ನೀಲಿ ಡ್ರಮ್​, ಹನಿಮೂನ್​ ಹತ್ಯೆಯಿಂದ ಬ್ಲ್ಯಾಕ್​ ವಿಡೋವರೆಗೆ... 2025ರಲ್ಲಿ ಜನರನ್ನು ಬೆಚ್ಚಿಬೀಳಿಸಿದ ಅಪರಾಧಗಳಿವು! Rewind 2025 Crimes

ಜನರನ್ನು ಬೆಚ್ಚಿಬೀಳಿಸಿದ ಅಪರಾಧಗಳು
ಜನರನ್ನು ಬೆಚ್ಚಿಬೀಳಿಸಿದ ಅಪರಾಧಗಳು
Published on

ಪ್ರಮುಖ ಮುಖ್ಯಾಂಶಗಳು

  • ಇಡೀ ಜಗತ್ತು 2026ರ ಹೊಸ ವರ್ಷವನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲು ತುದಿಗಾಲಲ್ಲಿ ನಿಂತಿದೆ
  • 2025ನೇ ವರ್ಷವನ್ನು ನೆನೆದು ಅನೇಕರು ಭಾವುಕ ವಿದಾಯ ಹೇಳಲು ಸಜ್ಜಾಗಿದ್ದಾರೆ
  • ಈ ವರ್ಷ ಮರೆಯಲಾರದಂತಹ ಎಷ್ಟೋ ಕ್ಷಣಗಳು ಘಟಿಸಿವೆ
  • 2025ರಲ್ಲಿ ದೇಶದಲ್ಲಿ ಹೆಚ್ಚು ಸುದ್ದಿಯಾದ ಪ್ರಮುಖ 5 ಅಪರಾಧಗಳ ಬಗ್ಗೆ ನಾವೀಗ ತಿಳಿಯೋಣ
ನವದೆಹಲಿ: ಹೊಸ ಹುರುಪಿನೊಂದಿಗೆ ಎಂಟ್ರಿ ಕೊಡಲು 2026ನೇ ಹೊಸ ವರ್ಷ ಸಜ್ಜಾಗಿರುವ ಈ ಸಮಯದಲ್ಲಿ ಅನೇಕ ನೆನಪುಗಳನ್ನು ನಮ್ಮಲ್ಲಿ ಉಳಿಸಿ ನಮ್ಮಿಂದ ಮರೆಯಾಗಲು 2025ನೇ ವರ್ಷ ದಿನಗಳನ್ನು ಎಣಿಸುತ್ತಿದೆ. ನಮ್ಮಿಂದ ದೂರವಾಗಿ ಇತಿಹಾಸ ಪುಟ ಸೇರಲಿರುವ 2025ನೇ ವರ್ಷವನ್ನು ನೆನೆದು ಅನೇಕರು ಭಾವುಕ ವಿದಾಯ ಹೇಳಲು ಸಜ್ಜಾಗಿದ್ದಾರೆ. ಈ ವರ್ಷ ಸಾಕಷ್ಟು ಘಟನೆಗಳು ನಡೆದಿವೆ. ಪ್ರತಿ ಕ್ಷೇತ್ರದಲ್ಲೂ ಮರೆಯುವಂತಹ ಹಾಗೂ ಮರೆಯಲಾರದಂತಹ ಎಷ್ಟೋ ಕ್ಷಣಗಳು ಘಟಿಸಿವೆ. ಎಂದಿನಂತೆ ಈ ವರ್ಷವೂ ಕೂಡ ಸಾಕಷ್ಟು ಕೊಲೆ-ಸುಲಿಗೆಗಳು ನಡೆದಿವೆ. ಅವುಗಳಲ್ಲಿ ಇಡೀ ದೇಶವನ್ನು ಆಘಾತಕ್ಕೆ ದೂಡಿದಂತಹ ಭಯಾನಕ ಅಪರಾಧಗಳು ಸಹ ನಡೆದಿವೆ. 2025ರಲ್ಲಿ ದೇಶದಲ್ಲಿ ಹೆಚ್ಚು ಸುದ್ದಿಯಾದ ಪ್ರಮುಖ 5 ಅಪರಾಧಗಳ ( Rewind 2025 Crimes ) ಬಗ್ಗೆ ನಾವೀಗ ತಿಳಿಯೋಣ.

