2025ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆದ 10 ಫೋಟೋಗಳಿವು... Rewind 2025

2025ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ 10 ಫೋಟೋಗಳು
2025ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ 10 ಫೋಟೋಗಳು
Published on

ಪ್ರಮುಖ ಮುಖ್ಯಾಂಶಗಳು

  • ಇಡೀ ಜಗತ್ತು 2026ರ ಹೊಸ ವರ್ಷವನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲು ತುದಿಗಾಲಲ್ಲಿ ನಿಂತಿದೆ
  • 2025ನೇ ವರ್ಷವನ್ನು ನೆನೆದು ಅನೇಕರು ಭಾವುಕ ವಿದಾಯ ಹೇಳಲು ಸಜ್ಜಾಗಿದ್ದಾರೆ
  • ಈ ವರ್ಷ ಮರೆಯಲಾರದಂತಹ ಎಷ್ಟೋ ಕ್ಷಣಗಳು ಘಟಿಸಿವೆ
  • ಸಾಮಾಜಿಕ ಜಾಲತಾಣದಲ್ಲಂತೂ ಲಕ್ಷಾಂತರ ಫೋಟೋ ಮತ್ತು ವಿಡಿಯೋಗಳು ಹರಿದಾಡಿವೆ
ನವದೆಹಲಿ: ಇಡೀ ಜಗತ್ತು 2026ರ ಹೊಸ ವರ್ಷವನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲು ತುದಿಗಾಲಲ್ಲಿ ನಿಂತಿದೆ. ಅದೇ ಸಮಯದಲ್ಲಿ ನಮ್ಮಿಂದ ದೂರವಾಗಿ ಇತಿಹಾಸ ಪುಟ ಸೇರಲಿರುವ 2025ನೇ ವರ್ಷವನ್ನು ನೆನೆದು ಅನೇಕರು ಭಾವುಕ ವಿದಾಯ ಹೇಳಲು ಸಜ್ಜಾಗಿದ್ದಾರೆ. ಈ ವರ್ಷ ಸಾಕಷ್ಟು ಘಟನೆಗಳು ನಡೆದಿವೆ. ಪ್ರತಿ ಕ್ಷೇತ್ರದಲ್ಲೂ ಮರೆಯುವಂತಹ ಹಾಗೂ ಮರೆಯಲಾರದಂತಹ ಎಷ್ಟೋ ಕ್ಷಣಗಳು ಘಟಿಸಿವೆ. ಸಾಮಾಜಿಕ ಜಾಲತಾಣದಲ್ಲಂತೂ ಲಕ್ಷಾಂತರ ಫೋಟೋ ಮತ್ತು ವಿಡಿಯೋಗಳು ಹರಿದಾಡಿವೆ. ಆದರೆ, ಅವುಗಳಲ್ಲಿ ಎಲ್ಲರ ಗಮನ ಸೆಳೆದಿದ್ದು ಮಾತ್ರ ಕೆಲವೇ ಕೆಲವು. ಹಾಗಾದರೆ, 2025ರಲ್ಲಿ ತುಂಬಾ ವೈರಲ್​ ಆದಂತಹ 10 ಫೋಟೋಗಳು ಯಾವುವು ಎಂದು ನಾವೀಗ ಮೆಲಕು ( Rewind 2025 ) ಹಾಕೋಣ.  

