ನವದೆಹಲಿ: ಅನೇಕ ರಾಜ್ಯಗಳಲ್ಲಿ ಕೈಗೊಳ್ಳಲಾದ ಮತದಾರರ ಪಟ್ಟಿಯ ಪರಿಷ್ಕರಣೆಗೆ (SIR) ಸಂಬಂಧಿಸಿದಂತೆ ಭಾರಿ ವಿವಾದ ಉಂಟಾಗಿರುವ ಬೆನ್ನಲ್ಲೇ, ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ವಜಾಕ್ಕಾಗಿ ಸಂಸತ್ತಿನಲ್ಲಿ ಮಹಾಭಿಯೋಗ ನಿರ್ಣಯ ಮಂಡಿಸಲು ವಿಪಕ್ಷಗಳ ಇಂಡಿಯಾ ಕೂಡ ಮತ್ತೊಮ್ಮೆ ಸಿದ್ಧತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಮೂಲಗಳ ಪ್ರಕಾರ, ಈ ನಿರ್ಣಯದ ಕರಡು ಪ್ರತಿಯನ್ನು ಪ್ರಸ್ತುತ ಸಿದ್ಧಪಡಿಸಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ನೋಟಿಸ್ ಸಲ್ಲಿಸುವ ಸಾಧ್ಯತೆಯಿದೆ. ಸಂಸತ್ತಿನ ಅಧಿವೇಶನ ನಡೆಯದೇ ಇದ್ದರೂ ಸಹ ಈ ನೋಟಿಸ್ ಸಲ್ಲಿಸಬಹುದು ಎಂದು ಮೂಲಗಳು ತಿಳಿಸಿದ್ದು, ಮುಂದಿನ ವಾರದ ವೇಳೆಗೆ ಈ ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ.
ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಗೆ ಸಂಬಂಧಿಸಿದ ನಿರ್ಧಾರಗಳು ಮತ್ತು ಆದೇಶಗಳ ಬಗ್ಗೆ ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕಳೆದ 10 ತಿಂಗಳುಗಳಲ್ಲಿ ಕನಿಷ್ಠ 14 ಬಾರಿ ಅಧಿಕೃತವಾಗಿ ಆಕ್ಷೇಪಣೆ ಎತ್ತಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ತನಿಖಾ ವರದಿ ಪ್ರಕಟಿಸಿದ ಬೆನ್ನಲ್ಲೇ ಈ ನಿರ್ಣಯ ಮಂಡಿಸಲು ವಿಪಕ್ಷಗಳು ಮುಂದಾಗಿವೆ. ತಮ್ಮ ಗಮನಕ್ಕೆ ತರದೆ ತೆಗೆದುಕೊಂಡ ನಿರ್ಧಾರಗಳು, ಮತದಾರರ ಹೆಸರುಗಳನ್ನು ಸೇರಿಸುವುದು ಮತ್ತು ತೆಗೆದುಹಾಕುವುದು ಹಾಗೂ ಎಸ್‌ಐಆರ್ ಪ್ರಕ್ರಿಯೆಯ ನಿಯಮಗಳಲ್ಲಿ ಮಾಡಿದ ಬದಲಾವಣೆಗಳಿಗೆ ಸಂಬಂಧಿಸಿದ ಕಳವಳಗಳು ಈ ಆಕ್ಷೇಪಣೆಗಳಲ್ಲಿ ಸೇರಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕುವಂತೆ ಕೋರಿ ವಿಪಕ್ಷಗಳ ಸಂಸದರು ಈಗಾಗಲೇ ನೋಟಿಸ್ ಸಲ್ಲಿಸಿದ ಕೆಲ ತಿಂಗಳ ಬಳಿಕ ಈ ಹೊಸ ಚರ್ಚೆ ಎದ್ದಿದೆ. ಲೋಕಸಭೆಯ ದಾಖಲೆಯ ಪ್ರಕಾರ, 130 ಸಂಸದರು ಸಹಿ ಮಾಡಿದ್ದ ಮಾರ್ಚ್ 12ರ ದಿನಾಂಕದ ನೋಟಿಸ್ ಅನ್ನು ಸಂವಿಧಾನದ ವಿಧಿ 