ನೀಲಿ ಡ್ರಮ್​ ಕೊಲೆ 

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಘಟನೆ ಎಂದರೆ, ನೀಲಿ ಡ್ರಮ್‌ನಲ್ಲಿ ಗಂಡನ ಶವವನ್ನು ಮುಚ್ಚಿಹಾಕುವುದು. ಈ ಘಟನೆ ಉತ್ತರ ಪ್ರದೇಶದ ಮೀರತ್​ನಲ್ಲಿ ನಡೆಯಿತು. ಹುಟ್ಟುಹಬ್ಬದ ಆಚರಣೆಗೆಂದು ಮನೆಗೆ ಬಂದಿದ್ದ ನೌಕಾಪಡೆಯ ಅಧಿಕಾರಿ ಸೌರಭ್ ರಜಪೂತ್​ರನ್ನು ಅವರ ಪತ್ನಿ, ತನ್ನ ಬಾಯ್​ಫ್ರೆಂಡ್​ ಜತೆ ಸೇರಿ ಕ್ರೂರವಾಗಿ ಕೊಲೆ ಮಾಡಿದಳು. ಸೌರಭ್ ಅವರು 2016ರಲ್ಲಿ ಮುಸ್ಕಾನ್ ರಸ್ತೋಗಿಯನ್ನು ಪ್ರೀತಿಸಿ ಮದುವೆಯಾದರು. ಆಕೆಯೊಂದಿಗೆ ಹೆಚ್ಚು ಸಮಯ ಕಳೆಯಲು ತಮ್ಮ ಕೆಲಸ ಸಹ ತೊರೆದರು. ನಂತರ ತಮ್ಮ ಚಿಕ್ಕ ಮಗಳನ್ನು ನೋಡಿಕೊಳ್ಳಲು ನೌಕಾಪಡೆಗೆ ಮತ್ತೆ ಸೇರಿದರು. ಆ ಸಮಯದಲ್ಲಿ ಮುಸ್ಕಾನ್, ಸೌರಭ್‌ನ ಸ್ನೇಹಿತ ಸಾಹಿಲ್ ಜೊತೆ ವಿವಾಹೇತರ ಸಂಬಂಧ ಹೊಂದಿದ್ದಳು. ಫೆಬ್ರವರಿಯಲ್ಲಿ, ಸೌರಭ್ ತನ್ನ ಮಗಳ 6ನೇ ಹುಟ್ಟುಹಬ್ಬವನ್ನು ಆಚರಿಸಲು ಮನೆಗೆ ಬಂದರು. ಆಗ ಸಾಹಿಲ್ ಮತ್ತು ಮುಸ್ಕಾನ್ ಸಂಚು ರೂಪಿಸಿ ಸೌರಭ್​ನನ್ನು ಕೊಲ್ಲಲು ನಿರ್ಧರಿಸಿದರು. ಮಾರ್ಚ್ 4ರ ರಾತ್ರಿ, ಮುಸ್ಕಾನ್ ಸೌರಭ್‌ನ ಆಹಾರದಲ್ಲಿ ನಿದ್ರೆ ಮಾತ್ರೆಗಳನ್ನು ಬೆರೆಸಿದರು. ಅವನು ಪ್ರಜ್ಞೆ ತಪ್ಪಿದ ನಂತರ, ಮುಸ್ಕಾನ್​ ಮತ್ತು ಸಾಹಿಲ್, ಸೌರಭ್‌ನನ್ನು ಇರಿದು ಕೊಂದರು. ಬಳಿಕ ಆತನ ದೇಹವನ್ನು ತುಂಡುಗಳಾಗಿ ಕತ್ತರಿಸಿ, ನೀಲಿ ಡ್ರಮ್‌ನಲ್ಲಿ ಹಾಕಿ ಸಿಮೆಂಟ್‌ನಿಂದ ಮುಚ್ಚಿದರು. ಬಳಿಕ, ಯಾವುದೇ ಅನುಮಾನ ಬಾರದಂತೆ ನೋಡಿಕೊಳ್ಳಲು ಸೌರಭ್‌ನ ಫೋನ್‌ನೊಂದಿಗೆ ಮನಾಲಿಗೆ ಪ್ರಯಾಣ ಬೆಳೆಸಿದರು. ಸೌರಭ್​ ಇನ್ನೂ ಜೀವಂತವಾಗಿದ್ದಾನೆ ಎಂದು ಬಿಂಬಿಸಲು ಆತನ ಜತೆಗಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಳು. ಇದೇ ವೇಳೆ, ಸೌರಭ್‌ನ ಮಗಳು ತನ್ನ ತಂದೆ ಡ್ರಮ್‌ನಲ್ಲಿದ್ದಾರೆ ಎಂದು ನೆರೆಹೊರೆಯವರಿಗೆ ಹೇಳುತ್ತಿದ್ದಳು. ಇದರಿಂದ ಅನುಮಾನಗೊಂಡ ಮುಸ್ಕಾನ್‌ನ ತಾಯಿ ಪೊಲೀಸರನ್ನು ಸಂಪರ್ಕಿಸಿದರು. ಬಳಿಕ ವಿಚಾರಣೆ ನಡೆಸಿದಾಗ ಸೌರಭ್‌ನನ್ನು ಕೊಂದದ್ದು ನಾನೇ ಎಂದು ಮುಸ್ಕಾನ್​ ಒಪ್ಪಿಕೊಂಡಾಗ ಅಪರಾಧ ಬೆಳಕಿಗೆ ಬಂದಿತು. ಮುಸ್ಕಾನ್​ ಮತ್ತು ಸಾಹಿಲ್​ ಡ್ರಮ್ ಅನ್ನು ಎಷ್ಟು ಬಿಗಿಯಾಗಿ ಮುಚ್ಚಿದ್ದರು ಎಂದರೆ ಪೊಲೀಸ್​ ಸಿಬ್ಬಂದಿ ಅದನ್ನು ತೆರೆಯಲು ಕೈಗಾರಿಕಾ ಡ್ರಿಲ್‌ಗಳನ್ನು ಬಳಸಬೇಕಾಯಿತು.

