7 ದಿನ, 8 ಇಮೇಲ್...ಆದ್ರೂ ಪ್ರತಿಕ್ರಿಯೆ ಇಲ್ಲ!...ತಂತ್ರಜ್ಞಾನದ ಹೆಸರಿನಲ್ಲಿ ಅರ್ಹ ಮತದಾರರ ಹಕ್ಕನ್ನೇ ಕಸಿದುಕೊಂಡಿತಾ ಕೇಂದ್ರ ಚುನಾವಣಾ ಆಯೋಗ..? | Election Commission

Election Commission: 90 ಕೋಟಿಗೂ ಅಧಿಕ ಮತದಾರರನ್ನು ಹೊಂದಿರುವ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ, 97 ಮತದಾರರ ಸಂಖ್ಯೆ ಅಷ್ಟಾಗಿ ಪ್ರಮುಖವೆನಿಸದಿರಬಹುದು. ಆದರೆ, ಗೋವಾದಿಂದ ಹೊರಬಿದ್ದಿರುವ ಈ ಘಟನೆಯು ರಾಷ್ಟ್ರಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಎಸ್​ಐಆರ್ ಪ್ರಕ್ರಿಯೆ ಕೈಗೊಂಡಿರುವ ಸಿಬ್ಬಂದಿ
ಎಸ್​ಐಆರ್ ಪ್ರಕ್ರಿಯೆ ಕೈಗೊಂಡಿರುವ ಸಿಬ್ಬಂದಿ
Published on

Election Commission: 90 ಕೋಟಿಗೂ ಅಧಿಕ ಮತದಾರರನ್ನು ಹೊಂದಿರುವ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ, 97 ಮತದಾರರ ಸಂಖ್ಯೆ ಅಷ್ಟಾಗಿ ಪ್ರಮುಖವೆನಿಸದಿರಬಹುದು. ಆದರೆ, ಗೋವಾದಿಂದ ಹೊರಬಿದ್ದಿರುವ ಈ ಘಟನೆಯು ರಾಷ್ಟ್ರಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಬುಧವಾರ (ಸೆ.23) ದಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯು ಪ್ರಕಟಿಸಿದ ವರದಿಯ ಪ್ರಕಾರ, ಭಾರತೀಯ ಚುನಾವಣಾ ಆಯೋಗದ ಮೂವರು ಸದಸ್ಯರ ಪೈಕಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ನೇತೃತ್ವದಲ್ಲಿ ಕೈಗೊಳ್ಳಲಾದ ವಿವಿಧ ಕ್ರಮಗಳ ವಿರುದ್ಧ, ಉಳಿದ ಇಬ್ಬರು ಚುನಾವಣಾ ಆಯುಕ್ತರು ಕಳೆದ 10 ತಿಂಗಳುಗಳಲ್ಲಿ ಕನಿಷ್ಠ 14 ಬಾರಿ ಅಧಿಕೃತವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಬಹಿರಂಗವಾಗಿದೆ.

ಈಗ ಆ ಆರೋಪಕ್ಕೆ ಪೂರಕವೆಂಬಂತೆ ಮತ್ತೊಂದು ಪ್ರಕರಣ ದಿ ಇಂಡಿಯನ್ ಎಕ್ಸ್‌ಪ್ರೆಸ್​ನಲ್ಲಿ ವರದಿಯಾಗಿದ್ದು, ಕೇಂದ್ರ ಚುನಾವಣಾ ಆಯೋಗದಲ್ಲಿ ತಂತ್ರಜ್ಞಾನದ ಬಳಕೆಯು ಮತದಾರರ ಹಕ್ಕುಗಳನ್ನು ಕಸಿಯುತ್ತಿದೆಯೇ ಎಂಬ ಅನುಮಾನ ಮತ್ತೆ ವ್ಯಕ್ತವಾಗಿದೆ. ಕೇಂದ್ರ ಮಟ್ಟದ ತಂತ್ರಾಂಶದ ನಿರ್ಬಂಧಗಳಿಂದಾಗಿ ಅರ್ಹ ಅಭ್ಯರ್ಥಿಗಳು ತಮ್ಮ ಮತದಾನದ ಹಕ್ಕನ್ನೇ ಕಳೆದುಕೊಳ್ಳುತ್ತಿರುವ ಸತ್ಯವನ್ನು ಗೋವಾದಲ್ಲಿ ನಡೆದಿರುವ ಇತ್ತೀಚಿನ ಘಟನೆಯೊಂದು ಬಯಲಿಗೆಳೆದಿದೆ. ಆಯೋಗದ ತಂತ್ರಜ್ಞಾನ ವಿಭಾಗದ ಕೇಂದ್ರೀಕರಣದ ವಿರುದ್ಧ ಚುನಾವಣಾ ಆಯುಕ್ತರೇ ಎತ್ತಿದ್ದ ಆಕ್ಷೇಪಣೆಗೆ ಈ ಘಟನೆ ಪ್ರತ್ಯಕ್ಷ ಸಾಕ್ಷಿಯಂತಿದೆ.

ಇದನ್ನೂ ಓದಿ:ಕಾಶ್ಮೀರ ಟು ಅಯೋಧ್ಯೆ, ಈಗ ಚುನಾವಣಾ ಆಯೋಗದಲ್ಲಿ ಆಂತರಿಕ ಯುದ್ಧ!...ಇಲ್ಲಿದೆ ನೋಡಿ ಜ್ಞಾನೇಶ್ ಕುಮಾರ್ ಸಂಪೂರ್ಣ ಪಯಣ! | Gyanesh Kumar

ಏನಿದು ಗೋವಾದ 97 ಮತದಾರರ ಪ್ರಕರಣ...?

ಗೋವಾದಲ್ಲಿ ಇತ್ತೀಚೆಗೆ ನಡೆದ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯ ವೇಳೆ, ಸುಮಾರು 97 ಅರ್ಹ ಮತದಾರರ ಹೆಸರುಗಳು ಮತದಾರರ ಪಟ್ಟಿಯಿಂದ ಕೈಬಿಟ್ಟುಹೋಗಿವೆ. ಮುಖ್ಯ ವಿಷಯವೆಂದರೆ, ಸ್ಥಳೀಯ ಮತದಾರರ ನೋಂದಣಿ ಅಧಿಕಾರಿಗಳು (EROs) ಈ ಎಲ್ಲಾ 97 ಜನರನ್ನು ಸ್ವತಃ ತನಿಖೆ ನಡೆಸಿ, ದಾಖಲೆಗಳನ್ನು ಪರಿಶೀಲಿಸಿ, ಅವರು ಮತದಾನಕ್ಕೆ ಸಂಪೂರ್ಣ ಅರ್ಹರೆಂದು ದೃಢಪಡಿಸಿದ್ದರೂ, ಅಂತಿಮ ಪಟ್ಟಿಯಲ್ಲಿ ಅವರ ಹೆಸರುಗಳು ಸೇರ್ಪಡೆಯಾಗಲಿಲ್ಲ.

ಸ್ಥಳೀಯ ಅಧಿಕಾರಿಗಳು ನಿರ್ಧಾರ ತೆಗೆದುಕೊಂಡರೂ, ದೆಹಲಿಯ ಕೇಂದ್ರ ಕಚೇರಿಯಲ್ಲಿದ್ದ ಇಸಿಐನೆಟ್ ಸಾಫ್ಟ್‌ವೇರ್‌ನಲ್ಲಿ ಅದಕ್ಕೆ ತಕ್ಕಂತೆ ಬದಲಾವಣೆ ಮಾಡಲು ಅವಕಾಶ ನೀಡಲಿಲ್ಲ. ಅಂದರೆ, ತಂತ್ರಾಂಶದ ಮೇಲಿನ ಸಂಪೂರ್ಣ ನಿಯಂತ್ರಣ ದೆಹಲಿಯಲ್ಲಿದ್ದ ಐಟಿ ವಿಭಾಗದ ಕೈಯಲ್ಲಿದ್ದುದರಿಂದ, ಸ್ಥಳೀಯ ಅಧಿಕಾರಿಗಳು ನಿರ್ಧಾರ ತೆಗೆದುಕೊಂಡರೂ ಮತದಾರರ ಹೆಸರನ್ನು ಸೇರಿಸಲು ಸಾಧ್ಯವಾಗಲಿಲ್ಲ.

ತಂತ್ರಜ್ಞಾನದ ದೋಷ ಅಥವಾ ವಯಸ್ಸಿನ ವ್ಯತ್ಯಾಸದಂತಹ ತಾಂತ್ರಿಕ ಕಾರಣಗಳಿಂದ ಯಾವುದೇ ಅರ್ಹ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಬಾರದು ಎಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಇಂತಹ ಸಂದರ್ಭಗಳಲ್ಲಿ ಮತದಾರರಿಗೆ ತಮ್ಮ ದಾಖಲೆಗಳನ್ನು ಸಲ್ಲಿಸಲು 10 ದಿನಗಳ ಕಾಲಾವಕಾಶ ನೀಡಬೇಕು ಮತ್ತು ಸ್ಥಳೀಯ ಅಧಿಕಾರಿಗಳು ವಿಚಾರಣೆ ನಡೆಸಿ ನಿರ್ಧಾರ ಕೈಗೊಳ್ಳಬೇಕು ಎಂದು ಕೋರ್ಟ್ ಸ್ಪಷ್ಟಪಡಿಸಿತ್ತು. ಈ ಆದೇಶದಂತೆ ಗೋವಾದ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ, ಸುಮಾರು 649 ಜನರು ದಾಖಲೆಗಳೊಂದಿಗೆ ಬಂದಿದ್ದರು. ಅದರಲ್ಲಿ 97 ಜನರು ಸಂಪೂರ್ಣವಾಗಿ ಅರ್ಹರೆಂದು ಕಂಡುಬಂದ ಕಾರಣ, ಅವರ ಹೆಸರುಗಳನ್ನು ಪಟ್ಟಿಗೆ ಮರುಸೇರ್ಪಡೆಗೊಳಿಸಲು ಸ್ಥಳೀಯ ಅಧಿಕಾರಿಗಳು ನಿರ್ಧರಿಸಿದ್ದರು ಎಂದು ತಿಳಿದುಬಂದಿದೆ.

