Congress-SP Alliance: ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷವು ತಾನು ಬಯಸುವ ಕ್ಷೇತ್ರಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸ್ವತಃ ಈ ಸಿದ್ಧತೆಗಳ ಮೇಲ್ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಮೈತ್ರಿ ಕುರಿತು ಮಾತುಕತೆ ನಡೆಯುತ್ತಿದ್ದು, ಉಭಯ ಪಕ್ಷಗಳ ನಡುವೆ ಸೀಟು ಹಂಚಿಕೆ ಹೇಗೆ ಎನ್ನುವುದೇ ಯಕ್ಷಪ್ರಶ್ನೆಯಾಗಿ ಹೊರಹೊಮ್ಮಿದೆ. ಮೈತ್ರಿ ಮಾಡಿಕೊಳ್ಳಲು ಎರಡೂ ಪಕ್ಷಗಳು ಉತ್ಸುಕವಾಗಿವೆಯಾದರೂ, ಸೀಟು ಹಂಚಿಕೆ ಮಾತುಕತೆ ಕಠಿಣ ಸವಾಲಾಗುವ ಸಾಧ್ಯತೆಯಿದೆ. ಕಾಂಗ್ರೆಸ್ ಸುಮಾರು 150 ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದೆ ಎನ್ನಲಾಗಿದೆ. ಈ ನಡುವೆ ಮೈತ್ರಿಕೂಟದ ಸೀಟು ಹಂಚಿಕೆ ಸೂತ್ರದ ಬಗ್ಗೆ ಮಾತನಾಡಿರುವ ಮಾಜಿ ಸಿಎಂ ಅಖಿಲೇಶ್ ಯಾದವ್, ಚುನಾವಣಾ ಗೆಲುವಿನ ಸಾಮರ್ಥ್ಯಕ್ಕೆ ಮೊದಲ ಆದ್ಯತೆ ಎಂದು ಸ್ಪಷ್ಟಪಡಿಸಿದ್ದಾರೆ.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷದ ಸಿದ್ಧತೆಗಳನ್ನು ಪ್ರಿಯಾಂಕಾ ಗಾಂಧಿ ಜೋರಾಗಿಯೇ ನಡೆಸುತ್ತಿದ್ದು, ನಿನ್ನೆ (ಸೋಮವಾರ) ರಾಜ್ಯ ಉಸ್ತುವಾರಿ, ರಾಜ್ಯ ಅಧ್ಯಕ್ಷರು ಹಾಗೂ ಕಾರ್ಯಾಧ್ಯಕ್ಷರೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ. ಕಾಂಗ್ರೆಸ್ ಬಲವಾದ ಹಿಡಿತ ಹೊಂದಿರುವ ಮತ್ತು ತಾನು ಸ್ಪರ್ಧಿಸಲು ಬಯಸುವ ಕ್ಷೇತ್ರಗಳನ್ನು ಗುರುತಿಸುವುದರ ಮೇಲೆ ಈ ಚರ್ಚೆಗಳು ಕೇಂದ್ರೀಕೃತವಾಗಿದ್ದವು ಎಂದು ಬಲ್ಲ ಮೂಲಗಳು ತಿಳಿಸಿವೆ.
ಕಾಂಗ್ರೆಸ್ ತಾನು ಸ್ಪರ್ಧಿಸಲು ಉದ್ದೇಶಿಸಿರುವ ಕ್ಷೇತ್ರಗಳ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಿದ್ದು, ರಾಜ್ಯದಾದ್ಯಂತ ಪಕ್ಷದ ಚುನಾವಣಾ ಸಾಧ್ಯತೆಗಳನ್ನು ಅಳೆಯಲು ಪ್ರಿಯಾಂಕಾ ಗಾಂಧಿ ಪಕ್ಷದ ಇತರ ನಾಯಕರೊಂದಿಗೆ ನಿಯಮಿತವಾಗಿ ಸಮಾಲೋಚನೆ ನಡೆಸುತ್ತಿದ್ದಾರೆ. ಸಮಾಜವಾದಿ ಪಕ್ಷದೊಂದಿಗೆ ನಡೆಯುವ ಮಾತುಕತೆಯ ಅಂತಿಮ ಫಲಿತಾಂಶದ ಮೇಲೆ ಇದು ಅವಲಂಬಿತವಾಗಿದ್ದರೂ, ಕಾಂಗ್ರೆಸ್ ಸುಮಾರು 150ಕ್ಕೂ ಹೆಚ್ಚು ಸ್ಥಾನಗಳನ್ನು ಕೇಳಲು ಸಿದ್ಧತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಸಮಾಜವಾದಿ ಪಕ್ಷದೊಂದಿಗೆ ಸೀಟು ಹಂಚಿಕೆ ಚರ್ಚೆಗಳನ್ನು ನಡೆಸಲು ಕಾಂಗ್ರೆಸ್ ಶೀಘ್ರದಲ್ಲೇ ವಿಶೇಷ ತಂಡವೊಂದನ್ನು ರಚಿಸುವ ನಿರೀಕ್ಷೆಯಿದೆ. ಪ್ರಸ್ತಾವಿತ ಯೋಜನೆಯ ಪ್ರಕಾರ, ಎರಡೂ ಪಕ್ಷಗಳು ಮೊದಲು ತಾವು ಸ್ಪರ್ಧಿಸಲು ಬಯಸುವ ಕ್ಷೇತ್ರಗಳ ಪಟ್ಟಿಗಳನ್ನು ಸಿದ್ಧಪಡಿಸಿ ಪರಸ್ಪರ ವಿನಿಮಯ ಮಾಡಿಕೊಳ್ಳಲಿವೆ. ನಂತರ ಉಭಯ ಪಕ್ಷಗಳ ನಾಯಕರು ಒಟ್ಟಾಗಿ ಕುಳಿತು ತಮ್ಮ ಹಕ್ಕುಗಳ ಬಗ್ಗೆ ಚರ್ಚಿಸಿ, ಪರಸ್ಪರ ಒಪ್ಪಿಗೆಯಾಗುವ ಸೂಕ್ತ ವ್ಯವಸ್ಥೆಗೆ ಬರಲಿದ್ದಾರೆ. ವಿರೋಧ ಪಕ್ಷಗಳ ಈ ಮೈತ್ರಿಗೆ ಸೀಟು ಹಂಚಿಕೆ ಮಾತುಕತೆಯು ಅಗ್ನಿಪರೀಕ್ಷೆಯಾಗಲಿದೆ. ಕಾಂಗ್ರೆಸ್ ದೊಡ್ಡ ಮಟ್ಟದ ಸ್ಥಾನಗಳನ್ನು ಕೋರುತ್ತಿದ್ದರೆ, ಎಸ್‌ಪಿ ಉತ್ತರ ಪ್ರದೇಶದಲ್ಲಿ ತನ್ನ ಪ್ರಮುಖ ಪ್ರಾಬಲ್ಯವನ್ನು ಕಾಪಾಡಿಕೊಳ್ಳಲು ಎದುರು ನೋಡುತ್ತಿದೆ.
ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಒಟ್ಟಾಗಿ ಚುನಾವಣೆಯನ್ನು ಎದುರಿಸಲು ಉತ್ಸುಕವಾಗಿವೆ. ಆದರೆ ಸೀಟು ಹಂಚಿಕೆಯು ಪ್ರಮುಖ ಬಿಕ್ಕಟ್ಟಿನ ಬಿಂದುವಾಗಿ ಮುಂದುವರಿದಿದೆ. ರಾಜ್ಯದಲ್ಲಿ ತನ್ನ ಅಸ್ತಿತ್ವ ಮತ್ತು ನೆಲೆ ಗಟ್ಟಿಗೊಳಿಸಲು ಕಾಂಗ್ರೆಸ್ ಬಯಸುತ್ತಿದ್ದರೆ, ಚುನಾವಣಾ ಗೆಲುವಿನ ಆಧಾರದ ಮೇಲೆ ಮಾತ್ರ ಸೀಟು ಹಂಚಿಕೆ ನಡೆಯಬೇಕು ಎಂದು ಅಖಿಲೇಶ್ ಯಾದವ್ ಪ್ರಸ್ತಾಪಿಸಿದ್ದಾರೆ.
ಇತ್ತೀಚೆಗೆ ಹೇಳಿಕೆ ನೀಡಿರುವ ಎಸ್‌ಪಿ ಮುಖ್ಯಸ್ಥರು, ಕಾಂಗ್ರೆಸ್ ಜತೆಗಿನ ಮೈತ್ರಿ ಮುಂದುವರಿಯುತ್ತದೆ ಆದರೆ ಸೀಟು ಹಂಚಿಕೆ ವ್ಯವಸ್ಥೆಯು ಗೆಲ್ಲುವ ಸಾಮರ್ಥ್ಯದ ನಿರೀಕ್ಷೆಗಳ ಮೇರೆಗೆ ನಿರ್ಧಾರವಾಗಬೇಕು ಎಂದಿದ್ದಾರೆ. ಅವರ ಪ್ರಸ್ತಾವಿತ ಸೂತ್ರದ ಪ್ರಕಾರ, ಬಲವಾದ ಗೆಲುವಿನ ಅವಕಾಶ ಹೊಂದಿರುವ ಪಕ್ಷ ಅಥವಾ ಅಭ್ಯರ್ಥಿಗೆ ಆಯಾ ಕ್ಷೇತ್ರದಲ್ಲಿ ಮೊದಲ ಆದ್ಯತೆ ಸಿಗಬೇಕು. ಇದು ಕಾಂಗ್ರೆಸ್ ಮತ್ತು ಎಸ್‌ಪಿ ನಡುವಿನ ಮೈತ್ರಿ ಮಾತುಕತೆಯಲ್ಲಿ ಚರ್ಚೆಯ ಮುಖ್ಯ ವಿಷಯವಾಗಲಿದೆ(ಏಜೆನ್ಸೀಸ್).