ಮೇಘಾಲಯ ಹನಿಮೂನ್​ ಕೇಸ್​

ಮದುವೆಯಾದ ಕೇವಲ 12 ದಿನಗಳ ನಂತರ, ಪತ್ನಿಯೊಬ್ಬಳು ತನ್ನ ಪತಿಯನ್ನು ಹನಿಮೂನ್‌ಗೆ ಕರೆದುಕೊಂಡು ಹೋಗಿ ಕೊಂದ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿತು. 30 ವರ್ಷದ ರಾಜಾ ರಘುವಂಶಿ ತನ್ನ ಪತ್ನಿ ಸೋನಮ್ ಜೊತೆ ಹನಿಮೂನ್‌ಗೆ ತೆರಳಿದ್ದರು. ಇದು ಇಬ್ಬರಿಗೂ ಸುಂದರ ವೈವಾಹಿಕ ಜೀವನದ ಆರಂಭವಾಗಬೇಕಿತ್ತು. ಆದರೆ, ರಘುವಂಶಿಯನ್ನು ಬಹಳ ಕ್ರೂರವಾಗಿ ಕೊಲೆ ಮಾಡಲಾಯಿತು. ಇಂದೋರ್‌ನ ಮೂವರು ಸಹೋದರರಲ್ಲಿ ಕಿರಿಯವನಾದ ರಾಜಾ, ಬಸ್ ಸಾರಿಗೆ ವ್ಯವಹಾರದಲ್ಲಿದ್ದರು. ಸೋನಮ್ ಕೂಡ ಶ್ರೀಮಂತ ಕುಟುಂಬದಿಂದ ಬಂದವರು. ಅವರಿಬ್ಬರ ಮದುವೆಯನ್ನು ಆಕೆಯ ಹಿರಿಯರು ನಿಶ್ಚಯಿಸಿದ್ದರು. ಆದಾಗ್ಯೂ, ಮದುವೆಗೆ ಮೊದಲು ಸೋನಮ್‌ಗೆ ಗೆಳೆಯನಿದ್ದ. ಆಕೆಯ ಕುಟುಂಬದ ವ್ಯವಹಾರದಲ್ಲಿ ಮಾಜಿ ಉದ್ಯೋಗಿಯಾಗಿದ್ದ ರಾಜ್ ಕುಶ್ವಾಹ ಜೊತೆ ಸೋನಮ್​ಗೆ ಸಂಬಂಧವಿತ್ತು. ಮದುವೆಯ ನಂತರವೂ ಆಕೆ ಆ ಸಂಬಂಧವನ್ನು ಮುಂದುವರೆಸಿದಳು. ರಾಜಾ ತನ್ನ ಸಂಬಂಧಕ್ಕೆ ಅಡ್ಡಿಯಾಗುತ್ತಾನೆಂದು ಭಾವಿಸಿ, ತನ್ನ ಗೆಳೆಯನೊಂದಿಗೆ ಸೇರಿ ಸಂಚು ಮಾಡಿ ಕೊಲೆ ಮಾಡಿದಳು. ಹನಿಮೂನ್ ಹೆಸರಿನಲ್ಲಿ ತನ್ನ ಗಂಡನನ್ನು ಮೇಘಾಲಯಕ್ಕೆ ಕರೆದೊಯ್ದಳು. ಅಲ್ಲಿ, ಸೋನಮ್, ರಾಜಾನನ್ನು ಕೊಂದು ಅದನ್ನು ಅಪಘಾತದಂತೆ ಬಿಂಬಿಸಲು ಯೋಜಿಸಿದ್ದರು. ಮೊದಲು, ಶಿಲ್ಲಾಂಗ್‌ನಲ್ಲಿ ಕೊಲೆ ಮಾಡಲು ಪ್ರಯತ್ನಿಸಿದರು. ಅದು ವಿಫಲವಾಯಿತು. ನಂತರ, ಅವರು ಸೊಹ್ರಾದಲ್ಲಿ ಪ್ರಯತ್ನಿಸಿದರು ಮತ್ತು ವಿಫಲರಾದರು. ಮೇ 23 ರಂದು, ನಾಲ್ಕನೇ ಪ್ರಯತ್ನ ಯಶಸ್ವಿಯಾಯಿತು. ಮೂವರು ಹಂತಕರು ವೀ ಸೌಡಾಂಗ್ ಜಲಪಾತದ ಬಳಿ ರಾಜಾ ಮೇಲೆ ಚಾಕುವಿನಿಂದ ದಾಳಿ ಮಾಡಿದರು. ಬಳಿಕ ಅವರ ದೇಹವನ್ನು ಕಣಿವೆಗೆ ಎಸೆದರು. ಈ ವೇಳೆ ರಾಜಾ ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ರಾಜಾ ಹತ್ಯೆಯಾದ ಕೆಲವು ದಿನಗಳ ನಂತರ, ಉತ್ತರ ಪ್ರದೇಶದ ಘಾಜಿಪುರದ ಧಾಬಾವೊಂದರಲ್ಲಿ ಸೋನಂ ಕಾಣಿಸಿಕೊಂಡರು ಮತ್ತು ಪೊಲೀಸರು ಆಕೆಯನ್ನು ವಶಕ್ಕೆ ಪಡೆದರು. ರಾಜ್ ಕುಶ್ವಾಹ ಮತ್ತು ಹಂತಕರನ್ನು ಸಹ ಬಂಧಿಸಲಾಯಿತು.