Also Read
ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಏಕಚಕ್ರಾದಿಪತ್ಯದ ಆರೋಪ!...ಆಂತರಿಕ ಬಿಕ್ಕಟ್ಟಿನ ಬಗ್ಗೆ ಸ್ಪಷ್ಟನೆ ನೀಡಿದ ಚುನಾವಣಾ ಆಯೋಗದ ಮೂಲಗಳು! | Election Commission
ಎಸ್​ಐಆರ್ ಪ್ರಕ್ರಿಯೆ ಕೈಗೊಂಡಿರುವ ಸಿಬ್ಬಂದಿ

ಏಳು ದಿನ, ಎಂಟು ಪತ್ರಗಳು: ಆದರೂ ಸ್ಪಂದನೆ ಇಲ್ಲ!...

ಸ್ಥಳೀಯ ಮಟ್ಟದಲ್ಲಿ ತೆಗೆದುಕೊಂಡ ನಿರ್ಧಾರವನ್ನು ಇಸಿಐನೆಟ್ ತಂತ್ರಾಂಶದಲ್ಲಿ ಅಪ್‌ಡೇಟ್ ಮಾಡಲು ಅವಕಾಶ ನೀಡುವಂತೆ ಗೋವಾದ ಮುಖ್ಯ ಚುನಾವಣಾಧಿಕಾರಿ ದೆಹಲಿಯ ಚುನಾವಣಾ ಆಯೋಗದ ಐಟಿ ವಿಭಾಗಕ್ಕೆ ಸತತವಾಗಿ ಪತ್ರ ಬರೆದಿದ್ದಾರೆ. ಫೆಬ್ರವರಿ 11 ರಿಂದ ಫೆಬ್ರವರಿ 17 ರ ನಡುವೆ ಕನಿಷ್ಠ 8 ಬಾರಿ ದೆಹಲಿಯ ಹಿರಿಯ ಅಧಿಕಾರಿಗಳು ಮತ್ತು ಐಟಿ ವಿಭಾಗದ ಮುಖ್ಯಸ್ಥರಿಗೆ ಇಮೇಲ್ ಹಾಗೂ ಪತ್ರಗಳ ಮೂಲಕ ಮನವಿ ಮಾಡಿದ್ದರು.

ಫೆಬ್ರವರಿ 18 ರಂದು ಸ್ವತಃ ಆಯೋಗದ ಉಪ ಚುನಾವಣಾ ಆಯುಕ್ತರೇ ಐಟಿ ವಿಭಾಗಕ್ಕೆ ಪತ್ರ ಬರೆದು, ಸುಪ್ರೀಂ ಕೋರ್ಟ್ ಆದೇಶದಂತೆ ಸ್ಥಳೀಯ ಅಧಿಕಾರಿಗಳು ತೆಗೆದುಕೊಂಡ ನಿರ್ಧಾರಕ್ಕೆ ತಂತ್ರಜ್ಞಾನ ತಡೆ ಒಡ್ಡುವಂತಿಲ್ಲ, ತಕ್ಷಣ ಸಾಫ್ಟ್‌ವೇರ್‌ನಲ್ಲಿ ಬದಲಾವಣೆಗೆ ಅವಕಾಶ ನೀಡಿ ಎಂದು ಸೂಚಿಸಿದರು. ಆದರೆ, ದೆಹಲಿಯ ಐಟಿ ವಿಭಾಗದಿಂದ ಇದಕ್ಕೂ ಕೂಡ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಫೆಬ್ರವರಿ 21 ರಂದು ಗೋವಾದ ಅಂತಿಮ ಮತದಾರರ ಪಟ್ಟಿ ಪ್ರಕಟವಾಯಿತು. ಸ್ಥಳೀಯ ಅಧಿಕಾರಿಗಳು ಅರ್ಹರೆಂದು ಪ್ರಮಾಣೀಕರಿಸಿದ್ದ ಆ 97 ಜನರ ಹೆಸರುಗಳು ಅಂತಿಮ ಪಟ್ಟಿಯಲ್ಲೂ ಇರಲಿಲ್ಲ.

