ಚುನಾವಣೆಯಲ್ಲಿ ಅಕ್ರಮ ನಡೆಯುತ್ತಿದ್ದರೇ ಸ್ಪರ್ಧಿಸುವುದನ್ನು ಬಹಿಷ್ಕರಿಸಿ: ವಿಪಕ್ಷಗಳಿಗೆ ಅಭಿಜಿತ್ ದಿಪ್ಕೆ ಒತ್ತಾಯ | Abhijeet Dipke

ಭಾರತದಲ್ಲಿ ನಡೆಯುತ್ತಿರುವ ಚುನಾವಣೆ ಪ್ರಕ್ರಿಯೆಗಳಲ್ಲಿ ಅಕ್ರಮ ನಡೆಯುತ್ತಿದೆ ಎಂದು ವಿರೋಧ ಪಕ್ಷಗಳು ಭಾವಿಸಿದ್ರೆ ಸ್ಪರ್ಧಿಸುವುದನ್ನು ಬಹಿಷ್ಕರಿಸಬೇಕು ಎಂದು ಶುಕ್ರವಾರ(ಸೆ. 25) ಕಾಕ್ರೋಚ್ ಜನತಾ ಪಕ್ಷದ ನಾಯಕ ಅಭಿಜಿತ್ ದಿಪ್ಕೆ ಒತ್ತಾಯಿಸಿದ್ದಾರೆ.
Abhijit Dipke
ಕಾಕ್ರೋಚ್ ಜನತಾ ಪಾರ್ಟಿ ಸ್ಥಾಪಕ ಅಭಿಜಿತ್ ದಿಪ್ಕೆ
Published on: 

ನವದೆಹಲಿ: ಭಾರತದಲ್ಲಿ ನಡೆಯುತ್ತಿರುವ ಚುನಾವಣೆ ಪ್ರಕ್ರಿಯೆಗಳಲ್ಲಿ ಅಕ್ರಮ ನಡೆಯುತ್ತಿದೆ ಎಂದು ವಿರೋಧ ಪಕ್ಷಗಳು ಭಾವಿಸಿದ್ರೆ ಸ್ಪರ್ಧಿಸುವುದನ್ನು ಬಹಿಷ್ಕರಿಸಬೇಕು ಎಂದು ಶುಕ್ರವಾರ(ಸೆ. 25) ಕಾಕ್ರೋಚ್ ಜನತಾ ಪಕ್ಷದ ನಾಯಕ ಅಭಿಜಿತ್ ದಿಪ್ಕೆ ಒತ್ತಾಯಿಸಿದ್ದಾರೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಹಾಕಿರುವ ಅವರು, ವಿರೋಧ ಪಕ್ಷಗಳು ಚುನಾವಣಾ ಅಕ್ರಮ ನಡೆದಿದೆ ಎಂದು ಆರೋಪಿಸಿ ಚುನಾವಣೆಗಳಲ್ಲಿ ಭಾಗವಹಿಸುವುದನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ವಾದಿಸಿದ್ದಾರೆ.

ಹೌದು, ಚುನಾವಣೆಗಳಲ್ಲಿ ಅಕ್ರಮ ನಡೆಯುತ್ತಿದೆ. ಆದರೆ ನೀವು ಅಕ್ರಮ ನಡೆದ ಚುನಾವಣೆಗಳಲ್ಲಿ ಭಾಗವಹಿಸುವುದನ್ನು ಮುಂದುವರಿಸಿದಾಗ, ನೀವು ಈ ಚುನಾವಣೆಗಳನ್ನು ನ್ಯಾಯಸಮ್ಮತಗೊಳಿಸುತ್ತೀರಿ. ಮತ್ತು ಅವು ಮುಕ್ತ ಮತ್ತು ನ್ಯಾಯಯುತವಾಗಿವೆ ಎಂಬ ಭ್ರಮೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತೀರಿ ಎಂದಿದ್ದಾರೆ.

ಬಹುಶಃ, ಸ್ಪರ್ಧಿಸದಿದ್ದರೆ ತಮ್ಮ ಅಸ್ತಿತ್ವವೇ ಇಲ್ಲವಾಗುತ್ತದೆ ಎಂಬ ಭಯದಿಂದ ನೀವು ಸ್ಪರ್ಧಿಸುತ್ತಿರಬಹುದು. ಆದರೆ ಮತಗಳ ಕಳ್ಳತನ ನಡೆಯುತ್ತಿರುವಾಗ, ನಿಮ್ಮ ಶಾಸಕರು ಮತ್ತು ಸಂಸದರನ್ನು ಸೆಳೆದುಕೊಳ್ಳಲಾಗುತ್ತಿರುವಾಗ ಹಾಗೂ ನಿಮ್ಮ ಪಕ್ಷಗಳನ್ನು ಒಡೆಯಲಾಗುತ್ತಿರುವಾಗ, ನೀವು ಯಾವ ರೀತಿಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

