ಕಾಂಗ್ರೆಸ್ ಪಕ್ಷ 181 ಸೀಟುಗಳನ್ನು ಬೇಡಿಕೆ ಇಟ್ಟಿರೋದು ಸತ್ಯ, ಆದ್ರೆ...ಟಿಕೆಟ್ ಹಂಚಿಕೆಯ ಬಗ್ಗೆ ಅಖಿಲೇಶ್ ಮಹತ್ವದ ಹೇಳಿಕೆ! | UP Elections

ಟಿಕೆಟ್ ಹಂಚಿಕೆಯ ಬಗ್ಗೆ ಅಖಿಲೇಶ್ ಮಹತ್ವದ ಹೇಳಿಕೆ!
ಟಿಕೆಟ್ ಹಂಚಿಕೆಯ ಬಗ್ಗೆ ಅಖಿಲೇಶ್ ಮಹತ್ವದ ಹೇಳಿಕೆ!
Published on: 

ಲಖನೌ: ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ (UP Elections) ಸಂಬಂಧಿಸಿದಂತೆ ಸೀಟು ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷವು ತಮ್ಮ ಬಳಿ 181 ಸ್ಥಾನಗಳನ್ನು ಬೇಡಿಕೆ ಇಟ್ಟಿದೆ ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್‌ ಯಾದವ್ ಶನಿವಾರ ಬಹಿರಂಗಪಡಿಸಿದ್ದಾರೆ.

ದೆಹಲಿಯಲ್ಲಿ ನಡೆದ 24ನೇ ಹಿಂದೂಸ್ತಾನ್ ಟೈಮ್ಸ್ ಲೀಡರ್‌ಶಿಪ್ ಸಮ್ಮಿಟ್​ನಲ್ಲಿ ಮಾತನಾಡಿದ ಅಖಿಲೇಶ್​, ಕಾಂಗ್ರೆಸ್ ಇಷ್ಟು ದೊಡ್ಡ ಸಂಖ್ಯೆಯ ಸೀಟುಗಳನ್ನು ಕೇಳಿದ್ದರೂ ಸಹ ಇಂಡಿಯಾ ಒಕ್ಕೂಟವು ಸಂಪೂರ್ಣ ಒಗ್ಗಟ್ಟಾಗಿದೆ ಮತ್ತು ಆಡಳಿತರೂಢ ಭಾರತೀಯ ಜನತಾ ಪಕ್ಷವನ್ನು ಸೋಲಿಸುವುದೇ ನಮ್ಮ ಏಕೈಕ ಗುರಿಯಾಗಿದೆ ಎಂದರು.

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ 181ಕ್ಕೂ ಅಧಿಕ ಸೀಟುಗಳನ್ನು ಕೇಳಿದೆ ಎಂದು ಅಖಿಲೇಶ್‌ ಯಾದವ್ ತಿಳಿಸಿದರಾದರೂ, ಸಮಾಜವಾದಿ ಪಕ್ಷವು ಅಷ್ಟು ಸ್ಥಾನಗಳನ್ನು ಬಿಟ್ಟುಕೊಡುತ್ತದೆಯೇ ಎಂಬುದರ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಆದರೆ, ಎರಡೂ ಪಕ್ಷಗಳ ನಡುವಿನ ಸಂಬಂಧ ಅತ್ಯಂತ ಗಟ್ಟಿಯಾಗಿದೆ ಎಂದು ಅವರು ಪುನರುಚ್ಚರಿಸಿದರು. 2024ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ 80 ಸ್ಥಾನಗಳ ಪೈಕಿ ಕಾಂಗ್ರೆಸ್ 6 ಸ್ಥಾನಗಳನ್ನು ಗೆದ್ದುಕೊಂಡಿರುವ ಹಿನ್ನೆಲೆಯಲ್ಲಿ, ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ 200ಕ್ಕೂ ಹೆಚ್ಚು ಸೀಟುಗಳ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದೆ ಎಂದು ಮೂಲಗಳು ತಿಳಿಸಿದ್ದವು. ಆದರೆ, ಸಿಂಹಪಾಲನ್ನು ತನ್ನಲ್ಲೇ ಉಳಿಸಿಕೊಳ್ಳಲು ಬಯಸಿರುವ ಎಸ್‌ಪಿ, ಕಾಂಗ್ರೆಸ್‌ಗೆ ಕೇವಲ 60 ರಿಂದ 70 ಸ್ಥಾನಗಳನ್ನು ಮಾತ್ರ ಬಿಟ್ಟುಕೊಡಲು ಸಿದ್ಧವಿದೆ ಎಂದು ವರದಿಯಾಗಿದೆ.