ಕಾನೂನಿನ ಪ್ರಕಾರ, ಆಯಾ ಕ್ಷೇತ್ರದ ಮತದಾರರ ಪಟ್ಟಿಯನ್ನು ತಯಾರಿಸುವ ಮತ್ತು ನಿರ್ಧರಿಸುವ ಅಂತಿಮ ಅಧಿಕಾರ ಸ್ಥಳೀಯ ಇಆರ್‌ಒ ಅಂದರೆ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್‌ಗೆ ಇರುತ್ತದೆ. ಆದರೆ, 2025-26 ರಲ್ಲಿ ಜಾರಿಗೆ ತರಲಾದ ಇಸಿಐನೆಟ್ (ECINet) ವ್ಯವಸ್ಥೆಯು ಈ ಎಲ್ಲಾ ಅಧಿಕಾರವನ್ನು ದೆಹಲಿಯ ಕೇಂದ್ರೀಕೃತ ಐಟಿ ವಿಭಾಗಕ್ಕೆ ವರ್ಗಾಯಿಸಿದೆ.

ಮತದಾರರ ಮೇಲಾಗುವ ಪರಿಣಾಮಗಳೇನು..?

ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವುದು ಎಂದರೆ ಕೇವಲ ಮತದಾನದ ಹಕ್ಕು ಕಳೆದುಕೊಳ್ಳುವುದು ಮಾತ್ರವಲ್ಲ. ಆಯಾ ಸರ್ಕಾರದ ಹಲವಾರು ಅಭಿವೃದ್ದಿ ಯೋಜನೆಗಳಿಗೆ ಮತದಾರರ ಪಟ್ಟಿಯೇ ಮುಖ್ಯ ಆಧಾರವಾಗಿದೆ. ಉದಾಹರಣೆಗೆ, ಗೋವಾ ಮೆಡಿಕ್ಲೈಮ್ ಯೋಜನೆಯಡಿ ಉಚಿತ ಡಯಾಲಿಸಿಸ್, ತೆರೆದ ಹೃದಯ ಶಸ್ತ್ರಚಿಕಿತ್ಸೆ ಮತ್ತು ಕ್ಯಾನ್ಸರ್ ಚಿಕಿತ್ಸೆಯಂತಹ ಅತ್ಯಗತ್ಯ ವೈದ್ಯಕೀಯ ನೆರವು ಪಡೆಯಲು ಮತದಾರರ ಪಟ್ಟಿಯಲ್ಲಿ ಹೆಸರು ಇರುವುದು ಕಡ್ಡಾಯ. ಪಟ್ಟಿಯಿಂದ ಹೆಸರು ಹೊರಬಿದ್ದಾಗ ಈ ಬಡ ರೋಗಿಗಳು ಸರ್ಕಾರದ ಉಚಿತ ಸೌಲಭ್ಯಗಳಿಂದಲೂ ವಂಚಿತರಾಗುತ್ತಾರೆ.

ಗೋವಾದ ಈ 97 ಮತದಾರರ ಪ್ರಕರಣವು ಕೇವಲ ಒಂದು ರಾಜ್ಯದ ಸಣ್ಣ ಸಮಸ್ಯೆಯಲ್ಲ. ತಂತ್ರಜ್ಞಾನದ ಹೆಸರಿನಲ್ಲಿ ನಿರ್ಧಾರಗಳನ್ನು ಅತಿಯಾಗಿ ಕೇಂದ್ರೀಕರಿಸಿದಾಗ, ಸ್ಥಳೀಯ ಸಂವಿಧಾನಾತ್ಮಕ ಅಧಿಕಾರಿಗಳ ನಿರ್ಧಾರಗಳಿಗೂ ಬೆಲೆ ಇಲ್ಲದಂತಾಗುತ್ತದೆ ಎಂಬುದಕ್ಕೆ ಇದು ಕಣ್ಣಿಗೆ ಕಾಣುವ ಜೀವಂತ ಉದಾಹರಣೆಯಾಗಿದೆ. ಚುನಾವಣಾ ವ್ಯವಸ್ಥೆಯು ಪಾರದರ್ಶಕವಾಗಿ ಮತ್ತು ಪ್ರಜಾಸತ್ತಾತ್ಮಕವಾಗಿ ಕಾರ್ಯನಿರ್ವಹಿಸಲು ತಂತ್ರಜ್ಞಾನವು ಪೂರಕವಾಗಿರಬೇಕೇ ಹೊರತು, ಮತದಾರರ ಹಕ್ಕಿಗೆ ತಡೆಯಾಗಬಾರದು(ಏಜೆನ್ಸೀಸ್​).

Related Stories

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net