ಇರಾನ್​ ಬ್ಲ್ಯಾಕ್​ ವಿಡೋ

ಕೆಲವು ಸರಣಿ ಹಂತಕರು ಬಹು ಬೇಗನೆ ಸಿಕ್ಕಿಬೀಳುತ್ತಾರೆ. ಅದೇ ರೀತಿ ಕೆಲವರು ವರ್ಷಗಳ ಕಾಲ ರಹಸ್ಯವಾಗಿ ತಮ್ಮ ಅಪರಾಧಗಳನ್ನು ಮುಂದುವರಿಸುತ್ತಾರೆ. ಇದು ಕೂಡ ಅಂತಹದ್ದೇ ಒಂದು ಪ್ರಕರಣ. 56 ವರ್ಷದ ಕುಲ್ತುಮ್ ಅಕ್ಬರಿ, ಇರಾನ್‌ನ ಮಜಂದರಾನ್ ಪ್ರಾಂತ್ಯದ ಮಹಿಳೆಯಾಗಿದ್ದು, ಸೀರಿಯಲ್ ಕಿಲ್ಲರ್ ಎಂದು ಕುಖ್ಯಾತಿ ಪಡೆದಿದ್ದಾಳೆ. ಈಕೆಯನ್ನು "ಇರಾನ್‌ನ ಬ್ಲ್ಯಾಕ್ ವಿಡೋ" (Black Widow) ಎಂದು ಕರೆಯಲಾಗುತ್ತದೆ. ಸುಮಾರು 20 ರಿಂದ 22 ವರ್ಷಗಳ ಕಾಲ ಅಪರಾಧ ಎಸಗಿದ್ದಾಳೆ. ವೃದ್ಧ, ಏಕಾಂಗಿ ಪುರುಷರನ್ನು ಗುರಿಯಾಗಿಸಿ, ಅವರೊಂದಿಗೆ ಮದುವೆ (ಕೆಲವು ಅಧಿಕೃತ, ಕೆಲವು ತಾತ್ಕಾಲಿಕ ಮದುವೆಗಳು) ಆಗುತ್ತಿದ್ದಳೂ. ಮದುವೆಯ ನಂತರ 3 ತಿಂಗಳೊಳಗೆ ಡಯಾಬಿಟೀಸ್ ಮಾತ್ರೆಗಳು, ಸೆಡೇಟಿವ್ಸ್, ಬ್ಲಡ್ ಪ್ರೆಶರ್ ಡ್ರಗ್ಸ್ ಅಥವಾ ಇಂಡಸ್ಟ್ರಿಯಲ್ ಆಲ್ಕೋಹಾಲ್ ಮಿಶ್ರಿತ ವಿಷ ಬಳಸಿ ನಿಧಾನವಾಗಿ ವಿಷ ಪ್ರಯೋಗ ಮಾಡಿ ಕೊಲ್ಲುತ್ತಿದ್ದಳು. ಈ ಸಾವುಗಳು ನೈಸರ್ಗಿಕವೆಂದು ತೋರಿಸುವಂತೆ ಮಾಡುತ್ತಿದ್ದಳು. ಈಕೆ ಕನಿಷ್ಠ 15 ಕೊಲೆಗಳನ್ನು ಮಾಡಿದ್ದಾಳೆ.  ಸಾವಿನ ನಂತರ, ಅವಳು ಅವರ ಆಸ್ತಿಯನ್ನು ಕಸಿದುಕೊಳ್ಳುತ್ತಿದ್ದಳು. 82 ವರ್ಷದ ಘೋಲಮ್ರೆಜಾ ಬಾಬಾಯಿಯ ಮರಣದ ನಂತರ ಆಕೆಯ ಅಪರಾಧಗಳು ಬೆಳಕಿಗೆ ಬಂದವು. ತನ್ನ ಸ್ನೇಹಿತನ ತಂದೆ ಕೂಡ ಅದೇ ಮಹಿಳೆಯನ್ನು ಮದುವೆಯಾಗಿದ್ದಾನೆ ಮತ್ತು ವಿಷಪ್ರಾಶನ ಪ್ರಯತ್ನದಿಂದ ಬದುಕುಳಿದಿದ್ದಾನೆ ಎಂದು ಬಾಬಾಯಿಯ ಮಗನಿಗೆ ತಿಳಿದುಬಂದಿತು. ವಿಚಾರಣೆಯ ಸಮಯದಲ್ಲಿ, ಅಕ್ಬರಿ ಕೂಡ ತನ್ನ ತಪ್ಪನ್ನು ಒಪ್ಪಿಕೊಂಡಳು. ನಾನು ಎಷ್ಟು ಜನರನ್ನು ಕೊಂದಿದ್ದೇನೆಂದು ನನಗೆ ತಿಳಿದಿಲ್ಲ. ಬಹುಶಃ ಅದು 13 ಅಥವಾ 15 ಆಗಿರಬಹುದು ಎಂದು ಹೇಳಿದ್ದಳು. ಇರಾನಿನ ಮಾಧ್ಯಮಗಳು ಆಕೆಯನ್ನು ಬ್ಲ್ಯಾಕ್​ ವಿಡೋ (ಕಪ್ಪು ವಿಧವೆ) ಎಂದು ಕರೆದಿವೆ. 2025, ಸೆಪ್ಟೆಂಬರ್ ತಿಂಗಳಲ್ಲಿ 11 ಹತ್ಯೆಗಳಿಗೆ ದೋಷಿಯೆಂದು ತೀರ್ಪು ನೀಡಲಾಗಿದ್ದು, ಆಕೆಗೆ ಮರಣದಂಡನೆ ವಿಧಿಸಲಾಗುವುದು. 