ಕಣ್ಣಂಚಲಿ ನೀರು ತುಂಬಿಸಿದ ಫೋಟೋ

ಈ ವರ್ಷ ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆದಿದ್ದು ನಿಮಗೆಲ್ಲರಿಗೂ ಗೊತ್ತೇ ಇದೆ. ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಘಟನೆ ಇದು. ಪಹಲ್ಗಾಮ್ ಸಮೀಪದ ಪ್ರವಾಸಿ ತಾಣ ಬೈಸರನ್ ಕಣಿವೆಯಲ್ಲಿ ಲಷ್ಕರ್-ಇ-ತೊಯ್ಬಾ (LeT) ಮತ್ತು ಅದರ ಅಂಗ ಸಂಸ್ಥೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (TRF)ಗೆ ಸಂಬಂಧಿಸಿದ ಪಾಕಿಸ್ತಾನ ಮೂಲದ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಮುಖ್ಯವಾಗಿ ಹಿಂದೂ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ 26 ಅಮಾಯಕರು ಬಲಿಯಾದರು. ಈ ದಾಳಿಯಲ್ಲಿ ಓರ್ವ ಪ್ರವಾಸಿ ಕ್ರಿಶ್ಚಿಯನ್ ಮತ್ತು ಸ್ಥಳೀಯ ಮುಸ್ಲಿಂ ಕೂಡ ಮೃತಪಟ್ಟರು. ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಮತ್ತು ಅವರ ಪತ್ನಿ ಹಿಮಾಂಶಿ ನರ್ವಾಲ್ ಹನಿಮೂನ್​ಗೆಂದು ಹೋಗಿದ್ದರು. ವಿನಯ್ ನರ್ವಾಲ್​ ಅವರು ಗುಂಡೇಟಿಗೆ ಬಲಿಯಾದರು. ಈ ವೇಳೆ ಹಿಮಾಂಶಿ ಗಂಡನ ಶವದ ಪಕ್ಕದಲ್ಲಿ ಮೌನವಾಗಿ ಕುಳಿತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಆಪರೇಷನ್​ ಸಿಂಧೂರ ಅಧಿಕಾರಿಗಳು

ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಶಿಬಿರಗಳನ್ನು ನಾಶಮಾಡಲು ಭಾರತ ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿತು. ಈ ಕಾರ್ಯಾಚರಣೆಯ ಪತ್ರಿಕಾಗೋಷ್ಠಿಯು ವಿಶೇಷವಾಗಿತ್ತು. ಸೇನೆಯ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಾಯುಪಡೆಯ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಕಾರ್ಯಾಚರಣೆಯ ಬಗ್ಗೆ ಜಗತ್ತಿಗೆ ವಿವರಿಸಿದರು. ಮಹಿಳಾ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ಯಶಸ್ವಿಯಾಗಿದ್ದರಿಂದ ಇಡೀ ಜಗತ್ತು ಅವರಿಬ್ಬರ ಬಗ್ಗೆ ತಿಳಿದುಕೊಳ್ಳಲು ಉತ್ಸಾಹ ತೋರಿತು.

ಶುಭಾಂಶು ಶುಕ್ಲಾ ಫೋಟೋ

ಭಾರತೀಯ ವಾಯುಪಡೆಯ ಪೈಲಟ್ ಶುಭಾಂಶು ಶುಕ್ಲಾ ಅವರು ಆಕ್ಸಿಯಮ್ ಮಿಷನ್ 4ರ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ಗಗನಯಾತ್ರಿಯಾದರು. ರಾಕೇಶ್ ಶರ್ಮಾ ನಂತರ (1984 ರಲ್ಲಿ) ಬಾಹ್ಯಾಕಾಶಕ್ಕೆ ಹೋದ ಎರಡನೇ ಭಾರತೀಯ ಪ್ರಜೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ವೇಳೆ ಬಾಹ್ಯಾಕಾಶದಲ್ಲಿ ಅವರು ಸೆರೆಹಿಡಿದ ಈ ಫೋಟೋ ಸಿಕ್ಕಾಪಟ್ಟೆ ವೈರಲ್​ ಆಯಿತು. 

ಶ್ವೇತಭವನದಲ್ಲಿ ಟ್ರಂಪ್ ಮತ್ತು ಝೆಲೆನ್ಸ್ಕಿ ಮೀಟಿಂಗ್​

ರಷ್ಯಾ ಮತ್ತು ಯೂಕ್ರೇನ್ ನಡುವಿನ ಯುದ್ಧವು 2022, ಫೆಬ್ರವರಿಯಲ್ಲಿ ಪ್ರಾರಂಭವಾಗಿದ್ದು ನಿಮಗೆಲ್ಲರಿಗೂ ತಿಳಿದೇ ಇದೆ. 2025, ಮಾರ್ಚ್ 1ರಂದು, ಯೂಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಶ್ವೇತಭವನದಲ್ಲಿ ಭೇಟಿಯಾದರು. ಈ ಸಂದರ್ಭದಲ್ಲಿ, ಇಬ್ಬರು ನಾಯಕರು ಮಾಧ್ಯಮಗಳ ಮುಂದೆ ಮಾತನಾಡಿದರು. ಇದಕ್ಕೆ ಸಂಬಂಧಿಸಿದ ಫೋಟೋಗಳು ಜಾಲತಾಣದಲ್ಲಿ ಸಂಚಲ ಮೂಡಿಸಿತು. 

