆಯನ್ನು ನಡೆಸಲಿದ್ದಾರೆ ಎಂದು ವರದಿಯಾಗಿದೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Published on

ನವದೆಹಲಿ: ವಿಕಸಿತ ಭಾರತ ಪರಿಕಲ್ಪನೆಯಡಿಯಲ್ಲಿ ವಿವಿಧ ಸಚಿವಾಲಯಗಳು ಮತ್ತು ಸರ್ಕಾರಿ ಇಲಾಖೆಗಳು ಕೈಗೊಂಡಿರುವ ಕೆಲಸಗಳು ಹಾಗೂ ರೂಪಿಸಿರುವ ಮಾರ್ಗಸೂಚಿಗಳನ್ನು ಪರಿಶೀಲಿಸಲು, ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ರಾಷ್ಟ್ರ ರಾಜಧಾನಿಯಲ್ಲಿ ಸಚಿವ ಸಂಪುಟದೊಂದಿಗೆ ಚಿಂತನಾ ಶಿಬಿರ (Chintan Shivir) ಎಂಬ ಎರಡು ದಿನಗಳ ಸಭೆಯನ್ನು ನಡೆಸಲಿದ್ದಾರೆ ಎಂದು ವರದಿಯಾಗಿದೆ.

2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ಸರ್ಕಾರ ಕೈಗೊಂಡಿರುವ ಕಾರ್ಯಗಳ ಪರಾಮರ್ಶೆ ನಡೆಸುವುದು, ಪ್ರಸ್ತುತ ಚಾಲನೆಯಲ್ಲಿರುವ ಯೋಜನೆಗಳ ಪರಿಶೀಲನೆ ಮಾಡುವುದು ಮತ್ತು ಮುಂದಿನ ಹಂತದ ವಿಚಾರಗಳು, ಸುಧಾರಣೆಗಳು ಹಾಗೂ ಆದ್ಯತೆಗಳನ್ನು ಗುರುತಿಸುವುದರ ಮೇಲೆ ಈ ಅಧಿಕೃತ ಸಭೆಯು ಗಮನಹರಿಸಲಿದೆ ಎಂದು ತಿಳಿದುಬಂದಿದೆ.

ವಿಕಸಿತ ಭಾರತ 2047 ಯೋಜನೆಗಾಗಿ 2021 ರಿಂದಲೇ ಕೆಲಸ ಸಾಗಿದೆ. ಇದಕ್ಕಾಗಿ ಕಾರ್ಯದರ್ಶಿಗಳ 10 ತಂಡಗಳನ್ನು ರಚಿಸಿ, ಅಲ್ಪಾವಧಿ ಮತ್ತು ದೀರ್ಘಾವಧಿಯ ಯೋಜನೆಗಳನ್ನು ಸಿದ್ಧಪಡಿಸಲಾಗಿತ್ತು. ಹಲವು ತಜ್ಞರೊಂದಿಗೂ ಸಮಾಲೋಚನೆ ನಡೆಸಲಾಗಿತ್ತು. ಅಂದಿನಿಂದ ಇಲ್ಲಿಯವರೆಗೆ ಕೇಂದ್ರ ಸಚಿವ ಸಂಪುಟವು ಈ ವಿಷಯದ ಕುರಿತು 8 ಬಾರಿ ಪ್ರಮುಖ ಚರ್ಚೆಗಳನ್ನು ನಡೆಸಿದೆ.

ಇದನ್ನೂ ಓದಿ:ಮೋದಿ ಸ್ವಾಗತಕ್ಕೆ ಎದುರುನೋಡುತ್ತಿದ್ದೇವೆ!...G20 ಶೃಂಗಸಭೆಯ ವೇಳೆಗೆ ವಾಣಿಜ್ಯ ಮಾತುಕತೆ ಪೂರ್ಣಗೊಳಿಸಲು ಕೆನಡಾ ಪ್ರಧಾನಿ ನಿರ್ಧಾರ! | Canada-IndiaTrade

ಚಿಂತನಾ ಶಿಬಿರದ ಕಾರ್ಯಸೂಚಿ ಏನು..?

ಈ ಚಿಂತನಾ ಶಿಬಿರವು ಕಾರ್ಯದರ್ಶಿಗಳ ಗುಂಪುಗಳು, ಸಚಿವಾಲಯಗಳು, ಇಲಾಖೆಗಳು, ಸಂಪುಟ ಸಚಿವಾಲಯ ಮತ್ತು ನೀತಿ ಆಯೋಗ ಕೈಗೊಂಡಿರುವ ಕೆಲಸಗಳನ್ನು ಒಗ್ಗೂಡಿಸಿ ಈ ಪ್ರಕ್ರಿಯೆಯನ್ನು ಮುಂದಕ್ಕೆ ಕೊಂಡೊಯ್ಯಲಿದೆ. ಆಡಳಿತಾತ್ಮಕ ಸುಧಾರಣೆಗಳು, ಸುಲಭ ಜೀವನಶೈಲಿ, ನಿಯಮಗಳ ಪಾಲನೆಯ ಹೊರೆ ತಗ್ಗಿಸುವುದು ಹಾಗೂ ಆಡಳಿತದ ಇತರ ಆದ್ಯತೆಗಳ ಕುರಿತು ಈ ಸಭೆಯಲ್ಲಿ ಚರ್ಚೆಗಳು ನಡೆಯಲಿವೆ.

