ಜ್ಯೋತಿಷಿ ಅಶೋಕ್ ಖರತ್ ಜೊತೆ ಸಂಬಂಧ: ರಾಜ್ಯ ಮಹಿಳಾ ಆಯೋಗದ ಬಳಿಕ ಪಕ್ಷದ ಮಹಿಳಾ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ರೂಪಾಲಿ ಚಕಣಕರ್! Rupali Chakankar Resignation

ಎನ್‌ಸಿಪಿ ಮಹಿಳಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ರೂಪಾಲಿ ಚಕಣಕರ್
ಎನ್‌ಸಿಪಿ ಮಹಿಳಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ರೂಪಾಲಿ ಚಕಣಕರ್
Published on

ಪ್ರಮುಖ ಮುಖ್ಯಾಂಶಗಳು

  • ಲೈಂಗಿಕ ದೌರ್ಜನ್ಯದ ಆರೋಪಿ ಅಶೋಕ್ ಖರತ್ ಜೊತೆಗೆ ಸಂಪರ್ಕದ ಆರೋಪ
  • ಎನ್‌ಸಿಪಿ ಮಹಿಳಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ರೂಪಾಲಿ ಚಕಣಕರ್
  • ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡಬೇಡಿ
  • ನ್ಯಾಯಯುತ ತನಿಖೆಗೆ ನಾನು ಆಗ್ರಹಿಸುತ್ತೆನೆ: ರೂಪಾಲಿ
ನಾಸಿಕ್​: ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿದ ಆರೋಪದಲ್ಲಿ ಬಂಧಿತನಾಗಿರುವ ಜ್ಯೋತಿಷಿ ಅಶೋಕ್ ಖರತ್ ಜೊತೆಗೆ ಸಂಬಂಧ ಹೊಂದಿದ್ದ ಟೀಕೆಗಳ ಹಿನ್ನಲೆಯಲ್ಲಿ ಎನ್‌ಸಿಪಿ ಮಹಿಳಾ ವಿಭಾಗದ ರಾಜ್ಯ ಅಧ್ಯಕ್ಷೆ ರೂಪಾಲಿ ಚಕಣಕರ್ (Rupali Chakankar Resignation) ಶುಕ್ರವಾರ(ಮಾರ್ಚ್​ 27) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಹುದ್ದೆಗೆ ರಾಜೀನಾಮೆ ನೀಡಿದ ಒಂದು ವಾರದ ನಂತರ ಈಗ ಮಹಿಳಾ ವಿಭಾಗದ ಸ್ಥಾನದಿಂದ ಸಹ ರೂಪಾಲಿ ಹಿಂದೆ ಸರಿದಿದ್ದಾರೆ. ಉಪಮುಖ್ಯಮಂತ್ರಿ ಮತ್ತು ಎನ್‌ಸಿಪಿ ಮುಖ್ಯಸ್ಥೆ ಸುನೇತ್ರಾ ಪವಾರ್ ಅವರಲ್ಲಿ ರಾಜೀನಾಮೆ ಪತ್ರ ಸಲ್ಲಿಸುವ ಮೂಲಕ ರೂಪಾಲಿ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ.

ರೂಪಾಲಿ ಹೇಳಿದ್ದೇನು?

ತಮ್ಮ ರಾಜೀನಾಮೆ ಕುರಿತು ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿರುವ ರೂಪಾಲಿ,  ಜ್ಯೋತಿಷಿ ಅಶೋಕ್ ಖರತ್ ಪ್ರಕರಣ ಬೆಳಕಿಗೆ ಬಂದ ಮೊದಲ ದಿನವೇ, ನಾನು ನನ್ನ ನಿಲುವನ್ನು ಸ್ಪಷ್ಟಪಡಿಸಿದ್ದೇನೆ. ಅವರ ಹಣಕಾಸಿನ ವಹಿವಾಟು ಅಥವಾ ದುಷ್ಕೃತ್ಯದೊಂದಿಗೆ ನನಗೆ ಯಾವುದೇ ಸಂಬಂಧವಿಲ್ಲ. 
ತನಿಖೆಯ ಸಮಯದಲ್ಲಿ, ಎಲ್ಲಾ ಸಂಗತಿಗಳು ಹೊರಬರುತ್ತವೆ ಆದರೆ ನನ್ನ ವಿರುದ್ಧ ಕೆಲವು ಆಧಾರರಹಿತ ಆರೋಪಗಳನ್ನು ಮಾಡಲಾಗುತ್ತಿರುವುದು ನನಗೆ ನೋವನ್ನು ಉಂಟುಮಾಡಿದೆ. 
ಖರತ್ ಪ್ರಕರಣದ ತನಿಖೆಯನ್ನು ನಿಷ್ಪಕ್ಷಪಾತ ರೀತಿಯಲ್ಲಿ ನಡೆಸಬೇಕೆಂದು ನಾನು ಈಗಾಗಲೇ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ತಿಳಿಸಿದ್ದೇನೆ ಎಂದು ಅವರು ಬರೆದಿದ್ದಾರೆ.