ಕೆಲವೇ ನಿಮಿಷಗಳಲ್ಲಿ 895 ಕೋಟಿ ರೂ. ಮೌಲ್ಯದ ಆಭರಣಗಳು ಕಳ್ಳತನ

ಪ್ಯಾರಿಸ್‌ನಲ್ಲಿರುವ ಪ್ರಸಿದ್ಧ ಲೌವ್ರೆ ವಸ್ತುಸಂಗ್ರಹಾಲಯದಲ್ಲಿ ಕಳೆದ ಅಕ್ಟೋಬರ್‌ ತಿಂಗಳಲ್ಲಿ ದರೋಡೆ ಮಾಡಲಾಗಿತ್ತು. ನಾಲ್ವರು ಮುಸುಕುಧಾರಿಗಳು ಎರಡನೇ ಮಹಡಿಯ ಬಾಲ್ಕನಿಗೆ ಏಣಿಯನ್ನು ಬಳಸಿ ಹತ್ತಿದರು. ಇದಾದ ನಂತರ ಕಿಟಕಿಯನ್ನು ಒಡೆದು ಒಳಗೆ ಪ್ರವೇಶಿಸಿದರು. ಏಳು ನಿಮಿಷಗಳಲ್ಲಿ, ಅವರು ಅಂದಾಜು $102 ಮಿಲಿಯನ್ (ಭಾರತೀಯ ಕರೆನ್ಸಿಯಲ್ಲಿ ಸುಮಾರು ರೂ. 895 ಕೋಟಿ) ಮೌಲ್ಯದ ವಸ್ತುಗಳನ್ನು ಕದ್ದರು. ಇವುಗಳಲ್ಲಿ ನೆಪೋಲಿಯನ್ ಯುಗದ ಒಂಬತ್ತು ವಸ್ತುಗಳು ಮತ್ತು ಆಭರಣಗಳು ಸೇರಿವೆ. ಇವುಗಳಲ್ಲಿ ಸಾಮ್ರಾಜ್ಞಿ ಯುಜೆನಿಯ ವಜ್ರ-ಖಚಿತ ಕಿರೀಟ, ರಾಣಿ ಮೇರಿ-ಅಮೆಲಿ ಧರಿಸಿದ್ದ ನೀಲಮಣಿ ಮತ್ತು ನೆಪೋಲಿಯನ್ I ತನ್ನ ಯುವ ವಧುವಿಗೆ ನೀಡಿದ ಆಭರಣಗಳು ಸೇರಿವೆ. ಕಳ್ಳತನವಾದ ಒಂದು ತಿಂಗಳೊಳಗೆ ಶಂಕಿತರನ್ನು ಬಂಧಿಸಲಾಯಿತು, ಆದರೆ ಆಭರಣಗಳು ಇನ್ನೂ ಕಾಣೆಯಾಗಿವೆ.

