ಸಿಇಸಿ ವಜಾ ಮಾಡಲು ವಿಪಕ್ಷಗಳ ಪ್ಲಾನ್​: ಇಂಡಿಯಾ ಒಕ್ಕೂಟದ ಕೈಯಲ್ಲಿದೆಯಾ ಆ ಅಸ್ತ್ರ...? ಕಾನೂನು ಚೌಕಟ್ಟಿನ ಸಂಪೂರ್ಣ ವಿವರ ಇಲ್ಲಿದೆ | CEC Impeachment

CEC Impeachment: ಕೇಂದ್ರ ಚುನಾವಣಾ ಆಯೋಗದ ಕಾರ್ಯವೈಖರಿ ಮತ್ತು ಮತದಾರರ ಪಟ್ಟಿಯ ಪರಿಷ್ಕರಣೆ (SIR) ಪ್ರಕ್ರಿಯೆಯ ಸುತ್ತಲಿನ ವಿವಾದಗಳು ಈಗ ರಾಷ್ಟ್ರ ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಸಂಚಲನ ಮಾಡಿದ್ದು, ಚುನಾವಣಾ ವ್ಯವಸ್ಥೆಯಲ್ಲಿ ಅಕ್ರಮ ಎಸಗಿ ಮತಕಳ್ಳತನ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿರುವ ವಿಪಕ್ಷಗಳು, ಈ ಪ್ರಕ್ರಿಯೆಯಲ್ಲಿ ಭಾಗಿಯಾದವರನ್ನು ನೇರವಾಗಿ ದೇಶದ್ರೋಹಿಗಳು ಎಂದು ಕರೆದಿವೆ.
ಸಿಇಸಿ ವಜಾ ಮಾಡಲು ವಿಪಕ್ಷಗಳ ಪ್ಲಾನ್
ಸಿಇಸಿ ವಜಾ ಮಾಡಲು ವಿಪಕ್ಷಗಳ ಪ್ಲಾನ್
Published on: 

CEC Impeachment: ಕೇಂದ್ರ ಚುನಾವಣಾ ಆಯೋಗದ ಕಾರ್ಯವೈಖರಿ ಮತ್ತು ಮತದಾರರ ಪಟ್ಟಿಯ ಪರಿಷ್ಕರಣೆ (SIR) ಪ್ರಕ್ರಿಯೆಯ ಸುತ್ತಲಿನ ವಿವಾದಗಳು ಈಗ ರಾಷ್ಟ್ರ ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಸಂಚಲನ ಮಾಡಿದ್ದು, ಚುನಾವಣಾ ವ್ಯವಸ್ಥೆಯಲ್ಲಿ ಅಕ್ರಮ ಎಸಗಿ ಮತಕಳ್ಳತನ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿರುವ ವಿಪಕ್ಷಗಳು, ಈ ಪ್ರಕ್ರಿಯೆಯಲ್ಲಿ ಭಾಗಿಯಾದವರನ್ನು ನೇರವಾಗಿ ದೇಶದ್ರೋಹಿಗಳು ಎಂದು ಕರೆದಿವೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೂಲ ತತ್ತ್ವಗಳ ಮೇಲೆಯೇ ದಾಳಿ ನಡೆಸಲಾಗಿದೆ ಎಂದು ವಾಗ್ದಾಳಿ ನಡೆಸಿರುವ ಪ್ರತಿಪಕ್ಷಗಳ ನಾಯಕರು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಪಟ್ಟು ಹಿಡಿದಿವೆ.

ಈ ರಾಜಕೀಯ ರಾದ್ಧಾಂತಕ್ಕೆ ಪ್ರಮುಖ ಕಾರಣ ಚುನಾವಣಾ ಆಯೋಗದ ಕುರಿತಾಗಿ ಹೊರಬಂದ ಕೆಲ ಭಿನ್ನಾಭಿಪ್ರಾಯದ ವರದಿಗಳು. ಮೂರು ಸದಸ್ಯರ ಚುನಾವಣಾ ಆಯೋಗದಲ್ಲಿ ಮುಖ್ಯ ಚುನಾವಣಾ ಆಯುಕ್ತರ ಕಾರ್ಯಶೈಲಿ ಹಾಗೂ ಎಸ್​ಐಆರ್​ ಜಾರಿಯ ನಿರ್ಧಾರಗಳ ಕುರಿತು ಉಳಿದ ಇಬ್ಬರು ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ತಮ್ಮ ಗಮನಕ್ಕೆ ತರದೆ ಏಕಪಕ್ಷೀಯವಾಗಿ ತೆಗೆದುಕೊಂಡ ನಿರ್ಧಾರಗಳು, ಮತದಾರರ ಹೆಸರು ಸೇರ್ಪಡೆ ಹಾಗೂ ಅಳಿಸಿ ಹಾಕುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕೊರತೆ ಮತ್ತು ದತ್ತಾಂಶ ನಿರ್ವಹಣೆಯ ವಿಚಾರಗಳಿಗೆ ಸಂಬಂಧಿಸಿದಂತೆ ಕಳೆದ 10 ತಿಂಗಳಲ್ಲಿ ಕನಿಷ್ಠ 14 ಬಾರಿ ಇಬ್ಬರೂ ಆಯುಕ್ತರು ಲಿಖಿತ ರೂಪದಲ್ಲೇ ತಮ್ಮ ಆಕ್ಷೇಪಣೆಗಳನ್ನು ದಾಖಲಿಸಿದ್ದಾರೆ ಎಂದು ಇಂಡಿಯನ್​ ಎಕ್ಸ್​​ಪ್ರೆಸ್​ ವರದಿ ಮಾಡಿದೆ.

