

ಲಂಡನ್: ಅಕ್ರಮ ಹಣ ವರ್ಗಾವಣೆ, ಫೆಮಾ ಕೇಸ್ ಸೇರಿ ಹಲವು ಅಪರಾಧ ಪ್ರಕರಣ ಆರೋಪ ಕೇಳಿ ಬರುತ್ತಿದ್ದಂತೆ ದೇಶದ ತನಿಖಾ ಏಜೆನ್ಸಿಗಳ ಕಣ್ತಪ್ಪಿಸಿ ಇಂಗ್ಲೆಂಡ್ಗೆ ಪರಾರಿಯಾಗಿದ್ದ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಸಂಸ್ಥಾಪಕ ಲಲಿತ್ ಮೋದಿ ಅವರು 2026 ಸೆಪ್ಟೆಂಬರ್ 15ರಂದು ತಾವು ಅಧಿಕೃತವಾಗಿ ಬ್ರಿಟಿಷ್ ಪೌರತ್ವ ಪಡೆದಿರುವುದಾಗಿ ಘೋಷಿಸಿಕೊಂಡಿದ್ದು, ಈ ಬೆಳವಣಿಗೆ ಹೆಮ್ಮೆಯ ಮತ್ತು ತಮ್ಮ ವೈಯಕ್ತಿಕ ಮೈಲಿಗಲ್ಲು ಎಂದು ಬಣ್ಣಿಸಿದ್ದಾರೆ.
ಈ ಕುರಿತು ಶನಿವಾರ(ನ. 14) ಆಕ್ಸ್ಫರ್ಡ್ ಯೂನಿಯನ್ ಅನ್ನು ಉದ್ದೇಶಿಸಿ ಲಲಿತ್ ಮೋದಿ ಮಾತನಾಡಿದ್ದು, ಅಲ್ಲಿ ಅವರು ಬ್ರಿಟಿಷ್ ಪೌರತ್ವವನ್ನು ಪಡೆಯುವ ಪ್ರಯಾಣ ಮತ್ತು ಯುನೈಟೆಡ್ ಕಿಂಗ್ಡಮ್ನೊಂದಿಗಿನ ತಮ್ಮ ದೀರ್ಘಕಾಲದ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಸೆಪ್ಟೆಂಬರ್ 15ರಂದು ಕುಟುಂಬ ಮತ್ತು ಸ್ನೇಹಿತರಿಂದ ಸುತ್ತುವರೆದ ವಿಶೇಷ ಸಮಾರಂಭದಲ್ಲಿ ಬ್ರಿಟಿಷ್ ಪೌರತ್ವ ಪಡೆದಿರುವುದನ್ನು ಆಚರಿಸಿಕೊಂಡಿದ್ದೇನೆ. ಹಲವು ವರ್ಷಗಳಿಂದ ಯುಕೆ ನನ್ನ ಮನೆಯಾಗಿತ್ತು. ಅದರ ಜನರು, ಸಂಸ್ಥೆಗಳು, ಸಂಪ್ರದಾಯಗಳು ಮತ್ತು ಮೌಲ್ಯಗಳ ಬಗ್ಗೆ ಆಳವಾದ ಮೆಚ್ಚುಗೆಯನ್ನು ಬೆಳೆಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಬ್ರಿಟಿಷರಾಗುವುದು ಒಂದು ಸವಲತ್ತು ಮತ್ತು ಜವಾಬ್ದಾರಿಯಾಗಿದ್ದು, ಅದನ್ನು ನಾನು ಹೆಮ್ಮೆ, ಕೃತಜ್ಞತೆ ಮತ್ತು ನಿಜವಾದ ಸೇರಿದ ಭಾವನೆಯಿಂದ ಸ್ವೀಕರಿಸುತ್ತೇನೆ. ನಾನೀಗ ಹೆಮ್ಮೆಯಿಂದ ಮನೆ ಎಂದು ಕರೆಯುವ ದೇಶಕ್ಕೆ ಸಕಾರಾತ್ಮಕ ಕೊಡುಗೆಗಳನ್ನು ನೀಡಲು ಎದುರು ನೋಡುತ್ತಿದ್ದೇನೆ. ಈ ಸ್ಮರಣೀಯ ಸಂದರ್ಭದಲ್ಲಿ ಈ ಸುದ್ದಿಯನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿದ್ದಕ್ಕಾಗಿ ತಮ್ಮ ಕುಟುಂಬ, ಸ್ನೇಹಿತರು ಮತ್ತು ಆಕ್ಸ್ಫರ್ಡ್ ಯೂನಿಯನ್ಗೆ ಧನ್ಯವಾದ ಅರ್ಪಿಸಿದ್ದಾರೆ.
ಐಪಿಎಲ್ಗೆ ಸಂಬಂಧಿಸಿದ ಆರ್ಥಿಕ ಅಕ್ರಮಗಳ ಆರೋಪಗಳ ಕುರಿತು ಇಡಿ, ಸಿಬಿಐಗಳಿಂದ ತನಿಖೆ ನಡೆಯುತ್ತಿದ್ದ ಸಂದರ್ಭ ಅಂದ್ರೆ, 2010ರಲ್ಲಿ ಲಲಿತ್ ಮೋದಿ ಭಾರತವನ್ನು ತೊರೆದಿದ್ದರು. ಮತ್ತು ಅಂದಿನಿಂದ ಯುಕೆಯಲ್ಲಿಯೇ ವಾಸ ಮಾಡುತ್ತಿದ್ದಾರೆ (ಏಜೆನ್ಸೀಸ್).