

Uttarakhand SIR: ಉತ್ತರಾಖಂಡದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯ ವೇಳೆ ಅಗತ್ಯ ದಾಖಲೆಗಳನ್ನು ಸಲ್ಲಿಸದ ಅಥವಾ ಚುನಾವಣಾಧಿಕಾರಿಗಳ ಎದುರು ಸ್ವತಃ ಹಾಗೂ ಕುಟುಂಬಸ್ಥರ ಮೂಲಕ ಹಾಜರಾಗದ ಸುಮಾರು 95,000 ಮತದಾರರನ್ನು ಅನರ್ಹ ಎಂದು ಗುರುತಿಸಲಾಗಿದ್ದು, ಅವರಿಗಾಗಿ ಫಾರ್ಮ್ 7 (Form 7) ಅರ್ಜಿಗಳು ಆಟೋ-ಜನರೇಟ್ (ಸ್ವಯಂಚಾಲಿತವಾಗಿ ಸೃಷ್ಟಿ) ಆಗಿವೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ (CEO) ಸ್ಪಷ್ಟಪಡಿಸಿದ್ದಾರೆ.
ಗುರುವಾರ ಹೊರಡಿಸಲಾದ ಅಧಿಕೃತ ಹೇಳಿಕೆಯಲ್ಲಿ, ಆಯಾ ಕ್ಷೇತ್ರದ ಚುನಾವಣಾ ನೋಂದಣಾಧಿಕಾರಿ ಅಥವಾ ಸಹಾಯಕ ಚುನಾವಣಾ ನೋಂದಣಾಧಿಕಾರಿ ಮತದಾರರನ್ನು ಅನರ್ಹ ಎಂದು ಗುರುತಿಸಿದ ನಂತರ ಸಿಸ್ಟಮ್ ಮೂಲಕ ಸ್ವಯಂಚಾಲಿತವಾಗಿ ಈ ಅರ್ಜಿಗಳು ಸೃಷ್ಟಿಯಾಗಿವೆ ಎಂದು ಚುನಾವಣಾ ಆಯೋಗದ ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಇದುವರೆಗೆ ಸುಮಾರು 1.73 ಲಕ್ಷ ಫಾರ್ಮ್-7 ಅರ್ಜಿಗಳು ಸ್ವೀಕೃತಗೊಂಡಿದ್ದು, ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಅಂದರೆ 95,000ಕ್ಕೂ ಹೆಚ್ಚು ಅರ್ಜಿಗಳು ಅನರ್ಹ ವರ್ಗಕ್ಕೆ ಸೇರಿಸಲ್ಪಟ್ಟ ಮತದಾರರಿಗೆ ಸಂಬಂಧಿಸಿವೆ ಎಂದು ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ತಿಳಿಸಿದೆ.
ಜುಲೈ 14 ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಪ್ರಸ್ತುತ ಹಕ್ಕುಗಳು ಮತ್ತು ಆಕ್ಷೇಪಣೆಗಳ ವಿಚಾರಣೆ ನಡೆಯುತ್ತಿದೆ. ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 3 ರಂದು ಪ್ರಕಟಿಸಲು ವೇಳಾಪಟ್ಟಿ ನಿಗದಿಪಡಿಸಲಾಗಿದೆ. ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದುಹಾಕಲು ಫಾರ್ಮ್ 7 ಅನ್ನು ಬಳಸಲಾಗುತ್ತದೆ. ಚುನಾವಣಾ ಆಯೋಗದ ಪ್ರಕಾರ, ನೋಟಿಸ್ ನೀಡಿದಾಗ ಹೆಸರುಗಳನ್ನು ಸೇರಿಸಲು ಅಥವಾ ತೆಗೆದುಹಾಕಲು ಇಆರ್ಒ.ನೆಟ್ (ERO.net) ಅಧಿಕಾರಿಗಳಿಗೆ ಅಧಿಕಾರ ನೀಡುತ್ತದೆ. ಒಬ್ಬ ಇಆರ್ಒ ಅಧಿಕಾರಿಯು ವ್ಯಕ್ತಿಯನ್ನು ಅನರ್ಹ ಎಂದು ಕಂಡುಕೊಂಡರೆ, ಅವರು ವಜಾಗಾಗಿ ಫಾರ್ಮ್ 7 ಅನ್ನು ಕ್ಲಿಕ್ ಮಾಡಬೇಕಾಗುತ್ತದೆ. ಒಮ್ಮೆ ಅದನ್ನು ಮಾಡಿದ ನಂತರ, ಹಿಂಪಡೆಯಲು ಯಾವುದೇ ಅವಕಾಶವಿರುವುದಿಲ್ಲ.
