

ನವದೆಹಲಿ: ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ವಿದೇಶಿ ಶಕ್ತಿಗಳ ಕೈಗೊಂಬೆಯಾಗಿದ್ದು, ಅವರ ಸಹಾಯದಿಂದ ದೇಶದಲ್ಲಿ ಆಡಳಿತ ಬದಲಾವಣೆಗೆ ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಶನಿವಾರ(ನ. 14) ಹೈದರಾಬಾದ್ನಲ್ಲಿ ಕಾಂಗ್ರೆಸ್ ಸರ್ಕಾರದ ನೇತೃತ್ವದಲ್ಲಿ ನಡೆದ ಭಾರತ್ ಶೃಂಗಸಭೆ 2026 ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಕಿಡಿಕಾರುವ ಬಿಜೆಪಿ, ಜಾರ್ಜ್ ಸೊರೊಸ್ ಬೆಂಬಲಿತ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿಗಳಿಗೆ ಮತ್ತು ಭಾರತ ವಿರೋಧಿ ಹೇಳಿಕೆಗಳನ್ನು ನೀಡಿದವರಿಗೆ ವೇದಿಕೆಯನ್ನು ಒದಗಿಸಲಾಗಿದೆ ಎಂದು ಆರೋಪಿಸಿದೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ, ರಾಹುಲ್ ಗಾಂಧಿ ವಿದೇಶಿ ಶಕ್ತಿಗಳ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಮತ್ತು ವಿದೇಶಿ ಸಹಾಯದಿಂದ ಮೋದಿ ಸರ್ಕಾರವನ್ನು ತೆಗೆದುಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಮತ್ತು ದೇಶದಲ್ಲಿ ಅಸ್ಥಿರತೆಯನ್ನು ಸೃಷ್ಟಿಸಲು ಕಾಂಗ್ರೆಸ್ ಭಾರತದ ರಾಜಕೀಯ ಚರ್ಚೆಯಲ್ಲಿ ಅಂತರರಾಷ್ಟ್ರೀಯ ಜಾಲಗಳನ್ನು ತರುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನೂ ಬಿಜೆಪಿ ರಾಷ್ಟ್ರೀಯ ಮಾಧ್ಯಮ ಸಂಚಾಲಕ ಆಶಿಶ್ ಉಷಾ ಅಗರ್ವಾಲ್, ರಾಹುಲ್ ಗಾಂಧಿಯವರ ರಾಜಕೀಯವು ರಾಜಕೀಯ ವಿರೋಧವನ್ನು ಮೀರಿ ರಾಷ್ಟ್ರ ವಿರೋಧಿ ಕಾರ್ಯಸೂಚಿಯತ್ತ ಸಾಗುತ್ತಿದೆ ಎಂದು ಆರೋಪಿಸಿದ್ದು, ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ಆಯೋಜಿಸಿದ್ದ ಶೃಂಗಸಭೆಯನ್ನು ಸಂವಾದಕ್ಕಾಗಿ ನಡೆಸಲಾಗಿತ್ತೋ ಅಥವಾ ಭಾರತದ ವಿರುದ್ಧ ನಿರೂಪಣೆಗಳನ್ನು ಉತ್ತೇಜಿಸಲು ಉದ್ದೇಶಿಸಲಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.
ಈಕ್ವೆಡಾರ್‌ನ ಮಾಜಿ ವಿದೇಶಾಂಗ ಸಚಿವ ಗುಯಿಲೌಮ್ ಲಾಂಗ್ ಅವರ ಭಾಗವಹಿಸುವಿಕೆಯನ್ನು ನಿರ್ದಿಷ್ಟವಾಗಿ ಪ್ರಶ್ನಿಸಿರುವ ಅವರು, ಅವರನ್ನು ಭಾಷಣಕಾರರ ಪಟ್ಟಿಯಲ್ಲಿ ಸೇರಿಸಲಾಗಿದೆ. ಅವರು 2021ರಲ್ಲಿ ಜಾರ್ಜ್ ಸೊರೊಸ್ ಬೆಂಬಲಿತ ಓಪನ್ ಸೊಸೈಟಿ ಪಾಲಿಸಿ ಸೆಂಟರ್‌ನಿಂದ 420,000 ಯುಎಸ್ ಡಾಲರ್ ಅನುದಾನವನ್ನು ಪಡೆದ ಸೆಂಟರ್ ಫಾರ್ ಎಕನಾಮಿಕ್ ಅಂಡ್ ಪಾಲಿಸಿ ರಿಸರ್ಚ್ (ಸಿಇಪಿಆರ್) ನೊಂದಿಗೆ ಲಾಂಗ್ ಸಂಬಂಧ ಹೊಂದಿದ್ದಾರೆ ಎಂದು ಅಗರ್ವಾಲ್ ಹೇಳಿದ್ದಾರೆ.
ಗುಯಿಲೌಮ್ ಲಾಂಗ್ ಅವರಂತಹ ವ್ಯಕ್ತಿಗಳನ್ನು ಆಹ್ವಾನಿಸುವ ಮೂಲಕ, ರಾಹುಲ್ ಗಾಂಧಿ ಭಾರತ ವಿರೋಧಿ ಕಾರ್ಯಸೂಚಿಗೆ ಅಂತರರಾಷ್ಟ್ರೀಯ ಬೆಂಬಲವನ್ನು ಬಯಸುತ್ತಿದ್ದಾರೆಯೇ? ಎಂದು ಕೇಳಿದ್ದಾರೆ.
ಇನ್ನೂ ಹೈದರಾಬಾದ್ನಲ್ಲಿ ನಡೆದ ಭಾರತ್ ಸಮ್ಮಿಟ್ನಲ್ಲಿ ಹೊಸ ಜಾಗತಿಕ ಕ್ರಮದ ಹೊರಹೊಮ್ಮುವಿಕೆ, ಭೌಗೋಳಿಕ ರಾಜಕೀಯ ಬೆಳವಣಿಗೆಗಳಿಗೆ ಭಾರತದ ಕಾರ್ಯತಂತ್ರದ ಪ್ರತಿಕ್ರಿಯೆ, ಸಹಕಾರಿ ಒಕ್ಕೂಟ ಮತ್ತು ಚುನಾವಣಾ ಸಮಗ್ರತೆಯ ಕುರಿತು ಚರ್ಚಿಸಲು 70 ದೇಶಗಳ ತಜ್ಞರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಕಾಂಗ್ರೆಸ್ ಹೇಳಿತ್ತು.
ವಿದೇಶಾಂಗ ಸಚಿವಾಲಯ (MEA) ಅನುಮೋದನೆ ನೀಡಿದ 315 ಭಾಷಣಕಾರರಲ್ಲಿ 115 ಜನರಿಗೆ ಭಾರತಕ್ಕೆ ಪ್ರವೇಶ ನಿರಾಕರಿಸಲಾಗಿದೆ ಅಥವಾ ಅವರ ವೀಸಾಗಳನ್ನು ರದ್ದುಗೊಳಿಸಲಾಗಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಶುಕ್ರವಾರ ಆರೋಪಿಸಿದ್ದಾರೆ (ಏಜೆನ್ಸೀಸ್).