ಇದನ್ನೂ ಓದಿ:ಅಣ್ಣನಿಗೆ ರಾಜಕೀಯದ ಗಂಧ-ಗಾಳಿಯೂ ಗೊತ್ತಿಲ್ಲ, ತಂಗಿ ಗೆದ್ದಿದ್ದು ಮುಸ್ಲಿಂ ಲೀಗ್​​ನಿಂದ...ಮಾಧ್ಯಮ ವರದಿ ಬಗ್ಗೆ ಮಹತ್ವದ ಪ್ರಶ್ನೆ ಎತ್ತಿದ ಕಮಲ ನಾಯಕ! | Sudhanshu Trivedi

ಚುನಾವಣಾ ಆಯುಕ್ತರ ನೇಮಕದ ಪ್ರಕ್ರಿಯೆ ಹೀಗಿರುತ್ತೆ!

  • ದೇಶದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುವುದು ಭಾರತೀಯ ಚುನಾವಣಾ ಆಯೋಗದ ಪ್ರಮುಖ ಜವಾಬ್ದಾರಿಯಾಗಿದೆ.

  • ಮೂರು ಸದಸ್ಯರ ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ ದೇಶದ ರಾಷ್ಟ್ರಪತಿಯವರು ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರನ್ನು ನೇಮಕ ಮಾಡುತ್ತಾರೆ.

  • ಈ ಆಯ್ಕೆ ಸಮಿತಿಯಲ್ಲಿ ಪ್ರಧಾನಮಂತ್ರಿಗಳು, ಲೋಕಸಭೆಯ ವಿರೋಧ ಪಕ್ಷದ ನಾಯಕರು ಮತ್ತು ಕೇಂದ್ರ ಸಂಪುಟದ ಒಬ್ಬ ಸಚಿವರು ಇರುತ್ತಾರೆ.

  • 2023 ರ ಕಾಯ್ದೆಯ ಪ್ರಕಾರ, ಚುನಾವಣಾ ಆಯುಕ್ತರಾಗಿ ನೇಮಕಗೊಳ್ಳುವವರು ಸರ್ಕಾರದಲ್ಲಿ ಕಾರ್ಯದರ್ಶಿ ಮಟ್ಟದ ಹುದ್ದೆಗಳಲ್ಲಿ ಕೆಲಸ ಮಾಡಿದ ಪೂರ್ವ ಅನುಭವವನ್ನು ಹೊಂದಿರಬೇಕು.

  • ಚುನಾವಣೆಗಳ ನಿರ್ವಹಣೆ ಮತ್ತು ಸುಗಮ ನಡವಳಿಕೆಯಲ್ಲಿ ಜ್ಞಾನ ಹಾಗೂ ಅನುಭವವನ್ನು ಹೊಂದಿರಬೇಕು.

  • ಆಯುಕ್ತರು 6 ವರ್ಷಗಳ ಅವಧಿಗೆ ಅಥವಾ ಅವರಿಗೆ 65 ವರ್ಷ ವಯಸ್ಸಾಗುವವರೆಗೆ (ಯಾವುದು ಮೊದಲೋ ಅದು) ಈ ಹುದ್ದೆಯಲ್ಲಿರುತ್ತಾರೆ.

  • ಮುಖ್ಯ ಚುನಾವಣಾ ಆಯುಕ್ತರಿಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ಸಿಗುವಷ್ಟೆ ವೇತನ, ಸೌಲಭ್ಯಗಳು ಮತ್ತು ಆರ್ಥಿಕ ಪ್ರಯೋಜನಗಳು ಲಭ್ಯವಿರುತ್ತವೆ.

ಮುಖ್ಯ ಚುನಾವಣಾ ಆಯುಕ್ತರ ವಜಾ ಹೇಗೆ..?