324(5) ಮತ್ತು ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಸಲ್ಲಿಸಲಾಗಿತ್ತು. ಆದರೆ, ಲೋಕಸಭಾ ಸ್ಪೀಕರ್ ಆ ನೋಟಿಸ್ ಅನ್ನು ಸ್ವೀಕರಿಸಲು ನಿರಾಕರಿಸಿದ್ದರು. ಮೂರು ಸದಸ್ಯರ ಚುನಾವಣಾ ಆಯೋಗದಲ್ಲಿ ಉಂಟಾಗಿರುವ ಭಿನ್ನಾಭಿಪ್ರಾಯಗಳು ಹಾಗೂ ಸಂಧು ಮತ್ತು ಜೋಶಿ ಅವರು ದಾಖಲಿಸಿದ್ದಾರೆ ಎನ್ನಲಾದ ಆಕ್ಷೇಪಣೆಗಳ ಕುರಿತು ಇತ್ತೀಚೆಗೆ ಬಂದ ವರದಿಯ ಹಿನ್ನೆಲೆಯಲ್ಲಿ ಈ ಹೊಸ ಪ್ರಯತ್ನದ ಕುರಿತು ಚರ್ಚೆ ನಡೆಯುತ್ತಿದೆ.
ಈ ವಿಷಯವಾಗಿ ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಮುಗಿಬಿದ್ದಿರುವ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ, ಅನ್ಯಾಯದ ಚುನಾವಣಾ ಪದ್ಧತಿಗಳನ್ನು ಅನುಸರಿಸಿದ್ದಕ್ಕಾಗಿ ಅವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಮತದಾರರ ಪಟ್ಟಿಯಿಂದ ಸುಮಾರು 13 ಕೋಟಿ ಹೆಸರುಗಳನ್ನು ಜ್ಞಾನೇಶ್ ಕುಮಾರ್ ಅವರು ಉದ್ದೇಶಪೂರ್ವಕವಾಗಿ ಡಿಲೀಟ್ ಮಾಡಲು ಅವಕಾಶ ನೀಡಿದ್ದಾರೆ ಎಂದು ಆರೋಪಿಸಿರುವ ಪ್ರಿಯಾಂಕಾ, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕೆಂದು ಒತ್ತಾಯಿಸಿದ್ದಾರೆ.
ವಯನಾಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ, ಮತದಾರರನ್ನು ಪಟ್ಟಿಯಿಂದ ತೆಗೆದುಹಾಕುವುದು ಪ್ರಜಾಪ್ರಭುತ್ವ, ಸಂವಿಧಾನ ಮತ್ತು ದೇಶದ ವಿರುದ್ಧ ಎಸಗಿದ ಕ್ರಿಮಿನಲ್ ಕೃತ್ಯವಾಗಿದೆ ಎಂದಿದ್ದಾರೆ. ಪ್ರಜಾಸತ್ತಾತ್ಮಕ ಚುನಾವಣಾ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸುವ ಯಾರೇ ಆದರೂ ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು. ನಮ್ಮ ಚುನಾವಣೆಗಳ ಪ್ರಜಾಸತ್ತಾತ್ಮಕ ಪ್ರಕ್ರಿಯೆಯೊಂದಿಗೆ ಚೆಲ್ಲಾಟವಾಡುವ ಯಾವುದೇ ವ್ಯಕ್ತಿಯು ಈ ದೇಶದ ವಿರುದ್ಧ ದೇಶದ್ರೋಹದ ಎಸಗುತ್ತಿದ್ದಾನೆ ಎಂದು ಹೇಳಿರುವ ಅವರು, ಇದು ಕಾಂಗ್ರೆಸ್ ಪಕ್ಷದ ಅತ್ಯಂತ ಸ್ಪಷ್ಟ ನಿಲುವಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ(ಏಜೆನ್ಸೀಸ್).