ಬೆಂಗಳೂರು ಕ್ಯಾಶ್ ವ್ಯಾನ್ ದರೋಡೆ

2025ರ ನವೆಂಬರ್ 19ರಂದು ಬೆಂಗಳೂರಿನ ಜಯನಗರದ ಅಶೋಕ ಪಿಲ್ಲರ್ ಬಳಿ ನಡೆದ ಹಗಲು ದರೋಡೆಯಲ್ಲಿ, ಆರ್‌ಬಿಐ ಅಧಿಕಾರಿಗಳ ಸೋಗಿನಲ್ಲಿ ಬಂದ 5 ರಿಂದ 6 ಮಂದಿ ದುಷ್ಕರ್ಮಿಗಳು ಸಿಎಂಎಸ್ ಕ್ಯಾಶ್ ವ್ಯಾನ್ ಅನ್ನು ತಡೆದು, ದಾಖಲೆಗಳ ಪರಿಶೀಲನೆ ಎಂಬ ನೆಪದಲ್ಲಿ ಸಿಬ್ಬಂದಿಯನ್ನು ಬೆದರಿಸಿ, ಗನ್ ಪಾಯಿಂಟ್‌ನಲ್ಲಿ 7.11 ಕೋಟಿ ರೂ. ಹಣವನ್ನು ಲೂಟಿ ಮಾಡಿ ಪರಾರಿಯಾದರು. ಇದು ಮೂರು ತಿಂಗಳು ಯೋಜಿತವಾಗಿ ನಡೆದ ದೊಡ್ಡ ದರೋಡೆಯಾಗಿದ್ದು, ಪೊಲೀಸರು 54 ಗಂಟೆಗಳೊಳಗೆ ಪ್ರಕರಣ ಭೇದಿಸಿ 9 ಆರೋಪಿಗಳನ್ನು (ಪೊಲೀಸ್ ಕಾನ್‌ಸ್ಟೇಬಲ್ ಮತ್ತು ಸಿಎಂಎಸ್ ಸಿಬ್ಬಂದಿ ಸೇರಿ) ಬಂಧಿಸಿ 7.1 ಕೋಟಿಗೂ ಹೆಚ್ಚು ಹಣ ವಶಪಡಿಸಿಕೊಂಡರು. ಇದು ನಗರ ಭದ್ರತೆಯ ಬಗ್ಗೆ ದೇಶಾದ್ಯಂತ ಚರ್ಚೆಗೆ ಕಾರಣವಾಯಿತು.

ನೈನಿತಾಲ್ ಮಕ್ಕಳ ಲೈಂಗಿಕ ದೌರ್ಜನ್ಯ ಕೇಸ್ 

2025ರ ಏಪ್ರಿಲ್ 12ರಂದು ನೈನಿತಾಲ್‌ನ ಮಲ್ಲಿತಾಲ್ ಪ್ರದೇಶದಲ್ಲಿ 12 ವರ್ಷದ 7ನೇ ತರಗತಿ ವಿದ್ಯಾರ್ಥಿನಿಯನ್ನು 73 ವರ್ಷದ ಕಾಂಟ್ರಾಕ್ಟರ್ ಮೊಹಮ್ಮದ್ ಉಸ್ಮಾನ್ ಎಂಬಾತ 200 ರೂ. ಮತ್ತು ಲಿಫ್ಟ್ ನೀಡುವ ನೆಪದಲ್ಲಿ ತನ್ನ ವಾಹನದಲ್ಲಿ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಘಟನೆ ಏಪ್ರಿಲ್ 30ರಂದು ಬಯಲಾದ ನಂತರ ದೇಶಾದ್ಯಂತ ಆಘಾತ ಮೂಡಿಸಿತು; ಬಾಲಕಿ ಆಘಾತದಿಂದ ಶಾಲೆಗೆ ಹೋಗದೇ ಏಕಾಂಗಿಯಾಗಿದ್ದಳು, ಕುಟುಂಬಕ್ಕೆ ತಿಳಿಸಿದ ನಂತರ ಪೊಲೀಸರು ಆರೋಪಿಯನ್ನು ಬಂಧಿಸಿ POCSO ಮತ್ತು BNS ಕಲಂಗಳಡಿ ಪ್ರಕರಣ ದಾಖಲಿಸಿದರು, ಆದರೆ ಘಟನೆಯು ಸಾಮುದಾಯಿಕ ಹಿಂಸಾಚಾರ, ಪ್ರತಿಭಟನೆಗಳು ಮತ್ತು ಪ್ರವಾಸೋದ್ಯಮಕ್ಕೆ ಧಕ್ಕೆ ತಂದು ಮಕ್ಕಳ ಸುರಕ್ಷತೆಯ ಬಗ್ಗೆ ರಾಷ್ಟ್ರೀಯ ಚರ್ಚೆಗೆ ಕಾರಣವಾಯಿತು.