  • ಸಂವಿಧಾನದ ವಿಧಿ 324(5) ರ ಪ್ರಕಾರ, ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ಹುದ್ದೆಯಿಂದ ತೆಗೆದುಹಾಕುವ ವಿಧಾನ ಮತ್ತು ಆಧಾರಗಳ ಮೇಲೆಯೇ ಮುಖ್ಯ ಚುನಾವಣಾ ಆಯುಕ್ತರನ್ನು ವಜಾಗೊಳಿಸಬಹುದು.

  • ಇದನ್ನೇ 2023 ರ ಕಾಯ್ದೆಯ ಸೆಕ್ಷನ್ 11(2) ರಲ್ಲೂ ಸ್ಪಷ್ಟಪಡಿಸಲಾಗಿದೆ.

  • ಸಾಬೀತಾದ ದುರ್ವರ್ತನೆ ಅಥವಾ ಅಸಮರ್ಥತೆ ಆಧಾರದ ಮೇಲೆ ಮಾತ್ರ ಅವರನ್ನು ಹುದ್ದೆಯಿಂದ ತೆಗೆದುಹಾಕಲು ಅವಕಾಶವಿದೆ.

  • ದುರ್ವರ್ತನೆ ಎಂದರೆ ಭ್ರಷ್ಟಾಚಾರ ಅಥವಾ ಅಧಿಕಾರ ದುರ್ಬಳಕೆಯಾಗಿರುತ್ತದೆ.

  • ಅಸಮರ್ಥತೆ ಎಂದರೆ ಅಧಿಕಾರಿಯಾದವರು ತನ್ನ ಕರ್ತವ್ಯಗಳನ್ನು ನಿರ್ವಹಿಸಲು ಸಾಧ್ಯವಾಗದ ಸ್ಥಿತಿಯಾಗಿದೆ.

  • ಮುಖ್ಯ ಚುನಾವಣಾ ಆಯುಕ್ತರ ಶಿಫಾರಸು ಇಲ್ಲದೆ ಇತರ ಯಾವುದೇ ಚುನಾವಣಾ ಆಯುಕ್ತರನ್ನು ಅಥವಾ ಪ್ರಾದೇಶಿಕ ಆಯುಕ್ತರನ್ನು ವಜಾಗೊಳಿಸಲು ಸಾಧ್ಯವಿಲ್ಲ.

  • ರಾಜಕೀಯ ಒತ್ತಡಗಳಿಂದ ಚುನಾವಣಾ ಆಯೋಗವನ್ನು ಮುಕ್ತವಾಗಿಡಲು ಮತ್ತು ರಕ್ಷಿಸಲು, ಮುಖ್ಯ ಚುನಾವಣಾ ಆಯುಕ್ತರನ್ನು ವಜಾಗೊಳಿಸುವ ಪ್ರಕ್ರಿಯೆಯನ್ನು ಅತ್ಯಂತ ಕಠಿಣಗೊಳಿಸಲಾಗಿದೆ.

ಮಹಾಭಿಯೋಗ ನಿರ್ಣಯ ಮಂಡನೆಯ ಬಳಿಕ ಏನು...?

ಮುಖ್ಯ ಚುನಾವಣಾ ಆಯುಕ್ತರನ್ನು ಹುದ್ದೆಯಿಂದ ತೆಗೆದುಹಾಕುವ ಪ್ರಕ್ರಿಯೆಯನ್ನು ಪ್ರಾರಂಭಿಸಲು, ಸಂಸತ್ತಿನ ಉಭಯ ಸದನಗಳ (ಲೋಕಸಭೆ ಮತ್ತು ರಾಜ್ಯಸಭೆ) ಸದಸ್ಯರು ದುರ್ವರ್ತನೆ ಅಥವಾ ಅಸಮರ್ಥತೆಯನ್ನು ಸ್ಪಷ್ಟವಾಗಿ ಆರೋಪಿಸಿ ಮಹಾಭಿಯೋಗ ನಿರ್ಣಯ ಎಂಬ ನೋಟಿಸ್ ಅನ್ನು ಮಂಡಿಸಬೇಕು. ಈ ಮಹಾಭಿಯೋಗ ನೋಟಿಸ್ ಸ್ವೀಕಾರಾರ್ಹವಾಗಬೇಕಾದರೆ, ಲೋಕಸಭೆಯಲ್ಲಿ ಕನಿಷ್ಠ 100 ಸಂಸದರು ಮತ್ತು ರಾಜ್ಯಸಭೆಯಲ್ಲಿ ಕನಿಷ್ಠ 50 ಸಂಸದರ ಸಹಿ ಇರುವುದು ಖಡ್ಡಾಯ. ಒಂದು ವೇಳೆ ನೋಟಿಸ್ ಸ್ವೀಕೃತಗೊಂಡರೆ, ಹೊರಿಸಲಾದ ಆರೋಪಗಳ ಸತ್ಯಾಸತ್ಯತೆಯನ್ನು ನಿರ್ಧರಿಸಲು ತನಿಖೆಯನ್ನು ನಡೆಸಲಾಗುತ್ತದೆ.