ಸೆಪ್ಟೆಂಬರ್ 23-24 ರಂದು ನಡೆಯುವ ಸಭೆ ಮಾತ್ರವಲ್ಲ, ಮುಂಬರುವ ದಿನಗಳಲ್ಲಿ ಇನ್ನಷ್ಟು ಸುತ್ತಿನ ಚರ್ಚೆಗಳು ನಡೆಯುವ ನಿರೀಕ್ಷೆಯಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ಶ್ರಮಿಸುವುದಕ್ಕೆ ಪ್ರಧಾನಿ ಮೋದಿ ಅವರು ಪದೇ ಪದೇ ಒತ್ತು ನೀಡಿದ್ದು, ಈ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಬಲಪಡಿಸಲು ಅನೇಕ ಕೇಂದ್ರ ಸಚಿವರು ಕೂಡ ಚಿಂತನಾ ಶಿಬಿರಗಳನ್ನು ನಡೆಸಿದ್ದಾರೆ.

Also Read
ದೇಶವಿರೋಧಿ ಸಾಹಿತ್ಯದ ವಿರುದ್ಧ ಜಮ್ಮು-ಕಾಶ್ಮೀರದಲ್ಲಿ ಸರ್ಜಿಕಲ್ ಸ್ಟ್ರೈಕ್!...20 ಲಕ್ಷಕ್ಕೂ ಹೆಚ್ಚು ಪುಸ್ತಕಗಳ ತಪಾಸಣೆ! | Jammu And Kashmir
ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ಮೋದಿ ಮಂಡಿಸಿದ 7 ಪ್ರಮುಖ ಸುಧಾರಣೆಗಳು!....

ಇತ್ತೀಚಿನ 80ನೇ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ, ಪ್ರಧಾನಿ ಮೋದಿ ಅವರು ಸಪ್ತಧಾರಾ ಚೌಕಟ್ಟನ್ನು ಅನಾವರಣಗೊಳಿಸಿದರು. ಇದು ದೇಶದ ಮುಂದಿನ ಹಂತದ ಬೆಳವಣಿಗೆಯನ್ನು ಮುನ್ನಡೆಸುವ ಏಳು ಶಕ್ತಿಯ ಮೂಲಗಳನ್ನು ವಿವರಿಸುತ್ತದೆ.

  • ಉತ್ಪಾದನೆ: ಭಾರತದ ಉತ್ಪಾದನಾ ವಲಯದಲ್ಲಿ ಭಾರಿ ವಿಸ್ತರಣೆಗೆ ಕರೆ ನೀಡಿದ ಪ್ರಧಾನಿ ಮೋದಿ, ದೇಶವು ಕೇವಲ ಬಿಡಿಭಾಗಗಳನ್ನು ಉತ್ಪಾದಿಸುವುದನ್ನು ಬಿಟ್ಟು ಸಂಪೂರ್ಣ ಉತ್ಪನ್ನಗಳನ್ನು ತಯಾರಿಸುವುದರತ್ತ ಗಮನಹರಿಸಬೇಕು ಎಂದು ಹೇಳಿದರು.

  • ಕೃಷಿ ಮತ್ತು ಆಹಾರ ಭದ್ರತೆ: ಎರಡನೇ ಸ್ತಂಭ ಕೃಷಿ ಮತ್ತು ಆಹಾರ ಉತ್ಪಾದನೆಯಾಗಿದ್ದು, ಭಾರತದ ಅಭಿವೃದ್ಧಿಯ ಪಯಣದಲ್ಲಿ ಕೃಷಿ ವಲಯದ ಮಹತ್ವವನ್ನು ಒತ್ತು ಹೇಳಿದ ಪ್ರಧಾನಿ ಮೋದಿ, ಕೃಷಿ ಮತ್ತು ಆಹಾರ ಭದ್ರತೆಯು ದೇಶದ ಆರ್ಥಿಕ ಬೆಳವಣಿಗೆಯ ಕೇಂದ್ರಬಿಂದುವಾಗಿ ಉಳಿಯಲಿದೆ ಎಂದರು.