Also Read
ಸಿಇಸಿ ವಜಾ ಮಾಡಲು ವಿಪಕ್ಷಗಳ ಪ್ಲಾನ್​: ಇಂಡಿಯಾ ಒಕ್ಕೂಟದ ಕೈಯಲ್ಲಿದೆಯಾ ಆ ಅಸ್ತ್ರ...? ಕಾನೂನು ಚೌಕಟ್ಟಿನ ಸಂಪೂರ್ಣ ವಿವರ ಇಲ್ಲಿದೆ | CEC Impeachment
Abhijit Dipke

ಇದು ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳುವ ಕ್ರಮವಲ್ಲ. ನಿಮ್ಮನ್ನು ದುರ್ಬಲಗೊಳಿಸುವ, ನಿಮ್ಮ ಪಕ್ಷವನ್ನು ಒಡೆಯುವ ಅಥವಾ ತನಗೆ ಬೇಕಾದಾಗ ನಿಮ್ಮ ಚುನಾಯಿತ ಪ್ರತಿನಿಧಿಗಳನ್ನು ಕಸಿದುಕೊಳ್ಳುವ ವ್ಯವಸ್ಥೆಯಲ್ಲಿ ನೀವು ಕೇವಲ ಬದುಕುಳಿಯಲು ಪ್ರಯತ್ನಿಸುತ್ತಿದ್ದೀರಿ ಅಷ್ಟೇ. ಹೀಗೆ ನೀವು ಎಷ್ಟು ಕಾಲ ಬದುಕುಳಿಯಲು ಸಾಧ್ಯ? ಎಂದಿದ್ದಾರೆ.

ನಿಮಗೆ ಮುಖ್ಯವೆನಿಸುವ ರಾಜ್ಯಗಳಲ್ಲಿ ಅಕ್ರಮಗಳು ನಡೆದಾಗ ಮಾತ್ರ ಅದರ ಬಗ್ಗೆ ಮಾತನಾಡಿ, ಬೇರೆಡೆ ನಡೆದಾಗ ಮೌನವಾಗಿರಲು ಸಾಧ್ಯವಿಲ್ಲ. ಚುನಾವಣೆಗಳಲ್ಲಿ ಅಕ್ರಮಗಳು ನಡೆಯುತ್ತಿದ್ದರೆ, ಅದು ಯಾವ ರಾಜ್ಯ ಅಥವಾ ಯಾವ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಲೆಕ್ಕಿಸಬಾರದು. ಆಟದಲ್ಲಿ ಭಾಗವಹಿಸುತ್ತಲೇ ಆ ಆಟವು ಅಕ್ರಮಗಳಿಂದ ಕೂಡಿದೆ ಎಂದು ಹೇಳಲು ಸಾಧ್ಯವಿಲ್ಲ. ನಿಮ್ಮ ಭಾಗವಹಿಸುವಿಕೆ ಅಕ್ರಮ ಚುನಾವಣೆಗಳಿಗೆ ಮಾನ್ಯತೆ ನೀಡಬಹುದು ಎಂದು ಹೇಳಿದ್ದಾರೆ.

ನಿಮ್ಮ ಸ್ವಂತ ರಾಜಕೀಯ ಅಸ್ತಿತ್ವದ ಬಗ್ಗೆ ಯೋಚಿಸುವ ಮೊದಲು ದೇಶ ಮತ್ತು ಅದರ ಪ್ರಜಾಪ್ರಭುತ್ವದ ಬಗ್ಗೆ ಯೋಚಿಸಿ. ದೃಢ ನಿಲುವು ತಳೆಯಿರಿ ಮತ್ತು ಅಕ್ರಮಗಳಿಂದ ಕೂಡಿದ ಚುನಾವಣೆಗಳಲ್ಲಿ ಭಾಗವಹಿಸುವುದನ್ನು ನಿಲ್ಲಿಸಿ ಎಂದು ಪ್ರತಿಪಾದಿಸಿದ್ದಾರೆ.

ಇನ್ನೂ ಇಂಗ್ಲೀಷ್ ದಿನಪತ್ರಿಕೆಯ ತನಿಖಾ ವರದಿ ಕುರಿತು 48 ಗಂಟೆಗಳಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ನೀಡುವಂತೆ ದೀಪ್ಕೆ ಆಗ್ರಹಿಸಿದ್ದಾರೆ. ಒಂದು ವೇಳೆ ನೀಡದಿದ್ದರೇ ಜಂತರ್ ಮಂತರ್ 2.0 ಮಾದರಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net