ರಾಜ್ಯದಲ್ಲಿ ನಡೆಯುತ್ತಿರುವ ಈ ಪ್ರಕ್ರಿಯೆಯಲ್ಲಿ ಭಾರಿ ಅಕ್ರಮಗಳು ನಡೆದಿವೆ ಎಂದು ವಿಪಕ್ಷ ಕಾಂಗ್ರೆಸ್ ಗಂಭೀರ ಆರೋಪ ಮಾಡಿದ್ದು, ಎಇಆರ್ಒ ಮತ್ತು ಇಆರ್ಒಗಳ ಅಧಿಕಾರ ವ್ಯಾಪ್ತಿಯಲ್ಲಿ ಫಾರ್ಮ್-7 ಅರ್ಜಿಗಳು ಹೇಗೆ ಸ್ವಯಂಚಾಲಿತವಾಗಿ ಜನರೇಟ್ ಆಗುತ್ತವೆ..? ಅರ್ಜಿಗಳನ್ನು ನಿರ್ಧರಿಸುವ ಜವಾಬ್ದಾರಿ ಹೊಂದಿರುವ ಅಧಿಕಾರಿಗಳೇ ಅದನ್ನು ಹೇಗೆ ಮಾಡುತ್ತಾರೆ..? ಎಂದು ಉತ್ತರಾಖಂಡ ಕಾಂಗ್ರೆಸ್ ಉಸ್ತುವಾರಿ ಕುಮಾರಿ ಸೆಲ್ಜಾ ಪ್ರಶ್ನಿಸಿದ್ದಾರೆ.
42,030 ಫಾರ್ಮ್-7 ಅರ್ಜಿಗಳು ಸಹಾಯಕ ಚುನಾವಣಾ ನೋಂದಣಾಧಿಕಾರಿಗಳಿಗೆ ಮತ್ತು ಇನ್ನು 22,443 ಅರ್ಜಿಗಳು ಚುನಾವಣಾ ನೋಂದಣಾಧಿಕಾರಿಗಳಿಗೆ ಸಂಬಂಧಿಸಿವೆ ಎಂದು ಅವರು ಪ್ರತಿಪಾದಿಸಿದ್ದಾರೆ. ಜೊತೆಗೆ, ಉತ್ತರಾಖಂಡ ಮತ್ತು ಪಂಜಾಬ್ ನಡುವಿನ ಫಾರ್ಮ್-7 ಅರ್ಜಿಗಳ ಸಂಖ್ಯೆಯಲ್ಲಿರುವ ವ್ಯತ್ಯಾಸವನ್ನು ಪ್ರಶ್ನಿಸಿರುವ ಸೆಲ್ಜಾ, ಅರ್ಜಿಗಳನ್ನು ಜನರೇಟ್ ಮಾಡಿದ ಪ್ರಕ್ರಿಯೆಯ ಬಗ್ಗೆ ಸ್ಪಷ್ಟನೆ ನೀಡುವಂತೆ ಆಗ್ರಹಿಸಿದ್ದಾರೆ.
ಎಸ್‌ಐಆರ್ ಪ್ರಕ್ರಿಯೆಯ ಸಮಯದಲ್ಲಿ ಅನರ್ಹರೆಂದು ವರ್ಗದಲ್ಲಿರಿಸಲ್ಪಟ್ಟ ಕಾರಣಕ್ಕೆ ಮತದಾರರ ಪಟ್ಟಿಗೆ ಸೇರ್ಪಡೆಯಾಗುವ ಬಾಗಿಲು ಶಾಶ್ವತವಾಗಿ ಮುಚ್ಚುವುದಿಲ್ಲ ಎಂದು ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಸ್ಪಷ್ಟಪಡಿಸಿದೆ. ಅಧಿಕೃತ ಹೇಳಿಕೆಯ ಪ್ರಕಾರ, ಇಂತಹ ಮತದಾರರು ಅಕ್ಟೋಬರ್ 3 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾದ ನಂತರ ಫಾರ್ಮ್ 6 (Form 6) ಅನ್ನು ಸಲ್ಲಿಸಬಹುದು. ಅವರು ಚುನಾವಣಾ ಆಯೋಗವು ನಿಗದಿಪಡಿಸಿದ ದಾಖಲೆಗಳನ್ನು ಸಲ್ಲಿಸಿ, ಚುನಾವಣೆಗೂ ಮುನ್ನ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಅರ್ಜಿ ಸಲ್ಲಿಸಬಹುದಾಗಿದೆ.
ಅಂತಿಮ ಪಟ್ಟಿ ಪ್ರಕಟವಾದ ನಂತರ ಅರ್ಹ ನೂತನ ಮತದಾರರನ್ನು ಸೇರ್ಪಡೆಗೊಳಿಸಲು ಅನುಕೂಲವಾಗುವಂತೆ ವಿಶೇಷ ಅಭಿಯಾನವನ್ನು ನಡೆಸುವಂತೆ ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಇಆರ್ಒಗಳಿಗೆ ಸಿಇಒ ಕಚೇರಿ ನಿರ್ದೇಶನ ನೀಡಿದೆ. ಅಲ್ಲದೆ, ನಿಯಮಾವಳಿಗಳಿಗೆ ಅನುಸಾರವಾಗಿ ಹಾಗೂ ಪಾರದರ್ಶಕವಾಗಿ ಎಸ್‌ಐಆರ್ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಧಾನಸಭೆ, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳೊಂದಿಗೆ ನಿಯಮಿತವಾಗಿ ಸಭೆಗಳನ್ನು ನಡೆಸಲಾಗುತ್ತಿದ್ದು, ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದ ಮಾಹಿತಿಗಳನ್ನು ಹಂಚಿಕೊಳ್ಳಲಾಗುತ್ತಿದೆ ಎಂದು ಸಿಇಒ ಕಚೇರಿ ತಿಳಿಸಿದೆ(ಏಜೆನ್ಸೀಸ್).