ವಿಶ್ವಕಪ್​ ಗೆದ್ದ ಮಹಿಳಾ ತಂಡ

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಚ್ಚೊಚ್ಚಲ ವಿಶ್ವಕಪ್ ಗೆಲ್ಲುವ ಕನಸು ಈ ವರ್ಷ ನನಸಾಯಿತು. ನವೆಂಬರ್ 2 ರಂದು ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ರೋಮಾಂಚಕ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಸೋಲಿಸಿ ಚೊಚ್ಚಲ ಬಾರಿಗೆ ಟ್ರೋಫಿಗೆ ಮುತ್ತಿಟ್ಟರು. ಈ ವಿಜಯೋತ್ಸವದಲ್ಲಿ ಭಾಗವಹಿಸಿದ ಭಾರತೀಯ ಮಹಿಳಾ ತಂಡದ ಫೋಟೋ ವೈರಲ್ ಆಗಿತ್ತು.

ಅಮೆರಿಕದಿಂದ ನನ್ನ ಸ್ವಂತ ದೇಶಕ್ಕೆ ಕೈಕೋಳದಲ್ಲಿ

ಜನವರಿಯಲ್ಲಿ ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಮತ್ತೆ ಅಧಿಕಾರಕ್ಕೆ ಬಂದ ನಂತರ, ಅಕ್ರಮ ವಲಸೆಯ ವಿರುದ್ಧ ಕಠಿಣ ನಿಲುವು ತೆಗೆದುಕೊಂಡರು. ಅಮೆರಿಕದ ಅಧಿಕಾರಿಗಳಿಂದ ಬಂಧಿಸಲ್ಪಟ್ಟ ಅಕ್ರಮ ವಲಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಗಡೀಪಾರು ಮಾಡಲಾಯಿತು. ವಲಸಿಗರನ್ನು ಮಿಲಿಟರಿ ಸರಕು ವಿಮಾನಗಳಲ್ಲಿ ಕೈಕೋಳದಲ್ಲಿ ಸಾಗಿಸಲಾಯಿತು. ಇದಕ್ಕೆ ಸಂಬಂಧಿಸಿದ ಫೋಟೋಗಳು ಜಗತ್ತಿನ ಗಮನ ಸೆಳೆದವು. 

ನೇಪಾಳದಲ್ಲಿ ಜೆನ್​ಜಿ ಪ್ರತಿಭಟನೆ

ಸಾಮಾಜಿಕ ಜಾಲತಾಣ ಮೇಲಿನ ಸಂಪೂರ್ಣ ನಿಷೇಧದಿಂದ ಆಕ್ರೋಶಗೊಂಡ ಯುವ ಸಮುದಾಯ ನೇಪಾಳದಲ್ಲಿ ಒಂದು ಕ್ರಾಂತಿಯ ಅಲೆಯನ್ನೇ ಸೃಷ್ಟಿ ಮಾಡಿದರು. ನೇಪಾಳದಲ್ಲಿ ಸೆಪ್ಟೆಂಬರ್‌ ತಿಂಗಳಲ್ಲಿ ಭ್ರಷ್ಟಾಚಾರ ವಿರೋಧಿ ಪ್ರತಿಭಟನೆಗಳು ಭುಗಿಲೆದ್ದವು. ಈ ಆಂದೋಲನವನ್ನು ಮುಖ್ಯವಾಗಿ ಜೆನ್​ಜಿ ವಿದ್ಯಾರ್ಥಿಗಳು ಮತ್ತು ಯುವಕರು ಮುನ್ನಡೆಸಿದರು. ಈ ಪ್ರತಿಭಟನೆ ಹಿಂಸಾತ್ಮಕ ಸ್ವರೂಪಕ್ಕೆ ತಿರುಗಿ 76 ಜನರ ಬಲಿಯಾದರು. ಸೆಪ್ಟೆಂಬರ್ 9 ರಂದು, ಆಗಿನ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಮತ್ತು ಹಲವಾರು ಸಚಿವರು ರಾಜೀನಾಮೆ ನೀಡಿದರು. ಮೂರು ದಿನಗಳ ನಂತರ, ಮಾಜಿ ವಕೀಲೆ ಸುಶೀಲಾ ಕರ್ಕಿ ಅವರನ್ನು ಮಧ್ಯಂತರ ಪ್ರಧಾನಿಯಾಗಿ ನೇಮಿಸಲಾಯಿತು.