  • ತಂತ್ರಜ್ಞಾನ ಮತ್ತು ನಾವೀನ್ಯತೆ: ಪ್ರಪಂಚವು ಡೇಟಾ ಸೆಂಟರ್‌ಗಳು, ರೋಬೋಟಿಕ್ಸ್ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಿಂದ ಚಾಲಿತವಾಗುವ ಯುಗವನ್ನು ಪ್ರವೇಶಿಸುತ್ತಿದೆ ಎಂದಿರುವ ನಮೋ. ಭಾರತವು ತನ್ನ ಸಾಮರ್ಥ್ಯಗಳನ್ನು ಬಲಪಡಿಸಿಕೊಂಡು ಜಾಗತಿಕ ತಂತ್ರಜ್ಞಾನದ ಕೇಂದ್ರವಾಗಿ ಹೊರಹೊಮ್ಮುವ ಅಗತ್ಯವನ್ನು ಉಲ್ಲೇಖಿಸಿದರು.

  • ಗತಿ ಶಕ್ತಿ: ನಾಲ್ಕನೇ ಸ್ತಂಭವು ಮೂಲಸೌಕರ್ಯ ಮತ್ತು ಸಂಪರ್ಕದ ಮೇಲೆ ಗಮನಹರಿಸುತ್ತದೆ. ವ್ಯಾಪಾರವನ್ನು ಉತ್ತೇಜಿಸುವಲ್ಲಿ, ಲಾಜಿಸ್ಟಿಕ್ಸ್ ಸುಧಾರಿಸುವಲ್ಲಿ ಮತ್ತು ಉದ್ಯಮಗಳನ್ನು ಬಲಪಡಿಸುವಲ್ಲಿ ವಹಿಸುವ ಪಾತ್ರವನ್ನು ಪರಿಗಣಿಸಿ ರಸ್ತೆಗಳು, ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಿಗೆ ಹೆಚ್ಚಿನ ಆದ್ಯತೆ ನೀಡುವುದನ್ನು ಮುಂದುವರಿಸಲಾಗುವುದು ಎಂದು ಮೋದಿ ಹೇಳಿದರು.

  • ರಕ್ಷಾ ಶಕ್ತಿ: ಐದನೇ ಸ್ತಂಭವು ರಕ್ಷಣೆ ಮತ್ತು ಮಿಲಿಟರಿ ಸ್ವಾವಲಂಬನೆಯ ಮೇಲೆ ಗಮನಹರಿಸುತ್ತದೆ. ದೇಶೀಯ ರಕ್ಷಣಾ ಉತ್ಪಾದನೆಯನ್ನು ಬಲಪಡಿಸಲು ಮತ್ತು ಆಮದಿನ ಮೇಲಿನ ಭಾರತದ ಅವಲಂಬನೆಯನ್ನು ಕಡಿಮೆ ಮಾಡಲು ಪ್ರಧಾನಿ ಕರೆ ನೀಡಿದರು.

  • ಹಸಿರು ಇಂಧನ: ಹಸಿರು ಇಂಧನವು ಸಪ್ತಧಾರಾ ಚೌಕಟ್ಟಿನ ಆರನೇ ಭಾಗವಾಗಿದ್ದು, ಪರಿಸರ ಸುಸ್ಥಿರತೆಯನ್ನು ಕಾಯ್ದುಕೊಳ್ಳುವ ಜೊತೆಗೆ ಭಾರತದ ಭವಿಷ್ಯದ ಇಂಧನ ಅಗತ್ಯಗಳನ್ನು ಪೂರೈಸಲು ಸ್ವಚ್ಛ ಇಂಧನ ತಂತ್ರಜ್ಞಾನಗಳಲ್ಲಿ ನಾವೀನ್ಯತೆ ಅತ್ಯಗತ್ಯ ಎಂದು ನಮೋ ತಿಳಿಸಿದರು.

  • ಸಾಫ್ಟ್ ಪವರ್ : ಅಂತಿಮ ಸ್ತಂಭವೆಂದರೆ ಭಾರತದ ಸಾಫ್ಟ್ ಪವರ್. ದೇಶದ ಗಡಿಗಳನ್ನು ಮೀರಿ ಬೆಳೆದಿರುವ ಸಾಂಸ್ಕೃತಿಕ ಪ್ರಭಾವವನ್ನು ಎತ್ತಿಹಿಡಿದ ಮೋದಿ, ಯೋಗ, ಕರಕುಶಲ ವಸ್ತುಗಳು, ಚಲನಚಿತ್ರಗಳು, ಅನಿಮೇಷನ್, ಗೇಮಿಂಗ್, ಡಿಜಿಟಲ್ ಕಂಟೆಂಟ್ ಮತ್ತು ವಿಶಾಲ ಸೃಜನಶೀಲ ಉದ್ಯಮವನ್ನು ಭಾರತದ ಜಾಗತಿಕ ಸಾಂಸ್ಕೃತಿಕ ವ್ಯಾಪ್ತಿಯ ಪ್ರಮುಖ ಘಟಕಗಳಾಗಿ ಉಲ್ಲೇಖಿಸಿದರು(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net