ಲಖನೌ ಮರ್ಯಾದೆ ಹತ್ಯೆ

2025ರ ಜನವರಿ 1ರಂದು ಲಖನೌದ ನಾಕಾ ಪ್ರದೇಶದ ಹೋಟೆಲ್ ಶರಣ್‌ಜೀತ್‌ನಲ್ಲಿ ಮರ್ಯಾದೆ ಹತ್ಯೆ ನಡೆಯಿತು. ಆಗ್ರಾದ 24 ವರ್ಷದ ಅರ್ಶದ್ ಎಂಬಾತ ತನ್ನ ತಾಯಿ ಆಸ್ಮಾ ಮತ್ತು ನಾಲ್ಕು ಸಹೋದರಿಯರಿಗೆ (ಆಲಿಯಾ-9, ಅಕ್ಸಾ-16, ರೆಹ್ಮೀನ್-18, ಅಲ್ಶಿಯಾ-19)  ತಂದೆ ಬದರ್ ಸಹಾಯದೊಂದಿಗೆ ಮದ್ಯ ಮಿಶ್ರಿತ ಪಾನೀಯ ನೀಡಿ, ಹರಿತವಾದ ಆಯುಧದಿಂದ ಕೊಲೆ ಮಾಡಿದರು. ತಾನು ಕುಟುಂಬದ ಮಾನವನ್ನು ಉಳಿಸಲು ಈ ಹೆಜ್ಜೆ ಇಟ್ಟಿದ್ದಾಗ ತಾನು ರೆಕಾರ್ಡ್ ಮಾಡಿದ ವೈರಲ್ ವಿಡಿಯೋದಲ್ಲಿ ಹೇಳಿದ್ದನು.

ಪುರ್ನಿಯಾ ಮಾಂತ್ರಿಕ ಹತ್ಯೆ

2025ರ ಜುಲೈ 6ರ ರಾತ್ರಿ ಬಿಹಾರದ ಪುರ್ನಿಯಾ ಜಿಲ್ಲೆಯ ತೆತ್ಗಾಮಾ (Tetgama) ಗ್ರಾಮದಲ್ಲಿ ಭಯಾನಕ ಹತ್ಯೆ ನಡೆಯಿತು. ಗ್ರಾಮಸ್ಥರ 50 ಮಂದಿಯ ಗುಂಪು ಸೀತಾ ದೇವಿ ಅವರನ್ನು ಮಂತ್ರವಾದಿ ಎಂದು ಆರೋಪಿಸಿ, ಅವರ ಕುಟುಂಬದ ಐದು ಮಂದಿಯನ್ನು (ಬಾಬುಲಾಲ್ ಒರಾವೋನ್, ಸೀತಾ ದೇವಿ, ಕಾಟೋ ದೇವಿ, ಮಂಜೀತ್ ಒರಾವೋನ್, ಹಾಗೂ ರಾಣಿ ದೇವಿ) ಕೋಲುಗಳಿಂದ ಹೊಡೆದು ಕೊಂದು, ದೇಹಗಳನ್ನು ಸುಟ್ಟು ಹಾಕಿದರು. ಗ್ರಾಮದಲ್ಲಿ ನಡೆಯುತ್ತಿರುವ ಮಕ್ಕಳ ಸಾವು ಮತ್ತು ಅನಾರೋಗ್ಯಕ್ಕೆ ಸೀತಾ ದೇವಿ ಕುಟುಂಬದ ಮಾಟ ಮಂತ್ರ ಕಾರಣ ಎಂಬ ಆರೋಪ ಇತ್ತು. ಸೋನು ಹೆಸರಿನ 16 ವರ್ಷದ ಮಗ ಸೋನು ಬದುಕುಳಿದ ಬಳಿಕ ಪೊಲೀಸರಿಗೆ ದೂರು ನೀಡಿದ ನಂತರ ಪ್ರಕರಣ ಬಯಲಾಯಿತು ಮತ್ತು ಕೆಲವು ಆರೋಪಿಗಳನ್ನು (ನಕುಲ್ ಒರಾವೋನ್ ಸೇರಿ) ಬಂಧಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net