ಹಾಂಗ್​​ಕಾಂಗ್ ಅಪಾರ್ಟ್​ಮೆಂಟ್​ನಲ್ಲಿ ಬೆಂಕಿ

ನವೆಂಬರ್‌ ತಿಂಗಳಲ್ಲಿ ಹಾಂಗ್​ಕಾಂಗ್‌ನಲ್ಲಿ ಬಹುಮಹಡಿ ಕಟ್ಟಡವೊಂದರಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿತು. ಈ ಅವಘಡದಕ್ಕು 159 ಜನರು ಸಾವಿಗೀಡಾದರು ಮತ್ತು ಸಾವಿರಾರು ಜನರು ನಿರಾಶ್ರಿತರಾದರು. ಎಂಟು ಬ್ಲಾಕ್‌ಗಳಲ್ಲಿ ಸುಮಾರು 2,000 ಅಪಾರ್ಟ್‌ಮೆಂಟ್‌ಗಳಲ್ಲಿ ಸುಮಾರು 4,600 ಜನರು ವಾಸಿಸುತ್ತಿದ್ದರು. ಅಪಾರ್ಟ್​ಮೆಂಟ್​ ಬೆಂಕಿಯ ಕೆನ್ನಾಲಿಗೆಯಿಂದ ಸುಡುತ್ತಿರುವ ಫೋಟೋ ಆ ಸಮಯದಲ್ಲಿ ವೈರಲ್​ ಆಗಿತ್ತು.

ಏರ್​ ಇಂಡಿಯಾ ವಿಮಾನ ಪತನ

ಜೂನ್ 12ರಂದು ಅಹಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್ ಗ್ಯಾಟ್ವಿಕ್‌ಗೆ ಹಾರಲು ನಿಗದಿಯಾಗಿದ್ದ ಏರ್ ಇಂಡಿಯಾ ಫ್ಲೈಟ್ 171, ಟೇಕ್ ಆಫ್ ಆದ ಕೇವಲ 32 ಸೆಕೆಂಡುಗಳ ನಂತರ ಅಪಘಾತಕ್ಕೀಡಾಯಿತು. ವಿಮಾನದಲ್ಲಿದ್ದ ಸುಮಾರು 230 ಪ್ರಯಾಣಿಕರು ಮತ್ತು 12 ಸಿಬ್ಬಂದಿಯಲ್ಲಿ ಓರ್ವ ಪ್ರಯಾಣಿಕ ಮಾತ್ರ ಬದುಕುಳಿದನು. ಬೋಯಿಂಗ್ 787-8 ಡ್ರೀಮ್‌ಲೈನರ್ ವೈದ್ಯಕೀಯ ಕಾಲೇಜು ಹಾಸ್ಟೆಲ್ ಕಟ್ಟಡಕ್ಕೆ ಅಪ್ಪಳಿಸಿತು. ಇದರಿಂದ ಹಾಸ್ಟೆಲ್​ ಮತ್ತು ಆಸುಪಾಸಿನಲ್ಲಿದ್ದ 19 ಜನರು ಕೂಡ ಮೃತಪಟ್ಟರು. ವಿಮಾನ ಹಾಸ್ಟೆಲ್​ ಕಟ್ಟಡಕ್ಕೆ ಡಿಕ್ಕಿಯಾದ ಫೋಟೋ ಜಾಲತಾಣದಲ್ಲಿ ವೈರಲ್​ ಆಗಿತ್ತು.

ಗಾಜಾದ ದುಃಸ್ಥಿತಿ​

ಇಸ್ರೇಲ್-ಹಮಾಸ್ ಯುದ್ಧವು ಅಕ್ಟೋಬರ್ 7, 2023 ರಂದು ಪ್ರಾರಂಭವಾಯಿತು. ದಶಕಗಳಷ್ಟು ಹಳೆಯದಾದ ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷದಿಂದಾಗಿ ನಡೆಯುತ್ತಿರುವ ಇಸ್ರೇಲ್-ಹಮಾಸ್ ಯುದ್ಧವು ಈ ವರ್ಷ ಗಾಜಾ ಪಟ್ಟಿಯನ್ನು ಹಸಿವಿನ ಬಿಕ್ಕಟ್ಟಿಗೆ ತಳ್ಳಿದೆ. ಸಾವಿರಾರು ನಿರಾಶ್ರಿತರು ತುತ್ತು ಊಟಕ್ಕಾಗಿ ಪರದಾಡುತ್ತಿದ್ದು, ಅಲ್ಲಿನ ಫೋಟೋಗಳನ್ನು ನೋಡಿದರೆ ಮನಕಲುವಂತಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net