ಸ್ವಪಕ್ಷದಿಂದಲೇ ರೂಪಾಲಿ ಮೇಲೆ ಆರೋಪ!

ನಾಸಿಕ್, ಅಹಲ್ಯಾನಗರ ಮತ್ತು ಇತರ ಜಿಲ್ಲೆಗಳ ಹಲವಾರು ಎನ್‌ಸಿಪಿ ಪದಾಧಿಕಾರಿಗಳು ಚಕಂಕರ್ ಅವರನ್ನು ರಾಜ್ಯ ಮಹಿಳಾ ವಿಭಾಗದ ಮುಖ್ಯಸ್ಥೆ ಸ್ಥಾನದಿಂದ ತೆಗೆದುಹಾಕುವಂತೆ ಕೋರಿ ಸುನೇತ್ರಾ ಪವಾರ್ ಅವರಿಗೆ ಪತ್ರ ಬರೆದಿದ್ದರು. ಜ್ಯೋತಿಷಿಯೊಂದಿಗಿನ ಅವರ ಸಂಬಂಧ ಪಕ್ಷದ ವರ್ಚಸ್ಸಿಗೆ ಹಾನಿ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಏನಿದು ಜ್ಯೋತಿಷಿ ಅಶೋಕ್ ಖರತ್ ಪ್ರಕರಣ?

ನಾಸಿಕ್‌ನ ಪ್ರಖ್ಯಾತ ಜ್ಯೋತಿಷಿ ಮತ್ತು ಸಂಖ್ಯಾಶಾಸ್ತ್ರಜ್ಞ ಅಶೋಕ್ ಕುಮಾರ್ ಏಕನಾಥ್ ಖರತ್ (Ashok Kharat) ಅವರ ಪ್ರಕರಣವು ಪ್ರಸ್ತುತ ಮಹಾರಾಷ್ಟ್ರದಲ್ಲಿ ಭಾರಿ ಸಂಚಲನ ಮೂಡಿಸಿದೆ. ಮಾಜಿ ಮರ್ಚೆಂಟ್ ನೇವಿ ಅಧಿಕಾರಿಯಾಗಿದ್ದ ಇವರು ಕ್ಯಾಪ್ಟನ್ ಖರತ್ ಎಂದೇ ಪರಿಚಿತರಾಗಿದ್ದರು. 
ತಮ್ಮನ್ನು ತಾವು ದೈವಾಂಶ ಸಂಭೂತರೆಂದು ಕರೆದುಕೊಳ್ಳುತ್ತಿದ್ದ ಖರತ್, ಭಕ್ತರಿಗೆ ಮೋಸ ಮಾಡಿದ, ಲೈಂಗಿಕ ದೌರ್ಜನ್ಯ ಎಸಗಿದ ಮತ್ತು ಬ್ಲ್ಯಾಕ್‌ಮೇಲ್ ಮಾಡಿದ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ. ಸದ್ಯಕ್ಕೆ ಇವರ ವಿರುದ್ಧ 10ಕ್ಕೂ ಹೆಚ್ಚು ಎಫ್‌ಐಆರ್‌ಗಳು ದಾಖಲಾಗಿದ್ದು, ಇದರಲ್ಲಿ ಅತ್ಯಾಚಾರ, ಲೈಂಗಿಕ ಶೋಷಣೆ, ವಂಚನೆ ಮತ್ತು ಅಘೋರ ಆಚರಣೆಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.
ತನಿಖೆಯ ವೇಳೆ ಪೊಲೀಸರಿಗೆ ಖರತ್ ಅವರ ಕಚೇರಿ ಮತ್ತು ಫಾರ್ಮ್‌ಹೌಸ್‌ನಿಂದ ಸುಮಾರು 100ಕ್ಕೂ ಹೆಚ್ಚು ಆಕ್ಷೇಪಾರ್ಹ ವಿಡಿಯೋಗಳು ದೊರೆತಿವೆ. ಇವರು ಮಹಿಳೆಯರಿಗೆ ಅಮಲು ಪದಾರ್ಥಗಳನ್ನು ನೀಡಿ ಪ್ರಜ್ಞೆ ತಪ್ಪಿಸಿ, ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ವಿಡಿಯೋ ಚಿತ್ರೀಕರಿಸುತ್ತಿದ್ದರು ಎಂದು ಆರೋಪಿಸಲಾಗಿದೆ. 
ಈ ಪ್ರಕರಣದ ತನಿಖೆಗಾಗಿ ಸರ್ಕಾರವು ವಿಶೇಷ ತನಿಖಾ ತಂಡವನ್ನು ರಚಿಸಿದೆ. ಖರತ್ ಅವರ ಆಸ್ತಿಗಳ ಮೌಲ್ಯ ಸುಮಾರು 40 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದ್ದು, ಸದ್ಯ ಅವರು ಮಾರ್ಚ್ 29, 2026 ರವರೆಗೆ ಪೊಲೀಸ್ ಕಸ್ಟಡಿಯಲ್ಲಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net