Also Read
ಉತ್ತರ ಪ್ರದೇಶ ಚುನಾವಣೆ ಸಿದ್ಧತೆ: 150 ಕ್ಷೇತ್ರಗಳಿಗೆ ಕಾಂಗ್ರೆಸ್ ಬೇಡಿಕೆ, ಸೀಟು ಹಂಚಿಕೆ ಬಗ್ಗೆ ಅಖಿಲೇಶ್ ಯಾದವ್​ ಹೇಳೋದೇ ಬೇರೆ! | Congress-SP Alliance
ಟಿಕೆಟ್ ಹಂಚಿಕೆಯ ಬಗ್ಗೆ ಅಖಿಲೇಶ್ ಮಹತ್ವದ ಹೇಳಿಕೆ!

ಬಿಎಸ್‌ಪಿ ಜತೆಗಿನ ಮೈತ್ರಿ ಬಗ್ಗೆ ಅಖಿಲೇಶ್ ಮಾತು

ಇದೇ ವೇಳೆ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷದ ಜತೆಗಿನ ಹಿಂದಿನ ರಾಜಕೀಯ ಅನುಭವಗಳನ್ನು ನೆನಪಿಸಿಕೊಂಡರು. ತಾವು ಈ ಹಿಂದೆ ಹಲವು ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿರುವುದಾಗಿ ತಿಳಿಸಿದ ಅವರು, ಆದರೆ ಪ್ರಸ್ತುತ ಬಿಎಸ್‌ಪಿಯನ್ನು ಇಂಡಿಯಾ ಒಕ್ಕೂಟಕ್ಕೆ ಸೇರಿಸಿಕೊಳ್ಳುವ ಕುರಿತು ಯಾವುದೇ ಮಾತುಕತೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು. ಕಾಂಗ್ರೆಸ್ ಜತೆಗಿನ ತಮ್ಮ ಮೈತ್ರಿ ಹಳೆಯದು ಮತ್ತು ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಭರವಸೆ ನೀಡಿದರು.

ಇದೇ ವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅಖಿಲೇಶ್ ಯಾದವ್, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ಮಹಿಳೆಯರು ಹಾಗೂ ದಲಿತರ ಮೇಲಿನ ಅಪರಾಧಗಳು ಹೆಚ್ಚಾಗಿವೆ ಎಂದು ಅಂಕಿಅಂಶಗಳನ್ನು ಉಲ್ಲೇಖಿಸಿ ಆರೋಪಿಸಿದರು. ಸರ್ಕಾರದ ಬುಲ್ಡೋಜರ್ ನೀತಿಯನ್ನು ಕಟುವಾಗಿ ಟೀಕಿಸಿದ ಅವರು, ಬಡವರು ಮತ್ತು ದುರ್ಬಲ ವರ್ಗದವರ ಮನೆಗಳನ್ನೇ ಗುರಿಯಾಗಿಸಿ ಧ್ವಂಸಗೊಳಿಸಲಾಗುತ್ತಿದೆ ಎಂದು ಕಿಡಿಕಾರಿದರು. ಬುಲ್ಡೋಜರ್ ಕಾನೂನು ಮತ್ತು ಸುವ್ಯವಸ್ಥೆಯ ಸಂಕೇತವಲ್ಲ. ಯಾರ ಮನೆಗಳನ್ನು ಕೆಡವಲಾಗಿದೆ? ಬೇರೆ ಎಲ್ಲಿಯೂ ಹೋಗಲು ದಾರಿಯಿಲ್ಲದ ಬಡವರು ಮತ್ತು ದುರ್ಬಲರ ಮೇಲಷ್ಟೇ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಟೀಕಿಸಿದರು(ಏಜೆನ್ಸೀಸ್​).