

ನವದೆಹಲಿ: ಎಸ್‌ಐಆರ್ ಕುರಿತು ಚುನಾವಣಾ ಆಯೋಗದಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳ ಕುರಿತು ತನಿಖಾ ವರದಿ ಬಿತ್ತರವಾದ ಬೆನ್ನಲ್ಲೇ ಎದ್ದಿರುವ ರಾಜಕೀಯ ವಾಗ್ವಾದದ ನಡುವೆ, ಕೇಂದ್ರ ಸಚಿವ ಚಿರಾಗ್ ಪಾಸ್ವಾನ್, ಚುನಾವಣಾ ಆಯೋಗ ಜನರ ನಂಬಿಕೆ ಉಳಿಸಿಕೊಳ್ಳಬೇಕು, ಮತ್ತು ಬಲವಾಗಿ ತಮ್ಮ ವಾದ ಮಂಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪಾಟ್ನಾದಲ್ಲಿ ಈ ಕುರಿತು ಮಾತನಾಡಿರುವ ಅವರು, ಚುನಾವಣಾ ಆಯೋಗದ ವಿರುದ್ಧ ಇಂತಹ ಪ್ರಶ್ನೆಗಳು ಎದ್ದರೆ, ತನ್ನ ಪರ ದೃಢವಾಗಿ ಮಂಡಿಸುವುದು ಚುನಾವಣಾ ಆಯೋಗದ, ವಿಶೇಷವಾಗಿ ಸಿಇಸಿಯ ಜವಾಬ್ದಾರಿಯಾಗಿದೆ ಎಂದು ನಾನು ನಂಬುತ್ತೇನೆ. ಆಯೋಗವು ಜನರ ನಂಬಿಕೆಯನ್ನು ಉಳಿಸಿಕೊಳ್ಳಬೇಕು. ಮತ್ತು ಚುನಾವಣಾ ಪ್ರಕ್ರಿಯೆಯ ಬಗ್ಗೆ ಅವರ ಅನುಮಾನಗಳನ್ನು ಪರಿಹರಿಸಬೇಕು ಎಂದು ಹೇಳಿದ್ದಾರೆ.
ವಿರೋಧ ಪಕ್ಷಗಳು ಏನು ಹೇಳಿದರೂ ನಮಗೆ ಚಿಂತೆ ಇಲ್ಲ, ಯಾಕಂದರೆ ಅವರ ಕೆಲಸ ರಾಜಕೀಯ ಮಾಡುವುದು. ಆಯೋಗವು ಜನರ ನಂಬಿಕೆಯನ್ನು ಉಳಿಸಿಕೊಳ್ಳಬೇಕು. ಚುನಾವಣಾ ಪ್ರಕ್ರಿಯೆಯ ಬಗ್ಗೆಯೇ ಸಾರ್ವಜನಿಕರ ಮನಸ್ಸಿನಲ್ಲಿ ಸಂದೇಹಗಳು ಉದ್ಭವಿಸಿದರೆ ಅದು ತಪ್ಪಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಆಯೋಗವು ಜನರ ಮನಸ್ಸಿನಲ್ಲಿ ಯಾವುದೇ ಸಂದೇಹಗಳು ಉದ್ಭವಿಸದಂತೆ ತನ್ನ ಅಂಶಗಳನ್ನು ದೃಢವಾಗಿ ಮಂಡಿಸಬೇಕು ಎಂದು ತಿಳಿಸಿದ್ದಾರೆ.
ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ 10 ತಿಂಗಳ ಅವಧಿಯಲ್ಲಿ ಕನಿಷ್ಠ 14 ಬಾರಿ ಮತದಾರರ ಪಟ್ಟಿಯ ಎಸ್‌ಐಆರ್ ಪ್ರಕ್ರಿಯೆಗಳಿಗೆ ಸಂಬಂಧಿಸಿದ ನಿರ್ಧಾರಗಳು ಮತ್ತು ಆದೇಶಗಳ ವಿರುದ್ಧ ಔಪಚಾರಿಕ ಆಕ್ಷೇಪಣೆಗಳನ್ನು ಎತ್ತಿದ್ದಾರೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ತನಿಖಾ ವರದಿ ತಿಳಿಸಿದೆ.
ಈ ವರದಿ ಬಳಿಕ ಪ್ರತಿಪಕ್ಷಗಳು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ರಾಜೀನಾಮೆಗೆ ಒತ್ತಾಯಿಸಿವೆ. ಗುರುವಾರ ಸುದ್ದಿಗೋಷ್ಠಿ ನಡೆಸಿದ್ದ ರಾಹುಲ್ ಗಾಂಧಿ, ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಮತ ಕಳ್ಳತನ, ಕಾನೂನು ಕಳ್ಳತನ ಮತ್ತು ಸಾಂಸ್ಥಿಕ ಕಳ್ಳತನದ ಆರೋಪ ಹೊರಿಸಿದ್ದು, ಇದನ್ನು ಇದು ದೇಶವಿರೋಧಿ ಕೃತ್ಯ ಎಂದು ಬಣ್ಣಿಸಿದ್ದಾರೆ.
ಚುನಾವಣಾ ಆಯೋಗವು ಮತದ ಸಾಂಸ್ಥಿಕ ರಕ್ಷಕ. ನಾನು ಅದನ್ನು ಪುರಾವೆಗಳೊಂದಿಗೆ ತೋರಿಸಿದ್ದೇನೆ. ಭಾರತೀಯ ಚುನಾವಣೆಗಳು, 2024ರ ಲೋಕಸಭಾ ಚುನಾವಣೆ, ವಿಧಾನಸಭಾ ಚುನಾವಣೆಗಳೆಲ್ಲಿ ಅಕ್ರಮ ನಡೆದಿದೆ ಎಂದು 100% ಖಚಿತವಾಗಿ ಹೇಳಲು ಈಗಾಗಲೇ ನಮ್ಮಲ್ಲಿ ಸಾಕಷ್ಟು ಮಾಹಿತಿ ಇದೆ ಎಂದಿದ್ದಾರೆ.
ಇನ್ನೂ ಎಸ್‌ಐಆರ್ ಭಿನ್ನಾಭಿಪ್ರಾಯದ ಕುರಿತು ತನಿಖಾ ವರದಿ ಬಗ್ಗೆ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗ, ಆಯೋಗದ ಸದಸ್ಯರು ಎತ್ತುವ ಪ್ರಶ್ನೆಗಳು ಮತ್ತು ಅವಲೋಕನಗಳನ್ನು ತನ್ನ ನಿಯಮಿತ ಆಂತರಿಕ ಪ್ರಕ್ರಿಯೆಯ ಭಾಗವಾಗಿದೆ. ಎಸ್‌ಐಆರ್‌ಗೆ ಸಂಬಂಧಿಸಿದ ನಿರ್ಧಾರಗಳು ಸೇರಿದಂತೆ ಆಯೋಗವು ತೆಗೆದುಕೊಂಡ ಎಲ್ಲಾ ನಿರ್ಧಾರಗಳು ಸಂಪೂರ್ಣ ಕಾನೂನು ಬೆಂಬಲವನ್ನು ಹೊಂದಿವೆ. ಅಂತಿಮ ನಿರ್ಧಾರಗಳು ಸರ್ವಾನುಮತದಿಂದ ಕೂಡಿವೆ ಎಂದು ತಿಳಿಸಿದೆ (ಏಜೆನ್ಸೀಸ್).