Also Read
ಎಸ್​​ಐಆರ್​ ರಾದ್ಧಾಂತ!...ಸಿಇಸಿ ಜ್ಞಾನೇಶ್ ಕುಮಾರ್ ವಜಾಕ್ಕೆ ಇಂಡಿಯಾ ಕೂಟ ಹೊಸ ತಂತ್ರ | Gyanesh Kumar
ಸಿಇಸಿ ವಜಾ ಮಾಡಲು ವಿಪಕ್ಷಗಳ ಪ್ಲಾನ್

ಇದರ ಬಳಿಕ ಸಂಸತ್ತಿನ ಉಭಯ ಸದನಗಳಲ್ಲಿ ಹಾಜರಿದ್ದು ಮತ ಚಲಾಯಿಸುವ ಸದಸ್ಯರ ಪೈಕಿ ಮೂರನೇ ಎರಡರಷ್ಟು (2/3) ವಿಶೇಷ ಬಹುಮತದೊಂದಿಗೆ ವಜಾ ನಿರ್ಣಯವು ಅಂಗೀಕಾರಗೊಳ್ಳಬೇಕು. ಸಂಸತ್ತಿನಲ್ಲಿ ನಿರ್ಣಯವು ಅಂಗೀಕಾರಗೊಂಡ ತಕ್ಷಣ, ರಾಷ್ಟ್ರಪತಿಯವರು ಮುಖ್ಯ ಚುನಾವಣಾ ಆಯುಕ್ತರನ್ನು ಹುದ್ದೆಯಿಂದ ತೆಗೆದುಹಾಕುವ ಆದೇಶವನ್ನು ಹೊರಡಿಸುತ್ತಾರೆ. ಸಂವಿಧಾನಾತ್ಮಕ ಅಗತ್ಯತೆಗಳು ಪೂರ್ಣಗೊಂಡ ನಂತರ, ಈ ವಿಷಯದಲ್ಲಿ ರಾಷ್ಟ್ರಪತಿಯವರು ಸಂಸತ್ತಿನ ಸಲಹೆಯಂತೆ ನಡೆದುಕೊಳ್ಳುವುದನ್ನು ಬಿಟ್ಟು ಬೇರೆ ಯಾವುದೇ ಆಯ್ಕೆ ಇರುವುದಿಲ್ಲ.

ಕಳೆದ ಸಲ ಆಗಿದ್ದೇನು...?

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕಲು ಈ ಹಿಂದೆ ವಿಪಕ್ಷಗಳು ಸಂಸತ್ತಿನ ಉಭಯ ಸದನಗಳಲ್ಲಿ ಮಂಡಿಸಿದ್ದ ಮಹಾಭಿಯೋಗ ನಿರ್ಣಯಗಳನ್ನು ಏಪ್ರಿಲ್‌ನಲ್ಲಿ ರಾಜ್ಯಸಭೆಯ ಸಭಾಪತಿ ಮತ್ತು ಲೋಕಸಭೆಯ ಸ್ಪೀಕರ್ ತಿರಸ್ಕರಿಸಿದರು. ಈ ವರ್ಷದ ಮಾರ್ಚ್ 12 ರಂದು, ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ನೇತೃತ್ವದಲ್ಲಿ ವಿಪಕ್ಷಗಳು ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಮಹಾಭಿಯೋಗ ನಿರ್ಣಯಗಳನ್ನು ಮಂಡಿಸಿದ್ದವು. ಲೋಕಸಭೆಯ ನಿರ್ಣಯಕ್ಕೆ 130 ಸಂಸದರು ಮತ್ತು ರಾಜ್ಯಸಭೆಯ ನಿರ್ಣಯಕ್ಕೆ 63 ಸಂಸದರು ಸಹಿ ಮಾಡಿದ್ದರು. ಆ ಸಮಯದಲ್ಲಿ, ಮುಖ್ಯ ಚುನಾವಣಾ ಆಯುಕ್ತರ ಮೇಲೆ ಪಕ್ಷಪಾತದ ಮತ್ತು ತಾರತಮ್ಯದ ನಡವಳಿಕೆ ಹಾಗೂ ಚುನಾವಣಾ ವಂಚನೆ ಮತ್ತು ಎಸ್​ಐಆರ್​ ತನಿಖೆಗೆ ಅಡ್ಡಿಪಡಿಸಿದ ಆರೋಪಗಳನ್ನು ಹೊರಿಸಲಾಗಿತ್ತು(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net